Site icon Vistara News

Viral video: ಭಾರತ ವಶಪಡಿಸಿಕೊಂಡು ಮೋದಿಗೆ ಬೇಡಿ ಬಿಗಿಯುವೆ! ಪಾಕ್‌ ಸೇನಾಧಿಕಾರಿಯ ಬಡಾಯಿ!

viral video pak military officer

ಕರಾಚಿ: ಭಾರತ ಹಾಗೂ ಪ್ರಧಾನ ಮಂತ್ರಿ ನರೇಂದ್ರ ಮೋದಿಯವರ (PM Narendra Modi) ಬಗ್ಗೆ ನಾಲಿಗೆ ಹರಿಬಿಟ್ಟು ಮಂದಿಯ ಮುಂದೆ ಚಪ್ಪಾಳೆ ಗಿಟ್ಟಿಸಿಕೊಂಡ ಪಾಕಿಸ್ತಾನದ ಸೇನಾಧಿಕಾರಿಯೊಬ್ಬ (Pakistan military) ಆನ್‌ಲೈನ್‌ನಲ್ಲಿ ಭರ್ಜರಿ ಟ್ರೋಲ್‌ (Viral video) ಆಗುತ್ತಿದ್ದಾನೆ.

ಪಾಕಿಸ್ತಾನದ ರಾಜಕಾರಣಿಗಳು ಹಾಗೂ ಕ್ರಿಕೆಟಿಗರು ಭಾರತದ ವಿರುದ್ಧ ಅಬ್ಬರದ ಹೇಳಿಕೆಗಳನ್ನು ನೀಡುವುದು ಸಾಮಾನ್ಯ. ಕಡೆಗೆ ತಮ್ಮ ನಾಲಿಗೆ ತಾವೇ ಕಚ್ಚಿಕೊಳ್ಳುವುದೂ ಸಾಮಾನ್ಯ. ಇದೂ ಕೂಡ ಅಂಥದೇ ಘಟನೆ. ಪಾಕಿಸ್ತಾನ ಸೇನೆಯ ಹಿರಿಯ ಅಧಿಕಾರಿಯೊಬ್ಬ ಒಂದಷ್ಟು ಜನರ ಗುಂಪಿನ ನಡುವೆ “ಭಾರತವನ್ನು ವಶಪಡಿಸಿಕೊಳ್ಳುತ್ತೇವೆ, ಪ್ರಧಾನಿ ನರೇಂದ್ರ ಮೋದಿಯನ್ನು (PM Narendra Modi) ಬಂಧಿಸುತ್ತೇವೆ ಎಂದೆಲ್ಲಾ ಹೇಳಿದ್ದಾನೆ. ಈ ವಿಡಿಯೊ ಸಾಮಾಜಿಕ ಜಾಲತಾಣಗಳಲ್ಲಿ (Social Media) ವೈರಲ್ ಆಗುತ್ತಿದೆ.

ಮುಸ್ಲಿಮರನ್ನು ಭಾರತದ ವಿರುದ್ಧ ಎತ್ತಿ ಕಟ್ಟುವುದನ್ನೇ ರೂಢಿ ಮಾಡಿಕೊಂಡಿರುವ ಪಾಕ್‌ ಸೈನ್ಯಕ್ಕೆ ಸೇರಿದ ಅಧಿಕಾರಿಯೊಬ್ಬ ಹೀಗೆ ಮಾಡಿದ್ದಾನೆ. ವಿಡಿಯೋದಲ್ಲಿ ಆತನ ದ್ವೇಷದ ಭಾಷಣ ದಾಖಲಾಗಿದೆ. ಭಾರತದ ಆಡಳಿತಗಾರ ಮೋದಿಯನ್ನು ನಾವು ಗುಲಾಮರನ್ನಾಗಿ ಮಾಡಿಕೊಳ್ಳುತ್ತೇವೆ. ಮೋದಿ ಕೈಗೆ ಸರಪಳಿ ಹಾಕಿ ಬಂಧಿಸುವುದನ್ನು ನಮ್ಮನ್ನು ಬಿಟ್ಟು ಬೇರೆ ಯಾರು ಬಯಸುತ್ತಾರೆ ಎಂದಿದ್ದಾನೆ. ನಂತರ ಪ್ಯಾಲೆಸ್ತೀನ್ ಅನ್ನು ಇಸ್ರೇಲ್‌ನಿಂದ ಬಿಡಿಸಿ ಸ್ವಾತಂತ್ರ್ಯ ಕೊಡಿಸುತ್ತೇವೆ ಎಂದು ಹೇಳಿದ್ದಾನೆ.

