EXPLAINER
National Voters Day 2023: ಇಂದು ರಾಷ್ಟ್ರೀಯ ಮತದಾರರ ದಿನ, ಆಚರಣೆಯ ಮಹತ್ವ, ಉದ್ದೇಶವೇನು?
2011 ಜನವರಿ 25ರಂದು ಮೊದಲ ಬಾರಿಗೆ ಭಾರತದಲ್ಲಿ ರಾಷ್ಟ್ರೀಯ ಮತದಾರರ ದಿನವನ್ನು (National Voters Day 2023) ಆಚರಿಸಲು ಆರಂಭಿಸಲಾಯಿತು. ಚುನಾವಣೆಯಲ್ಲಿ ಮತದಾರರ ಪಾತ್ರ, ಉದ್ದೇಶ ಹಾಗೂ ಮಹತ್ವದ ಕುರಿತು ಈ ದಿನದಂದ ಜಾಗೃತಿ ಮೂಡಿಸಲಾಗುತ್ತದೆ.
ಪ್ರಜಾಪ್ರಭುತ್ವದ ಪ್ರಮುಖ ತತ್ವವೇ ಚುನಾವಣೆ. ಈ ಚುನಾವಣೆಗಳಿಗೆ ಜೀವಂತಿಕೆಯನ್ನು ತುಂಬುವವರು ಮತದಾರರು! ಈ ಮತದಾರರ ಮಹತ್ವವನ್ನು ಸಾರಲು ಭಾರತದಲ್ಲಿ ಮತದಾರರ ದಿನಾಚರಣೆಯನ್ನು ಪ್ರತಿ ವರ್ಷ ಜನವರಿ 25ರಂದು ಆಚರಿಸಲಾಗುತ್ತದೆ(National Voters Day 2023). ಆ ಮೂಲಕ ಚುನಾವಣಾ ಪ್ರಕ್ರಿಯೆಯಲ್ಲಿ ಮತದಾರರ ಮಹತ್ವ, ಜವಾಬ್ದಾರಿ, ಕರ್ತವ್ಯ, ಕಾರ್ಯಗಳ ಬಗ್ಗೆ ಜಾಗೃತಿ ಮೂಡಿಸುವ ಪ್ರಯತ್ನ ಮಾಡಲಾಗುತ್ತದೆ. ಭಾರತದಂಥ ದೇಶದಲ್ಲಿ ನಿತ್ಯ ಒಂದಿಲ್ಲ ಒಂದು ಚುನಾವಣೆ ನಡೆಯುತ್ತಲೇ ಇರುತ್ತದೆ. ಒಂದು ಸಣ್ಣ ಸಹಕಾರಿ ಸೊಸೈಟಿಯಿಂದ ಹಿಡಿದು ಲೋಕಸಭೆಯ ಸಾರ್ವತ್ರಿಕ ಚುನಾವಣೆಯವರೆಗೆ ಮತದಾರರ ಪಾತ್ರ ಹಿರಿದಾಗಿರುತ್ತದೆ. ಭಾರತದಲ್ಲಿ ಎಂದು ಮತ್ತು ಯಾಕೆ ಮತದಾರರ ದಿನವನ್ನುಆಚರಿಸಲಾಗುತ್ತದೆ ಎಂಬ ಕುರಿತು ಇಲ್ಲಿ ಮಾಹಿತಿ ಇದೆ…
ಮತದಾರರ ದಿನ ಏಕೆ ಆಚರಣೆ?
ಚುನಾವಣೆ ಮತ್ತು ಮತದಾನ- ಪ್ರಜಾಪ್ರಭುತ್ವದ ಮೂಲಸತ್ವಗಳಲ್ಲಿ ಮುಖ್ಯವಾದವು. ದೇಶದ ಭವಿಷ್ಯ ನಿರ್ಧಾರವಾಗುವ ಈ ಮಹತ್ವದ ಪ್ರಕ್ರಿಯೆಯಲ್ಲಿ ಮತದಾರ ಪ್ರಭುಗಳನ್ನು ಪಾಲ್ಗೊಳ್ಳುವಂತೆ ಪ್ರೇರೇಪಿಸುವ ಉದ್ದೇಶದಿಂದ, ಜನವರಿ ತಿಂಗಳ 25ನೇ ದಿನವನ್ನು ರಾಷ್ಟ್ರೀಯ ಮತದಾರರ ದಿನ ಎಂದು ಪ್ರತಿವರ್ಷ ಆಚರಿಸಲಾಗುತ್ತದೆ. ಹಾಗೆಯೇ, ಈ ದಿನ ಭಾರತದ ಚುನಾವಣಾ ಆಯೋಗದ ಸಂಸ್ಥಾಪನಾ ದಿನವೂ ಹೌದು. 1950ರ ಜನವರಿ 25ರಂದು ಆಯೋಗ ಅಸ್ತಿತ್ವಕ್ಕೆ ಬಂದಿತ್ತು. ಇದೇ ದಿನವನ್ನು ಮತದಾರರ ದಿನವೆಂದು ಗುರುತಿಸಲಾಗಿದೆ.
ಜಾಗೃತಿ ಮೂಡಿಸುವ ಉದ್ದೇಶ
ಮತದಾರರ ದಿನದ ಮುಖ್ಯ ಉದ್ದೇಶವೇ ನಾಗರಿಕರು ಹಾಗೂ ಹೊಸ ಮತದಾರರಿಗೆ ಜಾಗೃತಿ ಮೂಡಿಸುವುದು ಆಗಿದೆ. ಅವರೆಲ್ಲರೂ ಮತದಾನದ ಪ್ರಕ್ರಿಯೆಯಲ್ಲಿ ಹೆಚ್ಚಾಗಿ ತೊಡಗಿಸಿಕೊಂಡು, ಪ್ರಜಾಪ್ರಭುತ್ವಕ್ಕೆ ಸರಿಯಾದ ದಿಸೆಯನ್ನು ಒದಗಿಸುವ ಉದ್ದೇಶದ ತಿಳಿಸಲಾಗುತ್ತದೆ. ಪ್ರತಿವರ್ಷ ಜನವರಿ ಮೊದಲ ದಿನಕ್ಕೆ 18 ವರ್ಷದ ವಯೋಮಾನ ಪೂರ್ಣಗೊಂಡಿರುವ ಯುವಜನತೆಯನ್ನು, ಪ್ರಜಾಪ್ರಭುತ್ವದ ಪ್ರಕ್ರಿಯೆಗಳಲ್ಲಿ ಪಾಲ್ಗೊಳ್ಳುವಂತೆ ಮಾಡುವ ಸ್ಪಷ್ಟ ಉದ್ದೇಶವನ್ನು ಈ ಆಚರಣೆ ಹೊಂದಿದೆ.
National Voters Day ಎಂದಿನಿಂದ ಶುರುವಾಯಿತು?
ಮನಮೋಹನ್ ಸಿಂಗ್ ನೇತೃತ್ವದ ಸರಕಾರವು 2011ರಲ್ಲಿ ಮೊದಲ ಬಾರಿಗೆ ಮತದಾರರ ದಿನದ ಆಚರಣೆಯನ್ನು ಆರಂಭಿಸಿತು. ಹೊಸ ಮತದಾರರು ಚುನಾವಣಾ ಪ್ರಕ್ರಿಯೆಯಲ್ಲಿ ಪಾಲ್ಗೊಳ್ಳುವುದರ ಬಗ್ಗೆ ಅನಾಸಕ್ತಿ ತೋರುತ್ತಿರುವುದರ ಕುರಿತಾಗಿ ಎಲ್ಲೆಡೆಯಿಂದ ಆತಂಕ ವ್ಯಕ್ತವಾಗುತ್ತಿದ್ದ ಸಂದರ್ಭವದು. ಈ ದಿನದಂದು ಹೊಸ ಮತದಾರರ ನೋಂದಣಿ, ಈಗಾಗಲೇ ನೋಂದಣಿಯಾಗಿರುವ ಮತದಾರರಿಗೆ ಚುನಾವಣಾ ಕಾರ್ಡ್ ಹಸ್ತಾಂತರದಂಥ ಕಾರ್ಯಗಳನ್ನು ಮಾಡಲಾಗುತ್ತದೆ. ಈ ಬಾರಿಯ ಮತದಾರರ ದಿನದ ಘೋಷ ವಾಕ್ಯ- “ಮತದಾನದಂಥದ್ದು ಇನ್ನೊಂದಿಲ್ಲ. ನಾನು ಖಂಡಿತವಾಗಿ ಮತದಾನ ಮಾಡುವೆ” (Nothing Like Voting, I Vote for Sure)
ರಾಷ್ಟ್ರೀಯ ಪ್ರಶಸ್ತಿಗಳ ಪ್ರದಾನ
ಮತದಾರರ ದಿನದಂದು ನಡೆಯುವ ಕಾರ್ಯಕ್ರಮದಲ್ಲಿ, ರಾಷ್ಟ್ರಪತಿಗಳು 2022ನೇ ಸಾಲಿನಲ್ಲಿ ಚುನಾವಣಾ ಪ್ರಕ್ರಿಯೆಗೆ ಸಂಬಂಧಿಸಿದ ರಾಷ್ಟ್ರೀಯ ಪ್ರಶಸ್ತಿಗಳನ್ನು ಪ್ರದಾನ ಮಾಡುತ್ತಾರೆ. ಅಂದರೆ, 2022ನೇ ಸಾಲಿನಲ್ಲಿ ನಡೆಸಲಾದ ಚುನಾವಣೆಗಳಲ್ಲಿ ಅತ್ತ್ಯುತ್ತಮವಾಗಿ ಚುನಾವಣಾ ಪ್ರಕ್ರಿಯೆಯನ್ನು ನಿರ್ವಹಿಸಿದ ರಾಜ್ಯ ಮತ್ತು ಜಿಲ್ಲಾ ಮಟ್ಟದ ಚುನಾವಣಾ ಅಧಿಕಾರಿಗಳಿಗೆ ಪ್ರಶಸ್ತಿ ನೀಡಿ ಸನ್ಮಾನಿಸಲಾಗುವುದು. ಇದರಲ್ಲಿ, ಭದ್ರತಾ ವಿಷಯಗಳ ನಿರ್ವಹಣೆ, ಮತದಾನ ಪ್ರಕ್ರಿಯೆಯ ನಿರ್ವಹಣೆ, ಮತದಾರರ ಜಾಗೃತಿ ಮುಂತಾದ ಹಲವಾರು ವಿಷಯಗಳನ್ನು ಪರಿಗಣಿಸಿ, ರಾಷ್ಟ್ರೀಯ ಮಟ್ಟದ ಪುರಸ್ಕಾರಗಳನ್ನು ನೀಡಲಾಗುತ್ತಿದೆ. ಈ ಸಂದರ್ಭದಲ್ಲಿ ದೇಶದ ರಾಷ್ಟ್ರಪತಿ ಚುನಾವಣೆ ಪ್ರಕ್ರಿಯೆಯ ಕುರಿತಾದ ಹೊತ್ತಗೆಯೂ ಬಿಡುಗಡೆಯಾಗಲಿದೆ. “ಮೈ ಭಾರತ್ ಹೂಂ, ಹಮ್ ಭಾರತ್ ಕೆ ಮತದಾತಾ ಹೈ” ಎಂಬ ಚುನಾವಣಾ ಗೀತೆಯನ್ನೂ ಚುನಾವಣಾ ಆಯೋಗ ಈ ಸಂದರ್ಭದಲ್ಲಿ ಪ್ರಚಲಿತಕ್ಕೆ ತರಲಿದೆ.
