Site icon Vistara News

Indian Cooking: ಈ ಭಾರತೀಯ ಅಡುಗೆಗಳು ವಿದೇಶಗಳಲ್ಲೂ ಜನಪ್ರಿಯ!

Indian Cooking

ಭಾರತೀಯ ಅಡುಗೆಗೆ (Indian cooking) ವಿಶ್ವಮಟ್ಟದಲ್ಲಿ ತನ್ನದೇ ಆದ ಸ್ಥಾನವಿದೆ. ಭಾರತದ ಅಡುಗೆಯಲ್ಲಿರುವ ಬಗೆ ಬಗೆಯ ಮಸಾಲ ಪದಾರ್ಥಗಳು ನಮ್ಮ ಅಡುಗೆಯನ್ನು ಶ್ರೀಮಂತವಾಗಿಸುವುದಷ್ಟೇ ಅಲ್ಲ, ಅದರ ಘಮ, ರುಚಿ, ಸ್ವಾದ ಹೀಗೆ ಎಲ್ಲದರಲ್ಲೂ ಎತ್ತಿದ ಕೈ. ಅದಕ್ಕಾಗಿಯೇ ಪ್ರಪಂಚದಾದ್ಯಂತ ಭಾರತೀಯ ಅಡುಗೆಗೆ ತನ್ನದೇ ಆದ ಅಭಿಮಾನಿ ಬಳಗವಿದೆ. ಪ್ರಪಂಚದ ಯಾವುದೇ ಮೂಲೆಗೆ ಹೋದರೂ, ಅಲ್ಲೊಂದು ಭಾರತೀಯ ರೆಸ್ಟೋರೆಂಟನ್ನು ಹುಡುಕುವುದು ಈಗ ಸಮಸ್ಯೆಯಲ್ಲ. ಅಷ್ಟೇ ಅಲ್ಲ, ಸಾಮಾಜಿಕ ಜಾಲತಾಣಗಳು ಬಂದ ಮೇಲಂತೂ ವಿದೇಶಿಯರು ಕೂಡ ತಮ್ಮ ಯುಟ್ಯೂಬ್‌ ಚಾನಲ್‌ಗಳಲ್ಲಿ, ಇನ್‌ಸ್ಟಾಗ್ರಾಂನಲ್ಲಿ ಭಾರತೀಯ ಅಡುಗೆಗಳನ್ನು ತಯಾರಿಸುವ ವಿಡಿಯೋಗಳೂ ಕೂಡಾ ವೈರಲ್‌ ಆಗುತ್ತಿವೆ. ಬನ್ನಿ, ವಿದೇಶೀಯರು, ಭಾರತದ ಯಾವ ಅಡುಗೆಗಳನ್ನು ಬಹಳ ಇಷ್ಟಪಡುತ್ತಾರೆ ಹಾಗೂ ಯಾವ ಭಾರತೀಯ ತಿನಿಸುಗಳಿಗೆ ವಿಶ್ವದೆಲ್ಲೆಡೆ ಬೇಡಿಕೆ ಹೆಚ್ಚು ಎಂಬುದನ್ನು ತಿಳಿಯೋಣ.

ಸಮೋಸ

ಆಲೂಗಡ್ಡೆಯ ಪಲ್ಯವನ್ನು ಹೂರಣವಾಗಿರಿಸಿಕೊಂಡು ಎಣ್ಣೆಯಲ್ಲಿ ಕರಿದ ಈ ಸಮೋಸ ಎಂಬ ತಿನಿಸು ಭಾರತದುದ್ದಕ್ಕೂ ಬಹುಬೇಡಿಕೆಯ ತಿನಿಸು. ಇದು ಸ್ಟಾರ್ಟರ್‌ ಆಗಿಯೂ, ಪಾರ್ಟಿಗಳಲ್ಲಿ ಲೈಟಾಗಿ ತಿನ್ನಲು, ಸಣ್ಣ ಪುಟ್ಟ ಗೆಟ್‌ ಟುಗೆದರ್‌ಗಳಲ್ಲಿ ಜನರು ತಿನ್ನಲು ಇಷ್ಟಪಡುವ ಟಾಪ್‌ ತಿನಿಸುಗಳಲ್ಲಿ ಸಮೋಸಕ್ಕೆ ಅಗ್ರಸ್ಥಾನ. ಸಿಹಿ ಹಾಗೂ ಖಾರ ಚಟ್ನಿ ಇದ್ದರೆ ಸಮೋಸದ ರುಚಿಯನ್ನು ಬಲ್ಲವನೇ ಬಲ್ಲ. ಹಾಗಾಗಿಯೇ ಇದು ವಿದೇಶಿಯರಿಗೂ ಫೇವರಿಟ್ಟು. ಭಾರತಕ್ಕೆ ಬರುವ ವಿದೇಶಿ ಪ್ರವಾಸಿಗರು ಭಾರತದಲ್ಲಿನ ಬೆಸ್ಟ್‌ ಸಮೋಸಗಳನ್ನು ತಿನ್ನದೇ ಹೋಗುವಿದಿಲ್ಲ!

