ಬೆಂಗಳೂರು: ಹಿಂದಿ ಹಾಗೂ ರಾಷ್ಟ್ರಭಾಷೆ ಕುರಿತು ಚಿತ್ರನಟ ಅಜಯ್ ದೇವಗನ್ ಹಾಗೂ ಕಿಚ್ಚ ಸುದೀಪ್ ನಡುವೆ ಆರಂಭವಾದ ವಿವಾದ ಇನ್ನೇನು ತಣ್ಣಗಾಯಿತು ಎನ್ನುವಷ್ಟರಲ್ಲೆ, ಹಿಂದಿ ಮಾತನಾಡಲು ಬಾರದವರು ದೇಶ ಬಿಟ್ಟು ಹೋಗುವುದು ಒಳಿತು ಎಂದು ಉತ್ತರ ಪ್ರದೇಶದ ಸಂಪುಟ ಸಚಿವರೊಬ್ಬರ ಮಾತು ಮತ್ತೆ ಕಿಡಿ ಹೊತ್ತಿಸಿದೆ.
ಉತ್ತರ ಪ್ರದೇಶದ ಮೀನುಗಾರಿಕೆ ಸಚಿವ ಸಂಜಯ್ ನಿಷಾದ್ ಹೇಳಿರುವ ಮಾತು ಇದೀಗ ಮತ್ತೊಂದು ಸುತ್ತಿನ ವಿವಾದಕ್ಕೆ ನಾಂದಿ ಹಾಡಿದೆ.
ಈ ವಿವಾದ ಮುಗಿದು ಇನ್ನೇನು ತಣ್ಣಗಾಯಿತು ಎನ್ನುವಷ್ಟರಲ್ಲಿ ಕರ್ನಾಟಕದ ರಾಜಕಾರಣಿಗಳಾದ ಮಾಜಿ ಸಿಎಂ ಸಿದ್ದರಾಮಯ್ಯ, ಮಾಜಿ ಸಿಎಂ ಎಚ್.ಡಿ. ಕುಮಾರಸ್ವಾಮಿ ಪ್ರತಿಕ್ರಿಯಿಸಿದ್ದರು.
ಇದೀಗ ಮಾತನಾಡಿರುವ ಸಂಜಯ್ ನಿಷಾದ್, “ಭಾರತದಲ್ಲಿ ವಾಸಿಸಬೇಕು ಎನ್ನುವವರು ಹಿಂದಿಯನ್ನು ಕಲಿಯಲೇಬೇಕು. ನೀವು ಹಿಂದಿಯನ್ನು ಪ್ರೀತಿಸದೇ ಇದ್ದರೆ ನಿಮ್ಮನ್ನು ವಿದೇಶಿಗರು ಎಂದು ಪರಿಗಣಿಸಬೇಕಾಗುತ್ತದೆ. ನಾವು ಎಲ್ಲ ಪ್ರಾದೇಶಿಕ ಭಾಷೆಗಳನ್ನೂ ಗೌರವಿಸುತ್ತೇವೆ. ಆದರೆ ಇದು ದೇಶದ ವಿಚಾರ ಹಾಗೂ ಭಾರತದ ಸಂವಿಧಾನ ಇದನ್ನೇ ಹೇಳುತ್ತದೆ. ಇದು ಹಿಂದುಸ್ಥಾನ, ಅಂದರೆ ಇದು ಹಿಂದಿ ಮಾತನಾಡುವವರ ಪ್ರದೇಶ ಎಂದು. ಹಿಂದಿ ಮಾತನಾಡದವರಿಗೆ ಹಿಂದುಸ್ಥಾನದಲ್ಲಿ ಜಾಗವಿಲ್ಲ. ಅಂಥವರು ಈ ದೇಶವನ್ನು ತೊರೆದು ಬೇರೆ ಕಡೆ ವಾಸ ಮಾಡಬೇಕು” ಎಂದು ಹೇಳಿಕೆ ನೀಡಿದ್ದಾರೆ.
ನಿಷಾದ್ ಸಮುದಾಯಕ್ಕೆ ಸೇರಿದ ಸಂಜಯ್ ನಿಷಾದ್, ನಿರ್ಬಲ್ ಇಂಡಿಯನ್ ಶೋಷಿತ್ ಹಮಾರಾ ಆಮ್ ದಲ್ ಅಥವಾ ನಿಷಾದ್ ಸಂಗಟನೆ ಆರಂಭಿಸಿದರು. 2016ರಲ್ಲಿ ನಿಷಾದ್ ಪಕ್ಷ ಸ್ಥಾಪಿಸಿದರು. 2017ರಲ್ಲಿ ವಿವಿಧ ಪಕ್ಷಗಳ ಜತೆಗಿನ ಹೊಂದಾಣಿಕೆಯೊಂದಿಗೆ 100 ಕ್ಷೇತ್ರದಲ್ಲಿ ಸ್ಪರ್ಧಿಸಿದರೂ ಒಂದು ಕ್ಷೇತ್ರದಲ್ಲಿ ಮಾತ್ರ ಜಯಿಸಲು ಸಾಧ್ಯವಾಯಿತು. ಸ್ವತಃ ಸಂಜಯ್ ನಿಷಾದ್ ಗೋರಖಪುರ ಗ್ರಾಮೀಣ ವಿಧಾನಸಭಾ ಕ್ಷೇತ್ರದಲ್ಲಿ ಸ್ಪರ್ಧಿಸಿ ಮೂರನೇ ಸ್ಥಾನ ಪಡೆದರು. 2019ರಲ್ಲಿ ಬಿಜೆಪಿ ನೇತೃತ್ವದ ಎನ್‌ಡಿಎ ಮೈತ್ರಿಕೂಟ ಸೇರಿದರು. 2021ರಲ್ಲಿ ಉತ್ತರ ಪ್ರದೇಶ ವಿಧಾನ ಪರಿಷತ್‌ಗೆ ಸದಸ್ಯರಾದರು. ಸದ್ಯ ಯೋಗಿ ಆದಿತ್ಯನಾಥ ಸಚಿವ ಸಂಪುಟದಲ್ಲಿ ಮೀನುಗಾರಿಕೆ ಸಚಿವರಾಗಿದ್ದಾರೆ.
ಹೆಚ್ಚಿನ ಓದಿಗಾಗಿ | ಭಾಷಾ ರಾಜಕಾರಣದ ಹಸುವಿನ ಕೆಚ್ಚಲಿಗೆ ಕೈ ಹಾಕಿದೆ BJP: ಸಿದ್ದರಾಮಯ್ಯ ವಾಗ್ದಾಳಿ