ಶ್ರೀನಗರ: ಕಾಶ್ಮೀರದಲ್ಲಿ ಭಯೋತ್ಪಾದಕರ ಹೊಂಚು ದಾಳಿಗೆ (Terror Attack) ಸಂಬಂಧಿಸಿದಂತೆ ಭಾರತೀಯ ಸೇನೆಯಿಂದ (Indian Military) ವಿಚಾರಣೆಗಾಗಿ ಕರೆದೊಯ್ಯಲಾದ ಮೂವರು ನಾಗರಿಕರು ಭಾನುವಾರ ಶವವಾಗಿ ಪತ್ತೆಯಾಗಿದ್ದಾರೆ. ಈ ಕುರಿತು ತನಿಖೆಗೆ ಆಗ್ರಹಿಸಲಾಗಿದ್ದು, ಕಾನೂನು ಕ್ರಮವನ್ನು ಪ್ರಾರಂಭಿಸಲಾಗಿದೆ.
ಜಮ್ಮು ಮತ್ತು ಕಾಶ್ಮೀರದ ಪೂಂಚ್-ರಜೌರಿ ಪ್ರದೇಶದಲ್ಲಿ ಶನಿವಾರ ಅಪರಿಚಿತ ಭಯೋತ್ಪಾದಕರ ಹೊಂಚುದಾಳಿಯಲ್ಲಿ ನಾಲ್ವರು ಸೇನಾ ಜವಾನರು ಸಾವನ್ನಪ್ಪಿದ್ದರು. ಇದಾಗಿ ಒಂದು ದಿನದ ನಂತರ ವಿಚಾರಣೆಗಾಗಿ ಸೇನೆಯು ಕರೆದುಕೊಂಡು ಹೋಗಿದ್ದ ಮೂವರು ನಾಗರಿಕರು ಶವವಾಗಿ ಪತ್ತೆಯಾಗಿದ್ದಾರೆ. ಇನ್ನೂ ಐವರು ಗಂಭೀರ ಗಾಯಗೊಂಡು ಆಸ್ಪತ್ರೆಗೆ ದಾಖಲಾಗಿದ್ದಾರೆ.
ಈ ಮೂವರನ್ನು ಚಿತ್ರಹಿಂಸೆ ನೀಡಿ ಸಾಯಿಸಲಾಗಿದೆ ಎಂದು ಮೃತ ನಾಗರಿಕರ ಸಂಬಂಧಿಯೊಬ್ಬರು ಆರೋಪಿಸಿದ್ದಾರೆ. ಶುಕ್ರವಾರ ಸಂಜೆ ಮೃತದೇಹಗಳನ್ನು ಸೇನಾ ಶಿಬಿರದಿಂದ ಸಂಗ್ರಹಿಸಲು ಕುಟುಂಬಗಳಿಗೆ ಮಾಹಿತಿ ನೀಡಲಾಯಿತು. ಮೂವರ ಶವಗಳ ಮೇಲೆ ತೀವ್ರವಾದ ಗಾಯದ ಗುರುತುಗಳಿದ್ದವು ಎನ್ನಲಾಗಿದೆ.
ಸೇನಾ ಯೋಧರು ಮೂವರ ಬಟ್ಟೆ ಕಿತ್ತುಹಾಕುತ್ತಿರುವ ಮತ್ತು ಮೆಣಸಿನ ಪುಡಿ ಹಾಕುತ್ತಿರುವ 29 ಸೆಕೆಂಡ್‌ಗಗಳ ವಿಡಿಯೋ ಸಾಮಾಜಿಕ ಜಾಲತಾಣದಲ್ಲಿ ವೈರಲ್ ಆಗಿತ್ತು. ಆ ವಿಡಿಯೋ ಇದೇ ಪ್ರಕರಣದ್ದೇ ಅಲ್ಲವೇ ಎಂಬುದು ಖಚಿತವಾಗಿಲ್ಲ.
“ಈ ಪ್ರದೇಶದಲ್ಲಿ ಮೂವರು ನಾಗರಿಕರ ಸಾವುಗಳಿಗೆ ಸಂಬಂಧಿಸಿದಂತೆ ವರದಿಗಳನ್ನು ಸ್ವೀಕರಿಸಲಾಗಿದೆ. ವಿಷಯ ತನಿಖೆ ಹಂತದಲ್ಲಿದೆ. ಭಾರತೀಯ ಸೇನೆಯು ತನಿಖೆ ನಡೆಸುವಲ್ಲಿ ಸಂಪೂರ್ಣ ಬೆಂಬಲ ಮತ್ತು ಸಹಕಾರವನ್ನು ನೀಡಲು ಬದ್ಧವಾಗಿದೆ” ಎಂದು ಭಾರತೀಯ ಸೈನ್ಯ ಎಕ್ಸ್‌ನಲ್ಲಿ ಪೋಸ್ಟ್ ಮಾಡಿದೆ.
