Site icon Vistara News

Sushil Modi: 6 ತಿಂಗಳಿಂದ ಕ್ಯಾನ್ಸರ್ ವಿರುದ್ಧ ಹೋರಾಡುತ್ತಿದ್ದೇನೆ: ಮಾಹಿತಿ ಬಹಿರಂಗಪಡಿಸಿದ ಬಿಜೆಪಿ ನಾಯಕ ಸುಶೀಲ್ ಮೋದಿ

Sushil Modi

Sushil Modi

ನವದೆಹಲಿ: ಬಿಹಾರದ ಮಾಜಿ ಉಪಮುಖ್ಯಮಂತ್ರಿ (Former Bihar deputy chief minister), ಬಿಜೆಪಿ ನಾಯಕ ಸುಶೀಲ್ ಮೋದಿ (Sushil Modi) ಅವರು ಬುಧವಾರ (ಏಪ್ರಿಲ್‌ 3) ಆಘಾತಕಾರಿ ಸುದ್ದಿಯೊಂದನ್ನು ಬಹಿರಂಗಪಡಿಸಿದ್ದು, ಆರು ತಿಂಗಳಿನಿಂದ ಕ್ಯಾನ್ಸರ್‌ನಿಂದ ಬಳಲುತ್ತಿರುವುದಾಗಿ ತಿಳಿಸಿದ್ದಾರೆ. ʼʼ6 ತಿಂಗಳಿಂದ ಕ್ಯಾನ್ಸರ್ ವಿರುದ್ಧ ಹೋರಾಡುತ್ತಿದ್ದೇನೆ. ಹೀಗಾಗಿ ಲೋಕಸಭೆ ಚುನಾವಣೆ (Lok Sabha election 2024)ಯಲ್ಲಿ ಸ್ಪರ್ಧಿಸಲು ಸಾಧ್ಯವಿಲ್ಲʼʼ ಎಂದು ಹೇಳಿದ್ದಾರೆ.

ʼʼಈ ಬೆಳವಣಿಗೆಯ ಬಗ್ಗೆ ಪ್ರಧಾನಿ ನರೇಂದ್ರ ಮೋದಿ ಅವರಿಗೂ ತಿಳಿಸಿದ್ದೇನೆʼʼ ಎಂದು ಅವರು ಸಾಮಾಜಿಕ ಜಾಲತಾಣ ಎಕ್ಸ್​​​ನಲ್ಲಿ ಮಾಹಿತಿ ನೀಡಿದ್ದಾರೆ. “ಈಗ ಜನರಿಗೆ ನನ್ನ ಆರೋಗ್ಯದ ಬಗ್ಗೆ ಹೇಳುವ ಸಮಯ ಬಂದಿದೆ ಎಂದು ನಾನು ಭಾವಿಸಿದ್ದೇನೆ. ಹೀಗಾಗಿ ಕ್ಯಾನ್ಸರ್‌ನಿಂದ ಬಳಲುತ್ತಿರುವ ವಿಚಾರವನ್ನು ತಿಳಿಸುತ್ತಿದ್ದೇನೆ. ನನ್ನ ಆರೋಗ್ಯಕ್ಕೆ ಸಂಬಂಧಿಸಿದ ಪರಿಸ್ಥಿತಿಯನ್ನು ಪ್ರಧಾನಿ ನರೇಂದ್ರ ಮೋದಿ ಅವರೊಂದಿಗೆ ಹಂಚಿಕೊಂಡಿದ್ದೇನೆ. ದೇಶಕ್ಕೆ, ಬಿಹಾರ ಮತ್ತು ಬಿಜೆಪಿಗೆ ಯಾವಾಗಲೂ ಕೃತಜ್ಞನಾಗಿರುತ್ತೇನೆ ಮತ್ತು ಸಮರ್ಪಿತರಾಗಿರುತ್ತೇನೆ” ಎಂದು 72 ವರ್ಷದ ಸುಶೀಲ್ ಮೋದಿ ಬರೆದುಕೊಂಡಿದ್ದಾರೆ.

ಈ ಹಿಂದೆ ಫೆಬ್ರವರಿಯಲ್ಲಿ ಬಿಜೆಪಿ ರಾಜ್ಯಸಭಾ ಚುನಾವಣೆಗೆ ಬಿಹಾರದ ತನ್ನ ಅಭ್ಯರ್ಥಿಗಳ ಹೆಸರನ್ನು ಘೋಷಿಸಿತ್ತು. ಇದರಲ್ಲಿ ಸುಶೀಲ್ ಮೋದಿ ಅವರ ಹೆಸರಿರಲಿಲ್ಲ. ಇದು ರಾಜಕೀಯ ವಲಯದಲ್ಲಿ ಅನೇಕ ಉಹಾಪೋಹಗಳಿಗೆ ಕಾರಣವಾಗಿತ್ತು.

ಇನ್ನು ಸುಶೀಲ್​​ ಮೋದಿ ಅವರ ಈ ಹೇಳಿಕೆಗೆ ಬಿಜೆಪಿ ನಾಯಕ ಮತ್ತು ಪಕ್ಷದ ಸಂಸದ ರವಿಶಂಕರ್ ಪ್ರಸಾದ್ ಪ್ರತಿಕ್ರಿಯಿಸಿ, ʼʼಈ ಸುದ್ದಿ ಕೇಳಿ ತೀವ್ರ ನೋವು ಉಂಟಾಗಿದೆ. ಅವರು ಶೀಘ್ರವಾಗಿ ಚೇತರಿಸಿಕೊಳ್ಳಲಿʼʼ ಎಂದು ಹಾರೈಸಿದ್ದಾರೆ.

