| ಗಿರೀಶ್ ಲಿಂಗಣ್ಣ, ಬಾಹ್ಯಾಕಾಶ ಮತ್ತು ರಕ್ಷಣಾ ವಿಶ್ಲೇಷಕ
ಇತ್ತೀಚಿನ ವರದಿಗಳ ಪ್ರಕಾರ, ಭಾರತೀಯ ಬಾಹ್ಯಾಕಾಶ ಸಂಶೋಧನಾ ಸಂಸ್ಥೆಯ (ISRO) ಎಲ್‌ವಿಎಂ3 ಉಡ್ಡಯನ ವಾಹನ ಬ್ರಿಟಿಷ್ ಸಂಸ್ಥೆಯಾದ ವನ್‌ವೆಬ್(One Web)ನ ಉಪಗ್ರಹಗಳನ್ನು ಅಕ್ಟೋಬರ್ 23ರಂದು ಉಡಾವಣೆಗೊಳಿಸಲಿದೆ. ಈ ಉಡಾವಣೆಯು ಸತೀಶ್ ಧವನ್ ಬಾಹ್ಯಾಕಾಶ ಕೇಂದ್ರದಿಂದ ನಡೆಯಲಿದೆ. ಎಲ್‌ವಿಎಂ3 ರಾಕೆಟ್ ವನ್‌ವೆಬ್ ಸಂಸ್ಥೆಯ 36 ಉಪಗ್ರಹಗಳನ್ನು ಹೊತ್ತು ಬಾಹ್ಯಾಕಾಶಕ್ಕೆ ಚಿಮ್ಮಲಿದೆ. ಈ ಉಪಗ್ರಹಗಳ ಉಡಾವಣೆಯ ಬಳಿಕ, ವನ್‌ವೆಬ್ ತಾನು ಉದ್ದೇಶಿಸಿದ್ದರಲ್ಲಿ 70% ಜೆನ್ 1 ಲೋ ಅರ್ತ್ ಆರ್ಬಿಟ್ (ಎಲ್ಇಓ) ಉಪಗ್ರಹಗಳನ್ನು ಭೂಮಿಯ ಕಕ್ಷೆಗೆ ಸೇರ್ಪಡೆಗೊಳಿಸಲಿದೆ. ಈ ಉಪಗ್ರಹಗಳು ಅತ್ಯಂತ ವೇಗದ, ಕನಿಷ್ಠ ಸುಪ್ತತೆಯ ಜಾಗತಿಕ ಸಂಪರ್ಕ ಸೇವೆಯನ್ನು ಒದಗಿಸಲಿವೆ ಎಂದು ವನ್‌ವೆಬ್ ತನ್ನ ಹೇಳಿಕೆಯಲ್ಲಿ ತಿಳಿಸಿದೆ. ಸಂಸ್ಥೆ ಈ ಮೂಲಕ ಹದಿನಾಲ್ಕನೇ ಬಾರಿಗೆ ಬಾಹ್ಯಾಕಾಶಕ್ಕೆ ಉಪಗ್ರಹಗಳನ್ನು ಕಳುಹಿಸುತ್ತಿದೆ(ವಿಸ್ತಾರ Explainer).
