ಹೊಸದಿಲ್ಲಿ: ಸಂಸತ್ ಕಲಾಪದೊಳಗೆ (Security Breach in Lok Sabha) ನುಗ್ಗಿ ದುಷ್ಕರ್ಮಿಗಳು ದಾಂಧಲೆ ನಡೆಸಿದ ಘಟನೆ, ಡಿಸೆಂಬರ್ 13, 2001ರಂದು ಸಂಸತ್ತಿನ ಮೇಲೆ ನಡೆದ ಭೀಕರ ದಾಳಿಯನ್ನು ನೆನಪಿಸಿತು. 22 ವರ್ಷಗಳ ಹಿಂದೆ ಇದೇ ದಿನ (ಡಿ.13) ಈ ದಾಳಿ ನಡೆದಿತ್ತು. 2001ರ ದಾಳಿಯನ್ನು ಜೈಶ್-ಎ-ಮೊಹಮ್ಮದ್ (JeM)ನ ಕಿಂಗ್ ಪಿನ್ ಮಸೂದ್ ಅಜರ್ ಅಲ್ವಿ (Masood Azhar Alvi) ಸಂಘಟಿಸಿದ್ದ. ಅಜರ್ ಈಗ ಇಸ್ಲಾಮಾಬಾದ್‌ನಲ್ಲಿ ಪಾಕಿಸ್ತಾನದ ಸಂರಕ್ಷಣೆಯಲ್ಲಿದ್ದಾನೆ. 55 ವರ್ಷದ ಈ ಭಯೋತ್ಪಾದಕ ಪಾಕಿಸ್ತಾನದ ಬಹವಾಲ್ಪುರದ ರೈಲ್ವೆ ಲಿಂಕ್ ರಸ್ತೆಯಲ್ಲಿರುವ ಮರ್ಕಜ್-ಎ-ಉಸ್ಮಾನ್-ಒ-ಅಲಿಗೆ ಪ್ರಯಾಣಿಸುತ್ತಿರುತ್ತಾನೆ ಎಂದು ಮೂಲಗಳು ತಿಳಿಸಿವೆ.
2001ರ ಸಂಸತ್ ದಾಳಿ ಮತ್ತು 2016ರ ಪಠಾಣ್‌ಕೋಟ್ ವಾಯುನೆಲೆಯ ಮೇಲೆ ಸಂಭವಿಸಿದ ದಾಳಿಯ ಬಗ್ಗೆ ಪಂಜಾಬ್ ಪೊಲೀಸರು ಅಜರ್ ವಿರುದ್ಧ ಚಾರ್ಜ್ ಶೀಟ್ ಸಲ್ಲಿಸಿದ್ದಾರೆ. ಮಾತ್ರವಲ್ಲ 2005ರ ಜುಲೈ 5ರಂದು ಅಯೋಧ್ಯೆಯ ರಾಮ ಜನ್ಮಭೂಮಿ ದೇವಾಲಯದ ಮೇಲೆ ನಡೆದ ದಾಳಿ ಮತ್ತು 2019ರ ಫೆಬ್ರವರಿ 14ರಂದು ಸಿಆರ್‌ಪಿಎಫ್ ಸೈನಿಕರ ಮೇಲೆ ಪುಲ್ವಾಮಾದಲ್ಲಿ ನಡೆದ ದಾಳಿಯಲ್ಲಿ ಈತನ ಕೈವಾಡವಿದೆ. ಅಲ್ಲದೆ ಈತ 2016ರ ಜನವರಿ 3ರಂದು ಅಫ್ಘಾನಿಸ್ತಾನದ ಬಾಲ್ಕ್ ಮಜರ್-ಇ-ಶರೀಫ್‌ನಲ್ಲಿರುವ ಭಾರತೀಯ ದೂತಾವಾಸದ ಮೇಲೆ ದಾಳಿ ನಡೆಸಿದ್ದ. ಈತ ಅಲ್ ಖೈದಾ ಮುಖ್ಯಸ್ಥ ಒಸಾಮಾ ಬಿನ್ ಲಾಡೆನ್ ಮತ್ತು ತಾಲಿಬಾನ್ ಸಂಸ್ಥಾಪಕನ ನಿಕಟ ಸಂಪರ್ಕದಲ್ಲಿದ್ದ ಎನ್ನಲಾಗಿದೆ.
ಭಾರತದ ವಿರುದ್ಧದ ಅಜರ್‌ನ ನಡೆಯಿಂದಾಗಿ ಹಲವು ಬಾರಿ ಭಾರತ ಮತ್ತು ಪಾಕಿಸ್ತಾನ ಯುದ್ಧದ ಅಂಚಿಗೆ ಬಂದಿದ್ದವು. ಭಯೋತ್ಪಾದಕ ದಾಳಿಗಳಲ್ಲಿ ಆತ ಭಾಗಿಯಾಗಿದ್ದಾನೆ ಎಂಬುದಕ್ಕೆ ಸಾಕಷ್ಟು ಪುರಾವೆಗಳ ಹೊರತಾಗಿಯೂ ಪಾಕಿಸ್ತಾನದ ಅಧಿಕಾರಿಗಳು ಆತನನ್ನು ಸಂರಕ್ಷಿಸುತ್ತಿದ್ದಾರೆ.
