ಕಾಶ್ಮೀರ: ಜಮ್ಮು ಕಾಶ್ಮೀರದ ಕಿರುತೆರೆ ನಟಿ ಅಮ್ರೀನ್ ಭಟ್(35) ಅವರನ್ನು ಭಯೋತ್ಪಾದಕರು ಹತ್ಯೆ ಮಾಡಿದ್ದಾರೆ. ಈ ವೇಳೆ ಆಕೆಯ ಸಂಬಂಧಿಯಾದ ಓರ್ವ ಪುಟ್ಟ ಬಾಲಕನ ಮೇಲೂ ಹಲ್ಲೆ ನಡೆಸಲಾಗಿದೆ. ಕಾಶ್ಮೀರದ ಮಧ್ಯಭಾಗವಾದ ಬುಡ್‌ಗಾಂವ್ ಜಿಲ್ಲೆಯ ಹಿಶ್ರೂ ಪ್ರದೇಶದಲ್ಲಿ ಭಯೋತ್ಪಾದಕರ ಈ ದುಷ್ಕೃತ್ಯ ಸಂಭವಿಸಿದೆ ಎಂದು ಪೊಲೀಸರು ತಿಳಿಸಿದ್ದಾರೆ.
ಬುಧವಾರ ಸಂಜೆ ಸುಮಾರು 7:50ರ ಹೊತ್ತಿಗೆ ಭಯೋತ್ಪಾದಕರ ಗುಂಪೊಂದು ಹಿಶ್ರೂ ಪ್ರದೇಶದಲ್ಲಿ ಗುಂಡಿನ ದಾಳಿ ನಡೆಸಿತ್ತು. ಅಮ್ರೀನ್ ಭಟ್ ಅವರ ಮನೆಯೆದುರೂ ಗುಂಡಿನ ದಾಳಿ ನಡೆಸಲಾಗಿತ್ತು. ಈ ದಾಳಿಯಲ್ಲಿ ಅಮ್ರೀನ್ ಭಟ್ ಸಾವನ್ನಪ್ಪಿದ್ದಾರೆ. ಅಮ್ರೀನ್ ಅವರನ್ನು ಸ್ಥಳೀಯ ಆಸ್ಪತ್ರೆಗೆ ದಾಖಲಿಸಲಾಗಿತ್ತು. ಆದರೆ ಅಮ್ರೀನ್ ಆಸ್ಪತ್ರೆಯಲ್ಲಿ ಮೃತಪಟ್ಟಿದ್ದಾರೆ. ಅಲ್ಲದೆ, 10 ವರ್ಷದ ಓರ್ವ ಪುಟ್ಟ ಬಾಲಕ ಕೂಡ ಗುಂಡಿನ ದಾಳಿಯಿಂದ ಗಾಯಗೊಂಡಿದ್ದಾನೆ. ಆಸ್ಪತ್ರೆಗೆ ದಾಖಲಿಸಲಾಗಿದ್ದು, ಪ್ರಾಣಾಪಾಯದಿಂದ ಪಾರಾಗಿದ್ದಾನೆ ಎಂದು ತಿಳಿದುಬಂದಿದೆ.
ಅಮ್ರೀನ್ ಭಟ್ ಕಿರುತೆರೆ ನಟಿಯಾಗಿದ್ದು, ಅನೇಕ ಟಿಕ್‌ಟಾಕ್ ವಿಡಿಯೋ ಮಾಡುವ ಮೂಲಕ ಜನಪ್ರಿಯತೆ ಪಡೆದಿದ್ದರು. ಅವರ ಹತ್ಯೆಯ ಪ್ರಕರಣದ ಬಗ್ಗೆ ಕಾಶ್ಮೀರ ಪೊಲೀಸರು ತನಿಖೆ ಆರಂಭಿಸಿದ್ದಾರೆ. ಲಷ್ಕರ್-ಎ-ತಯ್ಯೆಬಾ ಭಯೋತ್ಪಾದನೆ ಸಂಘಟೆನಯ ಮೂವರು ಈ ದುಷ್ಕೃತ್ಯ ನಡೆಸಿದ್ದಾರೆ ಎಂದು ಪೊಲೀಸರು ತಿಳಿಸಿದ್ದಾರೆ. ಮೂವರು ಭಯೋತ್ಪಾದಕರನ್ನು ಹುಡುಕುವ ಕಾರ್ಯದಲ್ಲಿ ಪೊಲೀಸರು ತೊಡಗಿದ್ದಾರೆ ಎಂದು ತಿಳಿದುಬಂದಿದೆ.
ಕೆಲವ ದಿನಗಳ ಹಿಂದೆ ಆಂಚರ್ ಪ್ರದೇಶದಲ್ಲಿ ಪೊಲೀಸ್ ಕಾನ್‌ಸ್ಟೇಬಲ್ ಸೈಫುಲ್ಲಾ ಕದ್ರಿ ಮೇಲೆ ಹಲ್ಲೆ ನಡೆಸಿ ಹತ್ಯೆ ಮಾಡಲಾಗಿತ್ತು. ಹಾಗೂ ಅವರ 7 ವರ್ಷದ ಮಗಳೂ ಈ ದಾಳಿಯಲ್ಲಿ ಗಾಯಗೊಂಡಿದ್ದರು. ಈ ಬೆನ್ನಲ್ಲೇ ಈಗ ಮತ್ತೊಂದು ದಾಳಿ ನಡೆದಿದೆ ಎಂದು ಪೊಲೀಸರು ತಿಳಿಸಿದ್ದಾರೆ.
ಈ ವೇಳೆ ಕಾಶ್ಮೀರದ ಮಾಜಿ ಮುಖ್ಯಮಂತ್ರಿ ಒಮರ್ ಅಬ್ದುಲ್ಲಾ, ಈ ದಾಳಿಯಲ್ಲಿ ಮೃತಪಟ್ಟವರ ಕುರಿತು ಸಂತಾಪ ಸೂಚಿಸಿದ್ದಾರೆ. ʼಅಮಾಯಕ ಮಹಿಳೆ ಹಾಗೂ ಮಕ್ಕಳ ಮೇಳೆ ದಾಳಿ ನಡೆಸುವುದಕ್ಕೆ ಯಾವುದೇ ಸಮರ್ಥನೆ ನೀಡಲು ಸಾಧ್ಯವಿಲ್ಲʼ ಎಂದು ಟ್ವೀಟ್ ಮಾಡಿದ್ದಾರೆ.
ಇದನ್ನೂ ಓದಿ: Terror Funding Case | ಕಾಶ್ಮೀರಿ ಪ್ರತ್ಯೇಕತಾವಾದಿ ನಾಯಕ ಯಾಸಿನ್ ಮಲಿಕ್‌ಗೆ ಸಾಯೋವರೆಗೆ ಜೈಲು