ಮೃತಪಟ್ಟವರನ್ನು ಮೊಹಮ್ಮದ್ ಶೋಕತ್ (22) ಸಫೀರ್ ಹುಸೇನ್ (45) ಮತ್ತು ಶಬೀರ್ ಅಹ್ಮದ್ (32) ಎಂದು ಗುರುತಿಸಲಾಗಿದೆ. ಇವರ ಸಾವಿನ ಕುರಿತು ಜಮ್ಮು ಕಾಶ್ಮೀರ ಪೊಲೀಸರು ಕ್ರಿಮಿನಲ್ ಪ್ರಕರಣವನ್ನು ದಾಖಲಿಸಿದ್ದಾರೆ. ಜಮ್ಮು ಮತ್ತು ಕಾಶ್ಮೀರದ ಮಾಹಿತಿ ಮತ್ತು ಸಾರ್ವಜನಿಕ ಸಂಪರ್ಕ ಇಲಾಖೆಯು ಈ ವಿಷಯದಲ್ಲಿ ಕಾನೂನು ಕ್ರಮವನ್ನು ಪ್ರಾರಂಭಿಸಲಾಗಿದೆ ಎಂದು Xನಲ್ಲಿ ಪೋಸ್ಟ್ ಮಾಡಿದೆ.
“ಪೂಂಚ್ ಜಿಲ್ಲೆಯ ಬಫ್ಲಿಯಾಜ್‌ನಲ್ಲಿ ನಿನ್ನೆ ಮೂವರು ನಾಗರಿಕರ ಸಾವು ವರದಿಯಾಗಿದೆ. ವೈದ್ಯಕೀಯ ಕಾನೂನು ವಿಧಿವಿಧಾನಗಳನ್ನು ನಡೆಸಲಾಗಿದೆ ಮತ್ತು ಈ ವಿಷಯದಲ್ಲಿ ಕಾನೂನು ಕ್ರಮವನ್ನು ಸೂಕ್ತ ಪ್ರಾಧಿಕಾರದಿಂದ ಪ್ರಾರಂಭಿಸಲಾಗಿದೆ. ಮೃತರಿಗೆ ಸರ್ಕಾರ ಪರಿಹಾರ ಘೋಷಿಸಿದೆ. ಇದಲ್ಲದೆ, ಪ್ರತಿ ಮೃತರ ಮುಂದಿನ ಸಂಬಂಧಿಕರಿಗೆ ಸಹಾನುಭೂತಿಯ ನೇಮಕಾತಿಗಳನ್ನು ಸರ್ಕಾರ ಘೋಷಿಸಿದೆ” ಎಂದು ಅದು ಹೇಳಿದೆ.
“ಪೂಂಚ್-ರಜೌರಿ ಸೆಕ್ಟರ್‌ನ ಬಫ್ಲಿಯಾಜ್‌ನಲ್ಲಿ ಭಯೋತ್ಪಾದಕರು ಕಳೆದ ವಾರ ಗುಂಡಿನ ದಾಳಿ ಪ್ರಾರಂಭಿಸಿದ್ದರು. ಇದರಲ್ಲಿ ನಾಲ್ವರು ಯೋಧರು ಸಾವನ್ನಪ್ಪಿದ್ದರು. ನಂತರ ಈ ಪ್ರದೇಶದಲ್ಲಿ ಭದ್ರತಾ ಪಡೆಗಳ ಶೋಧ ಕಾರ್ಯಾಚರಣೆಗಳು ಮುಂದುವರಿದಿದ್ದವು. ಸೇನಾ ಬೆಂಗಾವಲು ಪಡೆ ಮೇಲಿನ ದಾಳಿಯ ಹೊಣೆಯನ್ನು ಜೈಶ್-ಎ-ಮೊಹಮ್ಮದ್‌ನ ಪ್ರಾಕ್ಸಿ ಸಂಘಟನೆಯಾದ ಪೀಪಲ್ಸ್ ಆಂಟಿ-ಫ್ಯಾಸಿಸ್ಟ್ ಫ್ರಂಟ್ (ಪಿಎಎಫ್‌ಎಫ್) ಹೊತ್ತುಕೊಂಡಿದೆ. ಜನವರಿಯಲ್ಲಿ ಕೇಂದ್ರ ಗೃಹ ಸಚಿವಾಲಯವು PAFF ಅನ್ನು ʼಭಯೋತ್ಪಾದಕ ಸಂಘಟನೆʼ ಎಂದು ಘೋಷಿಸಿದೆ.
ಇದನ್ನೂ ಓದಿ: Terror Attack: ಮಸೀದಿಗೆ ನುಗ್ಗಿ ನಿವೃತ್ತ ಪೊಲೀಸ್ ಅಧಿಕಾರಿಯನ್ನು ಗುಂಡಿಕ್ಕಿ ಕೊಂದ ಉಗ್ರರು