ಇದನ್ನೂ ಓದಿ : Election Reform | ಕ್ಷೇತ್ರದಿಂದ ದೂರ ಇರುವವರಿಗೂ ಮತದಾನದ ಅವಕಾಶ: RVM ಮೂಲಕ ಐತಿಹಾಸಿಕ ಪ್ರಯೋಗಕ್ಕೆ ಮುಂದಾದ ಚುನಾವಣಾ ಆಯೋಗ
ಮತದಾರ ದಿನಕ್ಕೆ ಸಂದೇಶಗಳು
| ಪ್ರತಿಯೊಬ್ಬರು ಮತದಾನದ ಕರ್ತವ್ಯ ಪೂರೈಸುವುದನ್ನು ಈ ಮತದಾರರ ದಿನ ನೆನಪಿಸುತ್ತದೆ.
| ಒಂದು ವೇಳೆ ನೀವು ವೋಟ್ ಮಾಡದಿದ್ದರೆ, ನಿಮಗೆ ದೂರುವ ಹಕ್ಕು ಇರುವುದಿಲ್ಲ. ಮತದಾನದಲ್ಲಿ ಪಾಲ್ಗೊಳ್ಳಿ ಬದಲಾವಣೆ ತನ್ನಿ.
| ಪ್ರತಿ ವೋಟ್‌ಗೂ ಮೌಲ್ಯವಿದೆ. ಹಾಗಾಗಿ, ಒಂದೇ ಒಂದು ಮತ ಮೌಲ್ಯವನ್ನು ನಾವ ಕಡೆಗಣಿಸುವಂತಿಲ್ಲ.
| ಮತದಾನ ಮಾಡುವುದು ನಮ್ಮ ಮಹತ್ವದ ಕರ್ತವ್ಯವಾಗಿದೆ ಮತ್ತು ಈ ಕರ್ತವ್ಯವನ್ನು ನಾವು ಯಾವುದೇ ಲೋವಿಲ್ಲದೇ ಪೂರೈಸಬೇಕು.
EXPLAINER
ವಿಸ್ತಾರ Explainer: ರಾಹುಲ್ ಗಾಂಧಿಗೆ ಶಿಕ್ಷೆಯಾಗುವಂತೆ ಮಾಡಿದ ʼಮೋದಿʼ ಸರ್‌ನೇಮ್‌ನ ಹಿನ್ನೆಲೆ ಇದು!
ರಾಹುಲ್ ಗಾಂಧಿಯವರ ಸಂಸತ್ ಅನರ್ಹತೆಗೆ ಕಾರಣವಾಗಿರುವ ʼಮೋದಿʼ ಹೇಳಿಕೆಯಲ್ಲಿ ಉಲ್ಲೇಖವಾಗಿರುವ ʼಮೋದಿʼಗಳು ಯಾರು? ಈ ಉಪನಾಮದವರು ಯಾರ್ಯಾರು, ಎಲ್ಲಿಲ್ಲಿದ್ದಾರೆ, ಏನು ಮಾಡುತ್ತಾರೆ? ಇಲ್ಲಿದೆ ಒಂದು ವಿವರ.
ಕಾಂಗ್ರೆಸ್ ನಾಯಕ ರಾಹುಲ್ ಗಾಂಧಿ ತಮ್ಮ ವಯನಾಡ್ ಸಂಸದ ಸ್ಥಾನದಿಂದ ಅನರ್ಹರಾಗಿದ್ದಾರೆ. ಎರಡು ವರ್ಷಗಳ ಜೈಲು ಶಿಕ್ಷೆಯನ್ನು ಸೂರತ್ ಕೋರ್ಟ್ ಇವರಿಗೆ ಕ್ರಿಮಿನಲ್ ಮಾನನಷ್ಟ ಪ್ರಕರಣದಲ್ಲಿ ವಿಧಿಸಿದ್ದರಿಂದ ಉಂಟಾಗಿರುವ ಸ್ಥಾನಚ್ಯುತಿ ಇದು. ಇಷ್ಟಾಗಲು ಕಾರಣ ಅವರು ಹೇಳಿದ ಒಂದೇ ಒಂದು ವಾಕ್ಯ: ʼʼಕಳ್ಳರಿಗೆಲ್ಲ ʼಮೋದಿʼ ಎಂಬ ಸರ್‌ನೇಮೇ ಯಾಕಿದೆ?ʼʼ
ಈ ಒಂದು ವಾಕ್ಯವೇ ಇಂದು ಭಾರತದ ರಾಜಕೀಯದಲ್ಲಿ ಕೋಲಾಹಲಕ್ಕೆ ಕಾರಣವಾಗಿದ್ದು, ಮುಂದಿನ ಚುನಾವಣೆಯ ಭವಿಷ್ಯವೂ ಇದರ ಮೇಲೇ ನಿಂತಿರುವಂತಿದೆ. ರಾಹುಲ್ ಗಾಂಧಿ ಮೇಲ್ಮನವಿ ಹೋಗಿದ್ದಾರೆ, ಅವರಿಗೆ ಜಾಮೀನೂ ದೊರೆತಿದೆ. ಮೇಲಿನ ಕೋರ್ಟ್‌ಗಳಲ್ಲಿ ಗೆಲುವಾಗಲೂಬಹುದು; ಆದರೆ ಇದು ಸೃಷ್ಟಿಸಿರುವ ಕೋಲಾಹಲ ಮಾತ್ರ ಸುಳ್ಳಾಗುವುದಿಲ್ಲ.
ರಾಹುಲ್ ಅವರ ಈ ಮಾತಿನಿಂದ ನೊಂದುಕೊಂಡಿರುವ ಬಿಜೆಪಿ ನಾಯಕ ಪೂರ್ಣೇಶ್ ಮೋದಿ ಅವರು ಸೂರತ್ ಕೋರ್ಟ್ ಮೊರೆ ಹೋಗಿದ್ದರು. ಸದ್ಯಕ್ಕೆ ಅವರಿಗೆ ಗೆಲುವಾಗಿದೆ. ಮೋದಿ ಎಂಬ ಹೆಸರು ಇಂದು ಭಾರತದ ರಾಜಕೀಯದಲ್ಲಿ ಹೈ ಪ್ರೊಫೈಲ್‌ನಲ್ಲಿದೆ. ಹೀಗಾಗಿ ಅದರತ್ತ ಎಲ್ಲರ ಗಮನ.
ಬಿಜೆಪಿಯಲ್ಲಿ ನರೇಂದ್ರ ಮೋದಿ ಅವರಂತೆಯೇ ಸುಶೀಲ್ ಮೋದಿ, ಪೂರ್ಣೇಶ್ ಮೋದಿ ಮುಂತಾದವರು ಇದ್ದಾರೆ. ರಾಹುಲ್ ಗಾಂಧಿ ಉಲ್ಲೇಖಿಸಿರುವಂತೆ ನೀರವ್ ಮೋದಿ, ಲಲಿತ್ ಮೋದಿ ಮುಂತಾದ ಆರ್ಥಿಕ ಅಪರಾಧಿಗಳೂ ಇದ್ದಾರೆ. ನಿಜಕ್ಕೂ ಈ ʼಮೋದಿʼ ಎಂಬ ಸರ್‌ನೇಮ್ ಯಾರದು? ಯಾರಿವರು ಮೋದಿ?
ತೈಲ ತೆಗೆಯುವ ವೃತ್ತಿ
ಪಶ್ಚಿಮ ಭಾರತದಲ್ಲಿ ಮೋದಿ ಎಂಬ ಸರ್‌ನೇಮ್ ವ್ಯಾಪಕವಾಗಿದೆ. ಇದು ಒಂದೇ ಜಾತಿಗೆ ಸೀಮಿತವಾಗಿಲ್ಲ. ಮೂಲತಃ ಇದು ʼಮೋಧ್ ಗಾಂಚಿʼ ಅಥವಾ ʼತೇಲ್ ಗಾಂಚಿʼ ಎಂಬ ಸಮುದಾಯಕ್ಕೆ ಸೇರಿದೆ. ಇವರು ಹಿಂದೆ ಸಾಮಾನ್ಯವಾಗಿ ಗಾಣದ ಮೂಲಕ ತೈಲ ತೆಗೆಯುವ (ಗಾಣಿಗರು) ವೃತ್ತಿ ನಡೆಸುತ್ತಿದ್ದರು. ಇದಕ್ಕೆ ಸಂಬಂಧಿಸಿದ ವ್ಯಾಪಾರವನ್ನೂ ಮಾಡುತ್ತಿದ್ದರು. ಇವರು ಗುಜರಾತ್, ಮಹಾರಾಷ್ಟ್ರ, ರಾಜಸ್ಥಾನಗಳಲ್ಲಿ ಹಂಚಿಹೋಗಿದ್ದಾರೆ. ಇವರಲ್ಲಿ ಹಲವರು ಮೋದಿ ಎಂಬ ಸರ್‌ನೇಮ್ ಇಟ್ಟುಕೊಳ್ಳುತ್ತಾರೆ.
ಈ ಮೋಧ್ ಗಾಂಚಿ ಸಮುದಾಯ ಮಧ್ಯ ಹಾಗೂ ಉತ್ತರ ಭಾರತದಲ್ಲಿ ಹೆಚ್ಚಾಗಿ ಇರುವ ಬನಿಯಾ ಸಮುದಾಯದ ಜೊತೆ ಸಮಾನವಾಗಿದೆ. ಈ ಸಮುದಾಯದಲ್ಲೂ ಮೋದಿ ಸರ್‌ನೇಮ್‌ನವರಿದ್ದಾರೆ. ವಿಚಿತ್ರ ಎಂದರೆ ಇಂದು ಗುಜರಾತ್‌ನಲ್ಲಿ ಈ ʼಮೋದಿʼ ಎಂಬ ಸರ್‌ನೇಮ್‌ನ ಹಿಂದೂಗಳೂ ಇದ್ದಾರೆ; ಮುಸ್ಲಿಮರೂ ಇದ್ದಾರೆ. ಇವರಲ್ಲಿ ಹೆಚ್ಚಿನವರು ವ್ಯಾಪಾರವನ್ನು ಅವಲಂಬಿಸಿದ್ದಾರೆ. ದಿನಸಿ ಅಂಗಡಿ, ಟೀ ಶಾಪ್, ತೈಲದಂಗಡಿಗಳನ್ನು ನಡೆಸುತ್ತಾರೆ.
ಈ ಮೋಧ್ ಗಾಂಚಿ ಸಮುದಾಯ, ವೈಶ್ಯ ಸಮುದಾಯದ ಒಂದು ಉಪವಿಭಾಗವಾಗಿದೆ. ವೈಶ್ಯ ಸಮುದಾಯ ಜನರಲ್ ಕೆಟಗರಿಗೆ ಸೇರಿದೆ. ಗುಜರಾತ್‌ನಲ್ಲಿ ಮೋಧ್ ಗಾಂಚಿಗಳನ್ನು ಹಿಂದುಳಿದವರೆಂದು ಕಾಣುತ್ತಿರಲಿಲ್ಲ. 1994ರ ಜುಲೈಯಲ್ಲಿ ರಾಜ್ಯ ಸಮಾಜ ಕಲ್ಯಾಣ ಇಲಾಖೆ ಇವರನ್ನು ಒಬಿಸಿ ಪಟ್ಟಿಗೆ ಸೇರಿಸಿತು. ಅಂದಿನಿಂದ ಇವರು ಹಿಂದುಳಿದ ಸಮುದಾಯದ ವರ್ಗದಲ್ಲಿದ್ದಾರೆ.
ಅಂಬಾನಿಗಳು, ಜಿಂದಾಲ್‌ಗಳು ಹಾಗೂ ಮಹಾತ್ಮ ಗಾಂಧಿ ಕೂಡ ಇದೇ ಬನಿಯಾ ಕೆಟಗರಿಗೆ ಸೇರುತ್ತಾರೆ.
ಮೋಧೇಶ್ವರಿ ದೇವಿ
ವರ ಜತೆಗೆ, ರಾಜ್ಯದ ಜನಪ್ರಿಯ ದೇವತೆ ʼಮೋಧೇಶ್ವರಿ ದೇವಿʼಯನ್ನು ಪೂಜಿಸುವ ಸಮುದಾಯಗಳು ಕೂಡ ʼಮೋಧ್ʼ ಎಂಬ ಸರ್‌ನೇಮ್ ಹೊಂದಿವೆ. ಗುಜರಾತ್‌ನ ಮೊಧೇರಾದಲ್ಲಿ ʼಮೋಧೇಶ್ವರಿʼ ದೇವಾಲಯವಿದೆ. ಈಕೆ ಪಾರ್ವತಿ ದೇವಿಯ ಅವತಾರವಾಗಿದ್ದು, ರಾಕ್ಷಸನನ್ನು ವಧಿಸಲು ತಾಳಿದ ಅವತಾರ ಎಂದು ಕ್ಷೇತ್ರಪುರಾಣವಿದೆ.
