Site icon Vistara News

ಅಣ್ವಸ್ತ್ರ ಸಾಗಣೆ; ಚೀನಾದಿಂದ ಪಾಕ್‌ಗೆ ಹೊರಟಿದ್ದ ಹಡಗನ್ನು ಮುಂಬೈನಲ್ಲಿ ತಡೆದ ಅಧಿಕಾರಿಗಳು!

Ship

Ship from China to Pakistan stopped at Mumbai port over suspected nuclear cargo

ಮುಂಬೈ: ಚೀನಾದಿಂದ ಪಾಕಿಸ್ತಾನಕ್ಕೆ ಅಣ್ವಸ್ತ್ರ ಹಾಗೂ ಖಂಡಾಂತರ ಕ್ಷಿಪಣಿಗಳನ್ನು (Nuclear and Ballistic Missiles) ತಯಾರಿಸಲು ಬಳಸುವ ಕಚ್ಚಾ ವಸ್ತು ಇದೆ ಎಂಬ ಕುರಿತು ಮಾಹಿತಿ ಲಭ್ಯವಾದ ಹಿನ್ನೆಲೆಯಲ್ಲಿ ಪಾಕಿಸ್ತಾನದ ಕರಾಚಿಗೆ ತೆರಳುತ್ತಿದ್ದ ಹಡಗನ್ನು ಭಾರತದ ಭದ್ರತಾ ಏಜೆನ್ಸಿ ಅಧಿಕಾರಿಗಳು (Indian Security Agencies) ಮುಂಬೈನಲ್ಲಿಯೇ ತಡೆದಿದ್ದಾರೆ. ಮುಂಬೈನ ನ್ಹಾವಾ ಶೆವಾ (Nhava Sheva Port) ಬಂದರಿನಲ್ಲಿ ಕಸ್ಟಮ್ಸ್‌ ಅಧಿಕಾರಿಗಳು ಮರ್ಚಂಟ್‌ ಹಡಗನ್ನು ತಡೆದಿದ್ದು, ಪ್ರಕರಣದ ಕುರಿತು ಹೆಚ್ಚಿನ ತನಿಖೆ ನಡೆಸುತ್ತಿದ್ದಾರೆ ಎಂದು ತಿಳಿದುಬಂದಿದೆ.

ಮಾಲ್ಟಾ ಧ್ವಜ ಇರುವ, ಸಿಎಂಎ ಸಿಜಿಎಂ ಅಟ್ಟಿಲಾ ಎಂಬ ಮರ್ಚಂಟ್‌ ಹಡಗನ್ನು ಮುಂಬೈನಲ್ಲಿ ತಡೆ ಹಿಡಿಯಲಾಗಿದೆ. ಗುಪ್ತಚರ ಇಲಾಖೆಯ ನಿಖರ ಮಾಹಿತಿ ಮೇರೆಗೆ ಕಾರ್ಯಾಚರಣೆ ನಡೆಸಿದ ಕಸ್ಟಮ್ಸ್‌ ಅಧಿಕಾರಿಗಳು, ಹಡಗನ್ನು ಮುಂಬೈ ಬಂದರಿನಲ್ಲಿಯೇ ತಡೆದಿದ್ದಾರೆ. ಹಡಗನ್ನು ಕೂಲಂಕಷವಾಗಿ ಪರಿಶೀಲನೆ ನಡೆಸಿದಾಗ ಕನ್ಸೈನ್‌ಮೆಂಟ್‌ನಲ್ಲಿ ಕಂಪ್ಯೂಟರ್‌ ನ್ಯೂಮರಿಕಲ್‌ ಕಂಟ್ರೋಲ್‌ (CNC) ಮಷೀನ್‌ ಲಭ್ಯವಾಗಿದೆ. ಈ ಮಷೀನ್‌ಅನ್ನು ಇಟಲಿಯಲ್ಲಿ ತಯಾರಿಸಲಾಗಿದೆ. ಇದು ಕಸ್ಟಮ್ಸ್‌ ಅಧಿಕಾರಿಗಳ ಕಾರ್ಯಾಚರಣೆಗೆ ಸಿಕ್ಕ ಬಹುದೊಡ್ಡ ಮುನ್ನಡೆಯಾಗಿದೆ ಎಂದು ತಿಳಿದುಬಂದಿದೆ.

