Site icon Vistara News

Sunita Williams: ಸುನೀತಾ ವಿಲಿಯಮ್ಸ್‌ ಇಲ್ಲದೆಯೇ ಭೂಮಿಗೆ ಹಿಂದಿರುಗಲಿದೆ ಸ್ಟಾರ್‌ಲೈನರ್ ನೌಕೆ- 1 ಶತಕೋಟಿ ಡಾಲರ್‌ ನಷ್ಟ

Sunita Williams

ವಾಷಿಂಗ್ಟನ್‌: ಭಾರತ ಮೂಲದ ವಿಶ್ವವಿಖ್ಯಾತ ಗಗನಯಾತ್ರಿ ಸುನೀತಾ ವಿಲಿಯಮ್ಸ್‌ (Sunita Williams) ಅವರು ಮೂರನೇ ಬಾರಿಗೆ ಬಾಹ್ಯಾಕಾಶ ಯಾನ ಕೈಗೊಳ್ಳುವ ಮೂಲಕ ಇತಿಹಾಸ ಸೃಷ್ಟಿಸಿದ್ದಾರೆ. ಆದರೆ, ಸುನೀತಾ ವಿಲಿಯಮ್ಸ್‌ ಹಾಗೂ ಮತ್ತೊಬ್ಬ ಗಗನಯಾತ್ರಿ ಬುಚ್ ವಿಲ್ಮೋರ್ (Butch Wilmore) ತಾಂತ್ರಿಕ ದೋಷದಿಂದಾಗಿ ಬಾಹ್ಯಕಾಶದಲ್ಲೇ ಸಿಲುಕಿರುವ ವಿಚಾರ ಎಲ್ಲರಿಗೂ ತಿಳಿದೇ ಇದೆ. ಇದೀಗ ಈ ಬಗ್ಗೆ ಅಮೆರಿಕದ ಬಾಹ್ಯಾಕಾಶ ಸಂಸ್ಥೆ(NASA) ಮಹತ್ವದ ಸುದ್ದಿಯೊಂದನ್ನು ಹೊರಹಾಕಿದ್ದು, ಈ ಇಬ್ಬರು ಗಗನಯಾತ್ರಿಗಳನ್ನ ಹೊತ್ತೊಯ್ದಿದ್ದ ಬೋಯಿಂಗ್‌ನ ಸ್ಟಾರ್‌ಲೈನರ್ ಕ್ಯಾಪ್ಸುಲ್ ಅಂತರರಾಷ್ಟ್ರೀಯ ಬಾಹ್ಯಾಕಾಶ ನಿಲ್ದಾಣದಿಂದ (ISS) ಖಾಲಿಯಾಗಿ ಹಿಂದಿರುಗುತ್ತದೆ ಎಂದು NASA ಶನಿವಾರ ಘೋಷಿಸಿದೆ.

ಇತ್ತೀಚಿನ ಬೆಳವಣಿಗೆಯು ಬೋಯಿಂಗ್‌ನ ಸಂಕಟವನ್ನು ಹೆಚ್ಚಿಸಿದೆ. ಹೀಗಾಗಿ ಇದು ಖಾಲಿಯಾಗಿ ಹಿಂದಿರುಗುತ್ತಿದ್ದು, ಇದರ ಅಂದಾಜು ನಷ್ಟವು 1 ಬಿಲಿಯನ್ ಡಾಲರ್ ಮೀರಿದೆ ಎಂದು CNBC ವರದಿ ಮಾಡಿದೆ. ಗಗನಯಾತ್ರಿಗಳಾದ ಬುಚ್ ವಿಲ್ಮೋರ್ ಮತ್ತು ಸುನೀತಾ ವಿಲಿಯಮ್ಸ್ ಈಗ ಐಎಸ್‌ಎಸ್‌ನಲ್ಲಿ ಆರು ತಿಂಗಳ ವಿಸ್ತೃತ ವಾಸ್ತವ್ಯದ ನಂತರ ಫೆಬ್ರವರಿ 2025 ರಲ್ಲಿ ಎಲೋನ್ ಮಸ್ಕ್‌ನ ಸ್ಪೇಸ್‌ಎಕ್ಸ್‌ನ ಕ್ರ್ಯೂ-9 ವಾಹನದಲ್ಲಿ ಹಿಂತಿರುಗುತ್ತಾರೆ. ಸ್ಟಾರ್‌ಲೈನರ್‌ನ ಥ್ರಸ್ಟರ್‌ಗಳೊಂದಿಗಿನ ಸಮಸ್ಯೆಗಳಿಂದಾಗಿ ಮೂಲ ಒಂಬತ್ತು ದಿನಗಳ ಪರೀಕ್ಷಾ ಹಾರಾಟವು ವಿಳಂಬವಾಗಿದೆ.

ಮುಂದಿನ ಫೆಬ್ರವರಿಯಲ್ಲಿ ಬುಚ್ ಮತ್ತು ಸುನಿತಾ ಕ್ರ್ಯೂ -9 ರೊಂದಿಗೆ ಹಿಂತಿರುಗುತ್ತಾರೆ ಮತ್ತು ಸ್ಟಾರ್ಲೈನರ್ ಸಿಬ್ಬಂದಿಯಿಲ್ಲದೆ ಹಿಂತಿರುಗುತ್ತಾರೆ ಎಂದು ನಾಸಾ ನಿರ್ವಾಹಕ ಬಿಲ್ ನೆಲ್ಸನ್ ಹೇಳಿದ್ದಾರೆ. ಬೋಯಿಂಗ್ ಬಾಹ್ಯಾಕಾಶ ನೌಕೆಯ ಥ್ರಸ್ಟರ್ ಅಸಮರ್ಪಕ ಕಾರ್ಯಗಳಿಂದ ಸುನಿತಾ ವಿಲಿಯಮ್ಸ್‌ ಮತ್ತು ಬುಚ್‌ ಹಿಂತಿರುಗುವುದು ವಿಳಂಬವಾಗಿದೆ ಎಂದು ಅವರು ಹೇಳಿದರು.