2014ರಲ್ಲೂ ಈ ಸಮುದಾಯ ಸುದ್ದಿಗೆ ಬಂದಿತ್ತು. ಅದೂ ಮೋದಿಯವರಿಂದಲೇ. ಆ ವರ್ಷ ನರೇಂದ್ರ ಮೋದಿ ಅವರು ಚುನಾವಣೆ ಆಯೋಗಕ್ಕೆ ಸಲ್ಲಿಸಿದ ಅಫಿಡವಿಟ್‌ನಲ್ಲಿ ತಾವು ಒಬಿಸಿ ಸಮುದಾಯಕ್ಕೆ ಸೇರಿದವರು ಎಂದು ಮೋದಿ ಘೋಷಿಸಿಕೊಂಡಿದ್ದರು. ಇದು ನಿಜವೂ ಆಗಿತ್ತು. ಆದರೆ ಪ್ರತಿಪಕ್ಷಗಳು ʼಮೋದಿ ಫೇಕ್ ಒಬಿಸಿʼ ಎಂದು ಟೀಕಿಸಿದ್ದವು. ʼʼಮೋದಿ ವೈಶ್ಯರ ಒಂದು ಶ್ರೀಮಂತ ಉಪಪಂಗಡಕ್ಕೆ ಸೇರಿದವರು. ಮೋಧ ಗಾಂಚಿ ಮುಸ್ಲಿಮರು ಬಡವರು, ಆದರೆ ಹಿಂದೂ ಮೋಧ್ ಗಾಂಚಿಗಳು ಅವರಷ್ಟು ಬಡವರಲ್ಲʼʼ ಎಂದು ಕಾಂಗ್ರೆಸ್ ನಾಯಕ ಶಕ್ತಿಸಿಂಹ ಗೋಹಿಲ್ ಎಂಬವರು ಟೀಕಿಸಿದ್ದರು.
1953-55ರ ಅವಧಿಯಲ್ಲಿ ಕಾರ್ಯಾಚರಿಸಿದ, ಮೊತ್ತಮೊದಲ ಹಿಂದುಳಿದ ಸಮುದಾಯಗಳ ಕೇಂದ್ರ ಆಯೋಗ (ಕಾಕಾ ಕಾಲೇಲ್ಕರ್) ಈ ಸಮುದಾಯವನ್ನು ಹಿಂದುಳಿದ ಸಮುದಾಯಗಳ ಪಟ್ಟಿಯಲ್ಲಿ ಸೇರಿಸಿತ್ತು. ಆಗ ಗುಜರಾತ್ ರಾಜ್ಯ ಸೌರಾಷ್ಟ್ರ, ಕಛ್, ಬಾಂಬೇಗಳಲ್ಲಿ ಹಂಚಿಹೋಗಿತ್ತು. ಈ ಪಟ್ಟಿಯಲ್ಲಿ ಪಶ್ಚಿಮ ಭಾರತದಲ್ಲಿರುವ ಗಾಂಚಿ, ಗಾನಿಕ, ತೇಲಿ, ಘಾಂಚ ಮುಂತಾದ ಸಮುದಾಯಗಳಿದ್ದವು.
ಇದನ್ನೂ ಓದಿ: Rahul Gandhi: ‘ಮೋದಿ ಉಪನಾಮ’ ಒಂದೇ ಅಲ್ಲ, ಗೌರಿ ಲಂಕೇಶ್ ಕೇಸ್ ಸೇರಿ ರಾಹುಲ್ ವಿರುದ್ಧ ದಾಖಲಾದ ಪ್ರಕರಣ ಯಾವವು?
ಆದರೆ 1993ರಲ್ಲಿ ಕೇಂದ್ರ ಸರ್ಕಾರ ಪ್ರಕಟಿಸಿದ ಹಿಂದುಳಿದ ಸಮುದಾಯಗಳ 27% ಮೀಸಲು ಪಟ್ಟಿಯಲ್ಲಿ ಗಾಂಚಿ ಮುಸ್ಲಿಮರಿದ್ದರು; ಹಿಂದೂಗಳಾಗಲೀ ಮೋಧ್ ಗಾಂಚಿಗಳಾಗಲೀ ಇರಲಿಲ್ಲ. ಈ ನಿರ್ಣಯವನ್ನು ಸುಪ್ರೀಂ ಕೋರ್ಟ್ ಕೂಡ ಎತ್ತಿ ಹಿಡಿಯಿತು.
ಯಾರೀ ಪೂರ್ಣೇಶ್ ಮೋದಿ?
ರಾಹುಲ್ ಗಾಂಧಿ ಅವರ ಮಾತಿನ ವಿರುದ್ಧ ಕೋರ್ಟಿಗೆ ಹೋದವರು ಗುಜರಾತ್‌ನ ಬಿಜೆಪಿ ಶಾಸಕ ಪೂರ್ಣೇಶ್ ಮೋದಿ. ಕರ್ನಾಟಕದಲ್ಲಿ 2019ರಲ್ಲಿ ರಾಹುಲ್ ಮಾಡಿದ ಭಾಷಣವನ್ನು ಇಟ್ಟುಕೊಂಡು ಅವರು ಸೂರತ್ ಕೋರ್ಟ್‌ನಲ್ಲಿ ಕ್ರಿಮಿನಲ್ ಪ್ರಕರಣ ದಾಖಲಿಸಿದ್ದರು.
ಅವರು ಹೇಳುವಂತೆ, ಮೊದಲು ಪೂರ್ಣೇಶ್ ಸರ್‌ನೇಮ್ ʼಭೂತ್‌ವಾಲಾʼ ಎಂಬುದಾಗಿತ್ತು. ನಂತರ ಅದನ್ನವರು ʼಮೋದಿʼ ಎಂದು ಬದಲಾಯಿಸಿಕೊಂಡಿದ್ದಾರೆ. ಭಾರತದಾದ್ಯಂತ ತೇಲಿ ಸಮುದಾಯದ ಸುಮಾರು 13 ಕೋಟಿ ಜನ ಇದ್ದಾರೆ. ರಾಜಸ್ಥಾನದಲ್ಲಿ ಇವರನ್ನು ಗಾಂಚಿ ಎಂದು, ಗುಜರಾತಿನಲ್ಲಿ ಮೋದಿ ಎಂದು ಕರೆಯಲಾಗುತ್ತದೆ. ಅವರವರು ನಿರ್ವಹಿಸುವ ವೃತ್ತಿಗನುಗುಣವಾಗಿ ಅವರ ಸರ್‌ನೇಮ್ ಇದೆ. ಲಾಪ್ಸಿವಾಲಾ, ದಾಲ್‌ವಾಲಾ, ಚೋಂಕ್‌ವಾಲಾ, ಕಢಿವಾಲಾ ಇತ್ಯಾದಿಗಳಿವೆ. ಪೂರ್ಣೇಶ್ ಪೂರ್ವಿಕರು ಸೂರತ್‌ನ ʼಭೂತ್ ಸೆರಿʼ ಎಂಬ ಮೊಹಲ್ಲಾದಲ್ಲಿ ಇದ್ದ ಕಾರಣ ಇವರು ʼಭೂತ್‌ವಾಲಾʼಗಳಾದರು. 1998ರಲ್ಲಿ ಅವರು ತಮ್ಮ ಸರ್‌ನೇಮ್ ʼಮೋದಿʼ ಎಂದು ಬದಲಾಯಿಸಿಕೊಂಡರು.
ತೈಲ ತೆಗೆಯುವ ಹಾಗೂ ವ್ಯಾಪಾರಿ ವೃತ್ತಿಯನ್ನು ಅಳವಡಿಸಿಕೊಳ್ಳುವ ಮುನ್ನ ಈ ಸಮುದಾಯದವರು ಅಲೆಮಾರಿಗಳಾಗಿದ್ದರು, ಪಶುಸಾಕಣೆ ಮಾಡುತ್ತಿದ್ದರು ಎಂದು ಹೇಳಲಾಗುತ್ತದೆ.
ಇದನ್ನೂ ಓದಿ: Rahul Gandhi: ಸರ್ಕಾರಿ ಬಂಗ್ಲೆ ತೆರವು ಮಾಡಲು ರಾಹುಲ್ ಗಾಂಧಿಗೆ ನೋಟಿಸ್
EXPLAINER
Anji bridge : ಭಾರತದ ಮೊದಲ ಕೇಬಲ್ ಆಧರಿತ ರೈಲ್ವೆ ಸೇತುವೆ ಲೋಕಾರ್ಪಣೆಗೆ ರೆಡಿ, ಇದು ತೂಗು ಸೇತುವೆ ಅಲ್ಲ, ಹಾಗಾದರೆ ಏನು?
ಜಮ್ಮು ಕಾಶ್ಮೀರದಲ್ಲಿ ಅಂಜಿ ನದಿಗೆ ಅಡ್ಡಲಾಗಿ ನಿರ್ಮಿಸಿರುವ ಕೇಬಲ್ ಆಧರಿತ ರೈಲ್ವೆ ಸೇತುವೆಯನ್ನು ರೈಲ್ವೆಯ ಎಂಜಿನಿಯರಿಂಗ್ ಕೌಶಲಕ್ಕೆ ಸಾಕ್ಷಿ ಎಂದೇ ಬಣ್ಣಿಸಲಾಗಿದೆ. ಅಂತಿಮ ಘಟ್ಟದಲ್ಲಿರುವ ಈ ಸೇತುವೆಯ ವಿಶೇಷತೆ ಮತ್ತು (Anji bridge) ಪ್ರಯೋಜನವೇನು? ಇಲ್ಲಿದೆ ವಿವರ.
ಭಾರತದ ಮೊಟ್ಟ ಮೊದಲ ಕೇಬಲ್ ಆಧರಿತ ರೈಲ್ವೆ ಸೇತುವೆ ( cable-styled’ bridge) ನಿರ್ಮಾಣದ ಅಂತಿಮ ಘಟ್ಟದಲ್ಲಿದೆ. (Anji bridge) 2023ರ ಮೇ ವೇಳೆಗೆ ಲೋಕಾರ್ಪಣೆಯಾಗುವ ನಿರೀಕ್ಷೆ ಇದೆ. ಜಮ್ಮು ಕಾಶ್ಮೀರದಲ್ಲಿ ಅಂಜಿ ನದಿಗೆ ಅಡ್ಡಲಾಗಿ ನಿರ್ಮಿಸಿರುವ ಈ ಕೇಬಲ್ ಆಧರಿತ ರೈಲ್ವೆ ಸೇತುವೆ ದೇಶದ ಎಂಜಿನಿಯರಿಂಗ್ ಕೌಶಲಕ್ಕೆ ಸಾಕ್ಷಿ ಎಂದೇ ಬಣ್ಣಿಸಲಾಗುತ್ತಿದೆ. ಅಂಜಿ ಬ್ರಿಡ್ಜ್ ಎಂದೇ ಇದು ಜನಪ್ರಿಯವಾಗುತ್ತಿದೆ.
193 ಮೀಟರ್ ಎತ್ತರದ ಸೇತುವೆಯ ವಿಶೇಷತೆ ಹಲವು
ಈ ಸೇತುವೆಯ ಮೇಲೆ ರೈಲನ್ನು ಗಂಟೆಗೆ 100 ಕಿ.ಮೀ ವೇಗದಲ್ಲಿ ಚಲಾಯಿಸಬಹುದು. ಹೀಗಿದ್ದರೂ, ಗಾಳಿಯ ವೇಗ ಗಂಟೆಗೆ 90 ಕಿ.ಮೀಗಿಂತ ಹೆಚ್ಚು ಇದ್ದರೆ ರೈಲು ಸಂಚಾರವನ್ನು ಸ್ಥಗಿತಗೊಳಿಸಲಾಗುವುದು ಎಂದು ಅಧಿಕಾರಿಗಳು ತಿಳಿಸಿದ್ದಾರೆ. ಆದರೆ ಗಂಟೆಗೆ 213 ಕಿ.ಮೀ ವೇಗದಲ್ಲಿ ಗಾಳಿ ಬೀಸಿದರೂ ಸೇತುವೆ ತಡೆದುಕೊಳ್ಳಬಲ್ಲುದು.