ಬಿರಿಯಾನಿ

ಅನ್ನ, ತರಕಾರಿ ಹಾಗೂ ಮಾಂಸ ಇತ್ಯಾದಿಗಳನ್ನು ಹಾಕಿದ ಬಗೆಬಗೆಯ ಮಸಾಲೆಗಳನ್ನು ಹಾಕಿ ಮಾಡುವ ವಿಶೇಷ ರೈಸ್‌ ಈ ಬಿರಿಯಾನಿ. ಭಾರತದಾದ್ಯಂತ ಹಲವು ನಗರಗಳಲ್ಲಿ ಬೇರೆ ಬೇರೆ ಮಾದರಿಯ ಬಿರಿಯಾನಿಗಳು ಲಭ್ಯವಿವೆ. ವಿದೇಶದಲ್ಲೂ ಭಾರತೀಯ ಶೈಲಿಯ ಬಿರಿಯಾನಿ ಎಂದರೆ ಬಲು ಜನಪ್ರಿಯ.

ದೋಸೆ

ಅಕ್ಕಿ ಹಾಗೂ ಬೇಳೆಗಳನ್ನು ಹಾಕಿ ಮಾಡಿದ ಹಿಟ್ಟಿನಿಂದ ತವಾದ ಮೇಲೆ ಹುಯ್ಯುವ ದೋಸೆ ಎಂಬ ತಿನಿಸು ದಕ್ಷಿಣ ಭಾರತೀಯರ ಆರಾಧ್ಯ ದೈವ. ದೋಸೆ ಎಂಬ ಆರೋಗ್ಯಕರ ಬೆಳಗಿನ ತಿಂಡಿಯ ಮೇಲೆ ಭಾರತಾದ್ಯಂತ ಜನರಿಗೆ ವಿಶೇಷ ವ್ಯಾಮೋಹ. ಚಟ್ನಿ ಹಾಗೂ ಸಾಂಬಾರಿನ ಜತೆಗೆ ದೋಸೆಯನ್ನು ತಿನ್ನುತ್ತಿದ್ದರೆ, ಸ್ವರ್ಗಕ್ಕೆ ಮೂರೇ ಗೇಣು. ಅದಕ್ಕಾಗಿಯೇ ದೋಸೆ, ಕೇವಲ ಉತ್ತರ ಭಾರತೀಯರಲ್ಲಷ್ಟೇ ಅಲ್ಲ, ವಿದೇಶೀಯರಲ್ಲೂ ಜನಪ್ರಿಯ.

ಬಟರ್‌ ಚಿಕನ್

ಪಂಜಾಬಿನ ಅತ್ಯಂತ ಜನಪ್ರಿಯ ಗ್ರೇವಿ ಬಟರ್‌ ಚಿಕನ್‌ ಕೇವಲ ಭಾರತದಲ್ಲಷ್ಟೇ ಅಲ್ಲ, ವಿದೇಶದಲ್ಲೂ ಫೇಮಸ್ಸು. ಸಾಕಷ್ಟು ಬೆಣ್ಣೆ, ಚಿಕನ್‌, ಟೊಮ್ಯಾಟೊ, ಈರುಳ್ಳಿ ಸೇರಿದಂತೆ ಗರಂ ಮಸಾಲೆ ಹಾಕಿ ಮಾಡುವ ಬೆಣ್ಣೆಯಿಂದ ಸಮೃದ್ಧವಾಗಿರುವ ಸೈಡ್‌ ಡಿಶ್‌ ಇದು. ಚಪಾತಿ, ನಾನ್‌, ರೋಟಿ, ಕುಲ್ಚಾ ಇತ್ಯಾದಿಗಳ ಜತೆ ತಿನ್ನಲು ಬಲು ರುಚಿಯಾಗಿರುವ ಇದಕ್ಕೆ ಅದರದ್ದೇ ಆದ ಘಮವಿದೆ. ಅದಕ್ಕೇ ಇದಕ್ಕೆ ಯಾವಾಗಲೂ ಬೇಡಿಕೆ.

ದಾಲ್‌ ಮಖನಿ

ಉದ್ದಿನ ಬೇಳೆಯಲ್ಲಿ ಮಾಡುವ ದಾಲ್‌ ಮಖನಿ ಎಂಬ ಪಂಜಾಬಿ ಅಡುಗೆ ಅನ್ನದ ಜೊತೆಗೆ, ಚಪಾತಿ, ರೋಟಿಯ ಜೊತೆಗೆ ತಿನ್ನುವ ಸೈಡ್‌ ಡಿಶ್‌. ಪಂಜಾಬಿಗಳ ಅಡುಗೆಯಾಗಿರುವ ಇದು ಭಾರತದಾದ್ಯಂತ ಮುಖ್ಯವಾಗಿ ಉತ್ತರ ಭಾರತೀಯರಲ್ಲಿ ಜನಪ್ರಿಯ. ಅತ್ಯಂತ ಆರೋಗ್ಯಕರವಾಗಿರುವ ಈ ಸೈಡ್‌ ಡಿಶ್‌ ವಿದೇಶೀಯರಿಗೂ ಬಹಳ ಪ್ರಿಯ. ಸಸ್ಯಾಹಾರಿಗಳ ಊಟದಲ್ಲಿ ಇದು ಆರಾಧ್ಯ ದೈವವಿದ್ದಂತೆ.

ಇದನ್ನೂ ಓದಿ: Foods For Brain Power: ಈ ಆಹಾರಗಳನ್ನು ನಿಮ್ಮ ಮಕ್ಕಳಿಗೆ ತಿನ್ನಿಸಿ, ನೆನಪಿನ ಶಕ್ತಿ ಹೆಚ್ಚಿಸಿ!

Exit mobile version