Site icon Vistara News

Shoot Out: ಕಾರಿನೊಳಗೆ ಮಲಗಿದ್ದ ಉದ್ಯಮಿ ಮೇಲೆ 30 ಗುಂಡು ಹಾರಿಸಿದರು; ವಿಡಿಯೊ ಇದೆ

haryana shoot out

haryana shoot out

ಚಂಡೀಗಢ: ಢಾಬಾದ ಪಾರ್ಕಿಂಗ್ ಲಾಟ್‌ನಲ್ಲಿ ನಿಲ್ಲಿಸಿದ್ದ ತಮ್ಮ ಎಸ್‌ಯುವಿ ಒಳಗೆ ನಿದ್ರಿಸುತ್ತಿದ್ದ ಉದ್ಯಮಿಯನ್ನು ಅಪರಿಚಿತ ವ್ಯಕ್ತಿಗಳು ಹೊರಗೆ ಎಳೆದು ಗುಂಡು ಹಾರಿಸಿ ಭೀಕರವಾಗಿ ಕೊಂದು ಪರಾರಿಯಾದ ಘಟನೆ ಹರಿಯಾಣದ ಮುರ್ಥಾಲ್‌ನಲ್ಲಿ ಭಾನುವಾರ ಬೆಳಗ್ಗೆ ನಡೆದಿದೆ. ಹತ್ಯೆಗೀಡಾದ ವ್ಯಕ್ತಿಯನ್ನು ಗೊಹಾನಾದ ಸಾರಗ್ತಲ್ ಗ್ರಾಮದ ನಿವಾಸಿ 38 ವರ್ಷದ ಮದ್ಯದ ವ್ಯಾಪಾರಿ ಸುಂದರ್ ಮಲಿಕ್‌ ಎಂದು ಗುರುತಿಸಲಾಗಿದೆ. ಸದ್ಯ ಘಟನೆಯ ವಿಡಿಯೊ ಸೋಷಿಯಲ್‌ ಮೀಡಿಯಾದಲ್ಲಿ ವೈರಲ್‌ ಆಗಿದೆ (Viral Video).

ಬೆಳಗ್ಗೆ 8.30ರ ಸುಮಾರಿಗೆ ಗುಲ್ಶನ್ ಢಾಬಾದಲ್ಲಿ ಈ ಘಟನೆ ನಡೆದಿದೆ. ಹರಿಯಾಣದ ಜಜ್ಜರ್‌ನಲ್ಲಿ ಎಸ್‌ಯುವಿಯಲ್ಲಿ ಪ್ರಯಾಣಿಸುತ್ತಿದ್ದ ಐಎನ್‌ಎಲ್‌ಡಿ ನಾಯಕ ನಫೆ ಸಿಂಗ್ ರಾಠಿ ಅವರನ್ನು ಅಪರಿಚಿತ ಬಂದೂಕುಧಾರಿಗಳು ಬರ್ಬರವಾಗಿ ಹತ್ಯೆ ನಡೆಸಿದ ಕೆಲವೇ ವಾರಗಳಲ್ಲಿ ಈ ಕೃತ್ಯ ನಡೆದಿರುವುದು ಸ್ಥಳೀಯರಲ್ಲಿ ಆತಂಕ ಮೂಡಿಸಿದೆ.

ಗುಲ್ಷನ್ ಢಾಬಾದ ಹಿಂಭಾಗದಲ್ಲಿನ ಪಾರ್ಕಿಂಗ್ ಲಾಟ್‌ನಲ್ಲಿದ್ದ ಸುಂದರ್ ಮಲಿಕ್‌ ಮೇಲೆ ಇಬ್ಬರು ವ್ಯಕ್ತಿಗಳು ಮನಬಂದಂತೆ ಗುಂಡಿನ ದಾಳಿ ನಡೆಸಿದ್ದಾರೆ. ದಾಳಿಕೋರರು ಸುಮಾರು 30 ಸುತ್ತು ಗುಂಡುಗಳನ್ನು ಹಾರಿಸಿದ್ದಾರೆ ಎನ್ನಲಾಗಿದ್ದು, ಈ ಹತ್ಯೆಯ ದೃಶ್ಯ ಸಿಸಿಟಿವಿ ಕ್ಯಾಮೆರಾದಲ್ಲಿ ಸೆರೆಯಾಗಿ ಇದೀಗ ಎಲ್ಲೆಡೆ ಹರಿದಾಡುತ್ತಿದೆ.

ವಿಡಿಯೊದಲ್ಲೇನಿದೆ?

ಕಾರಿನಿಂದ ಹೊರಗೆ ಬಂದ ಮಲಿಕ್‌ ಮೇಲೆ ಇಬ್ಬರು ದಾಳಿ ನಡೆಸುತ್ತಾರೆ. ಆಗ ಮಲಿಕ್‌ ಪ್ರತಿರೋಧ ಒಡ್ಡಿ ದಾಳಿಕೋರರ ಪೈಕಿ ಒಬ್ಬಾತನನ್ನು ಬೀಳಿಸುತ್ತಾರೆ. ಆಗ ಇನ್ನೊಬ್ಬ ಮಲಿಕ್‌ ಮೇಲೆ ಗುಂಡಿನ ದಾಳಿ ನಡೆಸುತ್ತಾನೆ. ಬಳಿಕ ಮಲಿಕ್‌ ಹಿಡಿತದಿಂದ ದಾಳಿಕೋರ ತನ್ನನ್ನು ಬಿಡಿಸಿಕೊಳ್ಳುತ್ತಾನೆ. ಮಲಿಕ್‌ ಮೃತ ಪಟ್ಟ ಬಳಿಕವೂ ದಾಳಿಕೋರ ಗುಂಡಿನ ಮಳೆಗೆರೆಯುತ್ತಿರುವುದು ವಿಡಿಯೊದಲ್ಲಿ ಕಂಡು ಬಂದಿದೆ.