ಜಮ್ಮುವಿನಿಂದ 80 ಕಿ.ಮೀ ದೂರದಲ್ಲಿ ಇರುವ ಈ ಸೇತುವೆಯು 473 ಮೀಟರ್ ಉದ್ದವಿದೆ. ಉಧಾಮ್‌ಪುರ್-ಶ್ರೀನಗರ-ಬಾರಾಮುಲ್ಲಾ ರೈಲ್ವೆ ಲಿಂಕ್ ಯೋಜನೆಯಲ್ಲಿ ( Udhampur -Srinagar-Baramulla-Rail Link-USBRL) ಕಾತ್ರಾ-ಬನಿಹಾಲ್ ನಡುವೆ 2 ಮತ್ತು 3ನೇ ಸುರಂಗವನ್ನು ಈ ಸೇತುವೆ ಜೋಡಿಸುತ್ತದೆ. ಕಾತ್ರಾದಿಂದ ಬನಿಹಾಲ್ ನಡುವೆ 111 ಕಿ.ಮೀ ರೈಲ್ವೆ ಮಾರ್ಗ ನಿರ್ಮಾಣದ ಕಾಮಗಾರಿ ನಡೆಯುತ್ತಿದೆ. ಇದರಿಂದಾಗಿ ಬನಿಹಾಲ್ ಮತ್ತು ಬಾರಾಮುಲ್ಲಾಗೆ ರೈಲು ಸಂಪರ್ಕ ಸಿಗಲಿದೆ. ಒಂದು ದೈತ್ಯ ಸ್ತಂಭವನ್ನು ಈ ಸೇತುವೆ ಆಧರಿಸಿದ್ದು, ಈಗಾಗಲೇ ತಿಳಿಸಿರುವಂತೆ ಎರಡು ಸುರಂಗಗಳನ್ನು ಜೋಡಿಸುತ್ತದೆ. ಕಾತ್ರಾ ಕಡೆಯ ಸುರಂಗ ಮಾರ್ಗ 5 ಕಿ.ಮೀ ಉದ್ದ ಹಾಗೂ ಕಾಶ್ಮೀರ ಕಡೆಯ ಸುರಂಗ 3 ಕಿ.ಮೀ ಉದ್ದವನ್ನು ಹೊಂದಿದೆ. ಎರಡೂ ಸುರಂಗಗಳಲ್ಲಿ ರೈಲ್ವೆ ಹಳಿಯನ್ನು ನಿರ್ಮಿಸಲಾಗಿದೆ. 2017ರಲ್ಲಿ ಈ ಕೇಬಲ್ ಸೇತುವೆಯ ಕಾಮಗಾರಿ ಆರಂಭವಾಗಿತ್ತು. ಹೀಗಿದ್ದರೂ, ಮೇನ್ ಕೇಬಲ್ ಅಳವಡಿಕೆ 2018ರಲ್ಲಿ ಶುರುವಾಗಿತ್ತು. ಭೂಕಂಪನದ ಸಾಧ್ಯತೆ ಬಗ್ಗೆಯೂ ರೂರ್ಕೆ ಐಐಟಿಯ ತಂಡ ಇಲ್ಲಿ ಅಧ್ಯಯನ ನಡೆಸಿದೆ.
ಯೋಜನೆಯ ಲಾಭವೇನು?
ಉಧಾಮ್‌ಪುರ್-ಶ್ರೀನಗರ-ಬಾರಾಮುಲ್ಲಾ ರೈಲ್ವೆ ಲಿಂಕ್ ಯೋಜನೆಯಿಂದ ಕಾಶ್ಮೀರ ಕಣಿವೆಗೂ ರಾಷ್ಟ್ರೀಯ ರೈಲ್ವೆ ಜಾಲಕ್ಕೂ ಸಂಪರ್ಕ ಸಿಗಲಿದೆ. ಈ ರೈಲ್ವೆ ಸೇತುವೆಯ ಆಯುಷ್ಯ 120 ವರ್ಷ ಇರಬಹುದು ಎಂದು ಅಂದಾಜಿಸಲಾಗಿದೆ. 40 ಕೆ.ಜಿ ಸ್ಫೋಟಗಳನ್ನು ಸೇತುವೆ ಮೇಲೆ ಸ್ಫೋಟಿಸಿದರೂ, ಸೇತುವೆಗೆ ಹಾನಿಯಾಗುವುದಿಲ್ಲ. ಹಲವಾರು ಕಡೆಗಳಲ್ಲಿ ಸೆನ್ಸರ್‌ಗಳನ್ನು ಅಳವಡಿಸಲಾಗಿದೆ. ತೀವ್ರ ನಿಗಾ ವ್ಯವಸ್ಥೆಯನ್ನು ಹೊಂದಿದೆ.
ತೂಗು ಸೇತುವೆ ಅಲ್ಲ, ಹಾಗಾದರೆ ಏನು?
ಮೇಲ್ನೋಟಕ್ಕೆ ಈ ಕೇಬಲ್ ಆಧರಿತ ಸೇತುವೆಯು ತೂಗು ಸೇತುವೆಯಂತೆ ಕಾಣುತ್ತದೆ. ಏಕೆಂದರೆ ತೂಗಾಡುವ ಲೇನ್‌ಗಳು, ಗೋಪುರವು ತೂಗುಸೇತುವೆಯನ್ನು ಹೋಲುತ್ತವೆ. ಆದರೆ ಅದಕ್ಕೂ ಇದಕ್ಕೂ ವ್ಯತ್ಯಾಸ ಇದೆ. ಕೇಬಲ್ ಆಧರಿತ ಸೇತುವೆಗೆ ತೂಗು ಸೇತುವೆಗೆ ಬೇಕಾಗುವಂತೆ ಎರಡು ಗೋಪುರಗಳ ಅವಶ್ಯಕತೆ ಇಲ್ಲ. ಬದಲಿಗೆ ಒಂದೇ ಸ್ತಂಭವನ್ನು ಆಧರಿಸಿ ಇಕ್ಕೆಲಗಳಲ್ಲೂ ಕೇಬಲ್‌ಗಳನ್ನು ವಿಸ್ತರಿಸಿ ಸೇತುವೆಯನ್ನು ನಿರ್ಮಿಸಲಾಗುತ್ತದೆ. ಹೀಗಾಗಿ ಎರಡೂ ತುದಿಗಳಲ್ಲಿ ಗೋಪುರಗಳ ಅಗತ್ಯ ಇದಕ್ಕಿರುವುದಿಲ್ಲ.
ಸೇತುವೆಗೆ ಕಡಿಮೆ ಉಕ್ಕು ಸಾಕು:
ಕೇಬಲ್ ಆಧರಿತ ಸೇತುವೆಯು ಸಂಕೋಚನದ ಒತ್ತಡವನ್ನು ಹೀರಿಕೊಳ್ಳುವ ಮತ್ತು ತಾಳಿಕೊಳ್ಳುವ ಸಾಮರ್ಥ್ಯವನ್ನು ಹೊಂದಿರುತ್ತದೆ. ಸೇತುವೆಗೆ ಹಲವಾರು ಕಡೆಗಳಲ್ಲಿ ಕಟ್ಟಿದ ಕೇಬಲ್‌ಗಳು ಗೋಪುರದಲ್ಲಿ ಒಂದು ಪಾಯಿಂಟ್‌ನಲ್ಲಿ ಸಂಧಿಸುತ್ತವೆ. ಯುರೋಪ್‌ನಲ್ಲಿ ಎರಡನೇ ಜಾಗತಿಕ ಯುದ್ಧದ ಸಂದರ್ಭ ಕೇಬಲ್ ಆಧರಿತ ಸೇತುವೆಗಳನ್ನು ನಿರ್ಮಿಸಲಾಗಿತ್ತು. ಆದರೆ 16ನೇ ಶತಮಾನದ ಹಿಂದೆಯೇ ಐರೋಪ್ಯ ಸಂಶೋಧಕ ಫೌಸ್ಟ್ ವ್ರಾನ್‌ಸಿಸ್ ಇಂಥ ಎಂಜಿನಿಯರಿಂಗ್ ಅನ್ನು ಸಂಶೋಧಿಸಿದ್ದ. ತೂಗು ಸೇತುವೆಯ ಎಲ್ಲ ಪ್ರಯೋಜನಗಳನ್ನೂ ನೀಡುವ ಕೇಬಲ್ ಆಧರಿತ ಸೇತುವೆಗಳು ಈಗ ಜನಪ್ರಿಯವಾಗಿವೆ. 152 ಮೀಟರ್‌ನಿಂದ 853 ಮೀಟರ್ ಉದ್ದದ ತನಕ ಇಂಥ ಸೇತುವೆಗಳು ನಿರ್ಮಾಣವಾಗಿವೆ. ಇವುಗಳಿಗೆ ಉಕ್ಕಿನ ತಂತಿಗಳು ಕಡಿಮೆ ಸಾಕು. ವೇಗವಾಗಿ ನಿರ್ಮಿಸಬಹುದು. ಕಾಂಕ್ರಿಟ್ ರಚನೆಗಳನ್ನು ಮೊದಲೇ ತಯಾರಿಸಿ ಅಳವಡಿಸಬಹುದು. ಹೀಗೆ ಹಲವು ಪ್ರಯೋಜನಗಳಿವೆ.
EXPLAINER
Yogi Adityanath: ನಿರಂತರ 6 ವರ್ಷ ಸಿಎಂ, ಯೋಗಿ ಹೊಸ ದಾಖಲೆ; ಬುಲ್ಡೋಜರ್ ಬಾಬಾನಿಂದ ವಿಕಾಸ ಪುರುಷನವರೆಗೆ…
ಯೋಗಿ ಆದಿತ್ಯನಾಥ್ ಅವರು ತಮ್ಮ ಮೊದಲನೇ ಅವಧಿಯಲ್ಲಿ ನಡೆಸಿದ ಆಡಳಿತವೇ ದೇಶದಾದ್ಯಂತ ಜನಪ್ರಿಯತೆ ಗಳಿಸಿದೆ. ‘ಕಾನೂನು ಸುವ್ಯವಸ್ಥೆ ಕಾಪಾಡಲು, ಸಮಾಜ-ದೇಶ ವಿರೋಧಿ ಕೃತ್ಯಗಳನ್ನು ಹತ್ತಿಕ್ಕಲು ಅವರು ಜಾರಿಗೊಳಿಸಿದ ಕೆಲವು ಕ್ರಮಗಳನ್ನು ಬೇರೆ ರಾಜ್ಯಗಳ ಜನರೂ ಹೊಗಳುತ್ತಿದ್ದಾರೆ. ‘ಯೋಗಿ ಮಾದರಿ’ ಆಡಳಿತ ಎಂದೇ ಫೇಮಸ್ ಆಗಿದೆ.
ಉತ್ತರ ಪ್ರದೇಶದಲ್ಲಿ ಸತತ 2ನೇ ಬಾರಿಗೆ ಮುಖ್ಯಮಂತ್ರಿ ಗದ್ದುಗೆಗೆ ಏರುವ ಮೂಲಕ ದಾಖಲೆ ಸೃಷ್ಟಿಸಿರುವ ಯೋಗಿ ಆದಿತ್ಯನಾಥ್ (Yogi Adityanath) ಕಳೆದ ವರ್ಷ ಇದೇ ದಿನ, ಅಂದರೆ 2022ನೇ ಇಸ್ವಿಯ ಮಾರ್ಚ್ 25ರಂದು 2ನೇ ಬಾರಿಗೆ ರಾಜ್ಯದ ಮುಖ್ಯಮಂತ್ರಿಯಾಗಿ ಪ್ರಮಾಣ ವಚನ ಸ್ವೀಕಾರ ಮಾಡಿದರು. ಅಲ್ಲಿನ ಅಟಲ್ ಬಿಹಾರಿ ವಾಜಪೇಯಿ ಇಕಾನಾ ಸ್ಟೇಡಿಯಂನಲ್ಲಿ ನಡೆದಿದ್ದ ಅದ್ಧೂರಿ ಸಮಾರಂಭದಲ್ಲಿ ಪ್ರಧಾನಿ ಮೋದಿ, ಅಮಿತ್ ಶಾ, ಜೆಪಿ ನಡ್ಡಾ ಮತ್ತಿತರ ಗಣ್ಯರೂ ಪಾಲ್ಗೊಂಡಿದ್ದರು. ಹೀಗೆ ಉತ್ತರ ಪ್ರದೇಶದಲ್ಲಿ ಎರಡನೇ ಅವಧಿಗೆ ಸಿಎಂ ಆಗಿ ಇಂದಿಗೆ (ಮಾರ್ಚ್ 25) ಅವರು ಒಂದು ವರ್ಷ ಪೂರೈಸಿದ್ದಾರೆ. ಎರಡನೇ ಅವಧಿಯ ಯೋಗಿ ಆಡಳಿತದ ವಾರ್ಷಿಕೋತ್ಸವವನ್ನು ಅದ್ಧೂರಿಯಾಗಿ ಆಚರಿಸಲು ಉತ್ತರ ಪ್ರದೇಶ ಸರ್ಕಾರ ಸಜ್ಜಾಗಿದೆ.
