Site icon Vistara News

Supreme Court: ಇಡಿ ಬಂಧಿಸಿದ ತಮಿಳುನಾಡು ಸಚಿವರಿಗೆ ವೈದ್ಯಕೀಯ ಜಾಮೀನು ನೀಡದ ಸುಪ್ರೀಂ ಕೋರ್ಟ್‌

v senthil balaji

ಹೊಸದಿಲ್ಲಿ: ಅಕ್ರಮ ಹಣ ವರ್ಗಾವಣೆ ಪ್ರಕರಣದಲ್ಲಿ ಜಾರಿ ನಿರ್ದೇಶನಾಲಯದಿಂದ (Enforcement directorate) ಬಂಧನಕ್ಕೊಳಗಾಗಿದ್ದ ತಮಿಳುನಾಡು ಸಚಿವ ವಿ. ಸೆಂಥಿಲ್ ಬಾಲಾಜಿ (V Senthil Balaji) ಅವರಿಗೆ ವೈದ್ಯಕೀಯ ಜಾಮೀನು (Medical bail) ನೀಡಲು ಸುಪ್ರೀಂ ಕೋರ್ಟ್ (Supreme Court) ಮಂಗಳವಾರ ನಿರಾಕರಿಸಿದೆ.

“ನಿಮ್ಮ ಅನಾರೋಗ್ಯವು ಗಂಭೀರ ಅಥವಾ ಜೀವಕ್ಕೆ ಅಪಾಯಕಾರಿ ಎಂದು ತೋರುತ್ತಿಲ್ಲ” ಎಂದು ಸುಪ್ರೀಂ ಕೋರ್ಟ್ ಹೇಳಿದೆ. ನ್ಯಾಯಮೂರ್ತಿಗಳಾದ ಬೇಲಾ ಎಂ. ತ್ರಿವೇದಿ ಮತ್ತು ಎಸ್‌.ಸಿ ಶರ್ಮಾ ಅವರಿದ್ದ ಸರ್ವೋಚ್ಚ ನ್ಯಾಯಾಲಯದ ಪೀಠವು ಬಾಲಾಜಿ ಅವರ ವೈದ್ಯಕೀಯ ಸ್ಥಿತಿಯು “ಜೀವ ಬೆದರಿಕೆ” ಅಥವಾ “ಗಂಭೀರ” ಎಂದು ನ್ಯಾಯಾಲಯಕ್ಕೆ ಮನವರಿಕೆಯಾಗದ ಕಾರಣ ವೈದ್ಯಕೀಯ ಜಾಮೀನು ಕೋರಿ ಸಲ್ಲಿಸಿದ ಮನವಿಯನ್ನು ತಿರಸ್ಕರಿಸಿತು.

ನ್ಯಾಯಾಲಯವು ಸೂಕ್ತ ನ್ಯಾಯಾಲಯದಿಂದ ನಿಯಮಿತ ಜಾಮೀನು ಪಡೆಯಲು ಬಾಲಾಜಿಗೆ ಅನುಮತಿ ನೀಡಿದೆ. ವೈದ್ಯಕೀಯ ಜಾಮೀನು ನಿರಾಕರಿಸುವ ಸಂದರ್ಭದಲ್ಲಿ ಇತ್ತೀಚೆಗೆ ಮದ್ರಾಸ್ ಹೈಕೋರ್ಟ್ ಮಾಡಿದ ಅವಲೋಕನಗಳು ಇದರಲ್ಲಿ ಅನ್ವಯವಾಗುವುದಿಲ್ಲ. ಅರ್ಜಿದಾರರ ವಿರುದ್ಧ ಈ ಆದೇಶದಲ್ಲಿ ಮಾಡಿದ ಯಾವುದೇ ಅವಲೋಕನವು ಸಾಮಾನ್ಯ ಜಾಮೀನು ಅರ್ಜಿಯನ್ನು ಸಲ್ಲಿಸುವಲ್ಲಿ ಅರ್ಜಿದಾರರಿಗೆ ಅಡ್ಡಿಯಾಗುವುದಿಲ್ಲ ಎಂದು ಪೀಠ ಹೇಳಿದೆ.

ಈ ಹಿಂದೆ ಬಾಲಾಜಿ ಅವರ ವೈದ್ಯಕೀಯ ವರದಿಗಳನ್ನು ದಾಖಲಿಸುವಂತೆ ಸುಪ್ರೀಂ ಕೋರ್ಟ್ ಸೂಚಿಸಿತ್ತು. ಜಾಮೀನು ಅರ್ಜಿಯನ್ನು ವಜಾಗೊಳಿಸಿದ ಹೈಕೋರ್ಟ್, ಬಾಲಾಜಿ ಅವರ ಆರೋಗ್ಯ ವರದಿಯಿಂದ ಇದು ಗಂಭೀರ ವೈದ್ಯಕೀಯ ಸ್ಥಿತಿಯಂತೆ ತೋರುತ್ತಿಲ್ಲ. ಜಾಮೀನಿನ ಮೇಲೆ ಬಿಡುಗಡೆಯಾದರೆ ಬೇಕಾದ ಕಾಳಜಿ ವಹಿಸಬಹುದು ಎಂದು ಹೇಳಿತ್ತು. ಹಿಂದಿನ ಎಐಎಡಿಎಂಕೆ ಆಡಳಿತದಲ್ಲಿ ಸಾರಿಗೆ ಸಚಿವರಾಗಿದ್ದಾಗ, ಉದ್ಯೋಗಕ್ಕಾಗಿ ಲಂಚ ಪಡೆದ ಹಗರಣಕ್ಕೆ ಸಂಬಂಧಿಸಿ ಬಾಲಾಜಿ ಅವರನ್ನು ಜೂನ್ 14ರಂದು ಇಡಿ ಬಂಧಿಸಿತ್ತು.

Exit mobile version