ಬಿಹಾರ ರಾಜಕೀಯದಲ್ಲಿ ಪ್ರಮುಖ ಪಾತ್ರಗಳನ್ನು ನಿರ್ವಹಿಸಿರುವ ಸುಶೀಲ್ ಮೋದಿ (Sushil Modi) ಅವರು ಸಂಸತ್ತಿನ ಉಭಯ ಸದನಗಳಾದ ಲೋಕಸಭೆ ಮತ್ತು ರಾಜ್ಯಸಭೆಯ ಸದಸ್ಯರಾಗಿ ಸೇವೆ ಸಲ್ಲಿಸಿದ್ದಾರೆ. ಬಿಹಾರದ ಉಪಮುಖ್ಯಮಂತ್ರಿಯಾಗಿ ಮಾತ್ರವಲ್ಲದೆ ರಾಜ್ಯದ ಹಣಕಾಸು ಸಚಿವರಾಗಿಯೂ ಸೇವೆ ಸಲ್ಲಿಸಿದ್ದಾರೆ. 30 ವರ್ಷಗಳ ರಾಜಕೀಯ ವೃತ್ತಿ ಜೀವನದಲ್ಲಿ ಅವರು ಬಿಹಾರಕ್ಕೆ ಗಣನೀಯ ಕೊಡುಗೆ ಸಲ್ಲಿಸಿದ್ದಾರೆ.

1952ರಲ್ಲಿ ಜನಿಸಿದ ಅವರು ಪಾಟ್ನಾ ವಿಶ್ವವಿದ್ಯಾಲಯದಲ್ಲಿ ಓದುತ್ತಿರುವಾಗ ರಾಜಕೀಯಕ್ಕೆ ಧುಮುಕಿದರು. 1990ರಲ್ಲಿ ಪಾಟ್ನಾ ಸೆಂಟ್ರಲ್ ಕ್ಷೇತ್ರದಿಂದ ಮೊದಲ ಬಾರಿಗೆ ಶಾಸಕರಾದರು ಮತ್ತು ಬಿಜೆಪಿ ಶಾಸಕಾಂಗ ಪಕ್ಷದ ಮುಖ್ಯ ಸಚೇತಕರಾದರು. 1996ರಿಂದ 2004ರ ವರೆಗೆ ಅವರು ಬಿಹಾರ ವಿಧಾನಸಭೆಯಲ್ಲಿ ವಿರೋಧ ಪಕ್ಷದ ನಾಯಕರಾಗಿದ್ದರು. ಅವರು 2004ರಲ್ಲಿ ಭಾಗಲ್ಪುರ ಕ್ಷೇತ್ರದಿಂದ ಲೋಕಸಭಾ ಸದಸ್ಯರಾಗಿ ಆಯ್ಕೆಯಾಗಿದ್ದರು. 2005ರಲ್ಲಿ ತಮ್ಮ ಲೋಕಸಭಾ ಸದಸ್ಯತ್ವವನ್ನು ತ್ಯಜಿಸಿ ವಿಧಾನ ಪರಿಷತ್ ಸದಸ್ಯರಾದರು. ನಂತರ ಅವರನ್ನು ಮುಖ್ಯಮಂತ್ರಿ ನಿತೀಶ್ ಕುಮಾರ್ ಅವರು ಉಪಮುಖ್ಯಮಂತ್ರಿಯನ್ನಾಗಿ ನೇಮಿಸಿದರು. 2020ರಲ್ಲಿ ಅವರು ರಾಜ್ಯಸಭೆಗೆ ಆಯ್ಕೆಯಾದರು.

ಇದನ್ನೂ ಓದಿ: BJP Manifesto: ಪ್ರಣಾಳಿಕೆ ತಯಾರಿಸಲು ಸಮಿತಿ ರಚಿಸಿದ ಬಿಜೆಪಿ; ಯಾರೆಲ್ಲ ಇದ್ದಾರೆ?

ಚುನಾವಣಾ ಪ್ರಣಾಳಿಕೆ ಸಮಿತಿಯಲ್ಲಿ ಸ್ಥಾನ

ಇತ್ತೀಚೆಗೆ ಬಿಜೆಪಿ ಪ್ರಕಟಿಸಿದ ರಕ್ಷಣಾ ಸಚಿವ ರಾಜನಾಥ್ ಸಿಂಗ್ ಅವರ ನೇತೃತ್ವದ 27 ಸದಸ್ಯರ ಚುನಾವಣಾ ಪ್ರಣಾಳಿಕೆ ಸಮಿತಿಯಲ್ಲಿ ಸುಶೀಲ್ ಕುಮಾರ್‌​​​​ ಮೋದಿ ಅವರು ಕೂಡ ಇದ್ದಾರೆ. ನಿರ್ಮಲಾ ಸೀತಾರಾಮನ್ ಮತ್ತು ಕೇಂದ್ರ ಸಚಿವ ಪಿಯೂಷ್ ಗೋಯಲ್ ಕೂಡ ಈ ಸಮಿತಿಯಲ್ಲಿ ಸಂಚಾಲಕರು ಮತ್ತು ಸಹ ಸಂಚಾಲಕರಾಗಿರುತ್ತಾರೆ.

ಈ ಸಂಗತಿಯ ಕುರಿತು ನಿಮ್ಮ ಅನಿಸಿಕೆ ಏನು? ಕಾಮೆಂಟ್ ಮೂಲಕ ತಿಳಿಸಿ

Exit mobile version