ಸುಮಾರು 14 ವರ್ಷಗಳಿಂದ Spelling Bee ಸ್ಪರ್ಧೆಯಲ್ಲಿ ಭಾರತೀಯ ಮೂಲದ ಮಕ್ಕಳು ಗೆಲ್ಲುತ್ತ ಬಂದಿದ್ದಾರೆ. ಫೈನಲ್ ರೌಂಡ್‌ಗೆ ಹೋಗುವ ಹೆಚ್ಚಿನ ಮಕ್ಕಳೂ ಭಾರತೀಯರೇ. ಮಧ್ಯೆ ಒಂದಿಬ್ಬರು ಇತರರು ಗೆದ್ದುದು ಇದೆ. ಆದರೆ ಹೆಚ್ಚಿನವರೂ ಭಾರತೀಯರೇ. ಇದೊಂದು ಕುತೂಹಲಕಾರಿ ಸಂಗತಿ. ಭಾರತೀಯ ಮಕ್ಕಳು ಕಲಿಕೆಯಲ್ಲಿ ಸದಾ ಅಮೆರಿಕನ್ನರಿಗಿಂತ ಮುಂದಿರುತ್ತಾರೆ ಎಂಬುದು ನಮಗೆ ಗೊತ್ತಿದ್ದದ್ದೇ. ಆದರೆ ನಿರ್ದಿಷ್ಟವಾಗಿ ಈ ಸ್ಪರ್ಧೆಯ ಸಾಧನೆಗೆ ಏನು ಕಾರಣ?
ಇದಕ್ಕೂ ಮುನ್ನ ಸ್ಪೆಲ್ಲಿಂಗ್ ಬೀ ಸ್ಪರ್ಧೆಯ ಬಗ್ಗೆ ಒಂದಷ್ಟು ಮಾಹಿತಿ ತಿಳಿದುಕೊಳ್ಳೋಣ.
ಇದರ ಪೂರ್ತಿ ಹೆಸರು The Scripps National Spelling Bee Contest. ಮೊದಲು ಆರಂಭವಾದುದು 1925ರಲ್ಲಿ. ಒಂಬತ್ತು ನ್ಯೂಸ್‌ಪೇಪರ್‌ಗಳು ಜೊತೆಯಾಗಿ ಈ ಸ್ಪರ್ಧೆಯನ್ನು ಆರಂಭಿಸಿದವು. 1941ರಲ್ಲಿ The Scripps Howard News Service ಇದರ ನೇತೃತ್ವ ವಹಿಸಿ, ಇತರ ದಿನಪತ್ರಿಕೆಗಳನ್ನೂ ಜೊತೆಗೆ ಸೇರಿಸಿಕೊಂಡು, ದೊಡ್ಡ ಪ್ರಮಾಣದಲ್ಲಿ ನಡೆಸತೊಡಗಿತು.
ಇನ್ನಷ್ಟು ಸುದ್ದಿ: ಭಾರತೀಯ ಹರಿಣಿ ಲೋಗನ್ Spelling Bee ವಿಜೇತೆ
ಇದರ ನಿಯಮಗಳು ಹೀಗೆ:
- ಮೊದಲು ಕ್ಲಾಸ್ರೂಮ್ ಮಟ್ಟದಲ್ಲಿ ಸ್ಪರ್ಧೆಗಳು ನಡೆಯುತ್ತವೆ. ಇಲ್ಲಿ ನೀಡಿದ ಪದದ ಸ್ಪೆಲ್ಲಿಂಗ್ ಅನ್ನು ಅಭ್ಯರ್ಥಿ ತಪ್ಪಿಲ್ಲದೆ ಹೇಳಬೇಕು. ಇದು ಅಮೆರಿಕದ ಎಲ್ಲ ರಾಜ್ಯಗಳ ಎಲ್ಲ ಶಾಲೆಗಳಲ್ಲಿ ನಡೆಯುತ್ತದೆ.
- ಕ್ಲಾಸ್ರೂಮ್ನಿಂದ ಶಾಲಾ ಮಟ್ಟಕ್ಕೆ, ಅಲ್ಲಿಂದ ಜಿಲ್ಲಾ, ಕೌಂಟಿ ಮಟ್ಟಕ್ಕೆ, ಅಲ್ಲಿಂದ ರಾಜ್ಯ ಮಟ್ಟಕ್ಕೆ, ಕೊನೆಯದಾಗಿ ರಾಷ್ಟ್ರ ಮಟ್ಟಕ್ಕೆ ತೇರ್ಗಡೆಯಾಗುತ್ತಾರೆ.
ವಿಜೇತರಿಗೆ ಏನು ಸಿಗುತ್ತದೆ?
ಸ್ಪೆಲ್ಲಿಂಗ್ ಬೀ ವಿಜೇತರು $ 52,500 (₹ 40.74 ಲಕ್ಷ) ನಗದು, ಮೆಡಲ್ ಪಡೆಯುತ್ತಾರೆ. ಫೈನಲ್ ರೌಂಡ್‌ಗೆ ಬಂದ ಇತರ ಅಭ್ಯರ್ಥಿಗಳಿಗೆ ಅವರ ಸಾಧನೆಗೆ ಅನುಗುಣವಾಗಿ $25,000, $15,000, $10,000, $5,000, $2,500 ಹಣ ಸಿಗುತ್ತದೆ.