ಯೋಗಿ ಆದಿತ್ಯನಾಥ್ ಅವರು ತಮ್ಮ ಮೊದಲನೇ ಅವಧಿಯಲ್ಲಿ ನಡೆಸಿದ ಆಡಳಿತವೇ ದೇಶದಾದ್ಯಂತ ಜನಪ್ರಿಯತೆ ಗಳಿಸಿದೆ. ‘ಕಾನೂನು ಸುವ್ಯವಸ್ಥೆ ಕಾಪಾಡಲು, ಸಮಾಜ-ದೇಶ ವಿರೋಧಿ ಕೃತ್ಯಗಳನ್ನು ಹತ್ತಿಕ್ಕಲು ಅವರು ಜಾರಿಗೊಳಿಸಿದ ಕೆಲವು ಕ್ರಮಗಳನ್ನು ಬೇರೆ ರಾಜ್ಯಗಳ ಜನರೂ ಹೊಗಳುತ್ತಿದ್ದಾರೆ. ‘ಯೋಗಿ ಮಾದರಿ’ ಆಡಳಿತ ಎಂದೇ ಫೇಮಸ್ ಆಗಿದೆ. ಕರ್ನಾಟಕ ಮುಖ್ಯಮಂತ್ರಿ ಬಸವರಾಜ ಬೊಮ್ಮಾಯಿಯೂ ಈ ಹಿಂದೆ ಯೋಗಿ ಮಾದರಿ ಸರ್ಕಾರದ ಪ್ರಸ್ತಾಪ ಮಾಡಿದ್ದರು. ಕರ್ನಾಟಕದಲ್ಲೂ ಅದೇ ತರದ ಆಡಳಿತ ಜಾರಿ ಮಾಡಬೇಕಾಗುತ್ತದೆ ಎಂದು ಹೇಳಿದ್ದರು. ಹೀಗೆ ಮೊದಲನೇ ಅವಧಿಯಲ್ಲಿ ಕಾನೂನು-ಸುವ್ಯವಸ್ಥೆ, ಕ್ರೈಂಗಳ ಹತ್ತಿಕ್ಕಲು ಹೆಚ್ಚಿನ ಗಮನ ಹರಿಸಿದ್ದ ಯೋಗಿ ಆದಿತ್ಯನಾಥ್, ಎರಡನೇ ಅವಧಿಯಲ್ಲಿ ‘ಹೂಡಿಕೆ’ ‘ಪ್ರವಾಸೋದ್ಯಮ ಅಭಿವೃದ್ಧಿ’ ಮತ್ತು ಇತರ ಕ್ಷೇತ್ರಗಳಿಗೆ ಆದ್ಯತೆ ನೀಡುತ್ತಿದ್ದಾರೆ. ಇದೀಗ ಒಂದು ವರ್ಷ ಪೂರ್ಣಗೊಂಡ ಬೆನ್ನಲ್ಲೇ ಸರ್ಕಾರ, ಈ ಒಂದು ವರ್ಷದಲ್ಲಿ ಏನೆಲ್ಲ ಆಯಿತು ಎಂಬುದನ್ನು ಹೈಲೈಟ್ ಮಾಡಿ ತೋರಿಸಲು ಮುಂದಾಗಿದೆ.
ಯೋಗಿ ಆದಿತ್ಯನಾಥ್ರನ್ನು ನಾಯಕ ಎಂದು ಬಿಂಬಿಸಲು ಯೋಜನೆ
ಉತ್ತರ ಪ್ರದೇಶದಲ್ಲಿ ಬುಲ್ಡೋಜರ್ ಸದಾ ಸಿದ್ಧವಾಗಿರುತ್ತದೆ. ಯಾವುದೇ ಕೇಸ್ನಲ್ಲಿ ಅಪರಾಧಿ ಎನ್ನಿಸಿದವರ ಮನೆ, ಆಸ್ತಿ-ಪಾಸ್ತಿ ಧ್ವಂಸವಾಗುತ್ತದೆ. ಹೀಗಾಗಿ ಯೋಗಿ ಆದಿತ್ಯನಾಥ್ರನ್ನು ಇಷ್ಟುದಿನ ಇಡೀ ದೇಶ ಬುಲ್ಡೋಜರ್ ಬಾಬಾ, ಡೆಮೋಲಿಶನ್ ಮ್ಯಾನ್ ಎಂಬಿತ್ಯಾದಿ ಹೆಸರಲ್ಲೆಲ್ಲ ಕರೆಯುತ್ತಿದೆ ಮತ್ತು ಅವರನ್ನು ಜನರು ಹಾಗೇ ನೋಡುತ್ತಿದ್ದಾರೆ. ಆದರೆ ಇಷ್ಟುದಿನ ಅವರಿಗಿದ್ದ ಈ ಬುಲ್ಡೋಜರ್ ಬಾಬಾ ಇಮೇಜ್ನ್ನು ತೊಡೆದು ಹಾಕಿ, ಅವರನ್ನೊಬ್ಬ ‘ ಪ್ರಭಾವಿ ನಾಯಕ’ ಎಂದು ಬಿಂಬಿಸಲು ಸಿದ್ಧತೆ ನಡೆಯುತ್ತಿದೆ. ಯೋಗಿ ಅವರ ಅಭಿವೃದ್ಧಿ ಮಾದರಿಯು ‘ನಂಬಿಕೆಗೆ ಕೊಟ್ಟ ಗೌರವ’ ಎಂಬ ಅಜೆಂಡಾದಡಿ ಹೆಣೆಯಲ್ಪಟ್ಟಿದ್ದು ಎಂದು ಜನತೆಗೆ ತೋರಿಸುವ, ಈ ಮೂಲಕ ‘ನಿಮ್ಮ ನಂಬಿಕೆಯನ್ನು ಯೋಗಿ ಆದಿತ್ಯನಾಥ್ ಎಂದಿಗೂ ಹುಸಿ ಮಾಡುವುದಿಲ್ಲ, ಅಭಿವೃದ್ಧಿ ಕಾರ್ಯಕ್ಕೆ ಸದಾ ಬದ್ಧ’ ಎಂದು ಸಾರುವ ನಿಟ್ಟಿನಲ್ಲಿ ಯೋಜನೆಗಳನ್ನು ರೂಪಿಸಲಾಗುತ್ತಿದೆ.
ಅಯೋಧ್ಯೆ ಅಭಿವೃದ್ಧಿಯಲ್ಲಿ ಸಿಂಹಪಾಲು
ಅಯೋಧ್ಯೆಯಲ್ಲಿ ರಾಮಮಂದಿರ ನಿರ್ಮಾಣವಾಗುತ್ತಿದೆ. ಕಾನೂನು ತೊಡಕುಗಳೆಲ್ಲ ಮೀರಿ ಅಲ್ಲಿ ಶ್ರೀರಾಮನ ದೇಗುಲ ಚೆಂದವಾಗಿ ರೂಪುಗೊಳ್ಳುತ್ತಿದೆ. ಇದು ಕೇಂದ್ರ ಸರ್ಕಾರದ ವೈಯಕ್ತಿಕ ಆಸಕ್ತಿಯೂ ಹೌದು. ಆದರೆ ಅದರ ಅಭಿವೃದ್ಧಿಯಲ್ಲಿ ಸಿಂಹಪಾಲು ಯೋಗಿಯವರದ್ದು. 2024ರ ಲೋಕಸಭೆ ಚುನಾವಣೆಯೊಳಗೆ ರಾಮಮಂದಿರ ಭಕ್ತರ ಪ್ರವೇಶಕ್ಕೆ ಮುಕ್ತವಾಗಬೇಕು ಎಂಬುದು ಕೇಂದ್ರ ಮತ್ತು ಉತ್ತರ ಪ್ರದೇಶ ಸರ್ಕಾರಗಳ ಮುಖ್ಯ ಉದ್ದೇಶ. ಅದರಲ್ಲೂ ಯೋಗಿ ಆದಿತ್ಯನಾಥ್ ಅವರು ಇಡೀ ಅಯೋಧ್ಯೆಯನ್ನೇ ಸಂಪೂರ್ಣವಾಗಿ ಅಭಿವೃದ್ಧಿಗೊಳಿಸುತ್ತಿದ್ದಾರೆ. ಹೀಗಾಗಿ ಖುದ್ದಾಗಿ ತಾವೇ ನಿಂತು ಅಯೋಧ್ಯೆ ಅಭಿವೃದ್ಧಿ ಕಾರ್ಯಗಳನ್ನು ಪರಿಶೀಲನೆ ಮಾಡುತ್ತಿದ್ದಾರೆ. ಆಗಾಗ ಅಲ್ಲಿಗೆ ಭೇಟಿ ಕೊಡುತ್ತಿದ್ದಾರೆ. ಅಯೋಧ್ಯೆಯನ್ನು ಮಾದರಿ ಸೌರ ನಗರ ಎಂದು ರೂಪಿಸುವಲ್ಲಿಂದ ಹಿಡಿದು, ಅಲ್ಲಿನ ರಸ್ತೆ ಅಗಲೀಕರಣ, ಹೊಸ ಬಸ್ ಸ್ಟೇಶನ್, ಏರ್ಪೋರ್ಟ್ ನಿರ್ಮಾಣವೆಲ್ಲ ಕಾರ್ಯಸೂಚಿಯಲ್ಲಿ ಇದೆ. ಅವೆಲ್ಲವನ್ನೂ ನಿಗದಿತ ಸಮಯದೊಳಗೆ ಮುಗಿಸುವ ಧಾವಂತದಲ್ಲಿದ್ದಾರೆ ಯೋಗಿ ಆದಿತ್ಯನಾಥ್. ಅಯೋಧ್ಯೆ ಅಭಿವೃದ್ಧಿ ಹೇಗೆ ನಡೆಯುತ್ತಿದೆ ಎಂಬ ಬಗ್ಗೆಯೂ ದೇಶದ ಜನರಿಗೆ ತೋರಿಸುವ ಸಿದ್ಧತೆಯನ್ನು ಅಲ್ಲಿನ ಸರ್ಕಾರ ಮಾಡಿಕೊಂಡಿದೆ ಎನ್ನಲಾಗಿದೆ.
ಬರೀ ಅಯೋಧ್ಯೆಯಷ್ಟೇ ಅಲ್ಲ, ಇನ್ನಿತರ ಧಾರ್ಮಿಕ ಪ್ರದೇಶಗಳ ಅಭಿವೃದ್ಧಿಯನ್ನೂ ಉತ್ತರ ಪ್ರದೇಶ ಸರ್ಕಾರ ತನ್ನ ಎರಡನೇ ಅವಧಿ ಕಾರ್ಯಸೂಚಿಯಲ್ಲಿ ಸೇರಿಸಿಕೊಂಡಿದೆ. ಪ್ರಯಾಗ್ರಾಜ್ನಲ್ಲಿ 2025ರಲ್ಲಿ ನಡೆಯಲಿರುವ ಮಹಾಕುಂಭಮೇಳಕ್ಕೆ ಈಗಾಗಲೇ ಸಿದ್ಧತೆಯನ್ನು ಶುರು ಮಾಡಿಕೊಂಡಿದೆ. ಅದರೊಂದಿಗೆ ಸೀತಾಪುರದಲ್ಲಿ ನೈಮಿಶರಣ, ಯುಪಿ ಪಶ್ಚಿಮ ಭಾಗದಲ್ಲಿರುವ ಬ್ರಜ್, ಪೂರ್ವದಲ್ಲಿರುವ ವಿಂದ್ಯಾ ಮತ್ತು ಚಿತ್ರಕೂಟ ಧಾಮಗಳ ಅಭಿವೃದ್ಧಿಯತ್ತಲೂ ಗಮನ ಹರಿಸುತ್ತಿದೆ.