ಭಾರತದಿಂದ ಪ್ರತಿದಾಳಿ
2019ರ ಫೆಬ್ರವರಿ 26ರಂದು ಕೆಪಿಕೆಯ ಬಾಲಾಕೋಟ್‌ನಲ್ಲಿರುವ ಜೆಎಂ( (JeM) ಭಯೋತ್ಪಾದಕ ತರಬೇತಿ ಶಿಬಿರದ ಮೇಲೆ ದಾಳಿ ನಡೆಸುವ ಮೂಲಕ ನರೇಂದ್ರ ಮೋದಿ ಸರ್ಕಾರ ಪುಲ್ವಾಮಾ ದಾಳಿಗೆ ಪ್ರತೀಕಾರ ತೀರಿಸಿಕೊಂಡಿದೆ. ಇದಕ್ಕೂ ಮೊದಲು ಅಟಲ್ ಬಿಹಾರಿ ವಾಜಪೇಯಿ ನೇತೃತ್ವದ ಎನ್‌ಡಿಎ ಸರ್ಕಾರವು ಸಂಸತ್ ದಾಳಿಯ ನಾಲ್ಕು ದಿನಗಳ ನಂತರ ಭಾರತೀಯ ಸಶಸ್ತ್ರ ಪಡೆಗಳನ್ನು ಸಜ್ಜುಗೊಳಿಸಿತ್ತು. ಭಾರತದ ಯುದ್ಧ ಬೆದರಿಕೆ ಮತ್ತು ಅಂತಾರಾಷ್ಟ್ರೀಯ ಒತ್ತಡದ ಮೇರೆಗೆ ಪಾಕಿಸ್ತಾನವು ಕೊನೆಗೆ 2002ರ ಜನವರಿ 14ರಂದು ಅಜರ್‌ನನ್ನು ಭಯೋತ್ಪಾದಕ ಎಂದು ಘೋಷಿಸಿತ್ತು. ಅಲ್ಲದೆ ಜೈಶ್ ಅನ್ನು ಭಯೋತ್ಪಾದಕ ಗುಂಪು ಎಂದು ಆಗಿನ ಪಾಕಿಸ್ತಾನದ ಸರ್ವಾಧಿಕಾರಿ ಜನರಲ್ ಪರ್ವೇಜ್ ಮುಷರಫ್ ಘೋಷಿಸಿದ್ದರು.
ಓಲೈಕೆ ಬಿಡದ ಪಾಕ್
ಹೀಗಿದ್ದರೂ ಪಾಕಿಸ್ತಾನ ಅಜರ್‌ಗೆ ಉನ್ನತ ಮಟ್ಟದ ರಕ್ಷಣೆ ಒದಗಿಸಿದೆ. ರಾಷ್ಟ್ರದ ಮುಖ್ಯಸ್ಥರಿಗೆ ನೀಡುವ ಭದ್ರತೆಯನ್ನು ಆತನಿಗೂ ನೀಡಿದೆ. ಇತ್ತ ರಾಜಾರೋಷವಾಗಿ ಬದುಕುತ್ತಿರುವ ಅಜರ್ ಭಯೋತ್ಪಾದಕ ಗುಂಪಿನ ಮೇಲೆ ತನ್ನ ಸಂಪೂರ್ಣ ನಿಯಂತ್ರಣವನ್ನು ಕಾಪಾಡಿಕೊಳ್ಳುವ ಸಲುವಾಗಿ ನಿಕಟ ಕುಟುಂಬ ಸದಸ್ಯರಿಗೆ ಉಸ್ತುವಾರಿ ವಹಿಸಿದ್ದಾನೆ. ಮಸೂದ್‌ನ ಕಿರಿಯ ಸಹೋದರ ಅಬ್ದುಲ್ ರವೂಫ್ ಅಸ್ಗರ್ ಅಲ್ವಿ ಭಯೋತ್ಪಾದಕ ಗುಂಪಿನ ದೈನಂದಿನ ವ್ಯವಹಾರಗಳನ್ನು ನೋಡಿಕೊಳ್ಳುತ್ತಾನೆ. ಇನ್ನೊಬ್ಬ ಸಹೋದರ ತಲ್ಹಾ ಸೈಫ್ ಜೆಎಂನ ವಿದ್ಯಾರ್ಥಿ ವಿಭಾಗ ಅಲ್ ಮುರಾಬಿತೂನ್ (Al Murabitoon)ನ ಮುಖ್ಯಸ್ಥ. ಸೋದರ ಮಾವ ಮೊಹಮ್ಮದ್ ಯೂಸುಫ್ ಅಜರ್ ಜಿಹಾದಿ ಗುಂಪಿನ ತರಬೇತಿ ಚಟುವಟಿಕೆಗಳ ಮುಖ್ಯಸ್ಥ. ಅಜರ್‌ನನ್ನು ಬಿಡುಗಡೆಗೊಳಿಸಲು 1999ರ ಡಿಸೆಂಬರ್‌ನಲ್ಲಿ ಐಸಿ-814 ವಿಮಾನ ಹೈಜಾಕ್ ಸಂಘಟಿಸಿದ ಮುಖಂಡರೂ ಗುಂಪಿನ ಕಾರ್ಯಾಚರಣೆಯ ನೇತೃತ್ವ ವಹಿಸಿದ್ದಾರೆ ಎನ್ನಲಾಗಿದೆ. ಸಾಕಷ್ಟು ಸುರಕ್ಷಿತ ಕ್ರಮಗಳ ಹೊರತಾಗಿಯೂ ಅಜರ್‌ನ ಜೆಎಂ ಜಮ್ಮು ಮತ್ತು ಕಾಶ್ಮೀರ ವಲಯದಾದ್ಯಂತ ಈಗಲೂ ಸಕ್ರಿಯವಾಗಿದೆ.
ಇದನ್ನೂ ಓದಿ: Security breach in Loksabha : ದುಷ್ಕರ್ಮಿಯನ್ನು ಮೊದಲು ಹಿಡಿದದ್ದು ಸಂಸದ ಮುನಿಸ್ವಾಮಿ ಎಂಡ್ ಟೀಮ್