ಈ ವರ್ಷ ಅಂತಿಮ ಕಣದಲ್ಲಿ ಇದ್ದ ಪದಗಳು: tektite, wirrah, sirtaki, impayable, Micawber, escharotic, bourgade, chatoyance, bebung, obstropolous, noctivagant.
ಭಾರತೀಯರೇ ಯಾಕೆ?
ಈ ಸ್ಪೆಲ್ಲಿಂಗ್ ಬೀಯಲ್ಲಿ ಭಾರತೀಯರ ಅಧಿಪತ್ಯದ ವಿಚಾರಕ್ಕೆ ಬರೋಣ. ಸ್ವಲ್ಪ ಈ ಅಂಕಿ ಅಂಶಗಳನ್ನು ನೋಡಿ- 2008ರಿಂದ ಭಾರತೀಯ ಮೂಲದ ಮಕ್ಕಳು ವಿಜೇತರಾಗಿ ಹೊಮ್ಮುತ್ತಿದ್ದಾರೆ. ಇದುವರೆಗೂ 24 ಮಕ್ಕಳು ಚಾಂಪಿಯನ್‌ಗಳಾಗಿ, ಸಹ ಚಾಂಪಿಯನ್‌ಗಳಾಗಿ ಹೊರಹೊಮ್ಮಿದ್ದಾರೆ. 2019ರಲ್ಲಿ ಅನಿರೀಕ್ಷಿತವಾಗಿ 8 ಮಂದಿ ಟ್ರೋಫಿಯನ್ನು ಹಂಚಿಕೊಂಡರು. ಇದರಲ್ಲಿ 7 ಮಂದಿ ಭಾರತೀಯರು.
1985ರಲ್ಲಿ ಬಾಲು ನಟರಾಜನ್, ಮೊದಲ ಬಾರಿಗೆ ಈ ಸ್ಪರ್ಧೆಯಲ್ಲಿ ಗೆದ್ದು ಭಾರತೀಯರ ಜೈತ್ರಯಾತ್ರೆಯನ್ನು ಆರಂಭಿಸಿದರು. ಇವರ ಗೆಲುವು ಮುಂದೆ ಭಾರತೀಯರು, ದಕ್ಷಿಣ ಏಷ್ಯನ್ನರು ತಮ್ಮದೇ ಆದ ವೇದಿಕೆಗಳನ್ನು ಮಾಡಿಕೊಂಡು ಈ ಸ್ಪರ್ಧೆಗೆ ಸಜ್ಜಾಗುವುದಕ್ಕೆ ಕಾರಣವಾಯಿತು. ಭಾರತೀಯ ಸಮುದಾಯ ಶಿಕ್ಷಣಕ್ಕೆ ನೀಡುವ ಮಹತ್ವ, ಅದರಲ್ಲೂ ನೆನಪಿನ ಶಕ್ತಿಗೆ ಕೊಡುವ ಪ್ರಾಮುಖ್ಯತೆ, ಮತ್ತು ಪರಸ್ಪರ ಸಹಕಾರದ ಜಾಲಗಳು- ಈ ಭಾರಿ ಯಶಸ್ಸಿಗೆ ಕಾರಣವಾಗಿವೆ ಎಂದು ಈ ಬಗ್ಗೆ ಅಧ್ಯಯನಗಳನ್ನು ನಡೆಸಿದ ಟೆಂಪಲ್ ಯೂನಿವರ್ಸಿಟಿಯ ಸಂಜಯ್ ಚಕ್ರವರ್ತಿ, ಪೆನ್ಸಿಲ್ವೇನಿಯಾ ಯೂನಿವರ್ಸಿಟಿಯ ದೇವೇಶ್ ಕಪೂರ್, ಕ್ಯಾಲಿಫೋರ್ನಿಯಾ ಯೂನಿವರ್ಸಿಟಿಯ ನಿರ್ವಿಕಾರ್ ಸಿಂಗ್ ಹೇಳುತ್ತಾರೆ.
ಇನ್ನಷ್ಟು ಸುದ್ದಿ: ವಿಸ್ತಾರ Explainer: ಅಮೆರಿಕದ ಯುವಕರೇಕೆ ಕಿಲ್ಲರ್ ಆಗುತ್ತಿದ್ದಾರೆ?
