ಮುಂಬಯಿ: ಆನ್‌ಲೈನ್‌ನಲ್ಲಿ ಆರ್ಡರ್ ಮಾಡಿದ ಆಹಾರ ಪದಾರ್ಥಗಳನ್ನು ಡೆಲಿವರಿ ಮಾಡುವುದು ಭಾರಿ ಸವಾಲಿನ ಕೆಲಸ. ಸಮಯಕ್ಕೆ ಸರಿಯಾಗಿ ಮನೆಗಳಿಗೆ ತಲುಪಿಸಬೇಕು, ಒಂದು ನಿಮಿಷವೂ ತಡವಾಗುವಂತಿಲ್ಲ. ಹೊತ್ತು ಗೊತ್ತು ಇಲ್ಲ. ಹೇಳಿದ ಸಮಯಕ್ಕೆ ಹೋಗಬೇಕು, ಮಧ್ಯರಾತ್ರಿಯಾದರೂ ಸರಿ ಫುಡ್ ಡೆಲಿವರಿ ಮಾಡಬೇಕು. ಅದಕ್ಕಾಗಿ ಟ್ರಾಫಿಕ್ ಸಮಸ್ಯೆಯನ್ನು ನಿಭಾಯಿಸಿಕೊಳ್ಳಬೇಕು, ರಸ್ತೆ ಗುಂಡಿಗಳ ಮೇಲೆ ಕಣ್ಣಿಡಬೇಕು, ರೋಡ್ ಬ್ಲಾಕ್ ಆಗಿದ್ದರೆ ನೋಡಿಕೊಳ್ಳಬೇಕು. ಇಷ್ಟೆಲ್ಲ ಮಾಡಿ, ಮೈಯೆಲ್ಲಾ ಕಣ್ಣಾಗಿಸಿಕೊಂಡು ತುರ್ತಾಗಿ ಡೆಲಿವರಿ ಮಾಡಬೇಕು!
ಇಂಥ ಹತ್ತು ಹಲವು ಸಮಸ್ಯೆಗಳ ನಡುವೆಯೇ ಮಧ್ಯೆ ಮಳೆ ಕಾಟ ಕೊಡುತ್ತದೆ, ರಸ್ತೆಯಲ್ಲಿ ಬೈಕ್ ಓಡಿಸುವುದೇ ಕಷ್ಟವಾಗುತ್ತದೆ. ಮೊನ್ನೆ ಮುಂಬಯಿಯಲ್ಲೂ ಹೀಗೇ ಆಗಿತ್ತು. ಎರಡು ಮೂರು ದಿನಗಳಿಂದ ನಿರಂತರ ಮಳೆ ಬೀಳುತ್ತಿರುವುದರಿಂದ ನಗರದ ರಸ್ತೆಗಳು ಜಲಾವೃತವಾಗಿವೆ. ಜನರು ರಸ್ತೆಗಿಳಿಯಲು ಹೆದರುತ್ತಿದ್ದಾರೆ. ಈ ಹೊತ್ತಿನಲ್ಲೇ ಆನ್‌ಲೈನ್ ಫುಡ್ ಡೆಲಿವರಿಗೆ ಬೇಡಿಕೆ ಹೆಚ್ಚಾಗುವುದು!
