ನವದೆಹಲಿ: ಸಿಖ್ಖರಿಗೆ ಸಾರ್ವಭೌಮ ರಾಷ್ಟ್ರಕ್ಕಾಗಿ ಒತ್ತಾಯಿಸುತ್ತಿರುವ ಅಮೆರಿಕದ ಪ್ರಜೆ(US National), ಸಿಖ್ ಫಾರ್ ಜಸ್ಟಿಸ್ (Sikhs for Justice) ಸಂಸ್ಥಾಪಕ ಗುರುಪತ್ವಂತ್ ಸಿಂಗ್ ಪನ್ನು (Gurpatwant Pannun) ಹತ್ಯೆಗೆ ಸಂಚು ರೂಪಿಸಿದ ಆರೋಪವನ್ನು (conspiracy to kill) ಭಾರತೀಯ ಪ್ರಜೆಯ (Indian national) ಮೇಲೆ ಅಮೆರಿಕ ಹೊರಿಸಿದೆ ಎಂದು ಮ್ಯಾನ್‌ಹ್ಯಾಟನ್ ಅಮೆರಿಕ ಅಟಾರ್ನಿ ಕಚೇರಿ ಬುಧವಾರ ತಿಳಿಸಿದೆ. ಜೆಕ್ ಅಧಿಕಾರಿಗಳು ಕಳೆದ ಜೂನ್‌ನಲ್ಲಿ ನಿಖಿಲ್ ಗುಪ್ತಾ (Nikhil Gupta) ಎಂಬಾತನನ್ನು ಬಂಧಿಸಿದ್ದಾರೆ. ಆತನ ಹಸ್ತಾಂತರವನ್ನು ಎದುರು ನೋಡಲಾಗುತ್ತಿದೆ ಎಂದು ವರದಿಯಾಗಿದೆ. ಪ್ರತ್ಯೇಕತಾವಾದಿ ಸಿಖ್ಖರ ನಾಯಕನಾಗಿರುವ ಗುರುಪತ್ವಂತ್ ಪನ್ನುನ್ ಭಾರತದ ವಿರುದ್ಧ ಬೆದರಿಕೆ ಹಾಕುವ ವಿಡಿಯೋಗಳನ್ನು ಸೋಷಿಯಲ್ ಮೀಡಿಯಾದಲ್ಲಿ ಅಪ್‌ಲೋಡ್ ಮಾಡುತ್ತಿರುತ್ತಾನೆ. ಇತ್ತೀಚೆಗೆ ವರ್ಲ್ಡ್ ಕಪ್ ಫೈನಲ್ ಪಂದ್ಯದ ವೇಳೆ ಇಂಥದ್ದೇ ಬೆದರಿಕೆ ಹಾಕಿದ್ದ. ಈ ಕಾರಣಕ್ಕಾಗಿ ರಾಷ್ಟ್ರೀಯ ತನಿಖಾ ಸಂಸ್ಥೆ(NIA) ಆತನ ವಿರುದ್ಧ ಎಫ್ಐಆರ್ ದಾಖಲಿಸಿ ತನಿಖೆ ನಡೆಸುತ್ತಿದೆ.
ಸಿಖ್ಖರಿಗೆ ಸಾರ್ವಭೌಮ ರಾಷ್ಟ್ರಕ್ಕಾಗಿ ಸಾರ್ವಜನಿಕವಾಗಿ ಪ್ರತಿಪಾದಿಸಿದ ಭಾರತೀಯ ಮೂಲದ ಅಮೆರಿಕ ಪ್ರಜೆಯನ್ನು ನ್ಯೂಯಾರ್ಕ್ ನಗರದಲ್ಲಿ ಹತ್ಯೆ ಮಾಡಲು, ಆರೋಪಿಯು ಭಾರತದಿಂದ ಸಂಚು ರೂಪಿಸಿದ್ದಾನೆ ಎಂದು ಮ್ಯಾನ್‌ಹ್ಯಾಟನ್‌ನ ಉನ್ನತ ಫೆಡರಲ್ ಪ್ರಾಸಿಕ್ಯೂಟರ್ ಡಾಮಿಯನ್ ವಿಲಿಯಮ್ಸ್ ತಮ್ಮ ಹೇಳಿಕೆಯಲ್ಲಿ ತಿಳಿಸಿದ್ದಾರೆ.