ಉತ್ತಮ ಪ್ರದೇಶದಿಂದ ನಿವೇಶ್ ಪ್ರದೇಶದತ್ತ
ಆಗಲೇ ಹೇಳಿದಂತೆ ಉತ್ತರ ಪ್ರದೇಶ ಸರ್ಕಾರ ಮೊದಲ ಅವಧಿಯಲ್ಲಿ ಕಾನೂನು ಸುವ್ಯವಸ್ಥೆ ಬಗ್ಗೆಯೇ ಹೆಚ್ಚಿನ ಗಮನಹರಿಸಿತ್ತು. ಉತ್ತರ ಪ್ರದೇಶವನ್ನು ಉತ್ತಮ ಪ್ರದೇಶವನ್ನಾಗಿ ರೂಪಿಸುವುದು ಮೊದಲ ಆದ್ಯತೆ ಎಂದು ಹೇಳಿತ್ತು. ಅದರಂತೆ ಮಾಡಿದೆ ಕೂಡ. ಈಗ ಎರಡನೇ ಅವಧಿಗೆ ಉತ್ತರ ಪ್ರದೇಶವನ್ನು ನಿವೇಶ್ ಪ್ರದೇಶ (ಹೂಡಿಕೆ ಪ್ರದೇಶ)ವನ್ನಾಗಿ ಬದಲಿಸುವತ್ತ ಗಮನ ಹರಿಸಿದೆ. ಉತ್ತರ ಪ್ರದೇಶದಲ್ಲಿ ಹೂಡಿಕೆಗೆ ಹೆಚ್ಚೆಚ್ಚು ಅವಕಾಶ ಕಲ್ಪಿಸುವ ನಿಟ್ಟಿನಲ್ಲಿ ಸರ್ಕಾರ ಯೋಜನೆ ರೂಪಿಸುತ್ತಿದೆ. ಇತ್ತೀಚೆಗೆ ಲಖನೌನಲ್ಲಿ ನಡೆದ ಜಾಗತಿಕ ಹೂಡಿಕೆದಾರರ ಶೃಂಗಸಭೆಯಲ್ಲಿ 35 ಲಕ್ಷ ಕೋಟಿ ರೂಪಾಯಿಗಳಷ್ಟು ಮೊತ್ತದ ಹೂಡಿಕೆ ಪ್ರಸ್ತಾವನೆಯನ್ನು ಸ್ವೀಕರಿಸಿದ್ದಾಗಿ ಯುಪಿ ಗವರ್ನ್ಮೆಂಟ್ ಹೇಳಿಕೊಂಡಿದೆ. ‘ಉತ್ತರ ಪ್ರದೇಶ, ರಾಷ್ಟ್ರರಾಜಧಾನಿ ಪ್ರದೇಶವನ್ನೂ ಮೀರಿ, ಬೇರೆ ಪ್ರದೇಶಗಳ ಹೂಡಿಕೆದಾರರನ್ನೂ ಸೆಳೆಯುವಲ್ಲಿ ನಾವು ಯಶಸ್ವಿಯಾಗುತ್ತಿದ್ದೇವೆ ಎಂದು ತಿಳಿಸಿದೆ. ಅದರೊಂದಿಗೆ ಸೆಪ್ಟೆಂಬರ್ ತಿಂಗಳಲ್ಲಿ ಐದು ದಿನಗಳ ಯುಪಿ ಅಂತಾರಾಷ್ಟ್ರೀಯ ವ್ಯಾಪಾರ -2023 (UP International Trade 2023) ಸಮಾವೇಶ ನಡೆಸಲೂ ಸಿದ್ಧತೆಗಳು ಪ್ರಾರಂಭವಾಗಿವೆ.
ಇದನ್ನೂ ಓದಿ: Best Chief Minister | ಈ ಬಾರಿಯೂ ಯೋಗಿ ಆದಿತ್ಯನಾಥ್ ದೇಶದ ಬೆಸ್ಟ್ ಸಿಎಂ, ನಂತರದ ಸ್ಥಾನ ಯಾರಿಗೆ?
ಒಟ್ಟಾರೆ ಈ ಎರಡನೇ ಅವಧಿಯಲ್ಲಿ ಕಾನೂನು ಸುವ್ಯವಸ್ಥೆ, ಕೃಷಿ ಉತ್ಪನ್ನ, ಸಾಮಾಜಿಕ ಭದ್ರತೆ, ಮೂಲ ಸೌಕರ್ಯ ಮತ್ತು ಉದ್ಯಮ, ನಗರ ಅಭಿವೃದ್ಧಿ, ಗ್ರಾಮೀಣ ಅಭಿವೃದ್ಧಿ, ವೈದ್ಯಕೀಯ ಮತ್ತು ಆರೋಗ್ಯ, ಶಿಕ್ಷಣ, ಪ್ರವಾಸೋದ್ಯಮ, ಸಾಂಸ್ಕೃತಿಕ, ಆದಾಯ ಸಂಗ್ರಹ ಕ್ಷೇತ್ರಗಳಲ್ಲಿ ಸುಧಾರಣೆ ಮತ್ತು ಅಭಿವೃದ್ಧಿ ಮಾಡಲು ಉತ್ತರ ಪ್ರದೇಶ ಸರ್ಕಾರ ಮುಂದಡಿ ಇಡುತ್ತಿದ್ದು, ಇದಕ್ಕೆ ಪೂರಕವಾದ ಯೋಜನೆಗಳನ್ನು ಜಾರಿಗೆ ತರುತ್ತಿದೆ. ಹಾಗೇ, ಕಾರ್ಯಕ್ರಮಗಳನ್ನು ಆಯೋಜಿಸುತ್ತಿದೆ.
ಯೋಗಿ ಆಯ್ಕೆಯೇ ಒಂದು ಅಚ್ಚರಿಯಾಗಿತ್ತು
ಉತ್ತರ ಪ್ರದೇಶದಲ್ಲಿ 2017ರಲ್ಲಿ ಮೊದಲ ಬಾರಿಗೆ ಬಿಜೆಪಿ ಸರ್ಕಾರ ಅಧಿಕಾರಕ್ಕೆ ಬಂದಾಗ ಅಲ್ಲಿನ ಮುಖ್ಯಮಂತ್ರಿಯನ್ನಾಗಿ ಯೋಗಿ ಆದಿತ್ಯನಾಥ್ ಅವರನ್ನು ಆಯ್ಕೆ ಮಾಡಿದ್ದೇ ಬಹುದೊಡ್ಡ ಅಚ್ಚರಿಯಾಗಿತ್ತು. ಗೋರಖ್ನಾಥ್ ಪೀಠದ ಮುಖ್ಯಸ್ಥ, ಸನ್ಯಾನಿ ರಾಜ್ಯಾಭಾರ ಮಾಡುತ್ತಾನಾ? ಎಂದು ವ್ಯಂಗ್ಯವಾಡಿದವರೂ ಅನೇಕರು. ಆದರೆ ಬರುಬರುತ್ತ ತಮ್ಮ ಜನಪ್ರಿಯತೆಯನ್ನು ಹೆಚ್ಚಿಸಿಕೊಂಡ ಯೋಗಿ, ಉತ್ತರ ಪ್ರದೇಶದಲ್ಲಿ ಇದುವರೆಗೆ ಅತ್ಯಂತ ಹೆಚ್ಚಿನ ಅವಧಿಗೆ ಆಡಳಿತ ನಡೆಸಿದ ಮುಖ್ಯಮಂತ್ರಿ ಎಂಬ ಹೆಗ್ಗಳಿಕೆಗೂ ಪಾತ್ರರಾಗಿದ್ದಾರೆ. 1954ರಿಂದ 1960ರವರೆಗೆ ಒಟ್ಟು 5ವರ್ಷ 345 ದಿನಗಳ ಕಾಲ ಕಾಂಗ್ರೆಸ್ನ ಡಾ. ಸಂಪೂರ್ಣಾನಂದ ಅವರು ಸಿಎಂ ಆಗಿ ಆಡಳಿತ ನಡೆಸಿದ್ದರು. ಅವರ ದಾಖಲೆಯನ್ನು ಆದಿತ್ಯನಾಥ್ ಮುರಿದಿದ್ದಾರೆ. 2023ರ ಮಾರ್ಚ 1ರ ಲೆಕ್ಕಾಚಾರದಂತೆ ಯೋಗಿಯವರು ಐದು ವರ್ಷ, 346 ದಿನಗಳ ಕಾಲ ಸಿಎಂ ಆಗಿ ಆಡಳಿತ ಮಾಡಿದ್ದಾರೆ ಮತ್ತು ಅವರ ಆಡಳಿತ ಮುಂದುವರಿದಿದೆ.
2017ರಲ್ಲಿ ಮುಖ್ಯಮಂತ್ರಿಯಾಗಿ ಅಧಿಕಾರ ವಹಿಸಿಕೊಂಡಾಗಿನಿಂದಲೂ ಸಿಎಂ ಯೋಗಿ ಆದಿತ್ಯನಾಥ್ ಅವರು ಹಿಂದು ತ್ವ ಸ್ಥಾಪನೆ, ಕ್ರೈಂ/ಮಾಫಿಯಾ, ಸಂಘಟಿತ ಅಪರಾಧಗಳಿಗೆ ಕಡಿವಾಣ ಹಾಕುವಲ್ಲಿ ಅತ್ಯಂತ ಹೆಚ್ಚು ಶ್ರಮಿಸಿದ್ದಾರೆ. ಗೋಹತ್ಯೆ ನಿಷೇಧ, ಅಕ್ರಮ ಕಸಾಯಿ ಖಾನೆಗಳ ಮುಚ್ಚುವಿಕೆಯಂಥ ನಿರ್ಧಾರಗಳನ್ನು ಅಧಿಕಾರ ಸ್ವೀಕರಿಸಿದ ಕೆಲವೇ ಸಮಯದಲ್ಲಿ ಅವರು ಜಾರಿಗೊಳಿಸಿದ್ದಾರೆ. ಅವರ ಈ ಆಡಳಿತವೇ ಅವರಿಗೆ ಅಪಾರ ಸಂಖ್ಯೆಯ ಅನುಯಾಯಿಗಳನ್ನು ತಂದುಕೊಟ್ಟಿದೆ.
ಯುವಜನರ ಮೇಲೆ ಫೋಕಸ್
ಉತ್ತರ ಪ್ರದೇಶದಲ್ಲಿ ಯುವಜನರಿಗೆ ಉದ್ಯೋಗ ಸಿಗುತ್ತಿಲ್ಲ. ಉದ್ಯೋಗ ಸೃಷ್ಟಿಸುವಲ್ಲಿ ಸರ್ಕಾರ ವಿಫಲವಾಗಿದೆ ಎಂದು ಅಲ್ಲಿನ ಪ್ರತಿಪಕ್ಷಗಳು ಒಂದೇ ಸಮನೆ ಆರೋಪ ಮಾಡುತ್ತಿವೆ. ಅದರ ಬೆನ್ನಲ್ಲೇ ಯೋಗಿ ಸರ್ಕಾರ ಯುವಜನರ ಮೇಲೆ ಹೆಚ್ಚಿನ ಫೋಕಸ್ ಮಾಡುತ್ತಿದೆ. ಸ್ಥಳೀಯವಾಗಿ ಉದ್ಯೋಗ ಸೃಷ್ಟಿಸಲು ಕ್ರಮ ಕೈಗೊಳ್ಳುತ್ತಿದೆ. ಕ್ರೀಡೆ, ಕೌಶಲಾಭಿವೃದ್ಧಿ, ಹಳ್ಳಿಗಳ ಮಟ್ಟದಲ್ಲಿ ವ್ಯಾಯಾಮ ಶಾಲೆಗಳನ್ನು ತೆರೆಯಲು ಉತ್ತೇಜಿಸುತ್ತಿದೆ.
ಸದ್ಯ ಉತ್ತರ ಪ್ರದೇಶವನ್ನು ಒಂದು ಟ್ರಿಲಿಯನ್ ಆರ್ಥಿಕತೆಯತ್ತ ಕೊಂಡೊಯ್ಯುವ ನಿಟ್ಟಿನಲ್ಲಿ ಅವರ ಪ್ರಯತ್ನ ಶುರುವಾಗಿದೆ. ಉತ್ತರ ಪ್ರದೇಶದಲ್ಲಿ ಈಗಾಗಲೇ ಕಾನೂನು ಸುವ್ಯವಸ್ಥೆ ಸುಧಾರಿಸಿದೆ, ಪ್ರವಾಸಿ ತಾಣಗಳ ಅಭಿವೃದ್ಧಿಯೂ ಶರವೇಗದಿಂದ ಆಗುತ್ತಿದ್ದು, ಹೂಡಿಕೆ ಕ್ಷೇತ್ರದಲ್ಲೂ ದಾಪುಗಾಲು ಹಾಕುತ್ತಿದೆ. ಉತ್ತರ ಪ್ರದೇಶ ಹೂಡಿಕೆಗೆ ಯೋಗ್ಯವಲ್ಲ ಎಂಬ ಮಾತನ್ನು ಸುಳ್ಳು ಮಾಡಲು ಯೋಗಿ ಆದಿತ್ಯನಾಥ್ ಪಣತೊಟ್ಟು ಅದರಂತೆ ರೂಪುರೇಷೆಗಳನ್ನು ಹೆಣೆಯುತ್ತಿದ್ದಾರೆ. ಆರು ವರ್ಷಗಳಲ್ಲಿ ಮಾಡಿದ ಈ ಸಾಧನೆಗಳನ್ನೆಲ್ಲ ಜನರ ಮುಂದಿಡಲು ಅಲ್ಲಿನ ಸರ್ಕಾರ ಪ್ಲ್ಯಾನ್ ಮಾಡಿದೆ.