ಮೊನ್ನೆ ಮಳೆಯ ನಡುವೆಯೇ ಬಂದ ಆರ್ಡರನ್ನು ತಲುಪಿಸಲು ಸ್ವಿಗ್ಗಿ ಬಾಯ್ (Swiggy boy) ಒಬ್ಬ ಬೇರೆಯೇ ಆದ ವಿಧಾನ ಬಳಸಿ ಗಮನ ಸೆಳೆದಿದ್ದಾನೆ. ಸಾಮಾನ್ಯವಾಗಿ ಫುಡ್ ಡೆಲಿವರಿ ಬಾಯ್ಸ್ ಬೈಕ್ ಅಥವಾ ಸೈಕಲ್ ಅದೂ ಇಲ್ಲಾಂದ್ರೆ ನಡೆದುಕೊಂಡು ಬಂದು ಗ್ರಾಹಕರಿಗೆ ಫುಡ್ ಕೊಟ್ಟು ಬರುತ್ತಾರೆ. ಆದರೆ, ಇಲ್ಲೊಬ್ಬ ಇದೆಲ್ಲವನ್ನೂ ಬಿಟ್ಟು ಕುದುರೆ ಏರಿ ಆಹಾರ ತಲುಪಿಸುವ ಮೂಲಕ ಎಲ್ಲರನ್ನೂ ಅಚ್ಚರಿಗೊಳಿಸಿದ್ದಾನೆ.
ಇದನ್ನು ಓದಿ| ಸಲಿಂಗಿ ಪುರುಷರ ಅದ್ಧೂರಿ ಮದುವೆ; ಸಂಭ್ರಮದ ಕ್ಷಣದ ಫೋಟೊ, ವಿಡಿಯೊ ವೈರಲ್
ಹೀಗಾಗಿ ಮುಂಬೈನಲ್ಲಿ ಸುರಿಯುತ್ತಿರುವ ಮಳೆಯಿಂದಾಗಿ ನಗರಗಳು ಜಲಾವೃತವಾಗಿರುವುದರಿಂದ ಬೈಕ್ನಲ್ಲಿ ಹೋದರೆ ಸರಿಯಾದ ಸಮಯಕ್ಕೆ ತಲುಪಲು ಸಾಧ್ಯವಾಗಲ್ಲ ಅಂತ ಇಲ್ಲೊಬ್ಬ ಸ್ವಿಗ್ಗಿ ಬಾಯ್ ಕುದುರೆ ಏರಿ ಮಳೆಯಲ್ಲೂ ಫುಡ್ ಡೆಲಿವರಿ ಮಾಡುತ್ತಿದ್ದಾನೆ. ಸದ್ಯ ಈತ ನಗರದಲ್ಲಿ ಕುದುರೆ ಏರಿ ಸಂಚರಿಸುತ್ತಿರುವ ವಿಡಿಯೊ ಸಾಮಾಜಿಕ ಜಾಲತಾಣದಲ್ಲಿ ವೈರಲ್ ಆಗುತ್ತಿದ್ದು, ನೆಟ್ಟಿಗರು ಈತನ ಕಾರ್ಯಕ್ಷಮತೆಗೆ ಮನ ಸೋತಿದ್ದಾರೆ.
ಈ ಹಿಂದೆ ಜಮ್ಮು ಮತ್ತು ಕಾಶ್ಮೀರದ ಶ್ರೀನಗರದಲ್ಲಿ ಭಾರಿ ಹಿಮಪಾತವಾಗುತ್ತಿದ್ದಾಗ ಆಗಲೂ ಕೂಡ ಇದೇ ರೀತಿ ಸ್ವಿಗ್ಗಿ ಕಂಪನಿಯ ಫುಡ್ ಡೆಲಿವರಿ ಬಾಯ್ ಕುದುರೆ ಏರಿ ಮನೆ ಮನೆಗಳಿಗೆ ತೆರಳಿ ಆಹಾರ ತಲುಪಿಸಿದ್ದರು. ಆ ವಿಡಿಯೋ ಕೂಡ ಸೋಷಿಯಲ್ ಮೀಡಿಯಾದಲ್ಲಿ ಭಾರೀ ಸದ್ದು ಮಾಡಿತ್ತು.
ಇದನ್ನು ಓದಿ| ಮೊಸಳೆ ಬಾಯಿಯಿಂದ ಸ್ನೇಹಿತನನ್ನು ಹೊರಗೆ ತೆಗೆದ ಗೆಳೆಯರು; ವಿಡಿಯೋ ವೈರಲ್