ನವ ದೆಹಲಿ: ಭಾರತದಲ್ಲಿ ನಡೆಯಲಿರುವ ಜಿ20 ಶೃಂಗಸಭೆಯಲ್ಲಿ (G20 Summit 2023) ಪಾಲ್ಗೊಳ್ಳುವುದಕ್ಕೆ ಅಮೆರಿಕದ ಅಧ್ಯಕ್ಷ (America President) ಜೋ ಬೈಡೆನ್ (Joe Biden) ಅವರೂ ಗೈರು ಹಾಜರಾಗುವ ಸಾಧ್ಯತೆಗಳಿವೆ. ಅವರ ಪತ್ನಿ ಜಿಲ್ ಬೈಡೆನ್ (jill Biden) ಅವರಿಗೆ ಕೊರೊನಾ ಸೋಂಕು ತಗುಲಿರುವ ಹಿನ್ನೆಲೆಯಲ್ಲಿ ಈ ಅನುಮಾನ ಸೃಷ್ಟಿಯಾಗಿದೆ. ಆದರೆ, ಈ ಬಗ್ಗೆ ಖಚಿತ ಮಾಹಿತಿ ಪ್ರಕಟವಾಗಿಲ್ಲ. ರಷ್ಯಾ ಅಧ್ಯಕ್ಷ ಬರುವುದಿಲ್ಲ ಎಂದು ಹೇಳಿದ ಬೆನ್ನಲ್ಲೇ ಅಮೇರಿಕದ ಅಧ್ಯಕ್ಷರ ಗೈರು ಹಾಜರಿಯಾಗುವ ಸಾಧ್ಯತೆಗಳು ದಟ್ಟವಾಗಿವೆ.
ಅಧ್ಯಕ್ಷ ಜೋ ಬೈಡನ್ ಅವರ ಪತ್ನಿಯ ಕೊರೊನಾ ಪಾಸಿಟಿವ್ ಪರೀಕ್ಷೆಯ ನಂತರ ಜೋ ಕೂಡ ಪರೀಕ್ಷೆಗೆ ಒಳಗಾಗಿದ್ದರು. ಆದರೆ ಅವರ ಫಲಿತಾಂಶಗಳು ನೆಗೆಟಿವ್ ಬಂದಿದೆ. ಶ್ವೇತಭವನದ ಪತ್ರಿಕಾ ಕಾರ್ಯದರ್ಶಿ ಕರಿನ್ ಜೀನ್-ಪಿಯರೆ ಅವರು ಅಧ್ಯಕ್ಷರು ನಿಯಮಿತವಾಗಿ ಪರೀಕ್ಷೆಯನ್ನು ಮುಂದುವರಿಸುತ್ತಾರೆ ಮತ್ತು ರೋಗಲಕ್ಷಣಗಳಿಗಾಗಿ ಮೇಲ್ವಿಚಾರಣೆ ಮಾಡಲಾಗುವುದು ಎಂದು ಹೇಳಿದರು.
ಜಿಲ್ ಬೈಡನ್ ಸದ್ಯಕ್ಕೆ ಡೆಲಾವೇರನ್ ರೆಹೋಬೋತ್ ಬೀಚ್ನಲ್ಲಿರುವ ದಂಪತಿಗಳ ಮನೆಯಲ್ಲಿಯೇ ಉಳಿಯಲಿದ್ದಾರೆ ಎಂದು ಸಂವಹನ ನಿರ್ದೇಶಕ ಎಲಿಜಬೆತ್ ಅಲೆಕ್ಸಾಂಡರ್ ತಿಳಿಸಿದ್ದಾರೆ. ಅಮೆರಿಕದ ಪ್ರಥಮ ಮಹಿಳೆ ಮಂಗಳವಾರ ಉತ್ತರ ವರ್ಜೀನಿಯಾ ಕಮ್ಯುನಿಟಿ ಕಾಲೇಜಿನಲ್ಲಿ ಹೊಸ ಶಾಲಾ ವರ್ಷವನ್ನು ಪ್ರಾರಂಭಿಸಲು ಯೋಜಿಸಿದ್ದರು, ಅಲ್ಲಿ ಅವರು ಇಂಗ್ಲಿಷ್ ಮತ್ತು ಬರವಣಿಗೆಯನ್ನು ಕಲಿಸುತ್ತಾರೆ.