ಬುಚ್ ವಿಲ್ಮೋರ್ ಮತ್ತು ಸುನೀತಾ ವಿಲಿಯಮ್ಸ್ ಅವರು ಬೋಯಿಂಗ್‌ ಸಂಸ್ಥೆಯ ಸ್ಟಾರ್‌ಲೈನರ್ ಬಾಹ್ಯಾಕಾಶ ನೌಕೆಯ ಮೊದಲ ಮಾನವ ಸಹಿತ ಬಾಹ್ಯಾಕಾಶ ಯಾನವನ್ನು ಜೂನ್‌ 5ರಂದು ಆರಂಭಿಸಿದ್ದರು. ಜೂನ್‌ 6ರಂದು ಅಂತಾರಾಷ್ಟ್ರೀಯ ಬಾಹ್ಯಾಕಾಶ ಸ್ಟೇಷನ್‌ ತಲುಪಿದ್ದ ಅವರು ಒಂದು ವಾರ ಸಂಶೋಧನೆ ನಡೆಸಿ ವಾಪಸಾಗಬೇಕಿತ್ತು. ಆದರೆ, ತಾಂತ್ರಿಕ ಕಾರಣದಿಂದ ಅವರು ಅಲ್ಲಿಯೇ ಸಿಲುಕಿದ್ದಾರೆ.

ಸುನೀತಾ ವಿಲಿಯಮ್ಸ್‌ ಹಿನ್ನೆಲೆ

ಭಾರತದ ಮೂಲದ ಡಾ. ದೀಪಕ್‌ ಪಾಂಡ್ಯಾ ಮತ್ತು ಬೋನಿ ಪಾಂಡ್ಯ ಪುತ್ರಿಯಾಗಿರುವ 59 ವರ್ಷದ ಸುನೀತಾ, ಬಾಹ್ಯಾಕಾಶಕ್ಕೆ ಹೋದ ಮೊದಲ ಮಹಿಳಾ ಗಗನಯಾತ್ರಿ ಎಂಬ ಹೆಗ್ಗಳಿಕೆಗೆ ಪಾತ್ರರಾಗಿದ್ದಾರೆ. ಇವರು ಮೊದಲ ಬಾರಿಗೆ 2006ರಲ್ಲಿ ಯಶಸ್ವಿ ಗಗನಯಾತ್ರೆ ಕೈಗೊಂಡಿದ್ದರು. ಇದಾದ ಬಳಿಕ 2012ರಲ್ಲಿ ಮತ್ತೆ ಗಗನಯಾತ್ರೆ ಕೈಗೊಂಡಿದ್ದರು. ಅವರು ಬಾಹ್ಯಾಕಾಶದಲ್ಲಿ ಬರೋಬ್ಬರಿ 322 ದಿನಗಳನ್ನು ಕಳೆದಿದ್ದಾರೆ. ಸುನೀತಾ ವಿಲಿಯಮ್ಸ್ ಅತೀ ಹೆಚ್ಚು ಬಾರಿ ಬಾಹ್ಯಾಕಾಶಕ್ಕೆ ಹಾರಿದ ಹಾಗೂ ಬಾಹ್ಯಾಕಾಶದಲ್ಲಿ ಅಧ್ಯಯನ ನಡೆಸಿದ ಮಹಿಳಾ ಗಗನ ಯಾತ್ರಿ ಎಂದೂ ಗುರುತಿಸಲ್ಪಡುತ್ತಿದ್ದಾರೆ.

ಇದುವರೆಗೆ ಸುನೀತಾ ವಿಲಿಯಮ್ಸ್ ಗರಿಷ್ಠ ಬಾಹ್ಯಾಕಾಶ ಪ್ರಯಾಣ ಮಾಡಿದ್ದಾರೆ. ಮಹತ್ವದ ಅಧ್ಯಯನಕ್ಕಾಗಿ ಮಂಗಳವಾರ ಮೂರನೇ ಬಾರಿ ಬಾಹ್ಯಾಕಾಶಕ್ಕೆ ಹಾರಲಿದ್ದ ಸುನೀತಾ ವಿಲಿಯಮ್ಸ್ ಎಲ್ಲ ತಯಾರಿ ಮಾಡಿಕೊಂಡಿದ್ದರು. ʼʼಕೊಂಚ ನರ್ವಸ್ ಆಗಿದ್ದೇನೆ. ಆದರೆ ಮತ್ತೆ ತವರಿಗೆ ಮರಳು ಅನುಭವವಾಗುತ್ತಿದೆ. ಬಾಹ್ಯಕಾಶವೇ ನನಗೆ ತವರಾಗಿದೆʼʼ ಎಂದು ಸುನೀತಾ ವಿಲಿಯಮ್ಸ್ ಹೇಳಿದ್ದರು.

Sunita Williams: ಮುಂದಿನ ವರ್ಷ ಫೆಬ್ರುವರಿಯಲ್ಲಿ ಭೂಮಿಗೆ ಮರಳಲಿದ್ದಾರೆ ಸುನೀತಾ ವಿಲಿಯಮ್ಸ್;‌ ನಾಸಾ ಘೋಷಣೆ

Exit mobile version