ಲಖನೌ: ಭಾರತದ ಸಚಿನ್ ಸೀಮಾ ಎಂಬ ಯುವಕನಿಗಾಗಿ ಪಾಕಿಸ್ತಾನದಿಂದ ಸೀಮಾ ಹೈದರ್ ಭಾರತಕ್ಕೆ ಬಂದ ಪ್ರಕರಣ ದೇಶಾದ್ಯಂತ ಸುದ್ದಿಯಾಗಿದೆ. ಇನ್ನು ರಾಜಸ್ಥಾನದ ಅಂಜು ಫೇಸ್‌ಬುಕ್ ಗೆಳೆಯನಾಗಿ ಪಾಕಿಸ್ತಾನಕ್ಕೆ ತೆರಳಿದ್ದು ಕೂಡ ಸುದ್ದಿಯಾಗಿದೆ. ಇದರ ಬೆನ್ನಲ್ಲೇ, ರಷ್ಯಾದಿಂದ ಭಗವಾನ್ ಶ್ರೀಕೃಷ್ಣನಿಗಾಗಿ ಭಾರತದ ವೃಂದಾವನ ನಗರಕ್ಕೆ ಬಂದ ಮಹಿಳೆಯೊಬ್ಬರು (Love Story) ಇಲ್ಲಿಯೇ ವ್ಯಕ್ತಿಯೊಬ್ಬರನ್ನು ಪ್ರೀತಿಸಿ, ಅವರನ್ನೇ ಮದುವೆಯಾಗಿದ್ದಾರೆ.
ಹೌದು, ಯುನಾ (36) ಎಂಬ ರಷ್ಯಾ ಮಹಿಳೆಯು ಭಾರತದ ಧಾರ್ಮಿಕ ನಗರಿ ಎಂದೇ ಖ್ಯಾತಿಯಾಗಿರುವ, ಉತ್ತರ ಪ್ರದೇಶದ ವೃಂದಾವನ ನಗರಕ್ಕೆ ಕೆಲ ವರ್ಷಗಳ ಹಿಂದೆ ಆಗಮಿಸಿದ್ದಾರೆ. ಇದೇ ವೇಳೆ, ವೃಂದಾವನದಲ್ಲಿ ಗೋವುಗಳ ಸೇವೆ ಮಾಡಿಕೊಂಡಿರುವ ರಾಜ್‌ಕರಣ್ (35) ಎಂಬ ವ್ಯಕ್ತಿಯ ಪರಿಚಯವಾಗಿದ್ದು, ಇದು ಪ್ರೀತಿಗೆ ತಿರುಗಿದೆ. ರಾಜ್‌ಕರಣ್‌ನ ಪ್ರೀತಿ, ಹಿಂದು ಧರ್ಮದ ಆಚಾರ-ವಿಚಾರಗಳನ್ನು ಅರಿತ ಆಕೆ, ಇಲ್ಲಿಯೇ ನೆಲೆಸಲು ತೀರ್ಮಾನಿಸಿದ್ದಾರೆ. ಅಲ್ಲದೆ, 2023ರಲ್ಲಿ ರಾಜ್‌ಕರಣ್ ಅವರನ್ನು ಹಿಂದು ಸಂಪ್ರದಾಯದಂತೆ ಮದುವೆಯಾದ ಯುನಾ ವೃಂದಾವನದಲ್ಲಿಯೇ ನೆಲೆಸಿದ್ದಾರೆ.
ಗೋವು, ಜನರ ಸೇವೆಗೆ ದಂಪತಿ ಮೀಸಲು
ಗುರುವಿನ ಮಾರ್ಗದರ್ಶನದಂತೆ ಕಳೆದ 20 ವರ್ಷದಿಂದ ರಾಜ್‌ಕರಣ್ ವೃಂದಾವನದಲ್ಲಿಯೇ ನೆಲೆಸಿದ್ದು, ಗೋವುಗಳ ಸೇವೆಯಲ್ಲಿ ತೊಡಗಿದ್ದಾರೆ. ಇವರಿಗೆ ಈಗ ಯುನಾ ಕೂಡ ಸಾಥ್ ನೀಡುತ್ತಿದ್ದಾರೆ. ವೃಂದಾವನದಲ್ಲಿ ಗೋವುಗಳ ಸೇವೆ, ಇಸ್ಕಾನ್ ದೇವಾಲಯದ ಬಳಿ ಭಕ್ತರಿಗೆ ಊಟೋಪಚಾರ, ಧಾರ್ಮಿಕ ಪುಸ್ತಕಗಳನ್ನು ಮಾರಾಟ ಮಾಡುವುದು ಸೇರಿ ಹಲವು ಚಟುವಟಿಕೆಗಳಲ್ಲಿ ಇಬ್ಬರೂ ತೊಡಗಿದ್ದಾರೆ.
ಇದನ್ನೂ ಓದಿ: Cross Border Love : ಅಂಜು ಈಗ ಫಾತಿಮಾ; ಪಾಕಿಸ್ತಾನದ ಪ್ರೇಮಿಯನ್ನು ಲಗ್ನವಾದ ಭಾರತದ ಮಹಿಳೆ!
ಭಾಷೆ ಮೀರಿದ ಪ್ರೇಮ
ಹಾಗೆ ನೋಡಿದರೆ, ರಾಜ್‌ಕರಣ್ ಅಷ್ಟೊಂದು ಓದಿಕೊಂಡಿಲ್ಲ. ಹಾಗೆಯೇ, ಹಿಂದಿ ಬಿಟ್ಟರೆ ಬೇರೆ ಭಾಷೆ ಬರುವುದಿಲ್ಲ. ಇದೆಲ್ಲವನ್ನೂ ಮೀರಿ, ಯುನಾ ರಾಜ್‌ಕರಣ್‌ರನ್ನು ಮದುವೆಯಾಗಿದ್ದಾರೆ. ಹಿಂದು ಧರ್ಮದಿಂದ ಪ್ರೇರೇಪಣೆಗೊಂಡಿರುವ ಅವರು, ಸೀರೆ ಧರಿಸುತ್ತಾರೆ. ಮಂಗಳಸೂತ್ರ ಹಾಕಿಕೊಳ್ಳುತ್ತಾರೆ ಹಾಗೂ ಹಿಂದು ಧರ್ಮದ ಎಲ್ಲ ಆಚಾರ-ವಿಚಾರ, ಸಂಪ್ರದಾಯಗಳನ್ನು ಪಾಲಿಸುತ್ತಾರೆ. ಒಟ್ಟಿನಲ್ಲಿ, ದೇಶ, ಭಾಷೆ, ಸಂಪಾದನೆಯ ಹಂಗಿಲ್ಲದೆ ಇಬ್ಬರೂ ಅನ್ಯೋನ್ಯವಾಗಿದ್ದು, ಎಲ್ಲ ಪ್ರೇಮಿಗಳಿಗೂ ಇವರು ಮಾದರಿ ಎನಿಸಿದ್ದಾರೆ.