ವಾಷಿಂಗ್ಟನ್: ಯಾವುದೇ ದೇಶದ ಕರೆನ್ಸಿಯ (Currency Value) ಮೌಲ್ಯವು ಆ ದೇಶದ ಆರ್ಥಿಕ ಸುಸ್ಥಿತಿ, ಜನರ ಜೀವನಮಟ್ಟ, ಕರೆನ್ಸಿಯ ಖ್ಯಾತಿ ಸೇರಿ ಹಲವು ವಿಷಯಗಳನ್ನು ಒಳಗೊಂಡಿರುತ್ತದೆ. ಹಾಗಾಗಿ, ಅಮೆರಿಕದ ಡಾಲರ್ ಎದುರು ನಮ್ಮ ದೇಶದ ರೂಪಾಯಿ ಮೌಲ್ಯವು ಕೆಲವು ಪೈಸೆ ಕುಸಿದರೂ ಆತಂಕಕ್ಕೀಡಾಗುತ್ತೇವೆ. ಅಷ್ಟರಮಟ್ಟಿಗೆ ಕರೆನ್ಸಿ ಮೌಲ್ಯವು ಅಭಿವೃದ್ಧಿ, ಸಮೃದ್ಧಿಯ ಸೂಚಕವಾಗಿದೆ. ಈಗ ಫೋರ್ಬ್ಸ್ ಸಂಸ್ಥೆಯು ಜಗತ್ತಿನ ಪ್ರಬಲ ಕರೆನ್ಸಿಗಳ ಪಟ್ಟಿ ಬಿಡುಗಡೆ ಮಾಡಿದೆ. ಅಮೆರಿಕದ ಡಾಲರ್ (US Dollar) ಪಟ್ಟಿಯಲ್ಲಿ 10ನೇ ಸ್ಥಾನ ಪಡೆದಿದೆ.
ಮೊದಲ ಸ್ಥಾನದಲ್ಲಿ ಯಾವ ಕರೆನ್ಸಿ?
ವಿಶ್ವದ ಟಾಪ್ 10 ಪ್ರಬಲ ಕರೆನ್ಸಿಗಳ ಪಟ್ಟಿಯಲ್ಲಿ ಕುವೈತ್‌ನ ದಿನಾರ್ ಅಗ್ರ ಸ್ಥಾನ ಪಡೆದಿದೆ. ಕುವೈತ್‌ನ ಒಂದು ದಿನಾರ್ ಭಾರತದ 270 ರೂಪಾಯಿಗೆ ಸಮವಾಗಿದೆ. ಎರಡನೇ ಸ್ಥಾನದಲ್ಲಿ ಬಹ್ರೇನ್ ದಿನಾರ್ (ಒಂದು ದಿನಾರ್ ಮೌಲ್ಯ 220 ರೂ.). ಒಮಾನ್‌ನ ರಿಯಲ್ (215 ರೂ.) ಮೂರನೇ, ಜೋರ್ಡಾನ್‌ನ ದಿನಾರ್ (117 ರೂ.) ನಾಲ್ಕನೇ, ಗಿಬ್ರಾಲ್ಟರ್‌ನ ಪೌಂಡ್ (105) ಐದನೇ, ಬ್ರಿಟನ್ ಪೌಂಡ್ (105 ರೂ.) ಆರನೇ, ಕೇಮನ್ ಐಲ್ಯಾಂಡ್‌ನ ಡಾಲರ್ (99 ರೂ.) ಏಳನೇ, ಸ್ವಿಟ್ಜರ್‌ಲ್ಯಾಂಡ್‌ನ ಫ್ರಾಂಕ್ (97 ರೂ.) ಎಂಟನೇ ಹಾಗೂ ಯೂರೋ (90 ರೂ.) ಒಂಬತ್ತನೇ ಸ್ಥಾನ ಪಡೆದಿವೆ. ಹಾಗೆಯೇ, ಅಮೆರಿಕದ ಡಾಲರ್ (83 ರೂ.) 10ನೇ ಸ್ಥಾನ ಪಡೆದಿದೆ.
ಅಮೆರಿಕದ ಡಾಲರ್ ಏಕೆ ಶ್ರೇಷ್ಠ?
