Site icon Vistara News

National Voters Day 2023: ಇಂದು ರಾಷ್ಟ್ರೀಯ ಮತದಾರರ ದಿನ, ಆಚರಣೆಯ ಮಹತ್ವ, ಉದ್ದೇಶವೇನು?

Today is National Voters Day, what is the significance and purpose of this celebration?

ಪ್ರಜಾಪ್ರಭುತ್ವದ ಪ್ರಮುಖ ತತ್ವವೇ ಚುನಾವಣೆ. ಈ ಚುನಾವಣೆಗಳಿಗೆ ಜೀವಂತಿಕೆಯನ್ನು ತುಂಬುವವರು ಮತದಾರರು! ಈ ಮತದಾರರ ಮಹತ್ವವನ್ನು ಸಾರಲು ಭಾರತದಲ್ಲಿ ಮತದಾರರ ದಿನಾಚರಣೆಯನ್ನು ಪ್ರತಿ ವರ್ಷ ಜನವರಿ 25ರಂದು ಆಚರಿಸಲಾಗುತ್ತದೆ(National Voters Day 2023). ಆ ಮೂಲಕ ಚುನಾವಣಾ ಪ್ರಕ್ರಿಯೆಯಲ್ಲಿ ಮತದಾರರ ಮಹತ್ವ, ಜವಾಬ್ದಾರಿ, ಕರ್ತವ್ಯ, ಕಾರ್ಯಗಳ ಬಗ್ಗೆ ಜಾಗೃತಿ ಮೂಡಿಸುವ ಪ್ರಯತ್ನ ಮಾಡಲಾಗುತ್ತದೆ. ಭಾರತದಂಥ ದೇಶದಲ್ಲಿ ನಿತ್ಯ ಒಂದಿಲ್ಲ ಒಂದು ಚುನಾವಣೆ ನಡೆಯುತ್ತಲೇ ಇರುತ್ತದೆ. ಒಂದು ಸಣ್ಣ ಸಹಕಾರಿ ಸೊಸೈಟಿಯಿಂದ ಹಿಡಿದು ಲೋಕಸಭೆಯ ಸಾರ್ವತ್ರಿಕ ಚುನಾವಣೆಯವರೆಗೆ ಮತದಾರರ ಪಾತ್ರ ಹಿರಿದಾಗಿರುತ್ತದೆ. ಭಾರತದಲ್ಲಿ ಎಂದು ಮತ್ತು ಯಾಕೆ ಮತದಾರರ ದಿನವನ್ನುಆಚರಿಸಲಾಗುತ್ತದೆ ಎಂಬ ಕುರಿತು ಇಲ್ಲಿ ಮಾಹಿತಿ ಇದೆ…

ಮತದಾರರ ದಿನ ಏಕೆ ಆಚರಣೆ?

ಚುನಾವಣೆ ಮತ್ತು ಮತದಾನ- ಪ್ರಜಾಪ್ರಭುತ್ವದ ಮೂಲಸತ್ವಗಳಲ್ಲಿ ಮುಖ್ಯವಾದವು. ದೇಶದ ಭವಿಷ್ಯ ನಿರ್ಧಾರವಾಗುವ ಈ ಮಹತ್ವದ ಪ್ರಕ್ರಿಯೆಯಲ್ಲಿ ಮತದಾರ ಪ್ರಭುಗಳನ್ನು ಪಾಲ್ಗೊಳ್ಳುವಂತೆ ಪ್ರೇರೇಪಿಸುವ ಉದ್ದೇಶದಿಂದ, ಜನವರಿ ತಿಂಗಳ 25ನೇ ದಿನವನ್ನು ರಾಷ್ಟ್ರೀಯ ಮತದಾರರ ದಿನ ಎಂದು ಪ್ರತಿವರ್ಷ ಆಚರಿಸಲಾಗುತ್ತದೆ. ಹಾಗೆಯೇ, ಈ ದಿನ ಭಾರತದ ಚುನಾವಣಾ ಆಯೋಗದ ಸಂಸ್ಥಾಪನಾ ದಿನವೂ ಹೌದು. 1950ರ ಜನವರಿ 25ರಂದು ಆಯೋಗ ಅಸ್ತಿತ್ವಕ್ಕೆ ಬಂದಿತ್ತು. ಇದೇ ದಿನವನ್ನು ಮತದಾರರ ದಿನವೆಂದು ಗುರುತಿಸಲಾಗಿದೆ.

