Site icon Vistara News

China Road: ಕಾಶ್ಮೀರ ಗಡಿಯಲ್ಲಿ ರಸ್ತೆ ನಿರ್ಮಿಸಿ ಚೀನಾ ಮತ್ತೆ ಉದ್ಧಟತನ; ಇಲ್ಲಿವೆ ಸ್ಯಾಟಲೈಟ್‌ ಚಿತ್ರಗಳು

China Road

Satellite images show China building road in occupied Kashmir near Siachen

ನವದೆಹಲಿ: ಕಾಶ್ಮೀರದ ಲಡಾಕ್‌ ಬಳಿಯ ವಾಸ್ತವ ನಿಯಂತ್ರಣ ರೇಖೆ (LoC) ಬಳಿ ಹೆಚ್ಚುವರಿಯಾಗಿ ಸೈನಿಕರನ್ನು ನಿಯೋಜಿಸಿ ಬಿಕ್ಕಟ್ಟು ಸೃಷ್ಟಿಸಿದ್ದ ಚೀನಾ ಈಗ ಮತ್ತೊಂದು ಉದ್ಧಟತನ ತೋರಿದೆ. ಹೌದು, ಪಾಕ್‌ ಆಕ್ರಮಿತ ಕಾಶ್ಮೀರದ (Pak Occupied Kashmir) ಬಳಿ ನೂತನವಾಗಿ ರಸ್ತೆ ನಿರ್ಮಿಸುವ (China Road) ಮೂಲಕ ಚೀನಾ ಗಡಿ ನಿಯಮಗಳನ್ನು ಗಾಳಿಗೆ ತೂರಿದೆ. ಇದು ಭಾರತದ ಜತೆ ಮತ್ತೊಂದು ಬಿಕ್ಕಟ್ಟು ಸೃಷ್ಟಿಸುವ ಹುನ್ನಾರ ಎಂದು ಹೇಳಲಾಗುತ್ತಿದೆ. ಕಳೆದ ವರ್ಷದ ಜೂನ್‌ ಹಾಗೂ ಆಗಸ್ಟ್‌ ಅವಧಿಯಲ್ಲಿ ಚೀನಾ ರಸ್ತೆ ನಿರ್ಮಾಣ ಆರಂಭಿಸಿದ್ದು, ಇದರ ಚಿತ್ರಗಳನ್ನು ಯುರೋಪಿಯನ್‌ ಸ್ಪೇಸ್‌ ಏಜೆನ್ಸಿ ಬಿಡುಗಡೆ ಮಾಡಿದೆ. ಚೀನಾ ರಸ್ತೆ ನಿರ್ಮಿಸಿದ ಚಿತ್ರಗಳು ಸ್ಪಷ್ಟವಾಗಿ ಕಾಣುತ್ತಿವೆ.

ವಿಶ್ವದಲ್ಲೇ ಅತಿ ಎತ್ತರದ ಯುದ್ಧಭೂಮಿ ಎನಿಸಿರುವ ಸಿಯಾಚಿನ್‌ ಹಿಮಪ್ರದೇಶದ ಬಳಿಯೇ ಚೀನಾ ರಸ್ತೆ ನಿರ್ಮಿಸಿರುವ ಸ್ಯಾಟಲೈಟ್‌ ಫೋಟೊಗಳು ಲಭ್ಯವಾಗಿವೆ. 1963ರಲ್ಲಿ ಚೀನಾಗೆ ಬಿಟ್ಟುಕೊಟ್ಟಿರುವ, ಪಾಕ್‌ ಆಕ್ರಮಿತ ಕಾಶ್ಮೀರದ ಭಾಗವಾಗಿದ್ದ ಶಾಕ್ಸ್‌ಗಾಮ್‌ ಕಣಿವೆಯಲ್ಲಿ ಚೀನಾ ರಸ್ತೆ ನಿರ್ಮಿಸಿದೆ. ಇದು ಭಾರತದ ಇಂದಿರಾ ಕೋಲ್ ಪ್ರದೇಶದಿಂದ ಕೇವಲ 50 ಕಿಲೋ ಮೀಟರ್‌ ದೂರದಲ್ಲಿರುವುದರಿಂದ ಆತಂಕ ಹೆಚ್ಚಾಗಿದೆ.

ಇಂದಿರಾ ಕೋಲ್‌ ಪ್ರದೇಶಕ್ಕೆ ಕಳೆದ ಮಾರ್ಚ್‌ನಿಂದ ಇದುವರೆಗೆ ರಕ್ಷಣಾ ಸಚಿವ ರಾಜನಾಥ್‌ ಸಿಂಗ್‌ ಅವರು ಎರಡು ಬಾರಿ ಭೇಟಿ ನೀಡಿದ್ದರು. ಇದರಿಂದ ಕೇವಲ 50 ಕಿಲೋಮೀಟರ್‌ ದೂರದಲ್ಲಿ ಚೀನಾ ರಸ್ತೆ ನಿರ್ಮಿಸಿದ ಕಾರಣ ಮುಂದಿನ ದಿನಗಳಲ್ಲಿ ಭಾರತದ ಜತೆಗಿನ ಬಿಕ್ಕಟ್ಟನ್ನು ಉಲ್ಬಣಿಸುವ ಸಾಧ್ಯತೆ ಇದೆ. ಇದೇ ಸಂಚಿನಿಂದಾಗಿಯೇ ಚೀನಾ ರಸ್ತೆ ನಿರ್ಮಾಣ ಮಾಡಿದೆ ಎಂದು ಹೇಳಲಾಗುತ್ತಿದೆ.

ಭಾರತಕ್ಕೆ ಏಕೆ ಆತಂಕಕಾರಿ?

ಸಿಯಾಚಿನ್‌ ಹಿಮಪ್ರದೇಶದಲ್ಲಿ ಚೀನಾ ರಸ್ತೆ ನಿರ್ಮಿಸಿರುವುದು ಭಾರತಕ್ಕೆ ಹಲವು ರೀತಿಯಲ್ಲಿ ಆತಂಕ ಎನಿಸಿದೆ. ಗಡಿಯಲ್ಲಿ ರಸ್ತೆ ನಿರ್ಮಿಸಿದರೆ ಚೀನಾ ಸುಲಭವಾಗಿ ಮಿಲಿಟರಿ ಸಲಕರಣೆಗಳನ್ನು, ಸೈನಿಕರನ್ನು ಗಡಿಗೆ ನಿಯೋಜಿಸಬಹುದು. ಇದಾದ ಬಳಿಕ ಭಾರತದ ಜತೆ ತಗಾದೆ ತೆಗೆಯಲು ಚೀನಾಗೆ ಅನುಕೂಲವಾಗಲಿದೆ ಎಂದೇ ವಿಶ್ಲೇಷಿಸಲಾಗುತ್ತಿದೆ. ಆದರೆ, ಇದಕ್ಕೆ ಭಾರತ ಹೇಗೆ ಪ್ರತಿಕ್ರಿಯಿಸುತ್ತದೆ ಎಂಬುದು ಕುತೂಹಲ ಕೆರಳಿಸಿದೆ.

ಇದನ್ನೂ ಓದಿ: Indian Economy : ಭಾರತದ ಆರ್ಥಿಕತೆ ಚೀನಾಕ್ಕಿಂತ ವೇಗವಾಗಿ ಬೆಳೆಯುತ್ತಿದೆ ಎಂದ ಐಎಮ್​ಎಫ್​

Exit mobile version