ಹಿರೋಷಿಮಾ: ಕಳೆದ 15 ತಿಂಗಳಿನಿಂದ ನಡೆಯುತ್ತಿರುವ ರಷ್ಯಾ-ಉಕ್ರೇನ್ ನಡುವಣ ಯುದ್ಧವನ್ನು ಸಮಾಪ್ತಿಗೊಳಿಸಲು ಪ್ರಧಾನಿ ನರೇಂದ್ರ ಮೋದಿಯವರ ನೆರವನ್ನು ಉಕ್ರೇನ್ ಅಧ್ಯಕ್ಷ ಜೆಲನ್‌ಸ್ಕಿ ಕೋರಿದ್ದಾರೆ. ಹಿರೋಷಿಮಾದಲ್ಲಿ ನಡೆದ ಜಿ-7 ಶೃಂಗದ ನೇಪಥ್ಯದಲ್ಲಿ ಪ್ರಧಾನಿ ನರೇಂದ್ರಮೋದಿ ಅವರ ಜತೆಗೆ ಮಾತುಕತೆ ನಡೆಸಿದ ಜೆಲನ್‌ಸ್ಕಿ ಅವರು, ತಮ್ಮ ಶಾಂತಿ ಪ್ರಸ್ತಾಪಕ್ಕೆ ಮೋದಿಯವರ ಬೆಂಬಲ ಕೋರಿದರು. ಮೇ 21ರಂದು ಜೆಲನ್ ಸ್ಕಿ ಅವರು ಮೋದಿಯವರನ್ನು ಭೇಟಿಯಾಗಿದ್ದರು.
ಭಾರತವು ರಷ್ಯಾ ಮತ್ತು ಉಕ್ರೇನ್ ಜತೆಗೆ ಉತ್ತಮ ಬಾಂಧವ್ಯವನ್ನು ಹೊಂದಿರುವ ಹಿನ್ನೆಲೆಯಲ್ಲಿ ಉಕ್ರೇನ್ ಅಧ್ಯಕ್ಷರು ಬೆಂಬಲ ನಿರೀಕ್ಷಿಸಿದ್ದಾರೆ. ಜಗತ್ತಿನ ಬಹಳಷ್ಟು ರಾಷ್ಟ್ರಗಳು ಈಗ ಅತಿ ದೊಡ್ಡ ಪ್ರಜಾಸತ್ತಾತ್ಮಕ ದೇಶವಾದ ಭಾರತದ ಕಡೆಗೆ ಎದುರು ನೋಡುತ್ತಿವೆ. ಮೋದಿ ಸರ್ಕಾರ ಈಗ ಜೆಲೆನ್‌ಸ್ಕಿ ಅವರ ಶಾಂತಿ ಪ್ರಸ್ತಾಪವನ್ನು ಪರಿಶೀಲಿಸುತ್ತಿದೆ.
ಮೂರು ದೇಶಗಳ ಪ್ರವಾಸದ ಬಳಿಕ ಪ್ರಧಾನಿ ನರೇಂದ್ರ ಮೋದಿ ಭಾರತಕ್ಕೆ ಮರಳಿದ್ದಾರೆ. ಇಂಡೊ-ಪೆಸಿಫಿಕ್ ಫೋರಮ್ ಸಮ್ಮಿಟ್‌ನಲ್ಲಿ ಭಾರತ ಮತ್ತು ಆಸ್ಟ್ರೇಲಿಯಾ ನಡುವಣ ದ್ವಿಪಕ್ಷೀಯ ಬಾಂಧವ್ಯ ಗಟ್ಟಿಯಾಗಿದೆ. ಬಿಡುವಿರದ ವಿದೇಶಿ ಪ್ರವಾಸ ಮುಕ್ತಾಯಗೊಳಿಸಿ ಬಂದಿಳಿಸಿದ್ದರೂ, ಪಾಲಮ್ ಟೆಕ್ನಿಕಲ್ ಏರಿಯಾದಲ್ಲಿ ಪಕ್ಷದ ಕಾರ್ಯಕರ್ತರನ್ನು ಉದ್ದೇಶಿಸಿ ಪ್ರಧಾನಿ ಮಾತನಾಡಿದರು.
ಉಕ್ರೇನ್ ವಿರುದ್ಧ ರಷ್ಯಾ ಯುದ್ಧ ಆರಂಭವಾದ ಬಳಿಕ ಮೊದಲ ಬಾರಿಗೆ ಉಕ್ರೇನ್ ಮತ್ತು ಭಾರತದ ನಾಯಕರು ಮುಖಾಮುಖಿಯಾಗಿದ್ದಾರೆ. ರಷ್ಯಾ-ಉಕ್ರೇನ್ ನಡುವೆ ಯುದ್ಧ ಶೀಘ್ರ ಅಂತ್ಯವಾಗಬೇಕು, ಯುದ್ಧಕ್ಕಿದು ಕಾಲವಲ್ಲ ಎಂದು ಈ ಹಿಂದೆಯೇ ಪ್ರಧಾನಿ ಮೋದಿ ಎರಡೂ ದೇಶಗಳಿಗೆ ಸಲಹೆ ನೀಡಿದ್ದರು.
ಇದನ್ನೂ ಓದಿ: Viral Video: ಜಾಗತಿಕ ಒಕ್ಕೂಟದ ಸಭೆಯಲ್ಲಿ ರಷ್ಯಾ ಪ್ರತಿನಿಧಿಗೆ ಹಿಗ್ಗಾಮುಗ್ಗಾ ಥಳಿಸಿದ ಉಕ್ರೇನ್ ಸಂಸದ