Site icon Vistara News

ವಂಚನೆಗೀಡಾಗಿ ರಷ್ಯಾ ಸೇನೆ ಸೇರಿದ್ದ ತೆಲಂಗಾಣದ ಯುವಕ ಉಕ್ರೇನ್‌ ಯುದ್ಧದಲ್ಲಿ ಬಲಿ!

Telangana Man

Telangana man duped into joining Russia-Ukraine war dies at battleground

ಮಾಸ್ಕೊ: ಪ್ರವಾಸ, ಉದ್ಯೋಗ ಅರಸಿ ರಷ್ಯಾಗೆ (Russia) ತೆರಳಿರುವ ಭಾರತದ ಯುವಕರನ್ನು ಅಲ್ಲಿನ ಅಧಿಕಾರಿಗಳು ಬಲವಂತವಾಗಿ ಸೇನೆಗೆ ಸೇರಿಸಿಕೊಳ್ಳುತ್ತಿದ್ದು, ಇದರಿಂದ ಭಾರತದ ಯುವಕರು ಪ್ರಾಣ ಕಳೆದಕೊಳ್ಳುವಂತಾಗಿದೆ. ಇದಕ್ಕೆ ನಿದರ್ಶನ ಎಂಬಂತೆ, ಉದ್ಯೋಗದ ಆಸೆಗಾಗಿ ರಷ್ಯಾಗೆ ತೆರಳಿದ್ದ ತೆಲಂಗಾಣದ ಮೊಹಮ್ಮದ್‌ ಅಸ್ಫಾನ್‌ (Mohammed Asfan) ಎಂಬ 30 ವರ್ಷದ ಯುವಕನು ರಷ್ಯಾ-ಉಕ್ರೇನ್‌ ಯುದ್ಧದಲ್ಲಿ (Russia Ukraine War) ಮೃತಪಟ್ಟಿದ್ದಾನೆ. ಈತನು ಕೂಡ ರಷ್ಯಾ ಅಧಿಕಾರಿಗಳ ಬಲವಂತದಿಂದ ಸೇನೆ ಸೇರಿದ್ದ ಎಂದು ತಿಳಿದುಬಂದಿದೆ.

ಮೊಹಮ್ಮದ್‌ ಅಸ್ಫಾನ್‌ ಸಾವಿನ ಕುರಿತು ರಷ್ಯಾದಲ್ಲಿರುವ ಭಾರತದ ರಾಯಭಾರಿ ಕಚೇರಿಯೇ ಮಾಹಿತಿ ನೀಡಿದೆ. “ಭಾರತದ ಮೊಹಮ್ಮದ್‌ ಅಸ್ಫಾನ್‌ ಅವರು ಮೃತಪಟ್ಟಿರುವ ಕುರಿತು ಮಾಹಿತಿ ಲಭ್ಯವಾಗಿದೆ. ರಷ್ಯಾದ ಅಧಿಕಾರಿಗಳು ಹಾಗೂ ಮೊಹಮ್ಮದ್‌ ಅಸ್ಫಾನ್‌ ಅವರ ಕುಟುಂಬಸ್ಥರ ಜತೆ ಸಂಪರ್ಕದಲ್ಲಿದ್ದೇವೆ. ಮೊಹಮ್ಮದ್‌ ಅಸ್ಫಾನ್‌ ಅವರ ಪಾರ್ಥಿವ ಶರೀರವನ್ನು ಭಾರತಕ್ಕೆ ಕಳುಹಿಸುವ ಎಲ್ಲ ಪ್ರಯತ್ನ ಮಾಡುತ್ತಿದ್ದೇವೆ” ಎಂದು ರಾಯಭಾರಿ ಕಚೇರಿ ಅಧಿಕಾರಿಗಳು ಮಾಹಿತಿ ನೀಡಿದ್ದಾರೆ.

ಕೆಲ ದಿನಗಳ ಹಿಂದಷ್ಟೇ ಮನವಿ ಮಾಡಿದ್ದ ಕುಟುಂಬಸ್ಥರು

ಕೆಲ ದಿನಗಳ ಹಿಂದಷ್ಟೇ ರಷ್ಯಾದಲ್ಲಿ ಮೊಹಮ್ಮದ್‌ ಅಸ್ಫಾನ್‌ ಸಂಕಷ್ಟಕ್ಕೆ ಸಿಲುಕಿರುವ ಕುರಿತು ಆತನ ಕುಟುಂಬಸ್ಥರು ರಕ್ಷಣೆಗಾಗಿ ಕೇಂದ್ರ ಸರ್ಕಾರವನ್ನು ಮನವಿ ಮಾಡಿದ್ದರು. ಕೆಲಸ ಮಾಡಲೆಂದು ರಷ್ಯಾಗೆ ತೆರಳಿದ ಮೊಹಮ್ಮದ್‌ ಅಸ್ಫಾನ್‌ನನ್ನು ಬಲವಂತವಾಗಿ ಸೇನೆಗೆ ಸೇರಿಸಲಾಗಿದೆ. ಆತನು ಸಂಕಷ್ಟಕ್ಕೆ ಸಿಲುಕಿದ್ದು, ದಯಮಾಡಿ ರಕ್ಷಿಸಿ ಎಂದು ಕುಟುಂಬಸ್ಥರು ಕೋರಿದ್ದರು. ಭಾರತದ ವಿದೇಶಾಂಗ ಸಚಿವಾಲಯವೂ ಭಾರತೀಯರ ರಕ್ಷಣೆಯ ಭರವಸೆ ನೀಡಿತ್ತು. ಇದಕ್ಕೂ ಮೊದಲೇ ಮೊಹಮ್ಮದ್‌ ಅಸ್ಫಾನ್‌ ಯುದ್ಧದಲ್ಲಿ ಬಲಿಯಾಗಿದ್ದಾನೆ.

