Site icon Vistara News

Shoot Out: ರೆಸ್ಟೋರೆಂಟ್‌ ಒಳಗೆ ರಿಯಲ್‌ ಎಸ್ಟೇಟ್‌ ಉದ್ಯಮಿ ಮೇಲೆ ಗುಂಡಿನ ದಾಳಿ; ಭಯಾನಕ ವಿಡಿಯೊ!

shoot out in pune

shoot out in pune

ಮುಂಬೈ: ಎರಡು ಗುಂಪುಗಳ ಗ್ಯಾಂಗ್‌ ವಾರ್‌ಗೆ ವ್ಯಕ್ತಿಯೊಬ್ಬ ಬಲಿಯಾದ ಘಟನೆ ಪುಣೆಯಲ್ಲಿ ಶನಿವಾರ ನಡೆದಿದೆ. ಪುಣೆ-ಸೋಲಾಪುರ ಹೆದ್ದಾರಿ ಬಳಿಯ ರೆಸ್ಟೋರೆಂಟ್ ಒಂದರಲ್ಲಿ ಕುಳಿತಿದ್ದ ವ್ಯಕಿಯ ತಲೆಗೆ ಗುಂಡು ಹಾರಿಸಿ ಹತ್ಯೆ ಮಾಡಲಾಗಿದೆ (Shoot Out). ಮೃತ ವ್ಯಕ್ತಿಯನ್ನು ರಿಯಲ್‌ ಎಸ್ಟೇಟ್‌ ಉದ್ಯಮಿ 34 ವರ್ಷದ ಅವಿನಾಶ್ ಬಾಲು ಧನ್ವೆ (Avinash Balu Dhanve) ಎಂದು ಗುರುತಿಸಲಾಗಿದೆ. ಸಿನಿಮೀಯ ರೀತಿಯಲ್ಲಿ ನಡೆದ ಈ ಘಟನೆ ಸಿಸಿ ಟಿವಿ ಕ್ಯಾಮೆರಾದಲ್ಲಿ ಸೆರೆಯಾಗಿದೆ.

ಪುಣೆ ನಗರದಿಂದ ಸುಮಾರು 140 ಕಿ.ಮೀ. ದೂರದಲ್ಲಿರುವ ರೆಸ್ಟೋರೆಂಟ್‌ನಲ್ಲಿ ಈ ಆಘಾತಕಾರಿ ಘಟನೆ ನಡೆದಿದೆ ಎಂದು ಪೊಲೀಸರು ತಿಳಿಸಿದ್ದಾರೆ. ಅವಿನಾಶ್ ಬಾಲು ಧನ್ವೆ ವಿರುದ್ಧ ಈ ಹಿಂದೆ ಹಲವು ಕ್ರಿಮಿನಲ್ ಪ್ರಕರಣಗಳು ದಾಖಲಾಗಿದ್ದವು. ಈ ಹೀಗಾಗಿ ಇದು ಮೇಲ್ನೋಟಕ್ಕೆ ಗ್ಯಾಂಗ್‌ ವಾರ್‌ ಎಂದೆನಿಸುತ್ತಿದೆ ಎಂದು ಮೂಲಗಳು ತಿಳಿಸಿವೆ. ದಾಳಿಯ ಸಿಸಿಟಿವಿ ದೃಶ್ಯಾವಳಿಗಳನ್ನು ಪೊಲೀಸರು ಪಡೆದುಕೊಂಡಿದ್ದು, ತನಿಖೆ ಕೈಗೆತ್ತಿಕೊಂಡಿದ್ದಾರೆ.

ಏನಿದು ಘಟನೆ?

ಧನ್ವೆ ಮತ್ತು ಇತರ ಮೂವರು ಶನಿವಾರ ರಾತ್ರಿ ರಾತ್ರಿ 8 ಗಂಟೆಯ ಸುಮಾರಿಗೆ ರೆಸ್ಟೋರೆಂಟ್‌ ಒಂದರಲ್ಲಿ ಕುಳಿತಿದ್ದರು. ಇವರ ಪಕ್ಕದ ಟೇಬಲ್‌ನಲ್ಲಿ ಕುಳಿತಿದ್ದ ನಾಲ್ವರು ತಿಂಡಿ ತಿನ್ನುತ್ತಿದ್ದರು. ಈ ಪೈಕಿ ಇಬ್ಬರು ಮಕ್ಕಳಿದ್ದರು. ಕೆಲ ಹೊತ್ತಿನಲ್ಲಿ ಇಬ್ಬರು ಧನ್ವೆ ಸಮೀಪಕ್ಕೆ ಆಗಮಿಸಿದರು. ಓರ್ವನ ಕೈಯಲ್ಲಿ ಪ್ಲಾಸ್ಟಿಕ್‌ ಕವರ್‌ ಇತ್ತು. ಈ ವೇಳೆ ಧನ್ವೆ ಫೋನ್‌ನಲ್ಲಿ ಮಾತನಾಡುತ್ತಿದ್ದ. ಎಲ್ಲರೂ ನೋಡುತ್ತಿದ್ದಂತೆ ಅಲ್ಲಿಗೆ ಆಗಮಿಸಿದ ಆಗಂತುಕರು ತಮ್ಮ ಗನ್‌ ಹೊರ ತೆಗೆದು ಧನ್ವೆ ವೇಳೆ ಗುಂಡಿನ ಮಳೆಗೆರೆದರು. ವಿಶೇಷ ಎಂದರೆ ಅವರು ಬೇರೆ ಯಾರ ಮೇಲೂ ದಾಳಿ ನಡೆಸಿಲ್ಲ. ಅವರ ಟಾರ್ಗೆಟ್‌ ಧನ್ವೆ ಮಾತ್ರ ಆಗಿತ್ತು. ಈ ವೇಳೆ ಧನ್ವೆ ಜತೆಗಿದ್ದ ಇತರ ಮೂವರು ಪರಾರಿಯಾಗಿದ್ದಾರೆ. ಕೂಡಲೇ ಬೇರೆ ಆರು ಮಂದಿ ರೆಸ್ಟೋರೆಂಟ್‌ ಒಳಗೆ ನುಗ್ಗಿ ನೆಲದ ಮೇಲೆ ಬಿದ್ದಿದ್ದ ಧನ್ವೆ ಮೇಲೆ ಮತ್ತೆ ಆಕ್ರಮಣ ಮಾಡುತ್ತಾರೆ. ಧನ್ವೆ ಮೃತಪಟ್ಟಿರುವುದು ದೃಢವಾದ ಬಳಿಕ ದಾಳಿಕೋರರು ಜಾಗ ಖಾಲಿ ಮಾಡುತ್ತಾರೆ.