EXPLAINER
ವಿಸ್ತಾರ Explainer: ರಾಹುಲ್ ಗಾಂಧಿ ಅನರ್ಹತೆ: ಏನಿದು? ಮುಂದೇನಾಗಲಿದೆ?
ಕಾಂಗ್ರೆಸ್ ಮುಖಂಡ, ವಯನಾಡ್ ಸಂಸದ ರಾಹುಲ್ ಗಾಂಧಿ ಅವರಿಗೆ ವಿಧಿಸಲಾಗಿರುವ ಅನೂರ್ಹತೆ ಎಲ್ಲಿಯವರೆಗೆ ಊರ್ಜಿತ? ಯಾವಾಗ, ಹೇಗೆ ತೆರವಾಗಬಹುದು? ಈಗ ಅವರ ಮುಂದಿರುವ ದಾರಿಯೇನು? ಇಲ್ಲಿದೆ ವಿವರ.
ಕಾಂಗ್ರೆಸ್ ಮುಖಂಡ, ವಯನಾಡ್ ಸಂಸದ ರಾಹುಲ್ ಗಾಂಧಿ ಅವರು ಕ್ರಿಮಿನಲ್ ಮಾನಹಾನಿ ಪ್ರಕರಣದಲ್ಲಿ ಸೂರತ್ ನ್ಯಾಯಾಲಯದಿಂದ ಶಿಕ್ಷೆಗೊಳಗಾದ ನಂತರ ತಮ್ಮ ಲೋಕಸಭಾ ಸ್ಥಾನವನ್ನು ಕಳೆದುಕೊಂಡಿದ್ದಾರೆ. ಇದರಿಂದಾಗಿ ಮುಂದೆ ಯಾವ ಸನ್ನಿವೇಶಗಳು ಉಂಟಾಗಬಹುದು? ಒಂದು ವಿಶ್ಲೇಷಣೆ ಇಲ್ಲಿದೆ.
ವಯನಾಡ್ ಸಂಸದ ರಾಹುಲ್ ಗಾಂಧಿ ಅವರನ್ನು ಸೂರತ್‌ನ ಸ್ಥಳೀಯ ನ್ಯಾಯಾಲಯವು ದೋಷಿ ಎಂದು ಘೋಷಿಸಿ ಶಿಕ್ಷೆ ವಿಧಿಸಿದ ನಂತರ ಸಂಸತ್ತಿನ ಸದಸ್ಯತ್ವವನ್ನು ಗುರುವಾರ ರದ್ದುಗೊಳಿಸಲಾಗಿದೆ. ಲೋಕಸಭೆಯ ಕಾರ್ಯಾಲಯ ಶುಕ್ರವಾರ ಹೊರಡಿಸಿದ ಅಧಿಸೂಚನೆಯಲ್ಲಿ “ಸಂವಿಧಾನದ 102 (1) (ಇ) ವಿಧಿಯ ನಿಬಂಧನೆಗಳ ಪ್ರಕಾರ, ಹಾಗೂ ಭಾರತ ಪ್ರಜಾಪ್ರತಿನಿಧಿ ಕಾಯಿದೆ- 1951ರ ಸೆಕ್ಷನ್ 8ರ ಪ್ರಕಾರ, 2023ರ ಮಾರ್ಚ್ 23ರಿಂದ, ಅವರ ಅಪರಾಧ ಸಾಬೀತಾದ ದಿನಾಂಕದಿಂದ ಲೋಕಸಭೆಯ ಸದಸ್ಯತ್ವದಿಂದ ರಾಹುಲ್ ಗಾಂಧಿ ಅನರ್ಹರಾಗಿದ್ದಾರೆ” ಎಂದಿದೆ.
ಏಕೆ ಈ ಅಧಿಸೂಚನೆ?
ಇದು ಲೋಕಸಭೆ ಕಾರ್ಯಾಲಯದ ಪ್ರಕ್ರಿಯೆಯ ಒಂದು ಭಾಗ. ಹಾಲಿ ಸಂಸದರು ಅಥವಾ ಶಾಸಕರು ಅಪರಾಧ ಪ್ರಕರಣಗಳಲ್ಲಿ ಶಿಕ್ಷೆಗೊಳಗಾದರೆ ಅದನ್ನು ಸ್ಪೀಕರ್ ಅಥವಾ ಸಭಾಪತಿಯವರ ಹಾಗೂ ಆಯಾ ರಾಜ್ಯದ ಚುನಾವಣಾ ಆಯೋಗ ಮುಖ್ಯಸ್ಥರ ಗಮನಕ್ಕೆ ತರುವುದನ್ನು ಖಚಿತಪಡಿಸಿಕೊಳ್ಳುವಂತೆ ಆಯಾ ಇಲಾಖೆಗಳಿಗೆ ಅಕ್ಟೋಬರ್ 13, 2015ರಂದು, ಭಾರತೀಯ ಚುನಾವಣಾ ಆಯೋಗ ಎಲ್ಲ ರಾಜ್ಯಗಳ ಮುಖ್ಯ ಕಾರ್ಯದರ್ಶಿಗಳಿಗೆ ನಿರ್ದೇಶಿಸಿತ್ತು. ಇದು ಶಿಕ್ಷೆಯ ಆದೇಶ ಬಂದು ಏಳು ದಿನಗಳಲ್ಲಿ ಆಗಬೇಕಿದೆ.
ಪ್ರಜಾಪ್ರತಿನಿಧಿ ಕಾಯಿದೆ- 1951ರ ಸೆಕ್ಷನ್ 8(3) ಹೀಗೆ ಹೇಳುತ್ತದೆ: “ಯಾವುದೇ ಅಪರಾಧದಲ್ಲಿ ತಪ್ಪಿತಸ್ಥರೆಂದು ನಿರ್ಣಯವಾಗಿ ಎರಡು ವರ್ಷಕ್ಕಿಂತ ಕಡಿಮೆಯಿಲ್ಲದ ಜೈಲು ಶಿಕ್ಷೆಗೆ ಗುರಿಯಾದ ವ್ಯಕ್ತಿಯನ್ನು ಅಂತಹ ಅಪರಾಧ ನಿರ್ಣಯದ ದಿನಾಂಕದಿಂದ ಅನರ್ಹಗೊಳಿಸಲಾಗುತ್ತದೆ. ಹಾಗೂ ಆತನ ಬಿಡುಗಡೆಯ ನಂತರದ ಮುಂದಿನ ಆರು ವರ್ಷಗಳ ಅವಧಿಯವರೆಗೂ ಅನರ್ಹತೆ ಮುಂದುವರಿಯುತ್ತದೆ.
ಇದರ ಪ್ರಕಾರ, ಅನರ್ಹತೆಯು ಉಂಟಾಗುವುದು ನ್ಯಾಯಾಲಯ ನೀಡಿರುವ ಶಿಕ್ಷೆಯಿಂದಲೇ ಹೊರತು ಲೋಕಸಭೆಯ ಅಧಿಸೂಚನೆಯಿಂದಲ್ಲ. ಹೀಗಾಗಿ ಶುಕ್ರವಾರ ಲೋಕಸಭೆಯಲ್ಲಿದ್ದ ರಾಹುಲ್‌ಗೆ ಈ ಸೂಚನೆ ನೀಡಿರುವುದು ಸದನವನ್ನು ಮುಂದೂಡುವ ಮುನ್ನದ ಒಂದು ಔಪಚಾರಿಕ ಸೂಚನೆ.
ಅನರ್ಹಗೊಂಡ ಶಾಸಕರ ಪ್ರಕರಣದಲ್ಲಿ ಸಂಬಂಧಿಸಿದ ವಿಧಾನಸಭೆಯಿಂದ ನೋಟಿಸ್ ನೀಡಲಾಗುತ್ತದೆ. ಉದಾಹರಣೆಗೆ, ಸಮಾಜವಾದಿ ಪಕ್ಷದ ಶಾಸಕ ಅಜಂ ಖಾನ್ ಪ್ರಕರಣದಲ್ಲಿ, ಉತ್ತರ ಪ್ರದೇಶ ವಿಧಾನಸಭೆಯ ಸೆಕ್ರೆಟರಿಯೇಟ್ ಕಳೆದ ವರ್ಷ ಅಕ್ಟೋಬರ್‌ನಲ್ಲಿ ಅರಿಗೆ ಅನರ್ಹತೆಯ ಸೂಚನೆಯನ್ನು ನೀಡಿತ್ತು.
ಈ ನಿಟ್ಟಿನಲ್ಲಿ ಸ್ಪೀಕರ್ ಅಧಿಕಾರ ಅಂತಿಮವೇ?
ಲೋಕ್ ಪ್ರಹರಿ ವರ್ಸಸ್ ಯೂನಿಯನ್ ಆಫ್ ಇಂಡಿಯಾ (2018) ಪ್ರಕರಣದಲ್ಲಿ ಸುಪ್ರೀಂ ಕೋರ್ಟ್ ಒಂದು ತೀರ್ಪು ನೀಡಿದೆ. ಅದರ ಪ್ರಕಾರ, ಮೇಲಿನ ನ್ಯಾಯಾಲಯವು ಅಪರಾಧ ನಿರ್ಣಯಕ್ಕೆ ತಡೆ ನೀಡಿದರೆ, ಈ ಅನರ್ಹತೆಯನ್ನು ರದ್ದುಗೊಳಿಸಲಾಗುತ್ತದೆ ಎಂದು ಸ್ಪಷ್ಟಪಡಿಸಿದೆ. “ಮೇಲ್ಮನವಿಯ ವಿಚಾರಣೆ ಬಾಕಿ ಇರುವಾಗ, ಶಿಕ್ಷೆಯನ್ನು ತಡೆಹಿಡಿಯಲಾಗುತ್ತದೆ. ಹಾಗಾಗಿ ಶಿಕ್ಷೆಯ ಪರಿಣಾಮವಾಗಿ ಜಾರಿಗೆ ಬರುವ ಅನರ್ಹತೆಯು ಜಾರಿಯಲ್ಲಿರಲು ಅಥವಾ ಉಳಿಯಲು ಸಾಧ್ಯವಿಲ್ಲ” ಎಂದು ತೀರ್ಪು ಹೇಳಿದೆ.
ಅಂದರೆ, ಕೋರ್ಟ್ ರಾಹುಲ್ ಗಾಂಧಿ ಅವರ ಶಿಕ್ಷೆಗೆ ತಡೆಯಾಜ್ಞೆ ನೀಡಿದರೆ, ಸದನ ಸಚಿವಾಲಯದ ಅಧಿಸೂಚನೆಯು ರದ್ದಾಗುತ್ತದೆ.
ಅನರ್ಹತೆಗೆ ಕಾರಣವಾದ ಕಾನೂನುಗಳ್ಯಾವುದು?
ಸಂವಿಧಾನದ ಆರ್ಟಿಕಲ್ 102(1)(ಇ) ಮತ್ತು ಜನಪ್ರತಿನಿಧಿ ಕಾಯಿದೆಯ (ಆರ್‌ಪಿ ಕಾಯಿದೆ) ಸೆಕ್ಷನ್ 8 ಸಂಸದೀಯ ಸದಸ್ಯರ ಅನರ್ಹತೆಗೆ ಕಾರಣಗಳನ್ನು ನೀಡುತ್ತದೆ. ಸಂವಿಧಾನದ 102ನೇ ವಿಧಿಯ ಉಪ ಕಲಂ (ಇ) ಹೇಳುವಂತೆ ಸಂಸದರೊಬ್ಬರು “ಸಂಸತ್ ಮಾಡಿದ ಯಾವುದೇ ಕಾನೂನಿನ ಅಡಿಯಲ್ಲಿ ಅನರ್ಹರಾಗಿದ್ದರೆ” ಅವರು ಸದನದ ಸದಸ್ಯತ್ವವನ್ನು ಕಳೆದುಕೊಳ್ಳುತ್ತಾರೆ. ಈ ಪ್ರಕರಣದಲ್ಲಿರುವುದು ಆರ್‌ಪಿ ಕಾಯಿದೆ.
