ಲಖನೌ: ದೇಶದ ಹಲವೆಡೆ ಹತ್ತಾರು ಜನರನ್ನು ನಂಬಿಸಿ, ಅವರನ್ನು ಮದುವೆಯಾಗಿ, ಬಳಿಕ ಅವರ ಚಿನ್ನ ಹಾಗೂ ನಗದನ್ನು ದೋಚಿ ಪರಾರಿಯಾಗುತ್ತಿದ್ದ, ಸೀರಿಯಲ್ ಬ್ರೈಡ್ (ಸರಣಿ ಮದುಮಗಳು ಅಥವಾ Serial Bride) ಎಂದೇ ಖ್ಯಾತಿಯಾಗಿದ್ದ ಮಹಿಳೆಗೆ ಈಗ ಎಚ್‌ಐವಿ ದೃಢಪಟ್ಟಿರುವುದು ವೈದ್ಯಕೀಯ ವರದಿಗಳಿಂದ ಸಾಬೀತಾಗಿದೆ. ಇದು ಈಗ ಪೊಲೀಸರಿಗೆ ಮತ್ತೊಂದು ಸವಾಲಾಗಿದ್ದು, ಈಕೆಯನ್ನು ಮದುವೆಯಾಗಿದ್ದ ಮಾಜಿ ಪತಿಯರನ್ನು ಹುಡುಕಲು ಉತ್ತರ ಪ್ರದೇಶ (Uttar Pradesh) ಹಾಗೂ ಉತ್ತರಾಖಂಡದಲ್ಲಿ ಕಾರ್ಯಾಚರಣೆ ಆರಂಭಿಸಲಾಗಿದೆ.
ಅರೇಂಜ್ ಮ್ಯಾರೇಜ್ ಹೆಸರಿನಲ್ಲಿ ಮಹಿಳೆಯು ಹಲವರಿಗೆ ವಂಚಿಸಿದ್ದಳು. ತಾನು ಸೇರಿ ಏಳು ಜನರ ಗ್ಯಾಂಗ್ ಕಟ್ಟಿದ್ದ ಮಹಿಳೆಯು, ವಯಸ್ಸಾದರೂ ಮದುವೆಯಾಗದವರು, ಕಂಕಣ ಭಾಗ್ಯ ಕೂಡಿ ಬರದವರು, ಹೆಂಡತಿ ತೀರಿಕೊಂಡ ಬಳಿಕ ಒಂಟಿಯಾದವರನ್ನು ಗುರುತಿಸಿ, ಅವರನ್ನು ಮದುವೆಯಾಗುತ್ತಿದ್ದಳು. ಮದುವೆಯಾದ ಬಳಿಕ ಗ್ಯಾಂಗ್‌ನ ಸದಸ್ಯರನ್ನು ತನ್ನ ಸಂಬಂಧಿಕರು ಎಂದು ನೂತನ ವರಗಳಿಗೆ ಪರಿಚಯ ಮಾಡಿಸುತ್ತಿದ್ದಳು. ಇದಾದ ಬಳಿಕ, ಆ ವ್ಯಕ್ತಿಯ ಬಳಿಯ ನಗದು, ಚಿನ್ನಾಭರಣಗಳನ್ನು ಕದ್ದು ಪರಾರಿಯಾಗುತ್ತಿದ್ದಳು.
ಹೀಗೆ, ಉತ್ತರ ಪ್ರದೇಶ, ಉತ್ತರಾಖಂಡದಲ್ಲಿ ಹಲವರಿಗೆ ಮೋಸ ಮಾಡಿದ ಹಿನ್ನೆಲೆಯಲ್ಲಿ ಪೊಲೀಸರು ಕಾರ್ಯಾಚರಣೆ ನಡೆಸಿ ಮಹಿಳೆ ಹಾಗೂ ಆರು ಆರೋಪಿಗಳನ್ನು ಬಂಧಿಸಿದ್ದರು. ಮಹಿಳೆಯ ಸೇರಿ ಏಳು ಜನರನ್ನು ಮುಜಫ್ಫರ್‌ನಗರ ಜೈಲಿನಲ್ಲಿ ಇರಿಸಲಾಗಿದೆ. ಇತ್ತೀಚೆಗೆ ಮಹಿಳೆಯನ್ನು ವೈದ್ಯಕೀಯ ಪರೀಕ್ಷೆಗೆ ಒಳಪಡಿಸಲಾಗಿದ್ದು, ಜಿಲ್ಲಾಸ್ಪತ್ರೆಯ ವೈದ್ಯರು ನೀಡಿದ ವರದಿಯಲ್ಲಿ, ಮಹಿಳೆಗೆ ಏಡ್ಸ್ ಇರುವುದು ಪತ್ತೆಯಾಗಿದೆ. ಇದು ಈಗ ಭೀಕರ ಪ್ರಮಾಣದಲ್ಲಿ ಆರೋಗ್ಯ ಸಮಸ್ಯೆಯನ್ನು ತಂದೊಡ್ಡಿದೆ.
“ಮಹಿಳೆಯು ಹಲವು ಜನರಿಗೆ ವಂಚಿಸಿದ್ದು, ಹತ್ತಾರು ಜನರು ಈಕೆಯ ಜತೆ ದೈಹಿಕ ಸಂಪರ್ಕಕ್ಕೆ ಬಂದಿದ್ದಾರೆ. ಈಗ ಮಹಿಳೆಗೆ ಎಚ್‌ಐವಿ ಇದೆ ಎಂಬುದು ಇತ್ತೀಚಿನ ವೈದ್ಯಕೀಯ ವರದಿಯಿಂದ ತಿಳಿದುಬಂದಿದೆ. ಈಕೆಯ ಜತೆ ಲೈಂಗಿಕ ಸಂಪರ್ಕ ಹೊಂದಿದವರು, ಮದುವೆಯಾದವರನ್ನು ಉತ್ತರ ಪ್ರದೇಶ ಹಾಗೂ ಉತ್ತರಾಖಂಡದಲ್ಲಿ ಹುಡುಕಲಾಗುತ್ತಿದೆ” ಎಂದು ಮುಜಫ್ಫರ್‌ನಗರ ಜೈಲು ಎಸ್‌ಪಿ ಸೀತಾರಾಮ್ ಶರ್ಮಾ ಅವರು ಸುದ್ದಿಗಾರರರಿಗೆ ಮಾಹಿತಿ ನೀಡಿದ್ದಾರೆ. ಇನ್ನು, ಈಕೆಯನ್ನು ಮದುವೆಯಾದವರು ಕೂಡಲೇ ಎಚ್‌ಐವಿ ತಪಾಸಣೆ ಮಾಡಿಸಿಕೊಳ್ಳಿ ಎಂಬುದಾಗಿ ವೈದ್ಯಾಧಿಕಾರಿಗಳು ಕರೆ ನೀಡಿದ್ದಾರೆ ಎನ್ನಲಾಗಿದೆ.
ಇದನ್ನೂ ಓದಿ: Sebi Fines: ವಂಚನೆ ಪ್ರಕರಣ; ಟಿವಿ ನಿರೂಪಕ, ವಿಶ್ಲೇಷಕನಿಗೆ ತಲಾ 1 ಕೋಟಿ ರೂ. ದಂಡ ವಿಧಿಸಿದ ಸೆಬಿ