Site icon Vistara News

Arunachal Pradesh: ಅರುಣಾಚಲ ಪ್ರದೇಶ ಭಾರತದ ಅವಿಭಾಜ್ಯ ಅಂಗ: ಅಮೆರಿಕ

white house

ಹೊಸದಿಲ್ಲಿ: ಅರುಣಾಚಲ ಪ್ರದೇಶ (Arunachal Pradesh) ಭಾರತದ ಅವಿಭಾಜ್ಯ ಅಂಗವಾಗಿದೆ ಎಂದು ಅಮೆರಿಕದ ಸೆನೆಟ್‌ನ ವಿದೇಶಿ ಸಂಬಂಧಗಳ ಸಮಿತಿಯು (US Senate Foreign Relations Committee- SFRC) ಹೇಳಿದೆ. ಈ ಕುರಿತು ದೃಢೀಕರಿಸುವ ನಿರ್ಣಯವನ್ನು ಸಮಿತಿ ಅನುಮೋದಿಸಿದೆ.

SFRC ನಿರ್ಣಯವು ಮಹತ್ವದ್ದಾಗಿದ್ದು, ಮುಂದೆ ಸೆನೆಟ್‌ ತೆಗೆದುಕೊಳ್ಳಬಹುದಾದ ಮಹತ್ವದ ನಿರ್ಣಯಕ್ಕೆ ಸಂಭಾವ್ಯ ಪೀಠಿಕೆಯಾಗಿದೆ. ಈ ಕುರಿತ ನಿರ್ಣಯವನ್ನು ಒರೆಗಾನ್‌ನ ಜೆಫ್ ಮರ್ಕ್ಲಿ ಮತ್ತು ಟೆನ್ನೆಸ್ಸೀಯ ಬಿಲ್ ಹ್ಯಾಗರ್ಟಿ ಮಂಡಿಸಿದರು; ಟೆಕ್ಸಾಸ್‌ನ ಜಾನ್ ಕಾರ್ನಿನ್, ವರ್ಜಿನಿಯಾದ ಟಿಮ್ ಕೈನೆ ಮತ್ತು ಮೇರಿಲ್ಯಾಂಡ್‌ನ ಕ್ರಿಸ್ ವ್ಯಾನ್ ಹೋಲೆನ್ ಅನುಮೋದಿಸಿದರು.

ಫೆಬ್ರವರಿಯಲ್ಲಿ ಈ ನಿರ್ಣಯವನ್ನು ಮೊದಲು ಪರಿಚಯಿಸಲಾಯಿತು. ʼಚೀನಾದ ಆಕ್ರಮಣಶೀಲತೆ ಮತ್ತು ಭದ್ರತಾ ಬೆದರಿಕೆಗಳ ವಿರುದ್ಧ ತನ್ನನ್ನು ರಕ್ಷಿಸಿಕೊಳ್ಳಲು ಭಾರತ ಸರ್ಕಾರ ತೆಗೆದುಕೊಂಡ ಕ್ರಮಗಳಿಗಾಗಿ ಭಾರತವನ್ನು ಸಮಿತಿ ಶ್ಲಾಘಿಸಿದೆ. ಭಾರತದ ಭದ್ರತಾ ಆಧುನೀಕರಣವನ್ನು ಬೆಂಬಲಿಸಿದೆ. ಚೀನಾ ಗಡಿಯಲ್ಲಿ ಮೂಲಸೌಕರ್ಯ ಸುಧಾರಿಸಲು ತೆಗೆದುಕೊಂಡ ಕ್ರಮಗಳನ್ನು ಒಳಗೊಂಡಂತೆ ಅರುಣಾಚಲ ಪ್ರದೇಶದಲ್ಲಿ ಭಾರತದ ಅಭಿವೃದ್ಧಿ ಪ್ರಯತ್ನಗಳನ್ನು ಮೆಚ್ಚಿದೆ. ಈ ಪ್ರದೇಶದಲ್ಲಿ ಅಮೆರಿಕ ತನ್ನ ಸಹಾಯವನ್ನು ನೀಡಲು ಬದ್ಧವಾಗಿದೆ ಎಂದಿದೆ. ಅರುಣಾಚಲ ಪ್ರದೇಶಕ್ಕೆ ತಮ್ಮದೇ ಆದ ಸಹಾಯ ಹೆಚ್ಚಿಸಲು ಸಮಾನ ಮನಸ್ಕ ಪಾಲುದಾರರನ್ನು ಪ್ರೋತ್ಸಾಹಿಸಿದೆ. ನಿರ್ಣಾಯಕ ತಂತ್ರಜ್ಞಾನಗಳಲ್ಲಿ ಅಮೆರಿಕ- ಭಾರತದ ದ್ವಿಪಕ್ಷೀಯ ಪಾಲುದಾರಿಕೆಗೆ ಬಲವಾದ ಬೆಂಬಲವನ್ನು ವ್ಯಕ್ತಪಡಿಸಿದೆ.

