ಚೆನ್ನೈ: ಕೋಲ್ಕತ್ತಾ ಟ್ರೈನಿ ವೈದ್ಯೆ ಹತ್ಯೆ ಪ್ರಕರಣ(Kolkata Doctor Murder case) ಖಂಡಿಸಿ ರಾಷ್ಟ್ರವ್ಯಾಪಿ ಆಕ್ರೋಶ ವ್ಯಕ್ತವಾಗಿರುವ ಬೆನ್ನಲ್ಲೇ ತಮಿಳುನಾಡಿ(Tamil Nadu)ನಲ್ಲಿ ಇಂತಹದ್ದೇ ಒಂದು ಬೆಚ್ಚಿ ಬೀಳಿಸುವ ಘಟನೆಯೊಂದು ಬೆಳಕಿಗೆ ಬಂದಿದೆ. ನಕಲಿ ಎನ್‌ಸಿಸಿ ಕ್ಯಾಂಪ್(NCC)ನಲ್ಲಿ 13 ವರ್ಷದ ಬಾಲಕಿ ಮೇಲೆ ಲೈಂಗಿಕ ದೌರ್ಜನ್ಯ(Sexual Assault) ನಡೆದಿದೆ. ವಿಚಾರಣೆ ನಡೆಸಿದಾಗ ಇತರ ನಾಲ್ವರು ಬಾಲಕಿಯರಿಗೂ ಕಿರುಕುಳ ನೀಡಿರುವ ಬಗ್ಗೆ ವರದಿಯಾಗಿದೆ. ಪ್ರಕರಣಕ್ಕೆ ಸಂಬಂಧಿಸಿದಂತೆ ಸ್ಥಳೀಯ ರಾಜಕೀಯ ಪಕ್ಷದ ಮುಖಂಡ ಸೇರಿದಂತೆ ಎಂಟು ಜನರನ್ನು ಅರೆಸ್ಟ್ ಮಾಡಲಾಗಿದೆ.
ಘಟನೆ ವಿವರ:
ಕೃಷ್ಣಗಿರಿ ಜಿಲ್ಲೆಯಲ್ಲಿ ಈ ಘಟನೆ ನಡೆದಿದ್ದು, ಸ್ಥಳೀಯ ರಾಜಕೀಯ ಪಕ್ಷವಾಗಿರುವ ನಾಮ್ ತಮಿಳರ್ ಕಚ್ಚಿಯ ಜಿಲ್ಲಾ ಕಾರ್ಯದರ್ಶಿ ಶಿವರಾಮನ್ ಖಾಸಗಿ ಶಾಲೆಯೊಂದಕ್ಕೆ ಭೇಟಿ ಕೊಟ್ಟು ಎನ್‌ಸಿಸಿ ಕ್ಯಾಂಪ್ ಆಯೋಜಿಸುವ ಬಗ್ಗೆ ಚರ್ಚೆ ನಡೆಸಿದ್ದಾನೆ. ಆತನೇ ಸ್ವಯಂ ಆಸಕ್ತಿಯಿಂದ ಎನ್‌ಸಿಸಿ ಕ್ಯಾಂಪ್ ಆಯೋಜಿಸಿದ್ದ. ಆತನ ಜೊತೆಗಿದ್ದ ತಂಡವನ್ನು ಮತ್ತು ಆತನ ಹಿನ್ನೆಲೆ ಬಗ್ಗೆ ಸರಿಯಾಗಿ ಪರಿಶೀಲನೆ ನಡೆಸದೇ ಶಾಲಾ ಪ್ರಾಂಶುಪಾಲರು ಇದಕ್ಕೆ ಒಪ್ಪಿದರು.