ಇಡಾಲಿಯಾ ಚಂಡಮಾರುತದಿಂದ ಉಂಟಾದ ಹಾನಿಯನ್ನು ಪರಿಶೀಲಿಸಲು ಜಿಲ್ ಬೈಡೆನ್ ಶನಿವಾರ ತನ್ನ ಪತಿಯೊಂದಿಗೆ ಫ್ಲೋರಿಡಾಕ್ಕೆ ಪ್ರಯಾಣಿಸಿದ್ದರು. ಅಧ್ಯಕ್ಷ ಬಿಡೆನ್ ಸೋಮವಾರ ಫಿಲಡೆಲ್ಫಿಯಾದಲ್ಲಿ ನಡೆದ ಯೂನಿಯನ್ ಕಾರ್ಯಕ್ರಮಕ್ಕೆ ಪ್ರಯಾಣಿಸುವ ಮೊದಲು ಕಾರ್ಮಿಕ ದಿನದ ವಾರಾಂತ್ಯದ ಒಂದು ಭಾಗವನ್ನು ಡೆಲಾವೇರ್ ಬೀಚ್ ಹೌಸ್ನಲ್ಲಿ ಸಮಯ ಕಳೆದಿದ್ದರು.
ಶೃಂಗದಲ್ಲಿ ಪಾಲ್ಗೊಳ್ಳಲಾರೆ! ಪ್ರಧಾನಿ ಮೋದಿಗೆ ಫೋನ್ ಮಾಡಿ ಮಾಹಿತಿ ನೀಡಿದ ಪುಟಿನ್
ಪ್ರಧಾನಿ ನರೇಂದ್ರ ಮೋದಿ (Prime Minister Narendra Modi) ಮತ್ತು ರಷ್ಯಾ ಅಧ್ಯಕ್ಷ ವ್ಲಾದಿಮಿರ್ ಪುಟಿನ್ (Russia President Vladimir Putin) ಅವರ ಪರಸ್ಪರ ದೂರವಾಣಿ ಕರೆ ಮಾಡಿ(Phone Call), ದ್ವಿಪಕ್ಷೀಯ ಸಂಬಂಧಗಳ ಕುರಿತು ಮಾತುಕತೆ ನಡೆಸಿದ್ದಾರೆ. ಈ ವೇಳೆ, ಸೆಪ್ಟೆಂಬರ್ 9 ಮತ್ತು 10ರಂದು ನಡೆಯಲಿರುವ ಜಿ20 ಶೃಂಗ ಸಭೆಯಲ್ಲಿ (G20 Summit 2023) ತಾವೇಕೆ ಪಾಲ್ಗೊಳ್ಳಲಾಗುವುದಿಲ್ಲ ಎಂಬ ಕುರಿತು ಪ್ರಧಾನಿ ಮೋದಿ ಅವರಿಗೆ ರಷ್ಯಾ ಅಧ್ಯಕ್ಷ ವ್ಲಾದಿಮಿರ್ ಪುಟಿನ್ ಅವರು ವಿವರಿಸಿದ್ದಾರೆ.
ಉಭಯ ನಾಯಕರು ದ್ವಿಪಕ್ಷೀಯ ಸಹಕಾರದ ಹಲವಾರು ವಿಷಯಗಳ ಪ್ರಗತಿಯನ್ನು ಪರಿಶೀಲಿಸಿದರು. ಇತ್ತೀಚೆಗೆ ಜೋಹಾನ್ಸ್‌ಬರ್ಗ್‌ನಲ್ಲಿ ಮುಕ್ತಾಯಗೊಂಡ ಬ್ರಿಕ್ಸ್ ಶೃಂಗಸಭೆ ಸೇರಿದಂತೆ ಪ್ರಾದೇಶಿಕ ಮತ್ತು ಜಾಗತಿಕ ವಿಷಯಗಳ ಕುರಿತು ಅಭಿಪ್ರಾಯಗಳನ್ನು ವಿನಿಮಯ ಮಾಡಿಕೊಂಡರು ಎಂದು ಪ್ರಧಾನಮಂತ್ರಿ ಕಚೇರಿ ಹೇಳಿಕೆಯಲ್ಲಿ ತಿಳಿಸಿದೆ.
ಇದೇ ವೇಳೆ, ಪುಟಿನ್ ಅವರು ದಿಲ್ಲಿಯಲ್ಲಿ ನಡೆಯಲಿರುವ ಜಿ20 ಶೃಂಗ ಸಮ್ಮೇಳನದಲ್ಲಿ ಪಾಲ್ಗೊಳ್ಳಲು ಸಾಧ್ಯವಾಗುವುದಿಲ್ಲ ಎಂಬ ಮಾಹಿತಿಯನ್ನು ನೀಡಿದರು. ತಮ್ಮ ಬದಲಿಗೆ ರಷ್ಯಾದ ವಿದೇಶಾಂಗ ಸಚಿವ ಸೆರ್ಗೆ ಲಾವ್ರೊವ್ ಭಾಗವಹಿಸಲಿದ್ದಾರೆಂದು ಮೋದಿ ಅವರಿಗೆ ಪುಟಿನ್ ತಿಳಿಸಿದರು.
