Site icon Vistara News

ಚೀನಾವನ್ನು ಕೈಬಿಟ್ಟು ಭಾರತಕ್ಕೆ ಮಹತ್ವದ ಗುತ್ತಿಗೆ ಕೊಟ್ಟ ಶ್ರೀಲಂಕಾ; ರಾಜತಾಂತ್ರಿಕ ಮುನ್ನಡೆ

Ranil Wickremesinghe And Narendra Modi

Sri Lanka awards energy deal to India after rejecting China

ಕೊಲೊಂಬೊ: ಕೊರೊನಾದಂತಹ ಬಿಕ್ಕಟ್ಟಿನ ಸಂದರ್ಭದಲ್ಲಿ ಶ್ರೀಲಂಕಾಕ್ಕೆ (Sri Lanka) ಭಾರತ ಹಲವು ರೀತಿಯಲ್ಲಿ ನೆರವು ನೀಡಿದ್ದಕ್ಕೆ ಈಗ ಪ್ರತಿಫಲ ದೊರೆತಿದೆ. ಅದರಲ್ಲೂ, ಕಮ್ಯುನಿಸ್ಟ್‌ ರಾಷ್ಟ್ರ ಚೀನಾವು (China) ಶ್ರೀಲಂಕಾದಲ್ಲಿ ಮೂಲ ಸೌಕರ್ಯಗಳ ಹೆಸರಿನಲ್ಲಿ ಪ್ರಾಬಲ್ಯ ಹೆಚ್ಚಿಸಿಕೊಳ್ಳುತ್ತಿದೆ ಎಂದು ಭಾರತ (India) ನೀಡಿದ್ದ ಎಚ್ಚರಿಕೆಗೆ ದ್ವೀಪರಾಷ್ಟ್ರವು ಈಗ ಎಚ್ಚೆತ್ತುಕೊಂಡಿದೆ. ಇದಕ್ಕೆ ನಿದರ್ಶನ ಎಂಬಂತೆ, ಚೀನಾಗೆ ನೀಡಿದ್ದ ನಾಲ್ಕು ಇಂಧನ ಯೋಜನೆಗಳನ್ನು (Energy Deal) ಶ್ರೀಲಂಕಾ ದೇಶವು ಭಾರತಕ್ಕೆ ನೀಡಿದೆ. ಇದು ಭಾರತಕ್ಕೆ ಸಿಕ್ಕ ರಾಜತಾಂತ್ರಿಕ ಮುನ್ನಡೆ ಎಂದೇ ಹೇಳಲಾಗುತ್ತಿದೆ.

ಹೌದು, ದ್ವೀಪರಾಷ್ಟ್ರದಲ್ಲಿ ಮೂರು ಸೌರ ವಿದ್ಯುತ್‌ ಉತ್ಪಾದನೆ ಘಟಕ ಹಾಗೂ ಒಂದು ಹೈಬ್ರಿಡ್‌ ವಿದ್ಯುತ್‌ ಉತ್ಪಾದನೆ ಘಟಕಗಳ ನಿರ್ಮಾಣದ ಗುತ್ತಿಗೆಯನ್ನು ಭಾರತದ ಕಂಪನಿಗಳಿಗೆ ಶ್ರೀಲಂಕಾ ನೀಡಿದೆ. ಇದಕ್ಕೂ ಮೊದಲು ಯೋಜನೆಗಳಿಗೆ ಏಷ್ಯನ್‌ ಡೆವಲಪ್‌ಮೆಂಟ್‌ ಬ್ಯಾಂಕ್‌ ಅನುದಾನ ನೀಡಲಾಗಿತ್ತು. ಅಷ್ಟೇ ಅಲ್ಲ, ನಾಲ್ಕೂ ಘಟಕಗಳ ನಿರ್ಮಾಣದ ಗುತ್ತಿಗೆಯನ್ನು ಚೀನಾದ ಕಂಪನಿಗೆ ನೀಡಲಾಗಿತ್ತು. ಈಗ ಚೀನಾ ಕಂಪನಿಯನ್ನು ಬಿಟ್ಟು, ಭಾರತದ ಕಂಪನಿಗೆ ದ್ವೀಪರಾಷ್ಟ್ರವು ಗುತ್ತಿಗೆ ನೀಡಿದೆ.