ಜಾಗೃತಿ ಮೂಡಿಸುವ ಉದ್ದೇಶ

ಮತದಾರರ ದಿನದ ಮುಖ್ಯ ಉದ್ದೇಶವೇ ನಾಗರಿಕರು ಹಾಗೂ ಹೊಸ ಮತದಾರರಿಗೆ ಜಾಗೃತಿ ಮೂಡಿಸುವುದು ಆಗಿದೆ. ಅವರೆಲ್ಲರೂ ಮತದಾನದ ಪ್ರಕ್ರಿಯೆಯಲ್ಲಿ ಹೆಚ್ಚಾಗಿ ತೊಡಗಿಸಿಕೊಂಡು, ಪ್ರಜಾಪ್ರಭುತ್ವಕ್ಕೆ ಸರಿಯಾದ ದಿಸೆಯನ್ನು ಒದಗಿಸುವ ಉದ್ದೇಶದ ತಿಳಿಸಲಾಗುತ್ತದೆ. ಪ್ರತಿವರ್ಷ ಜನವರಿ ಮೊದಲ ದಿನಕ್ಕೆ 18 ವರ್ಷದ ವಯೋಮಾನ ಪೂರ್ಣಗೊಂಡಿರುವ ಯುವಜನತೆಯನ್ನು, ಪ್ರಜಾಪ್ರಭುತ್ವದ ಪ್ರಕ್ರಿಯೆಗಳಲ್ಲಿ ಪಾಲ್ಗೊಳ್ಳುವಂತೆ ಮಾಡುವ ಸ್ಪಷ್ಟ ಉದ್ದೇಶವನ್ನು ಈ ಆಚರಣೆ ಹೊಂದಿದೆ.

National Voters Day ಎಂದಿನಿಂದ ಶುರುವಾಯಿತು?

ಮನಮೋಹನ್‌ ಸಿಂಗ್‌ ನೇತೃತ್ವದ ಸರಕಾರವು 2011ರಲ್ಲಿ ಮೊದಲ ಬಾರಿಗೆ ಮತದಾರರ ದಿನದ ಆಚರಣೆಯನ್ನು ಆರಂಭಿಸಿತು. ಹೊಸ ಮತದಾರರು ಚುನಾವಣಾ ಪ್ರಕ್ರಿಯೆಯಲ್ಲಿ ಪಾಲ್ಗೊಳ್ಳುವುದರ ಬಗ್ಗೆ ಅನಾಸಕ್ತಿ ತೋರುತ್ತಿರುವುದರ ಕುರಿತಾಗಿ ಎಲ್ಲೆಡೆಯಿಂದ ಆತಂಕ ವ್ಯಕ್ತವಾಗುತ್ತಿದ್ದ ಸಂದರ್ಭವದು. ಈ ದಿನದಂದು ಹೊಸ ಮತದಾರರ ನೋಂದಣಿ, ಈಗಾಗಲೇ ನೋಂದಣಿಯಾಗಿರುವ ಮತದಾರರಿಗೆ ಚುನಾವಣಾ ಕಾರ್ಡ್‌ ಹಸ್ತಾಂತರದಂಥ ಕಾರ್ಯಗಳನ್ನು ಮಾಡಲಾಗುತ್ತದೆ. ಈ ಬಾರಿಯ ಮತದಾರರ ದಿನದ ಘೋಷ ವಾಕ್ಯ- “ಮತದಾನದಂಥದ್ದು ಇನ್ನೊಂದಿಲ್ಲ. ನಾನು ಖಂಡಿತವಾಗಿ ಮತದಾನ ಮಾಡುವೆ” (Nothing Like Voting, I Vote for Sure)