ರಷ್ಯಾ ನಿರ್ಧಾರವನ್ನು ಗೌರವಿಸಿದ ಪ್ರಧಾನಿ ನರೇಂದ್ರ ಮೋದಿ ಅವರು, ಭಾರತದ ಜಿ20 ಅಧ್ಯಕ್ಷತೆಯಲ್ಲಿ ಕೈಗೊಳ್ಳಲಾದ ಎಲ್ಲ ನಿರ್ಧಾರಗಳಿಗೆ ನಿರಂತರ ಬೆಂಬಲ ನೀಡಿದ ರಷ್ಯಾಗೆ ಅಭಿನಂದನೆಗಳನ್ನು ಸಲ್ಲಿಸಿದರು. ನವೆದಹಲಿಯಲ್ಲಿ ಸೆಪ್ಟೆಂಬರ್ 9ರಿಂದ 10ರವರೆಗೆ ನವದೆಹಲಿಯಲ್ಲಿ ಜಿ20 ಶೃಂಗಸಭೆ ನಡೆಯಲಿದೆ. ಜಿ20 ರಾಷ್ಟ್ರಗಳ ನಾಯಕರ ಈ ಸಮಾವೇಶದಲ್ಲಿ ರಷ್ಯಾ ಅಧ್ಯಕ್ಷ ವ್ಲಾದಿಮಿರ್ ಪುಟಿನ್ ಅವರು ಪಾಲ್ಗೊಳ್ಳುವುದಿಲ್ಲ ಎಂದು ಆಗಸ್ಟ್ 25ರಂದು ರಷ್ಯನ್ ಸರ್ಕಾರ ಘೋಷಣೆ ಮಾಡಿತ್ತು.
G20 Summit 2023: ಜಿ20 ಶೃಂಗ ಸಭೆಯ ಆತಿಥ್ಯ ರಾಷ್ಟ್ರ ಭಾರತದಿಂದ ಭರದ ಸಿದ್ಧತೆ!
ಜಿ20 ಶೃಂಗಸಭೆಗೆ (G20 Summit 2023) ಆತಿಥ್ಯವನ್ನು ವಹಿಸುತ್ತಿರುವ ಭಾರತವು ಇದಕ್ಕಾಗಿ ಸಕಲ ಸಿದ್ಧತೆಯನ್ನು ಮಾಡಿಕೊಳ್ಳುತ್ತಿದೆ. ದಿಲ್ಲಿಯಲ್ಲಿ (New Delhi) ಸೆಪ್ಟೆಂಬರ್ 9ರಿಂದ 10ರವರೆಗೆ ನಡೆಯಲಿರುವ ಈ ಶೃಂಗಸಭೆಯಲ್ಲಿ 25 ರಾಷ್ಟ್ರಗಳ ನಾಯಕರು (Leaders From 25 Countries) ಹಾಗೂ ಜನಪ್ರತಿನಿಧಿಗಳು ಪಾಲ್ಗೊಳ್ಳಲಿದ್ದಾರೆ. ಜಿ20 ಶೃಂಗಸಭೆಯು ಭಾರತಕ್ಕೆ (Host Country India) ಈ ರೀತಿಯ ಮೊದಲ ಕಾರ್ಯಕ್ರಮವಾಗಿದ್ದು, ಶೃಂಗಸಭೆಯು ಯಾವುದೇ ತೊಂದರೆಯಿಲ್ಲದೆ ಮುಕ್ತಾಯಗೊಳ್ಳುವುದನ್ನು ಖಚಿತಪಡಿಸಿಕೊಳ್ಳಲು ಸರ್ಕಾರವು ಅವಿರತವಾಗಿ ದುಡಿಯುತ್ತಿದೆ.