ಅಮೆರಿಕದ ಡಾಲರ್ ಪ್ರಬಲ ಕರೆನ್ಸಿಗಳಲ್ಲಿ 10ನೇ ಸ್ಥಾನದಲ್ಲಿದ್ದರೂ ಇದು ಜಾಗತಿಕವಾಗಿ ಪ್ರಾಬಲ್ಯ ಹೊಂದಿದೆ. ಜಗತ್ತಿನಲ್ಲಿಯೇ ವ್ಯವಹಾರಿಕವಾಗಿ ಹೆಚ್ಚು ಬಳಕೆಯಾಗುವ ಕರೆನ್ಸಿ ಎಂಬ ಖ್ಯಾತಿಗೆ ಅಮೆರಿಕದ ಡಾಲರ್ ಭಾಜನವಾಗಿದೆ. ಹಾಗೆಯೇ, ಜಗತ್ತಿನಾದ್ಯಂತ ಬಹುತೇಕ ರಾಷ್ಟ್ರಗಳಲ್ಲಿ ಕರೆನ್ಸಿಯನ್ನು ಡಾಲರ್‌ಗೆ ಹೋಲಿಸುವ, ಡಾಲರ್ ಎದುರು ಮೌಲ್ಯವನ್ನು ಲೆಕ್ಕಹಾಕುವ ಹಾಗೂ ಡಾಲರ್‌ನಲ್ಲಿಯೇ ವ್ಯವಹರಿಸುವ ಕಾರಣ ಅಮೆರಿಕದ ಡಾಲರ್ ಹೆಚ್ಚು ಬಳಕೆಯಲ್ಲಿದೆ ಎಂದು ಫೋರ್ಬ್ಸ್ ತಿಳಿಸಿದೆ.
ಇದನ್ನೂ ಓದಿ: Mukesh Ambani: 100 ಶತಕೋಟಿ ಡಾಲರ್ ಕ್ಲಬ್ ಸೇರಿದ ಅಂಬಾನಿ; ಮತ್ತೆ ಏಷ್ಯಾದ ಶ್ರೀಮಂತ ಗರಿ!
ಮತ್ತೊಂದೆಡೆ, ಕುವೈತ್‌ನ ಕರೆನ್ಸಿಯು ಹೆಚ್ಚು ಪ್ರಬಲವಾಗಲು ಹಲವು ಕಾರಣಗಳಿವೆ. ಕುವೈತ್ ದಿನಾರ್‌ಅನ್ನು ಮೊದಲ ಬಾರಿಗೆ 1960ರಲ್ಲಿ ಪರಿಚಯಿಸಿದರೂ ಅದು ಹೆಚ್ಚು ಸ್ಥಿರತೆ ಕಾಪಾಡಿಕೊಂಡಿದೆ. ಕುವೈತ್‌ನ ಆರ್ಥಿಕ ಸ್ಥಿರತೆ, ತೈಲ ನಿಕ್ಷೇಪಗಳು ಹಾಗೂ ತೆರಿಗೆ ರಹಿತ ವ್ಯವಸ್ಥೆಯು ಆ ದೇಶದ ಕರೆನ್ಸಿಯು ಜಾಗತಿಕವಾಗಿ ಪ್ರಬಲವಾಗಲು ಕಾರಣವಾಗಿದೆ ಎಂದು ಜಾಗತಿಕ ಆರ್ಥಿಕ ತಜ್ಞರು ವಿಶ್ಲೇಷಿಸಿದ್ದಾರೆ. ಡಾಲರ್ ಎದುರು ಭಾರತದ ರೂಪಾಯಿ ಮೌಲ್ಯ ಗಣನೀಯವಾಗಿ ಕುಸಿದ ಕಾರಣ ಫೊರ್ಬ್ಸ್ ಪಟ್ಟಿಯಲ್ಲಿ ರೂಪಾಯಿ ಸ್ಥಾನ ಪಡೆದಿಲ್ಲ.
ಈ ಸಂಗತಿಯ ಕುರಿತು ನಿಮ್ಮ ಅನಿಸಿಕೆ ಏನು? ಕಾಮೆಂಟ್ ಮೂಲಕ ತಿಳಿಸಿ