ಕಳೆದ ವಾರ ಅಮೆರಿಕ ಅಧ್ಯಕ್ಷ ಜೋ ಬೈಡೆನ್ ಆಡಳಿತದ ಹಿರಿಯ ಅಧಿಕಾರಿಯೊಬ್ಬರು, ಅಮೆರಿಕದಲ್ಲಿ ಸಿಖ್ ಪ್ರತ್ಯೇಕತಾವಾದಿಯನ್ನು ಕೊಲ್ಲುವ ಸಂಚನ್ನು ಅಮೆರಿಕದ ಅಧಿಕಾರಿಗಳು ವಿಫಲಗೊಳಿಸಿದ್ದಾರೆ ಎಂದು ಹೇಳಿದ್ದರು. ಅಲ್ಲದೇ, ಈ ಕೃತ್ಯದಲ್ಲಿ ಭಾರತ ಸರ್ಕಾರವು ಭಾಗಿಯಾಗಿರುವ ಕಳವಳಗಳ ಬಗ್ಗೆ ಎಚ್ಚರಿಕೆಯನ್ನು ನೀಡಿದ್ದರು. ಈ ಬೆಳವಣಿಗೆ ನಡೆದ ಬೆನ್ನಲ್ಲೇ ಭಾರತೀಯ ಪ್ರಜೆಯ ವಿರುದ್ಧ ಆರೋಪ ಹೊರಿಸಲಾಗಿದೆ.
ಕೆನಡಾ ಮತ್ತು ಅಮೆರಿಕದ ದ್ವಿ ಪೌರತ್ವವನ್ನು ಹೊಂದಿರುವ ಗುರುಪತ್ವಂತ್ ಸಿಂಗ್ ಪನ್ನನ್ನು ಕೊಲೆಗೆ ಸಂಚು ರೂಪಿಸಲಾಗಿತ್ತು. ಈ ಪ್ರಯತ್ನವನ್ನು ವಿಫಲಗೊಳಿಸಲಾಗಿದೆ ಎಂದು ಅಮೆರಿಕದ ಹಿರಿಯ ಅಧಿಕಾರಿಗಳು ಹೇಳಿದ್ದರು.
ನಿಖಿಲ್ ಗುಪ್ತಾ ಯಾರನ್ನು ಟಾರ್ಗೆಟ್ ಮಾಡಿದ್ದ ಎಂಬ ಮಾಹಿತಿಯನ್ನು ಪ್ರಾಸಿಕ್ಯೂಟರ್‌ಗಳು ನೀಡಿಲ್ಲ. ಆದರೆ, ಸಿಖ್ಖರ ದೊಡ್ಡ ಜನಸಂಖ್ಯೆಯ ನೆಲೆಯಾಗಿರುವ ಭಾರತದ ಪಂಜಾಬ್ ರಾಜ್ಯದ ಪ್ರತ್ಯೇಕತೆಗೆ ಪ್ರತಿಪಾದಿಸುವ ಅಮೆರಿಕ ಆಧಾರಿತ ಸಂಘಟನೆಯನ್ನು ಮುನ್ನಡೆಸುವ ವ್ಯಕ್ತಿ, ಭಾರತ ಸರ್ಕಾರದ ತೀವ್ರ ಟೀಕಾಕಾರನೇ ಟಾರ್ಗೆಟ್ ಆಗಿದ್ದ ಎಂದು ಅವರು ವಿವರಿಸಿದ್ದಾರೆ.
ಎರಡು ತಿಂಗಳ ಹಿಂದೆ ಕೆನಡಾ ಕೂಡ ಇಂಥದ್ದೇ ಆರೋಪ ಮಾಡಿತ್ತು. ಸಿಖ್ ಪ್ರತ್ಯೇಕತಾವಾದಿ ನಾಯಕ ಹರ್ದೀಪ್ ಸಿಂಗ್ ನಿಜ್ಜರ್ ಕೊಲೆಯಲ್ಲಿ ಭಾರತದ ಏಜೆಂಟ್‌ಗಳ ಕೈವಾಡ ಇದೆ ಎಂದು ಸ್ವತಃ ಕೆನಡಾ ಪ್ರಧಾನಿ ಆರೋಪಿಸಿದ್ದರು. ಬಳಿಕ ಕೆನಡಾ ಮತ್ತು ಭಾರತದ ನಡುವೆ ರಾಜತಾಂತ್ರಿಕ ಸಂಘರ್ಷ ಏರ್ಪಟ್ಟಿತ್ತು.
ಈ ಸುದ್ದಿಯನ್ನೂ ಓದಿ: ನಿಜ್ಜರ್ ರೀತಿಯೇ ಭಾರತ ವಿರೋಧಿ ಉಗ್ರ ಗುರುಪತ್ವಂತ್ ಸಿಂಗ್ ಪನ್ನುನ್ ಹತ್ಯೆ? ಏನಿದು ವರದಿ?