ವಿಶ್ವ ನಾಯಕರ ಭದ್ರತೆಗೆ ವಿಶೇಷ ಆದ್ಯತೆ
ಶೃಂಗ ಸಭೆ ನಡೆಯಲಿರುವ ರಾಷ್ಟ್ರ ರಾಜಧಾನಿ ದಿಲ್ಲಿಯಲ್ಲಿರುವ ಎಲ್ಲ ಉನ್ನತ ಮಟ್ಟದ ಹೊಟೇಲ್‌ಗಳನ್ನು ಅಂತಾರಾಷ್ಟ್ರೀಯ ಅತಿಥಿಗಳಿಗಾಗಿ ಮುಂಗಡವಾಗಿ ಬುಕ್ ಮಾಡಲಾಗಿದೆ. ಕಾರ್ಯಕ್ರಮದ ವೇಲೆ ಸಂಚಾರ ದಟ್ಟಣೆಯನ್ನು ತಪ್ಪಿಸುವುದಕ್ಕಾಗಿ ದಿಲ್ಲಿ ಪೊಲೀಸರು ಟ್ರಾಫಿಕ್ ರಿಹರ್ಸಲ್ ಮಾಡುತ್ತಿದ್ದಾರೆ. ನವದೆಹಲಿಯಲ್ಲಿ ನಡೆಯಲಿರುವ ಜಿ20 ಶೃಂಗಸಭೆ 2023 ಭದ್ರತೆಯ ದೃಷ್ಟಿಯಿಂದ ಒಂದು ನಿರ್ಣಾಯಕ ಘಟನೆಯಾಗಿದೆ ಮತ್ತು ಅದಕ್ಕಾಗಿಯೇ ಭಾರತ ಸರ್ಕಾರವು ಭೇಟಿ ನೀಡುವ ನಾಯಕರ ಭದ್ರತಾ ಅಗತ್ಯಗಳನ್ನು ಸರಿಹೊಂದಿಸಲು 20 ಆಡಿ ಬುಲೆಟ್ ರೆಸಿಸ್ಟೆಂಟ್ ಕಾರುಗಳನ್ನು 18 ಕೋಟಿ ರೂ. ಬಾಡಿಗೆಗೆ ಪಡೆದಿದೆ.
ದಿಲ್ಲಿಯಲ್ಲಿ ಸಾರ್ವಜನಿಕ ರಜೆ
ಬುಲೆಟ್ ರೆಸಿಸ್ಟೆಂಟ್ ಕಾರುಗಳನ್ನು ವಿವಿಧ ರಾಷ್ಟ್ರಗಳ ನಾಯಕರು ಮತ್ತು ಸರ್ಕಾರದ ಮುಖ್ಯಸ್ಥರಿಗೆ ವಹಿಸುವುದು ಪ್ರೋಟೋಕಾಲ್ ಕಾರ್ಯವಿಧಾನವಾಗಿದೆ. ನವದಿಲ್ಲಿಯಲ್ಲಿ ನಡೆಯುವ ಶೃಂಗಸಭೆಯು ವರ್ಷವಿಡೀ ನಡೆದ ಎಲ್ಲಾ G20 ಸಭೆಗಳು ಮತ್ತು ಪ್ರಕ್ರಿಯೆಗಳ ಅಂತಿಮಘಟ್ಟವಾಗಿದೆ. ಮೆಗಾ ಈವೆಂಟ್ ಯಾವುದೇ ಗೊಂದಲವಿಲ್ಲದೆ ನಡೆಯುವುದನ್ನು ಖಚಿತಪಡಿಸಿಕೊಳ್ಳಲು ದೆಹಲಿ ಮುಖ್ಯಮಂತ್ರಿ ಅರವಿಂದ್ ಕೇಜ್ರಿವಾಲ್ ಅವರು ಸೆಪ್ಟೆಂಬರ್ 8-10 ರವರೆಗೆ ದೆಹಲಿಯಲ್ಲಿ ಸಾರ್ವಜನಿಕ ರಜೆ ಘೋಷಿಸಿದ್ದಾರೆ.
ಯಾವ ರಾಷ್ಟ್ರಗಳು, ಸಂಘಟನೆಗಳು ಭಾಗವಹಿಸುತ್ತಿವೆ?
ಜಿ20 ಗ್ರೂಪ್‌ನ 20 ಸದಸ್ಯ ರಾಷ್ಟ್ರಗಳನ್ನು ಹೊರತುಪಡಿಸಿ, 9 ದೇಶಗಳ ನಾಯಕರನ್ನು ಈ ಶೃಂಗ ಸಭೆಗೆ ಸೇರಲು ಆಹ್ವಾನಿಸಲಾಗಿದೆ. ವಿಶ್ವಸಂಸ್ಥೆ, ಐಎಂಎಫ್, ವಿಶ್ವ ಬ್ಯಾಂಕ್, ವಿಶ್ವ ಆರೋಗ್ಯ ಸಂಸ್ಥೆ, ಐಎಲ್ಒ, ವಿಶ್ವ ವ್ಯಾಪಾರ ಸಂಘಟನೆ, ಎಫ್ಎಸ್‌ಬಿ, ಒಇಸಿಡಿ ಪಾಲ್ಗೊಳ್ಳಲಿವೆ. ಅಲ್ಲದೇ, ಎಯು, ಎುಡಿಎ-ಎನ್ಇಪಿಎಡಿ, ಆಸಿಯಾನ್ ಸೇರಿದಂತೆ ಪ್ರಾದೇಶಿಕ ಸಂಸ್ಥೆಗಳ ಚೇರ್ಮನ್‌ಗಳಿಗೆ ಆಹ್ವಾನ ನೀಡಲಾಗಿದೆ.