ಪಂಜಾಬ್‌, ಹರಿಯಾಣದ 7 ಯುವಕರಿಗೆ ಸಂಕಷ್ಟ

ಕಳೆದ ಡಿಸೆಂಬರ್‌ನಲ್ಲಿ ಪ್ರವಾಸಕ್ಕೆಂದು ರಷ್ಯಾಗೆ ತೆರಳಿದ ಪಂಜಾಬ್‌ ಹಾಗೂ ಹರಿಯಾಣದ ಏಳು ಯುವಕರು ರಷ್ಯಾದಲ್ಲಿ ಸಂಕಷ್ಟಕ್ಕೆ ಸಿಲುಕಿದ್ದಾರೆ. ಪ್ರವಾಸಿ ವೀಸಾ ಪಡೆದು ರಷ್ಯಾಗೆ ತೆರಳಿದ ಏಳು ಯುವಕರನ್ನು ರಷ್ಯಾ ಅಧಿಕಾರಿಗಳು ಬಲವಂತವಾಗಿ ಸೇನೆಗೆ ಸೇರ್ಪಡೆ ಮಾಡಿಕೊಂಡಿದ್ದು, ಆ ಯುವಕರು ವಿಡಿಯೊ ಮೂಲಕ ರಕ್ಷಣೆಗಾಗಿ ಮನವಿ ಮಾಡಿದ್ದಾರೆ. ಇದುವರೆಗೆ ಭಾರತದ 20ಕ್ಕೂ ಅಧಿಕ ಯುವಕರು ಬಲವಂತವಾಗಿ ರಷ್ಯಾ ಸೇನೆ ಸೇರಿದ್ದು, ಅವರ ರಕ್ಷಣೆಗಾಗಿ ಕುಟುಂಬಸ್ಥರು ಮನವಿ ಮಾಡಿದ್ದಾರೆ. ಎಲ್ಲರನ್ನೂ ರಕ್ಷಿಸಲಾಗುವುದು ಎಂದು ಈಗಾಗಲೇ ವಿದೇಶಾಂಗ ವ್ಯವಹಾರಗಳ ಸಚಿವಾಲಯವು ಭರವಸೆ ನೀಡಿದೆ.

ಇದನ್ನೂ ಓದಿ: Russia Ukraine War: ರಷ್ಯಾ ಸೇನೆಯಲ್ಲಿರುವ ಭಾರತೀಯರು ಶೀಘ್ರ ತಾಯ್ನಾಡಿಗೆ; ವಿದೇಶಾಂಗ ಸಚಿವಾಲಯದ ಭರವಸೆ

ರಷ್ಯಾದಲ್ಲಿ ಉಕ್ರೇನ್‌ ಮಾಡಿದ ಡ್ರೋನ್‌ ದಾಳಿಯಲ್ಲಿ ಕೆಲ ದಿನಗಳ ಹಿಂದಷ್ಟೇ ಭಾರತ ಮೂಲದ ಯುವಕನೊಬ್ಬ ಮೃತಪಟ್ಟಿದ್ದ. ರಷ್ಯಾ ಹಾಗೂ ಉಕ್ರೇನ್‌ ಗಡಿಯಲ್ಲಿ ನಡೆದ ಈ ದಾಳಿಯಲ್ಲಿ ಭಾರತದ 23 ವರ್ಷದ ಯುವಕ ಮೃತಪಟ್ಟಿದ್ದಾನೆ ಎಂದು ಮೂಲಗಳು ತಿಳಿಸಿವೆ. ಮೃತನನ್ನು ಗುಜರಾತ್‌ನ ಸೂರತ್‌ ಜಿಲ್ಲೆಯ ಹೇಮಿಲ್‌ ಅಶ್ವಿನ್‌ಭಾಯಿ ಮಂಗುಕಿಯಾ ಎಂದು ಗುರುತಿಸಲಾಗಿದೆ. ರಷ್ಯಾದ ಸೇನೆಯ ಸಹಾಯಕನಾಗಿ 2023ರ ಡಿಸೆಂಬರ್‌ನಲ್ಲಿ ಈತ ಸೇರ್ಪಡೆಯಾಗಿದ್ದ. ಈತನು ಸೇನೆಯ ಏಜೆಂಟ್‌ ಆಗಿ ಕೆಲಸ ಮಾಡುತ್ತಿದ್ದ ಎಂದು ಮೂಲಗಳು ತಿಳಿಸಿವೆ. ರಷ್ಯಾದಲ್ಲಿ ನಿಗದಿತ ಗುರಿಗಳ ಮೇಲೆ ಉಕ್ರೇನ್‌ ವಾಯುದಾಳಿ ನಡೆಸಿದೆ. ದಾಳಿಯಲ್ಲಿ ಭಾರತದ ಹಲವರು ಸಂಕಷ್ಟಕ್ಕೆ ಸಿಲುಕಿದ್ದಾರೆ ಎನ್ನಲಾಗಿದೆ.

ಈ ಸಂಗತಿಯ ಕುರಿತು ನಿಮ್ಮ ಅನಿಸಿಕೆ ಏನು? ಕಾಮೆಂಟ್ ಮೂಲಕ ತಿಳಿಸಿ

Exit mobile version