ಈ ತಿಕ್ಕಲನ ಮಾತು ಕೇಳಿ ಅಲ್ಲಿದ್ದವರೇನೋ ಚಪ್ಪಾಳೆ ತಟ್ಟಿದ್ದಾರೆ, ನಿಜ. ಆದರೆ ಆನ್‌ಲೈನ್‌ನಲ್ಲಿ ಮಾತ್ರ ಆತ ಭರ್ಜರಿ ಟ್ರೋಲ್‌ಗೆ ಗುರಿಯಾಗಿದ್ದಾನೆ. ಪಾಕಿಸ್ತಾನದ ಸೈನ್ಯ ಈ ಹಿಂದೆ ಭಾರತದ ಎದುರು ಏಟು ತಿಂದ, ಅಪಮಾನಕ್ಕೊಳಗಾದ ಘಟನೆಗಳನ್ನು ನೆನಪಿಸಿ ಗೇಲಿ ಮಾಡಿದ್ದಾರೆ.

“ತಿನ್ನಲು ಏನೂ ಸಿಗದೇ ಅಕ್ಕ ಪಕ್ಕದ ದೇಶಗಳ ಮುಂದೆ ಭಿಕ್ಷೆ ಬೇಡುತ್ತಿದ್ದರೂ ಧಿಮಾಕಿನ ಮಾತಿಗೆ ಏನೂ ಕಡಿಮೆ ಇಲ್ಲ. ನಮ್ಮ ದೇಶಕ್ಕೆ ಬರುವ ಕನಸು ಕಾಣುವ ಮೊದಲು ನಿಮ್ಮ ದೇಶದ ಪ್ರಜೆಗಳಿಗೆ ಹೊಟ್ಟೆ ತುಂಬಾ ಊಟ ಹಾಕು” ಎಂದು ಕೆಲವರು ತರಾಟೆಗೆ ತೆಗೆದುಕೊಂಡಿದ್ದಾರೆ. “ಜನಗಳ ಮುಂದೆ ಭಾರತದ ಪ್ರಧಾನಿಯನ್ನು ಬಂಧಿಸುತ್ತೇವೆ ಎಂದು ಜಂಭ ಕೊಚ್ಚಿಕೊಳ್ಳುವ ಪಾಕ್‌ ಸೈನ್ಯದವರು ಕೊನೆಗೆ ಆ ದೇಶದ ಪ್ರಧಾನಿಗಳನ್ನೇ ಬಂಧಿಸುತ್ತಾರೆ. ಹಲವು ದಶಕಗಳಿಂದ ಇದು ನಡೆಯುತ್ತಲೇ ಇದೆ. ಇಮ್ರಾನ್ ಖಾನ್, ಪರ್ವೇಜ್‌ ಮುಷರ್ರಫ್‌, ನವಾಜ್ ಷರೀಫ್‌ ಅವರ ಗತಿ ನೋಡಿ” ಎಂದು ಇನ್ನು ಹಲವರು ಕಾಲೆಳೆದಿದ್ದಾರೆ.

“ಭಾರತದ ಪ್ರಧಾನಿಯನ್ನು ಬಂಧಿಸುವ ಯೋಚನೆ ಮಾಡುವ ಮುನ್ನ ಪಾಕಿಸ್ತಾನ 1971ರ ಯುದ್ಧವನ್ನು ನೆಪಿಸಿಕೊಳ್ಳಲಿ. ಇಡೀ ಜಗತ್ತಿನಲ್ಲಿ ಅತಿ ಹೆಚ್ಚು ಸೈನಿಕರು ಶರಣಾಗಿದ್ದು ನಿಮ್ಮ ದೇಶದಿಂದಲೇ” ಎಂದು ಬಾಂಗ್ಲಾ ವಿಮೋಚನೆ ಸಂದರ್ಭದ ಫೋಟೋ ಜೊತೆಗೆ ಪೋಸ್ಟ್‌ ಮಾಡಿ ಆತನ ಜನ್ಮ ಜಾಲಾಡಿದ್ದಾರೆ. ಬಾಂಗ್ಲಾ ದೇಶ ವಿಮೋಚನೆಗಾಗಿ ನಡೆದ ಯುದ್ಧದ ಸಂದರ್ಭ ಭಾರತದ ಸೈನ್ಯದ ಮುಂದೆ 93 ಸಾವಿರ ಪಾಕಿಸ್ತಾನದ ಸೈನಿಕರು ಶರಣಾಗಿದ್ದರು.

Exit mobile version