ರಾಷ್ಟ್ರೀಯ ಪ್ರಶಸ್ತಿಗಳ ಪ್ರದಾನ

ಮತದಾರರ ದಿನದಂದು ನಡೆಯುವ ಕಾರ್ಯಕ್ರಮದಲ್ಲಿ, ರಾಷ್ಟ್ರಪತಿಗಳು 2022ನೇ ಸಾಲಿನಲ್ಲಿ ಚುನಾವಣಾ ಪ್ರಕ್ರಿಯೆಗೆ ಸಂಬಂಧಿಸಿದ ರಾಷ್ಟ್ರೀಯ ಪ್ರಶಸ್ತಿಗಳನ್ನು ಪ್ರದಾನ ಮಾಡುತ್ತಾರೆ. ಅಂದರೆ, 2022ನೇ ಸಾಲಿನಲ್ಲಿ ನಡೆಸಲಾದ ಚುನಾವಣೆಗಳಲ್ಲಿ ಅತ್ತ್ಯುತ್ತಮವಾಗಿ ಚುನಾವಣಾ ಪ್ರಕ್ರಿಯೆಯನ್ನು ನಿರ್ವಹಿಸಿದ ರಾಜ್ಯ ಮತ್ತು ಜಿಲ್ಲಾ ಮಟ್ಟದ ಚುನಾವಣಾ ಅಧಿಕಾರಿಗಳಿಗೆ ಪ್ರಶಸ್ತಿ ನೀಡಿ ಸನ್ಮಾನಿಸಲಾಗುವುದು. ಇದರಲ್ಲಿ, ಭದ್ರತಾ ವಿಷಯಗಳ ನಿರ್ವಹಣೆ, ಮತದಾನ ಪ್ರಕ್ರಿಯೆಯ ನಿರ್ವಹಣೆ, ಮತದಾರರ ಜಾಗೃತಿ ಮುಂತಾದ ಹಲವಾರು ವಿಷಯಗಳನ್ನು ಪರಿಗಣಿಸಿ, ರಾಷ್ಟ್ರೀಯ ಮಟ್ಟದ ಪುರಸ್ಕಾರಗಳನ್ನು ನೀಡಲಾಗುತ್ತಿದೆ. ಈ ಸಂದರ್ಭದಲ್ಲಿ ದೇಶದ ರಾಷ್ಟ್ರಪತಿ ಚುನಾವಣೆ ಪ್ರಕ್ರಿಯೆಯ ಕುರಿತಾದ ಹೊತ್ತಗೆಯೂ ಬಿಡುಗಡೆಯಾಗಲಿದೆ. “ಮೈ ಭಾರತ್‌ ಹೂಂ, ಹಮ್‌ ಭಾರತ್‌ ಕೆ ಮತದಾತಾ ಹೈ” ಎಂಬ ಚುನಾವಣಾ ಗೀತೆಯನ್ನೂ ಚುನಾವಣಾ ಆಯೋಗ ಈ ಸಂದರ್ಭದಲ್ಲಿ ಪ್ರಚಲಿತಕ್ಕೆ ತರಲಿದೆ.

ಇದನ್ನೂ ಓದಿ : Election Reform | ಕ್ಷೇತ್ರದಿಂದ ದೂರ ಇರುವವರಿಗೂ ಮತದಾನದ ಅವಕಾಶ: RVM ಮೂಲಕ ಐತಿಹಾಸಿಕ ಪ್ರಯೋಗಕ್ಕೆ ಮುಂದಾದ ಚುನಾವಣಾ ಆಯೋಗ

ಮತದಾರ ದಿನಕ್ಕೆ ಸಂದೇಶಗಳು

| ಪ್ರತಿಯೊಬ್ಬರು ಮತದಾನದ ಕರ್ತವ್ಯ ಪೂರೈಸುವುದನ್ನು ಈ ಮತದಾರರ ದಿನ ನೆನಪಿಸುತ್ತದೆ.
| ಒಂದು ವೇಳೆ ನೀವು ವೋಟ್ ಮಾಡದಿದ್ದರೆ, ನಿಮಗೆ ದೂರುವ ಹಕ್ಕು ಇರುವುದಿಲ್ಲ. ಮತದಾನದಲ್ಲಿ ಪಾಲ್ಗೊಳ್ಳಿ ಬದಲಾವಣೆ ತನ್ನಿ.
| ಪ್ರತಿ ವೋಟ್‌ಗೂ ಮೌಲ್ಯವಿದೆ. ಹಾಗಾಗಿ, ಒಂದೇ ಒಂದು ಮತ ಮೌಲ್ಯವನ್ನು ನಾವ ಕಡೆಗಣಿಸುವಂತಿಲ್ಲ.
| ಮತದಾನ ಮಾಡುವುದು ನಮ್ಮ ಮಹತ್ವದ ಕರ್ತವ್ಯವಾಗಿದೆ ಮತ್ತು ಈ ಕರ್ತವ್ಯವನ್ನು ನಾವು ಯಾವುದೇ ಲೋವಿಲ್ಲದೇ ಪೂರೈಸಬೇಕು.

Exit mobile version