ಒಪ್ಪಂದ ಮಾಡಿಕೊಂಡಿರುವ ಕುರಿತು ಶ್ರೀಲಂಕಾದಲ್ಲಿರುವ ಭಾರತದ ರಾಯಭಾರ ಕಚೇರಿಯು ಫೋಟೊಗಳ ಸಮೇತ ಪೋಸ್ಟ್‌ ಮಾಡಿದೆ. ಶ್ರೀಲಂಕಾದಲ್ಲಿರುವ ಭಾರತದ ಹೈಕಮಿಷನರ್‌ ಸಂತೋಷ್ ಝಾ ಹಾಗೂ ಶ್ರೀಲಂಕಾ ಸಚಿವ ಇಂಡಿಕಾ ಅನುರಾಧಾ ಅವರು ಒಪ್ಪಂದಕ್ಕೆ ಸಹಿ ಹಾಕಿದ್ದಾರೆ. ಶ್ರೀಲಂಕಾದ ನೈನಿತಿವು, ಅನಾಲತಿವು ಹಾಗೂ ಡೆಲ್ಫ್ಟ್‌ ದ್ವೀಪಗಳಲ್ಲಿ ಮೂರು ಸೌರ ವಿದ್ಯುತ್‌ ಘಟಕ ಹಾಗೂ ಜಫ್ನಾದಲ್ಲಿ ಹೈಬ್ರಿಡ್‌ ವಿದ್ಯುತ್‌ ಉತ್ಪಾದನೆ ಘಟಕ ನಿರ್ಮಿಸಲಾಗುತ್ತದೆ” ಎಂದು ಮಾಹಿತಿ ನೀಡಿದೆ.

ಇದನ್ನೂ ಓದಿ: UPI service: ಶ್ರೀಲಂಕಾ, ಮಾರಿಷಸ್‌ನಲ್ಲಿ ಭಾರತೀಯ ಯುಪಿಐ ಸೇವೆ ಆರಂಭ

ಪಾಕಿಸ್ತಾನದಂತೆ ಶ್ರೀಲಂಕಾದಲ್ಲೂ ಮೂಲ ಸೌಕರ್ಯ ಯೋಜನೆಗಳ ಹೆಸರಿನಲ್ಲಿ ಚೀನಾ ಪ್ರಾಬಲ್ಯ ಸಾಧಿಸುತ್ತಿದೆ. ಅದರಲ್ಲೂ, ಕೊರೊನಾ ಬಿಕ್ಕಟ್ಟಿನ ಹಿನ್ನೆಲೆಯಲ್ಲಿ ಶ್ರೀಲಂಕಾ ಆರ್ಥಿಕತೆಯು ದಿವಾಳಿಯಾಗಿದೆ. ಇದರ ಲಾಭ ಪಡೆದುಕೊಳ್ಳಲು ಮುಂದಾಗಿರುವ ಚೀನಾ, ಯೋಜನೆ, ಹೂಡಿಕೆ ಹಾಗೂ ಸಾಲದ ಆಮಿಷ ಒಡ್ಡುತ್ತಿದೆ. ಚೀನಾ ಕುತಂತ್ರದ ಕುರಿತು ಇದಕ್ಕೂ ಮೊದಲು ಭಾರತವು ಎಚ್ಚರಿಕೆ ನೀಡಿತ್ತು. ಇನ್ನು, ಶ್ರೀಲಂಕಾ ಹೊಂದಿರುವ 46 ಶತಕೋಟಿ ಡಾಲರ್‌ ಸಾಲದಲ್ಲಿ ಶೇ.10ರಷ್ಟು ಸಾಲವನ್ನು ಚೀನಾವೇ ನೀಡಿದೆ.

ಈ ಸಂಗತಿಯ ಕುರಿತು ನಿಮ್ಮ ಅನಿಸಿಕೆ ಏನು? ಕಾಮೆಂಟ್ ಮೂಲಕ ತಿಳಿಸಿ

Exit mobile version