ಇಸ್ರೋದ ಜಿಎಸ್ಎಲ್‌ವಿ ಎಂಕೆ3 ರಾಕೆಟ್ ಉಪಗ್ರಹಗಳನ್ನು ಜಿಯೋಸಿಂಕ್ರೊನಸ್ ಕಕ್ಷೆಯಲ್ಲಿ ಉಪಗ್ರಹಗಳನ್ನು ಜೋಡಿಸುವ ಬದಲು ಭೂಮಿಯ ಕೆಳಕಕ್ಷೆಯಲ್ಲಿ ಜೋಡಿಸುತ್ತದೆ. ಆ ಕಾರಣದಿಂದ ಇಸ್ರೋ ಈ ರಾಕೆಟನ್ನು ಎಲ್ಎಂವಿ-3 ಎಂಬ ಹೆಸರಿನಲ್ಲಿ ಮರುವಿನ್ಯಾಸಗೊಳಿಸಿತು. ಈ ಉಡಾವಣೆಯು M/s ನೆಟ್‌ವರ್ಕ್ ಆ್ಯಕ್ಸೆಸ್ ಅಸೋಸಿಯೇಟೆಡ್ ಲಿಮಿಟೆಡ್ (ಎಂ/ಎಸ್ ವನ್‌ವೆಬ್) ಜೊತೆ ಕೈಗೊಂಡ ಎರಡು ಒಪ್ಪಂದಗಳ ಅಡಿಯಲ್ಲಿ ನಡೆಯುತ್ತಿದೆ. ಎರಡು ಉಡಾವಣೆಗಳ ಮೂಲಕ ಇಸ್ರೋ ಒಟ್ಟು 72 ಉಪಗ್ರಹಗಳನ್ನು ಕಕ್ಷೆಗೆ ಜೋಡಿಸಲಿದೆ.
ಸೆಪ್ಟೆಂಬರ್ 20ರಂದು ಈ ಯೋಜನೆಯ ಕುರಿತು ಮಾಹಿತಿ ನೀಡಿದ ವನ್‌ವೆಬ್, 36 ಬ್ರಾಡ್ ಬ್ಯಾಂಡ್ ಉಪಗ್ರಹಗಳನ್ನು ಒಳಗೊಂಡ ಸರಕು ಈಗಾಗಲೇ ಸಮಯಕ್ಕೆ ಮುಂಚಿತವಾಗಿ ಭಾರತಕ್ಕೆ ತಲುಪಿದೆ. ಈ ಉಪಗ್ರಹಗಳನ್ನು ಅಮೆರಿಕಾದ ಪ್ಲೋರಿಡಾದಲ್ಲಿರುವ ಅವುಗಳ ಉತ್ಪಾದನಾ ಘಟಕದಿಂದ ಚೆನ್ನೈಗೆ ಉಕ್ರೇನಿನ ಅಂಟೋನೋವ್ ಏರ್ ಲೈನ್ಸ್‌ನ ಅಂಟಾನೋವ್ ಎಎನ್-124 ವಿಮಾನದ ಮೂಲಕ ತರಲಾಯಿತು ಎಂದಿದೆ.
2022ರ ಆರಂಭದ ತನಕವೂ, ಈ ಕಂಪನಿಯ ಉಪಗ್ರಹಗಳನ್ನು ರಷ್ಯಾದ ರಾಸ್‌ಕಾಸ್ಮೋಸ್ ಸಂಸ್ಥೆಯ ಉಡಾವಣಾ ವಾಹನಗಳ ಮೂಲಕ ಉಡಾಯಿಸಲಾಗುತ್ತಿತ್ತು. ರಷ್ಯಾದ ರಾಕೆಟ್‌ಗಳು ಇಲ್ಲಿಯ ತನಕ 428 ಉಪಗ್ರಹಗಳನ್ನು ಕಕ್ಷೆಗೆ ಒಯ್ದಿದ್ದು, ಈ ಎಲ್ಲ ಉಡಾವಣೆಗಳೂ ಯಶಸ್ವಿಯಾಗಿವೆ.