ʼʼಮಲಿಕ್‌ ಮೇಲೆ ದಾಳಿ ನಡೆಸಿದ ಇಬ್ಬರು ಅಥವಾ ಮೂವರು ಶೂಟರ್‌ಗಳು ಹೊಂಡಾ ಸಿಟಿ ಕಾರ್‌ನಿಂದ ಇಳಿಯುವುದು ಕಂಡು ಬಂದಿದೆ. ಶೂಟಿಂಗ್ ಕುರಿತಂತೆ ಏಳು ಪೊಲೀಸ್ ತಂಡಗಳು ತನಿಖೆ ನಡೆಸುತ್ತಿದ್ದು, ಆರೋಪಿಗಳನ್ನು ಶೀಘ್ರದಲ್ಲಿಯೇ ಬಂಧಿಸಲಾಗುವುದುʼʼ ಎಂದು ಸೋನಿಪತ್ ಡಿಸಿಪಿ ಗೌರವ್ ರಾಜಪುರೋಹಿತ್ ಮಾಹಿತಿ ನೀಡಿದ್ದಾರೆ. ʼʼಮಲಿಕ್‌ ಕುಟುಂಬ ಸದಸ್ಯರೊಂದಿಗೆ ಮಾತುಕತೆ ನಡೆಸಿ ಮುಂದಿನ ಕ್ರಮ ಕೈಗೊಳ್ಳಲಾಗುವುದುʼʼ ಎಂದು ಅವರು ಹೇಳಿದ್ದಾರೆ. ಸದ್ಯ ಈ ದಾಳಿಗೆ ಕಾರಣ ತಿಳಿದು ಬಂದಿಲ್ಲ. ಮಲಿಕ್‌ ಹಿನ್ನೆಲೆ ಸೇರಿದಂತೆ ಎಲ್ಲ ಆಯಾಮಗಳಲ್ಲಿಯೂ ತನಿಖೆ ನಡೆಸಲಾಗುವುದು ಎಂದು ಪೊಲೀಸರು ಮಾಹಿತಿ ನೀಡಿದ್ದಾರೆ.

ಇದನ್ನೂ ಓದಿ: Nafe Singh Rathee: ಹರ್ಯಾಣ ಐಎನ್‌ಎಲ್‌ಡಿ ನಾಯಕ ರಾಠಿ ಹತ್ಯೆ; ಗುಂಡು ಹಾರಿಸಿದ ಅಪರಿಚಿತರು

ಬೆಚ್ಚಿ ಬೀಳಿಸಿದ್ದ ಐಎನ್‌ಎಲ್‌ಡಿ ನಾಯಕ ರಾಠಿ ಹತ್ಯೆ

ಕಳೆದ ತಿಂಗಳು ನಡೆದ ನಫೆ ಸಿಂಗ್ ರಾಠಿ ಅವರ ಹತ್ಯೆ ದೇಶವನ್ನೇ ಬೆಚ್ಚಿ ಬೀಳಿಸಿತ್ತು. ಮಾಜಿ ಶಾಸಕರೂ ಆಗಿರುವ ಐಎನ್‌ಡಿಎಲ್ ಹರಿಯಾಣದ ಘಟಕದ ಅಧ್ಯಕ್ಷ ರಾಠಿ ಫೆಬ್ರವರಿ 25ರಂದು ತಮ್ಮ ಎಸ್‌ಯುವಿ ಕಾರಿನಲ್ಲಿ ಪ್ರಯಾಣಿಸುತ್ತಿದ್ದರು. ಹರಿಯಾಣದ ಜಜ್ಜರ್‌ನ ಬಹದ್ದೂರ್‌ಗಢ ಪಟ್ಟಣದಲ್ಲಿ ರೈಲು ಕ್ರಾಸಿಂಗ್‌ಗಾಗಿ ರಾಠಿ ಅವರ ವಾಹನವನ್ನು ನಿಲ್ಲಿಸಲಾಗಿತ್ತು. ಆಗ ಸಿನಿಮೀಯ ಮಾದರಿಯ ಘಟನೆ ಸಂಭವಿಸಿತು. ಅಲ್ಲಿಗೆ ಆಗಮಿಸಿದ ಕಾರೊಂದು ರಾಠಿ ಅವರಿದ್ದ ಎಸ್‌ಯುವಿಗೆ ಡಿಕ್ಕಿ ಹೊಡೆಯಿತು. ಬಳಿಕ ಆ ನಿಗೂಢ ಕಾರಿನಿಂದ ಹೊರ ಬಂದ ಸುಮಾರು 5 ಮಂದಿ ರಾಠಿ ಅವರ ಮೇಲೆ ನಿರಂತರವಾಗಿ ಗುಂಡಿನ ಮಳೆಗೆರೆದರು. ಈ ವೇಳೆ 66 ವರ್ಷದ ರಾಠಿ ಮತ್ತು ಅವರ ಸಹಾಯಕ ಸಾವನ್ನಪ್ಪಿದರು.

ಈ ಸಂಗತಿಯ ಕುರಿತು ನಿಮ್ಮ ಅನಿಸಿಕೆ ಏನು? ಕಾಮೆಂಟ್ ಮೂಲಕ ತಿಳಿಸಿ

Exit mobile version