ನವ ದೆಹಲಿ: ಅಮೆರಿಕವು ಶೀಘ್ರದಲ್ಲಿಯೇ 105 ಪ್ರಾಚೀನ ವಸ್ತುಗಳನ್ನು ಭಾರತಕ್ಕೆ ಹಸ್ತಾಂತರಿಸಲಿದೆ. (US hands over antiquities) ನ್ಯೂಯಾರ್ಕ್‌ನಲ್ಲಿರುವ ಭಾರತೀಯ ರಾಯಭಾರ ಕಚೇರಿಯಲ್ಲಿ ಸೋಮವಾರ ಈ ಬಗ್ಗೆ ಕಾರ್ಯಕ್ರಮ ನಡೆಯಿತು.
ಈ 105 ಪ್ರಾಚೀನ ವಸ್ತುಗಳ ಪೈಕಿ 50 ವಸ್ತುಗಳು ಧಾರ್ಮಿಕ ವಿಷಯಗಳಿಗೆ ಸಂಬಂಧಿಸಿವೆ. (ಹಿಂದೂ, ಜೈನ ಮತ್ತು ಇಸ್ಲಾಂಗೆ ಸಂಬಂಧಿಸಿದೆ. ಕ್ರಿಸ್ತ ಪೂರ್ವ ಒಂದನೇ ಶತಮಾನದಿಂದ 15ನೇ ಶತಮಾನದ ತನಕ 1600 ವರ್ಷಗಳ ನಡುವಣ ಕಾಲಘಟ್ಟಕ್ಕೆ ಸೇರಿದ ವಸ್ತುಗಳನ್ನು ಅಮೆರಿಕವು ಭಾರತಕ್ಕೆ ಹಸ್ತಾಂತರಿಸುತ್ತಿದೆ. ಹೀಗಾಗಿ ಗಣನೀಯ ಐತಿಹಾಸಿಕ ಮತ್ತು ಮಾರುಕಟ್ಟೆ ಮೌಲ್ಯವನ್ನು ಹೊಂದಿದೆ. ಇವುಗಳ ನಿಜವಾದ ಮೌಲ್ಯ ಅಂದಾಜು ಮಾಡಲಾಗಿಲ್ಲ.
ಕ್ರಿಸ್ತ ಪೂರ್ವ 1ನೇ ಶತಮಾನಕ್ಕೆ ಸೇರಿದ ಟೆರಾಕೋಟಾ ಯಕ್ಷಿ ಪ್ರತಿಮೆ, 9ನೇ ಶತಮಾನದ ಹಾಗೂ ಕೆಂಪು ಕಲ್ಲಿನಿಂದ ತಯಾರಿಸಿದ ನೃತ್ಯ ಗಣಪತಿ, ಮಧ್ಯಭಾರತದ, 10ನೇ ಶತಮಾನದ ಕುಬೇರ ಸೇರಿದಂತೆ ಹಲವಾರು ಮೌಲ್ಯಯುತ ಕಲಾಕೃತಿಗಳು ಭಾರತಕ್ಕೆ ಮರಳಿ ಬರಲಿದೆ. ಬಹುತೇಕ ಕಲಾಕೃತಿಗಳನ್ನು ಕಳ್ಳ ಸಾಗಣೆ ಮಾಡಲಾಗಿತ್ತು. ಪ್ರಾಚೀನ ಕಲಾಕೃತಿಗಳ ಡೀಲರ್ ಸುಭಾಷ್ ಕಪೂರ್ ಹಲವಾರು ಕಲಾಕೃತಿಗಳ ಕಳ್ಳ ಸಾಗಣೆಯ ಪ್ರಕರಣದಲ್ಲಿ ಬಂಧಿತರಾಗಿದ್ದರು.
ಇದನ್ನೂ ಓದಿ: ರಾಜ ಮಾರ್ಗ ಅಂಕಣ : ಅಮೆರಿಕದ ಐಟಿ ಜಾಬ್ ಬಿಟ್ಟು FARMER BRAND ಮಾಡಿ ಗೆದ್ದ ಯುವ ದಂಪತಿ
ಎಎಸ್‌ಐನ ಪ್ರಾಚೀನ ಕಲಾಕೃತಿಗಳ ವಿಭಾಗವು ವಿದೇಶಗಳಲ್ಲಿ ಭಾರತೀಯ ಕಲಾಕೃತಿಗಳು ಪತ್ತೆಯಾದಾಗ ದೃಢೀಕರಿಸುತ್ತದೆ. ಆದರೆ ಈ ಪ್ರಕ್ರಿಯೆಗೆ ಕಾಲಮಿತಿಯ ಚೌಕಟ್ಟು ಇರುವುದಿಲ್ಲ. ಪ್ರಧಾನಿ ನರೇಂದ್ರ ಮೋದಿಯವರು ಅಮೆರಿಕಕ್ಕೆ ಇತ್ತೀಚೆಗೆ ಭೇಟಿ ನೀಡಿದ್ದಾಗ ನೂರಕ್ಕೂ ಹೆಚ್ಚು ಪ್ರಾಚೀನ ಕಲಾಕೃತಿಗಳನ್ನು ಭಾರತಕ್ಕೆ ಹಿಂತಿರುಗಿಸುವ ಅಮೆರಿಕದ ನಿರ್ಧಾರವನ್ನು ಸ್ವಾಗತಿಸಿದ್ದರು.