ಶಿಬಿರವು ಆಗಸ್ಟ್ 5 ರಿಂದ ಆಗಸ್ಟ್ 9 ರವರೆಗೆ ನಡೆದಿದ್ದು, 17 ಹುಡುಗಿಯರು ಸೇರಿದಂತೆ 41 ವಿದ್ಯಾರ್ಥಿಗಳು ಪಾಲ್ಗೊಂಡಿದ್ದರು. ಶಿಬಿರದ ಸಮಯದಲ್ಲಿ, ಹುಡುಗರನ್ನು ನೆಲ ಮಹಡಿಯಲ್ಲಿ ಮತ್ತು ಹುಡುಗಿಯರನ್ನು ಮೇಲಿನ ಮಹಡಿಯಲ್ಲಿ ಇರಿಸಲಾಗಿತ್ತು. ಅಲ್ಲಿ ಮಿಲಿಟರಿ ತರಹದ ತರಬೇತಿ ನೀಡಲಾಗಿತ್ತು. ಅಲ್ಲದೇ ರಾತ್ರಿಯಲ್ಲಿ ನಾಲ್ಕು ಗಂಟೆಗಳ ಪಾಳಿಗಳವರೆಗೆ ಶಾಲೆಯ ಕಾಂಪೌಂಡ್ ಅನ್ನು ಕಾವಲು ಕಾಯಲು ವಿದ್ಯಾರ್ಥಿಗಳನ್ನು ಗುಂಪುಗಳಲ್ಲಿ ನಿಯೋಜಿಸಲಾಯಿತು. ಈ ರಾತ್ರಿ ಪಾಳಿಯಲ್ಲಿ ಶಿವರಾಮನ್ 13 ವರ್ಷದ ಬಾಲಕಿಯ ಮೇಲೆ ಲೈಂಗಿಕ ದೌರ್ಜನ್ಯ ಎಸಗಿದ್ದಾನೆ ಎಂದು ತನಿಖೆಯ ಮೇಲ್ವಿಚಾರಣೆ ನಡೆಸುತ್ತಿರುವ ಹಿರಿಯ ಅಧಿಕಾರಿಯೊಬ್ಬರು ತಿಳಿಸಿದ್ದಾರೆ
ಸಂತ್ರಸ್ತೆ ಶಾಲೆಯ ಪ್ರಾಂಶುಪಾಲರಾದ ಸತೀಶ್ ಕುಮಾರ್ ಅವರಿಗೆ ಈ ಹೀನ ಕೃತ್ಯದ ಬಗ್ಗೆ ದೂರು ನೀಡಿದ್ದಳು. ಆದರೆ ಕ್ರಮ ತೆಗೆದುಕೊಳ್ಳುವ ಬದಲು, ಪ್ರಾಂಶುಪಾಲರು, ಶಾಲೆಯ ಇಬ್ಬರು ಶಿಕ್ಷಕರೊಂದಿಗೆ ಸೇರಿ ಈ ಕೃತ್ಯವನ್ನು ಮುಚ್ಚಿಡಲು ನಿರ್ಧರಿಸಿದರು. ಹುಡುಗಿ ಅಂತಿಮವಾಗಿ ತನ್ನ ತಾಯಿಗೆ ತಿಳಿಸಿದಳು, ಆಕೆಯ ತಂದೆ ಶುಕ್ರವಾರ ಪೊಲೀಸರಿಗೆ ದೂರು ನೀಡಿದ್ದಾರೆ. ಪೊಲೀಸರ ಪ್ರಕಾರ, ಲೈಂಗಿಕ ದೌರ್ಜನ್ಯಕ್ಕೊಳಗಾದ ಹುಡುಗಿಯನ್ನು ಹೊರತುಪಡಿಸಿ, ಕನಿಷ್ಠ ನಾಲ್ವರು ವಿದ್ಯಾರ್ಥಿನಿಯರಿಗೆ ಶಿವರಾಮನ್ ಮತ್ತು ಅವರ ಸಹಚರರು ಕಿರುಕುಳ ನೀಡಿದ್ದಾರೆ ಎಂದು ಆರೋಪಿಸಲಾಗಿದೆ.
ಶಿವರಾಮನ್ ಮತ್ತು ಆತನ ಸಹಚರರು ಕೃಷ್ಣಗಿರಿಯ ಇತರ ಮೂರು ಶಾಲೆಗಳಲ್ಲಿ ಇದೇ ರೀತಿಯ ಅನಧಿಕೃತ ಎನ್‌ಸಿಸಿ ಕ್ಯಾಂಪ್ ನಡೆಸಿದೆ ಎನ್ನಲಾಗಿದೆ. ಅವರು ಈ ಹಿಂದಿನ ಅವಧಿಗಳ ಫೋಟೋಗಳು ಮತ್ತು ವೀಡಿಯೊಗಳನ್ನು ತೋರಿಸುವ ಮೂಲಕ ಪ್ರಸ್ತುತ ಶಾಲೆಯ ಆಡಳಿತವನ್ನು ಮನವೊಲಿಸಿದರು.