ಕೊಲೆಯ ತನಿಖೆಗಾಗಿ ಪೊಲೀಸರು ಐದು ತಂಡಗಳನ್ನು ರಚಿಸಿದ್ದಾರೆ. ಎರಡು ಗುಂಪುಗಳ ನಡುವಿನ ವೈಷಮ್ಯವೇ ಕೊಲೆಗೆ ಕಾರಣ ಎಂದು ಪ್ರಾಥಮಿಕ ತನಿಖೆಯಿಂದ ತಿಳಿದುಬಂದಿದೆ ಎಂದು ಅವರು ತಿಳಿಸಿದ್ದಾರೆ.

“ಸಿಸಿಟಿವಿ ದೃಶ್ಯಾವಳಿಗಳ ಮೂಲಕ ನಾವು ಎಂಟು ದಾಳಿಕೋರರನ್ನು ಗುರುತಿಸಿದ್ದೇವೆ ಮತ್ತು ಅವರನ್ನು ಬಂಧಿಸಲು ತಂಡಗಳನ್ನು ಸಜ್ಜುಗೊಳಿಸಲಾಗಿದೆ. ಧನ್ವೆ ವಿರುದ್ಧ ಅನೇಕ ಪ್ರಕರಣಗಳು ದಾಖಲಾಗಿವೆ. ಪ್ರತಿಸ್ಪರ್ಧಿ ಗುಂಪಿನೊಂದಿಗಿನ ಹಿಂದಿನ ದ್ವೇಷವೇ ಕೊಲೆಗೆ ಕಾರಣ ಎನ್ನುವುದು ತಿಳಿದು ಬಂದಿದೆʼʼ ಎಂದು ಪುಣೆ ಗ್ರಾಮೀಣ ಎಸ್‌ಪಿ ಪಂಕಜ್ ದೇಶ್‌ಮುಖ್‌ ಮಾಹಿತಿ ನೀಡಿದ್ದಾರೆ.

ಇದನ್ನೂ ಓದಿ: Shoot Out: ಕಾರಿನೊಳಗೆ ಮಲಗಿದ್ದ ಉದ್ಯಮಿ ಮೇಲೆ 30 ಗುಂಡು ಹಾರಿಸಿದರು; ವಿಡಿಯೊ ಇದೆ

ಕಳೆದ ವಾರವೂ ನಡೆದಿತ್ತು ಶೂಟ್‌ಔಟ್‌

ಢಾಬಾದ ಪಾರ್ಕಿಂಗ್ ಲಾಟ್‌ನಲ್ಲಿ ನಿಲ್ಲಿಸಿದ್ದ ತಮ್ಮ ಎಸ್‌ಯುವಿ ಒಳಗೆ ನಿದ್ರಿಸುತ್ತಿದ್ದ ಉದ್ಯಮಿಯನ್ನು ಅಪರಿಚಿತ ವ್ಯಕ್ತಿಗಳು ಹೊರಗೆ ಎಳೆದು ಗುಂಡು ಹಾರಿಸಿ ಭೀಕರವಾಗಿ ಕೊಂದು ಪರಾರಿಯಾದ ಘಟನೆ ಹರಿಯಾಣದ ಮುರ್ಥಾಲ್‌ನಲ್ಲಿ ಮಾರ್ಚ್‌ 10ರಂದು ನಡೆದಿತ್ತು. ಹತ್ಯೆಗೀಡಾದ ವ್ಯಕ್ತಿಯನ್ನು ಗೊಹಾನಾದ ಸಾರಗ್ತಲ್ ಗ್ರಾಮದ ನಿವಾಸಿ 38 ವರ್ಷದ ಮದ್ಯದ ವ್ಯಾಪಾರಿ ಸುಂದರ್ ಮಲಿಕ್‌ ಎಂದು ಗುರುತಿಸಲಾಗಿದೆ. ಈ ಘಟನೆ ಮರೆಯಾಗುವ ಮುನ್ನ ಮತ್ತೊಂದು ಇದೇ ಮಾದರಿಯ ಹತ್ಯೆ ನಡೆದಿದೆ.

ಈ ಸಂಗತಿಯ ಕುರಿತು ನಿಮ್ಮ ಅನಿಸಿಕೆ ಏನು? ಕಾಮೆಂಟ್ ಮೂಲಕ ತಿಳಿಸಿ

Exit mobile version