ಏನಿದು ಸಿಎನ್‌ಸಿ ಮಷೀನ್?‌

ಕಂಪ್ಯೂಟರ್‌ ನ್ಯೂಮರಿಕಲ್‌ ಕಂಟ್ರೋಲ್‌ಅನ್ನು ಅಣ್ವಸ್ತ್ರ, ಕ್ಷಿಪಣಿ ಸೇರಿ ಹತ್ತಾರು ಬಗೆಯ ಭಯಾನಕ ಸ್ಫೋಟಕ, ಶಸ್ತ್ರಾಸ್ತ್ರಗಳನ್ನು ತಯಾರಿಸಲು ಬಳಸಲಾಗುತ್ತದೆ. ಉತ್ತರ ಕೊರಿಯಾ ಕೂಡ ಅಣ್ವಸ್ತ್ರ ತಯಾರಿಕೆಗೆ ಇದೇ ಮಷೀನ್‌ಅನ್ನು ಬಳಸಿತ್ತು. ಈಗ ಪಾಕಿಸ್ತಾನವು ಕೂಡ ಅಣ್ವಸ್ತ್ರ ಹಾಗೂ ಖಂಡಾಂತರ ಕ್ಷಿಪಣಿಗಳ ತಯಾರಿಕೆಗಾಗಿ ಈ ಮಷೀನ್‌ಅನ್ನು ಚೀನಾದಿಂದ ತರಿಸಿಕೊಳ್ಳಲು ಮುಂದಾಗಿತ್ತು. ಜನವರಿ 23ರಂದೇ ಚೀನಾದಿಂದ ಹೊರಟ ಕಾರ್ಗೋ ಹಡಗು, ಇನ್ನೇನು ಕೆಲವೇ ದಿನಗಳಲ್ಲಿ ಪಾಕಿಸ್ತಾನ ತಲುಪುವುದಿತ್ತು ಎಂದು ಹೇಳಲಾಗುತ್ತಿದೆ.

ಇದನ್ನೂ ಓದಿ: ಚೀನಾವನ್ನು ಕೈಬಿಟ್ಟು ಭಾರತಕ್ಕೆ ಮಹತ್ವದ ಗುತ್ತಿಗೆ ಕೊಟ್ಟ ಶ್ರೀಲಂಕಾ; ರಾಜತಾಂತ್ರಿಕ ಮುನ್ನಡೆ

ಅಮೆರಿಕ ಸೇರಿ ಹಲವು ಅಂತಾರಾಷ್ಟ್ರೀಯ ಸಂಸ್ಥೆಗಳಿಂದ ಹಣಕಾಸು ನೆರವು ಸ್ಥಗಿತವಾದ ಬಳಿಕ ಪಾಕಿಸ್ತಾನವು ಅಣ್ವಸ್ತ್ರ, ಕ್ಷಿಪಣಿ ಸೇರಿ ಹಲವು ಬಗೆಯ ಶಸ್ತ್ರಾಸ್ತ್ರಗಳನ್ನು ಖರೀದಿಸಲು ಸಾಧ್ಯವಾಗುತ್ತಿಲ್ಲ. ಹಾಗಾಗಿ, ಚೀನಾದ ನೆರವಿನೊಂದಿಗೆ ಸಿಎನ್‌ಸಿ ಮಷೀನ್‌ಗಳನ್ನು ತರಿಸಿಕೊಂಡು, ಅಣ್ವಸ್ತ್ರ, ಕ್ಷಿಪಣಿಗಳನ್ನು ತಯಾರಿಸುವುದು ನೆರೆ ರಾಷ್ಟ್ರದ ಕುತಂತ್ರವಾಗಿದೆ ಎಂದು ಪ್ರಾಥಮಿಕ ತನಿಖೆಯಿಂದ ತಿಳಿದುಬಂದಿದೆ. ಆದಾಗ್ಯೂ, ಪ್ರಕರಣದ ಕುರಿತು ಭಾರತದ ಕಸ್ಟಮ್ಸ್‌ ಅಧಿಕಾರಿಗಳು ಹೆಚ್ಚಿನ ತನಿಖೆ ನಡೆಸುತ್ತಿದ್ದಾರೆ. ಇನ್ನಷ್ಟು ಸ್ಫೋಟಕ ಮಾಹಿತಿಯನ್ನು ಕೂಡ ನಿರೀಕ್ಷಿಸಲಾಗಿದೆ ಎಂದು ಮೂಲಗಳು ತಿಳಿಸಿವೆ.

ಈ ಸಂಗತಿಯ ಕುರಿತು ನಿಮ್ಮ ಅನಿಸಿಕೆ ಏನು? ಕಾಮೆಂಟ್ ಮೂಲಕ ತಿಳಿಸಿ

Exit mobile version