ಭಾರತೀಯರ ಮೂಲದಲ್ಲೇ ಒಂದು ಬಗೆಯ ಮೌಖಿಕ ಜ್ಞಾನದ ಸಂಪ್ರದಾಯವಿದೆ. ರಾಮಾಯಣ, ಮಹಾಭಾರತ, ಭಾಗವತದಂಥ ಮಹಾಗ್ರಂಥಗಳು ಸಂಪೂರ್ಣವಾಗಿ ಮೌಖಿಕವಾಗಿಯೇ ಭಾರತೀಯರ ಜ್ಞಾನ ಪರಂಪರೆಯಲ್ಲಿ ತಲೆಮಾರಿನಿಂದ ತಲೆಮಾರಿಗೆ ಸಾಗಿ ಬಂದಿವೆ. ಭಗವದ್ಗೀತೆಯನ್ನು ಪೂರ್ತಿ ನೆನಪಿಟ್ಟುಕೊಳ್ಳುವುದು ಸಾಂಪ್ರದಾಯಿಕ ಭಾರತೀಯರ ಮನೆಗಳಲ್ಲಿ ಇಂದಿಗೂ ಕಾಣಬಹುದು. ಹೀಗಾಗಿ ನೆನಪಿನ ಶಕ್ತಿ ಮತ್ತು ನೆನಪಿಟ್ಟುಕೊಳ್ಳುವ ಕಲೆಯನ್ನು ಭಾರತೀಯರಿಗೆ ಯಾರೂ ಕಲಿಸಬೇಕಿಲ್ಲ.
ಈ ಕುಟುಂಬಗಳ ಹೆತ್ತವರು ತಮ್ಮ ಮಕ್ಕಳ ಕಲಿಕೆಗಾಗಿ ಹೆಚ್ಚಿನ ಸಮಯವನ್ನು ವಿನಿಯೋಗಿಸುತ್ತಾರೆ. ಕೆಲವು ಮಕ್ಕಳ ೊಬ್ಬ ಹೆತ್ತವರಾದರೂ ಮನೆಯಲ್ಲೇ ಇದ್ದು, ಮಕ್ಕಳ ಕಲಿಕೆಗೆ ಸಂಪೂರ್ಣ ಸಮಯವನ್ನು ವಿನಿಯೋಗಿಸುತ್ತಾರೆ ಮತ್ತು ಮಕ್ಕಳ ಕಲಿಕೆ ಪರಿಪೂರ್ಣವಾಗುವುದನ್ನು ಖಾತ್ರಿಪಡಿಸಿಕೊಳ್ಳುತ್ತಾರೆ. ಈ ಮಕ್ಕಳು ಶಿಕ್ಷಣದಲ್ಲಿ ಎಷ್ಟು ಪರಿಶ್ರಮಪಡುತ್ತಾರೆ ಎಂದರೆ, ಕೆಲವು ಮಕ್ಕಳು ಗಂಟೆಗೆ 1000 ಪದಗಳನ್ನು ಕಲಿಯುವ ಪ್ರಾಕ್ಟೀಸ್ ಕೂಡ ಮಾಡುತ್ತಾರೆ.
ಈ ಹೆಚ್ಚಿನ ಮಕ್ಕಳ ಕುಟುಂಬಗಳು ಬಹುಭಾಷಿಕ ಹಿನ್ನೆಲೆಯಿಂದ ಬಂದಿವೆ. ಹಿಂದಿ ತಾಯಿ- ಗುಜರಾತಿ ತಂದೆ, ಇಂಗ್ಲಿಷ್ ತಂದೆ- ಕನ್ನಡ ತಾಯಿ, ಹೀಗೆ ಮಗು ಹುಟ್ಟಿನಿಂದಲೇ ಬಹುಭಾಷಿಕ ಪದಗಳು, ವಾಕ್ಯಗಳನ್ನು ಕೇಳಿಸಿಕೊಳ್ಳುತ್ತ ಬೆಳೆಯುತ್ತದೆ. ಇದು ಮಕ್ಕಳ ಮಾನಸಿಕ, ಭಾಷಿಕ ಬೆಳವಣಿಗೆಯಲ್ಲಿ ಬಹಳ ನೆರವಾಗುತ್ತಿದೆ. ಕೇವಲ ಇಂಗ್ಲಿಷ್ ಮಾತ್ರ ಬಲ್ಲ ಅಮೆರಿಕನ್ ಮಕ್ಕಳಿಗಿಂತಯ ಈ ಮಕ್ಕಳು ಭಾಷಾ ವಿಷಯಗಳಲ್ಲಿ, ಗಣಿತದಲ್ಲಿ ಬಹು ಎತ್ತರದ ಸಾಧನೆಗಳನ್ನು ಮಾಡುತ್ತಾರೆ. ಇನ್ನು ಇವರ್ಯಾರ ಮಾತೃಭಾಷೆಯೂ ಇಂಗ್ಲಿಷ್ ಅಲ್ಲ. ಹೀಗಾಗಿಯೇ ಇಂಗ್ಲಿಷ್ ಅನ್ನು ಪಳಗಿಸಿಕೊಳ್ಳಬೇಕು ಎಂಬ ಸುಪ್ತ ಹಂಬಲ ಇವರಲ್ಲಿ ಭಾರಿ ಪ್ರಮಾಣದಲ್ಲಿ ಕೆಲಸ ಮಾಡುತ್ತಿರುತ್ತದೆ.
ಇದನ್ನೂ ಓದಿ: Explainer: Land in moon- ಹೋಗಲಾಗದ ಚಂದ್ರನ ಮೇಲೆ ಜಮೀನು ಖರೀದಿ ಯಾಕೆ?