RP ಕಾಯಿದೆಯ ಸೆಕ್ಷನ್ 8 ಕೆಲವು ಅಪರಾಧಗಳಲ್ಲಿ ಶಾಸಕರು ಶಿಕ್ಷೆ ಪಡೆದರೆ ಅವರ ಅನರ್ಹತೆಯ ಬಗ್ಗೆ ತಿಳಿಸುತ್ತದೆ. “ರಾಜಕೀಯದ ಅಪರಾಧೀಕರಣವನ್ನು ತಡೆಗಟ್ಟುವುದು ಮತ್ತು ʼಕಳಂಕಿತ’ ಶಾಸಕರನ್ನು ಚುನಾವಣೆಯಲ್ಲಿ ಸ್ಪರ್ಧಿಸದಂತೆ ತಡೆಯುವ ಗುರಿಯನ್ನುʼ ಈ ಕಾಯಿದೆ ಹೊಂದಿದೆ.
ರಾಹುಲ್ ಕಳೆದುಕೊಳ್ಳುವುದೇನು?
ಲೋಕಸಭಾ ಸಂಸದರಾಗಿ ರಾಹುಲ್ ಅವರು ಲ್ಯುಟೆನ್ಸ್ ದೆಹಲಿಯಲ್ಲಿ ಮನೆಯನ್ನು ಹೊಂದಿದ್ದರು. ಅವರ ಅನರ್ಹತೆಯ ನಂತರ, ವಸತಿ ಮತ್ತು ನಗರ ವ್ಯವಹಾರಗಳ ಸಚಿವಾಲಯದ ಮೂಲಗಳ ಪ್ರಕಾರ, ಅವರ 12 ತುಘಲಕ್ ಲೇನ್ ಮನೆಯನ್ನು ಖಾಲಿ ಮಾಡಬೇಕು. ಇದಕ್ಕೆ ಅವರಿಗೆ ಒಂದು ತಿಂಗಳ ಕಾಲಾವಕಾಶವಿದೆ. 2004ರಲ್ಲಿ ಅಮೇಠಿಯಿಂದ ಸಂಸದರಾಗಿ ಆಯ್ಕೆಯಾದ ಬಳಿಕ ರಾಹುಲ್‌ಗೆ ಮನೆ ಮಂಜೂರು ಮಾಡಲಾಗಿತ್ತು.
ಮುಂದಿನ ಕ್ರಮಕ್ಕಾಗಿ ಲೋಕಸಭಾ ಸಚಿವಾಲಯವು ಅನರ್ಹತೆಯ ಅಧಿಸೂಚನೆಯ ಪ್ರತಿಯನ್ನು ಎಸ್ಟೇಟ್ ನಿರ್ದೇಶನಾಲಯದ ಸಂಪರ್ಕ ಅಧಿಕಾರಿಗೆ ಕಳುಹಿಸಿದೆ. ಬಂಗಲೆಯು ಲೋಕಸಭೆಯ ವಸತಿ ಆಸ್ತಿಗಳಿಗೆ ಸೇರಿರುವುದರಿಂದ, ಇದನ್ನು ತೆರವು ಮಾಡುವ ಕ್ರಮವನ್ನು ಲೋಕಸಭೆ ಸಚಿವಾಲಯ ನಿರ್ವಹಿಸಬೇಕಾಗುತ್ತದೆ. ಸಂಸದರು ಅನುಭವಿಸುವ ಎಲ್ಲಾ ಇತರ ಸವಲತ್ತುಗಳನ್ನು ಸಹ ರಾಹುಲ್ ಕಳೆದುಕೊಳ್ಳುತ್ತಾರೆ.
ಈಗ ವಯನಾಡ್ ಕ್ಷೇತ್ರದ ಗತಿಯೇನು?
ಚುನಾವಣಾ ಆಯೋಗವು ರಾಹುಲ್ ಪ್ರತಿನಿಧಿಸುತ್ತಿದ್ದ ವಯನಾಡ್ ಸಂಸತ್ ಸ್ಥಾನಕ್ಕೆ ಉಪಚುನಾವಣೆಯನ್ನು ಘೋಷಿಸಬಹುದು. ಅಜಮ್ ಖಾನ್ ಅವರ ಪ್ರಕರಣದಲ್ಲಿ, ಖಾನ್ ಅವರ 37-ರಾಮ್‌ಪುರ ಸ್ಥಾನಕ್ಕೆ (ದೇಶದಾದ್ಯಂತ ನಾಲ್ಕು ಇತರ ಖಾಲಿ ಹುದ್ದೆಗಳನ್ನು ಭರ್ತಿ ಮಾಡುವ ಉಪಚುನಾವಣೆಗಳ ಜೊತೆಗೆ) ಉಪಚುನಾವಣೆಯನ್ನು ಕೆಲವೇ ದಿನಗಳಲ್ಲಿ ಘೋಷಿಸಲಾಗಿತ್ತು.
ಇದನ್ನೂ ಓದಿ: Rahul Gandhi Disqualified: ‘ನಾನು ಎಲ್ಲದಕ್ಕೂ ಸಿದ್ಧ’, ಅನರ್ಹತೆ ಬಳಿಕ ರಾಹುಲ್ ಗಾಂಧಿ ಹೇಳಿದ್ದೇನು?
ಆದರೂ ಲಕ್ಷದ್ವೀಪ ಸಂಸದ ಪಿಪಿ ಮೊಹಮ್ಮದ್ ಫೈಸಲ್ ಅವರ ಇತ್ತೀಚಿನ ಪ್ರಕರಣದಲ್ಲಿ, ಸಂಸದರಿಗೆ ಶಿಕ್ಷೆಯಾದ ನಂತರ ಜನವರಿ 18ರಂದು ಉಪಚುನಾವಣೆ ಘೋಷಿಸಲಾಗಿತ್ತು. ಜನವರಿ 30ರಂದು ಕೇರಳ ಹೈಕೋರ್ಟ್ ಫೈಸಲ್ ಅವರ ಶಿಕ್ಷೆಯನ್ನು ರದ್ದುಗೊಳಿಸಿದ ಬಳಿಕ ಚುನಾವಣೆ ಆಯೋಗವು ಈ ಘೋಷಣೆಯನ್ನು ಹಿಂಪಡೆಯಬೇಕಾಯಿತು.
ಇಲ್ಲಿ ರಾಹುಲ್ ಗಾಂಧಿಗೆ ಯಾವ ಆಯ್ಕೆಗಳಿವೆ?
ಒಂದು ವೇಳೆ ಉನ್ನತ ನ್ಯಾಯಾಲಯವು ಶಿಕ್ಷೆಗೆ ತಡೆ ನೀಡಿದರೆ ಅಥವಾ ಅವರ ಪರವಾಗಿ ಮೇಲ್ಮನವಿಯನ್ನು ನಿರ್ಧರಿಸಿದರೆ ಅವರ ಅನರ್ಹತೆಯನ್ನು ರದ್ದುಗೊಳಿಸಬಹುದು. ಮೊದಲು ಅವರು ಸೂರತ್ ಸೆಷನ್ಸ್ ನ್ಯಾಯಾಲಯದಲ್ಲಿ ಮೇಲ್ಮನವಿ ಮಾಡಬೇಕಾಗುತ್ತದೆ. ಅಲ್ಲಿ ಆಗದಿದ್ದರೆ ಮುಂದೆ ಗುಜರಾತ್ ಹೈಕೋರ್ಟಿನ ಮುಂದೆ ಹೋಗಬೇಕಾಗುತ್ತದೆ.
ನ್ಯಾಯಾಲಯದಿಂದ ಅವರು ಪರಿಹಾರ ಪಡೆಯದಿದ್ದರೆ ಎಂಟು ವರ್ಷಗಳ ಕಾಲ ಚುನಾವಣೆಯಲ್ಲಿ ಸ್ಪರ್ಧಿಸಲು ಅನರ್ಹರಾಗುತ್ತಾರೆ. ಅಂದರೆ ಅವರ ಶಿಕ್ಷೆಯ ಎರಡು ವರ್ಷಗಳು, ಜೊತೆಗೆ RP ಕಾಯಿದೆಯ ನಿಬಂಧನೆಗಳ ಅಡಿಯಲ್ಲಿ ನಂತರದ ಆರು ವರ್ಷಗಳು. ಒಟ್ಟು ಎಂಟು.
ಈಗಾಗಲೇ ಮೇಲ್ಮನವಿ ಸಲ್ಲಿಸಲು ಸಮಯ ಕೋರಿ ಅವರ ವಕೀಲ ಕಿರಿತ್ ಪನ್ವಾಲಾ ಶುಕ್ರವಾರ ಸೂರತ್ ನ್ಯಾಯಾಲಯಕ್ಕೆ ಅರ್ಜಿ ಸಲ್ಲಿಸಿದ್ದಾರೆ.
-
ದೇಶ20 hours ago
Chenab Bridge | ಐಫೆಲ್ ಟವರ್ಗಿಂತಲೂ ಎತ್ತರದ ರೈಲ್ವೇ ಸೇತುವೆ ಜಮ್ಮು ಕಾಶ್ಮೀರದಲ್ಲಿ ಲೋಕಾರ್ಪಣೆಗೆ ಸಿದ್ಧ
-
ಕರ್ನಾಟಕ21 hours ago
SSLC Exam 2023: ಇಂದಿನಿಂದ SSLC ಎಕ್ಸಾಂ; ಪರೀಕ್ಷೆ ಬರೆಯಲಿರುವ 8.42 ಲಕ್ಷ ವಿದ್ಯಾರ್ಥಿಗಳು
-
ಗ್ಯಾಜೆಟ್ಸ್10 hours ago
Aadhaar Update: ಆನ್‌ಲೈನ್‌ನಲ್ಲಿ ಆಧಾರ್ ಅಪ್ಡೇಟ್ ಉಚಿತ; ಈ ಸೌಲಭ್ಯ ಜೂನ್ 14ರವರೆಗೆ ಮಾತ್ರ
-
ಅಂಕಣ21 hours ago
ಗೋ ಸಂಪತ್ತು: ಆಹಾರವಾಗಿ ಮಾತ್ರವಲ್ಲ, ಔಷಧವಾಗಿಯೂ ಮಜ್ಜಿಗೆಗೆ ಮಹತ್ವವಿದೆ!
-
ಅಂಕಣ21 hours ago
Brand story : ಚೀನಾದ ಇ-ಕಾಮರ್ಸ್ ದಿಗ್ಗಜ ಅಲಿಬಾಬಾ, 6 ಕಂಪನಿಗಳಾಗಿ ವಿಭಜನೆಯಾಗುತ್ತಿರುವುದೇಕೆ?
-
ಕರ್ನಾಟಕ11 hours ago
B.Y. Vijayendra: ಯಾವುದೇ ಕಾರಣಕ್ಕೆ ವರುಣಾದಿಂದ ವಿಜಯೇಂದ್ರ ಸ್ಪರ್ಧಿಸಲ್ಲ: ಗೊಂದಲಕ್ಕೆ ತೆರೆಯೆಳೆದ ಯಡಿಯೂರಪ್ಪ
-
ದೇಶ12 hours ago
Gujarat High Court: ಪಿಎಂ ಮೋದಿ ಪದವಿ ಸರ್ಟಿಫಿಕೇಟ್ ಕೇಳಿದ್ದ ದಿಲ್ಲಿ ಸಿಎಂ ಕೇಜ್ರಿವಾಲ್ಗೆ 25 ಸಾವಿರ ರೂ. ದಂಡ!
-
ಕರ್ನಾಟಕ14 hours ago
SSLC Exam 2023: ಕಲಬುರಗಿಯಲ್ಲಿ ಎಸ್ಎಸ್ಎಲ್ಸಿ ಪ್ರಶ್ನೆಪತ್ರಿಕೆ ಸೋರಿಕೆ ಶಂಕೆ; ವಾಟ್ಸಾಪ್ನಲ್ಲಿ ಹರಿದಾಡಿದ ಕನ್ನಡ ಪೇಪರ್