SFRCಯ ಈ ನಿರ್ಣಯವು, ಅಮೆರಿಕದ ಸೆನೆಟ್ ಭಾರತಕ್ಕೆ ಬಲವಾದ ಬೆಂಬಲದ ಮೂಲವಾಗಿ ಹೊರಹೊಮ್ಮುತ್ತಿದೆ ಎಂಬುದರ ಇನ್ನೊಂದು ಸಂಕೇತವಾಗಿದೆ. ಭಾರತದೊಂದಿಗೆ ಹೆಚ್ಚಿನ ರಕ್ಷಣಾ ಮತ್ತು ಭದ್ರತಾ ಸಂಬಂಧಗಳನ್ನು ಇದು ಪ್ರತಿಪಾದಿಸಿದೆಯಲ್ಲದೆ, ಭಾರತೀಯ ರಾಜಕೀಯ ನಾಯಕತ್ವದೊಂದಿಗೆ ಉನ್ನತ ಮಟ್ಟದ ಸಂಬಂಧವನ್ನು ಹೆಚ್ಚಿಸಿದೆ. ಇದು ಭವಿಷ್ಯದಲ್ಲಿ ದ್ವಿಪಕ್ಷೀಯ ಸಂಬಂಧಗಳನ್ನು ಗಾಢವಾಗಿಸುವ ರಕ್ಷಣಾ ಮತ್ತು ತಂತ್ರಜ್ಞಾನ ಕ್ಷೇತ್ರಗಳ ಒಪ್ಪಂದಗಳು ಹಾಗೂ ವಿನಾಯಿತಿಗಳನ್ನು ಪ್ರಚೋದಿಸಲಿದೆ ಎಂದು ನಿರೀಕ್ಷಿಸಲಾಗಿದೆ.

1962ರಿಂದಲೂ ಅಮೆರಿಕದ ಸರ್ಕಾರಗಳು ಅರುಣಾಚಲವನ್ನು ಭಾರತದ ಭಾಗವೆಂದೇ ಗುರುತಿಸಿವೆ. ಆದರೆ ಈ ಔಪಚಾರಿಕ ಶಾಸಕಾಂಗ ಸಮಿತಿಯ ನಿರ್ಣಯದಿಂದ, ಭಾರತದ ಹಕ್ಕಿಗೆ ಇನ್ನಷ್ಟು ನ್ಯಾಯಸಮ್ಮತ ಮಾನ್ಯತೆ ಬಂದಂತಾಗಿದೆ. ಈ ಸಮಿತಿ ಚೀನಾವನ್ನು ಖಂಡಿಸಿದ್ದಲ್ಲದೆ, ಚೀನಾವನ್ನು ಎದುರಿಸಲು ಭಾರತ ಕೈಗೊಂಡ ಕ್ರಮಗಳನ್ನು ಸ್ಪಷ್ಟವಾಗಿ ಬೆಂಬಲಿಸಿದೆ. ಈ ನಿಟ್ಟಿನಲ್ಲಿ ಇದು ಅಮೆರಿಕದ ಶಾಸಕಾಂಗದ ಈ ರೀತಿಯ ಮೊದಲ ಸ್ಪಷ್ಟವಾದ ನಿರ್ಣಯ ಹಾಗೂ ಪ್ರಗತಿಪರವಾದ ಡೆಮಾಕ್ರಟಿಕ್ ಪಕ್ಷದ ಕಡೆಯಿಂದಲೂ ಇದು ಸ್ಪಷ್ಟವಾದ ಮೊದಲ ನಿರ್ಣಯವಾಗಿದೆ.

ಅಮೆರಿಕ ಸರ್ಕಾರದ ವಿದೇಶಾಂಗ ನೀತಿಯನ್ನು ರೂಪಿಸುವಲ್ಲಿ ಇಲ್ಲಿನ ಕಾಂಗ್ರೆಸ್ ಪ್ರಮುಖವಾಗಿದೆ. ಅಮೆರಿಕ ಸೆನೆಟ್‌ನಿಂದ ಭಾರತಕ್ಕೆ ಹೆಚ್ಚುತ್ತಿರುವ ಬೆಂಬಲವು ಅದರ ಇತ್ತೀಚಿನ ಹಲವಾರು ಕ್ರಮಗಳಲ್ಲಿ ಪ್ರತಿಫಲಿಸಿದೆ. ಈ ವಾರದ ಆರಂಭದಲ್ಲಿ, ಸೆನೆಟ್ ಸಶಸ್ತ್ರ ಸೇವೆಗಳ ಸಮಿತಿಯು ಕೃತಕ ಬುದ್ಧಿಮತ್ತೆ, ಸಮುದ್ರದೊಳಗಿನ ಡೊಮೇನ್ ಜಾಗೃತಿ, ವಾಯು ಮತ್ತು ಯುದ್ಧ ಬೆಂಬಲ, ಯುದ್ಧಸಾಮಗ್ರಿಗಳು ಸೇರಿದಂತೆ ಹಲವಾರು ಕ್ಷೇತ್ರಗಳಲ್ಲಿ ಭಾರತದೊಂದಿಗೆ ರಕ್ಷಣಾ ಸಹಕಾರವನ್ನು ಗಾಢವಾಗಿಸಲು ಪೆಂಟಗನ್‌ಗೆ ನಿರ್ದೇಶಿಸಿತು. ಉಭಯ ದೇಶಗಳ ಜಂಟಿ ಕಾರ್ಯಾಚರಣೆಗಳು ಮತ್ತು ಅಮೆರಿಕದ ಹೊರಗೆ ಇರುವ ದೇಶದ ರಕ್ಷಣಾ ಉಪಕರಣಗಳ ದುರಸ್ತಿಗಾಗಿ ಭಾರತೀಯ ಕಂಪನಿಗಳು ಬಿಡ್ ಮಾಡುವ ಸಾಧ್ಯತೆಯನ್ನು ಕೂಡ ಅನ್ವೇಷಿಸಲು ತಿಳಿಸಿದೆ.

ಇದನ್ನೂ ಓದಿ: Amit Shah: ದೇಶದ ಒಂದಿಂಚೂ ಜಾಗ ಬಿಡಲ್ಲ; ಅರುಣಾಚಲ ಪ್ರದೇಶದಲ್ಲಿ ಚೀನಾಗೆ ಅಮಿತ್‌ ಶಾ ಸ್ಪಷ್ಟ ಸಂದೇಶ

Exit mobile version