ರಷ್ಯಾ – ಉಕ್ರೇನ್ ಯುದ್ಧದ ಬಳಿಕದ ಘಟನೆಗಳು
ವನ್‌ವೆಬ್ 648 ಉಪಗ್ರಹಗಳನ್ನು ಉಡಾಯಿಸುವ ಯೋಜನೆಗಳನ್ನು ಹಮ್ಮಿಕೊಂಡಿದ್ದು, ಅವುಗಳಲ್ಲಿ ಇನ್ನೂ 220 ಉಪಗ್ರಹಗಳನ್ನು ಉಡಾಯಿಸಬೇಕಿದೆ. ಅಂದರೆ, 66% ಉಪಗ್ರಹಗಳನ್ನು ಈಗಾಗಲೇ ಉಡಾವಣೆಗೊಳಿಸಲಾಗಿದೆ. ಈ ಮೊದಲು ವನ್‌ವೆಬ್‌ನ ಉಪಗ್ರಹಗಳನ್ನು ರಷ್ಯಾದ ಬೈಕೋನುರ್ ಕೋಸ್ಮೋಡ್ರೋಮ್‌ನಿಂದ ರಷ್ಯಾ ನಿರ್ಮಿತ ಸೋಯುಜ಼್ ರಾಕೆಟ್‌ಗಳನ್ನು ಬಳಸಿ ಉಡಾಯಿಸಲಾಗುತ್ತಿತ್ತು. ಆದರೆ ಮಾರ್ಚ್ 3ರಂದು ವನ್‌ವೆಬ್ ರಾಸ್‌ಕಾಸ್ಮೋಸ್ ಜೊತೆಗಿನ ಸಹಕಾರವನ್ನು ಕೊನೆಗೊಳಿಸಿತು.
ಈ ಸಹಕಾರವನ್ನು ಕೊನೆಗೊಳಿಸುವ ನಿರ್ಧಾರಕ್ಕೆ ವನ್‌ವೆಬ್ ಬರಲು ರಷ್ಯಾದ ಎರಡು ಷರತ್ತುಗಳು ಕಾರಣವಾಗಿದ್ದವು. ರಾಸ್‌ಕಾಸ್ಮೋಸ್ ಅಧ್ಯಕ್ಷರಾದ ಡಿಮಿಟ್ರಿ ರೋಗೋಜಿ಼ನ್ ವನ್‌ವೆಬ್ ಈ ಉಪಗ್ರಹಗಳನ್ನು ಮಿಲಿಟರಿ ಉಪಯೋಗಗಳಿಗೆ ಬಳಸುವುದಿಲ್ಲ ಮತ್ತು ಈ ಮಾಹಿತಿಗಳನ್ನು ಸೇನಾ ಇಲಾಖೆಗಳಿಗೆ ಒದಗಿಸುವುದಿಲ್ಲ ಎಂದು ಭರವಸೆ ನೀಡಬೇಕು ಮತ್ತು ಬ್ರಿಟಿಷ್ ಸರ್ಕಾರ ವನ್‌ವೆಬ್‌ನ ಶೇರುದಾರನಾಗಿರಬಾರದು ಎಂದಿದ್ದರು.
ಆ ದಿನ ರಾಸ್‌ಕಾಸ್ಮೋಸ್ ಫ್ರೆಂಚ್ ಉಡಾವಣಾ ಸಂಸ್ಥೆಯಾದ ಅರಿಯಾನೆಸ್ಪೇಸ್ ನಿಂದ ವನ್‌ವೆಬ್ ಉಪಗ್ರಹಗಳು ಮಿಲಿಟರಿ ಉಪಯೋಗಗಳಿಗೆ ಬಳಸಬಾರದು ಎಂದು ಭರವಸೆ ನೀಡುವಂತೆ ಕೇಳಿತ್ತು. ರಷ್ಯನ್ ಅಕಾಡೆಮಿ ಆಫ್ ಕಾಸ್ಮೋನಾಟಿಕ್ಸ್ ಸದಸ್ಯರಾದ ಆಂಡ್ರೆ ಅಯೋನಿನ್ ಅವರು ಬೈಕೋನುರ್ ಕಾಸ್ಮೋಡ್ರೋಮ್‌ಗೆ ತಂದಿದ್ದ 36 ವನ್‌ವೆಬ್ ಉಪಗ್ರಹಗಳನ್ನು ವಶಪಡಿಸಿಕೊಂಡು, ಅವುಗಳನ್ನು ಕಳಚಿ ಪರಿಶೀಲಿಸಬಹುದು ಎಂದು ಅಭಿಪ್ರಾಯ ಪಟ್ಟಿದ್ದರು.
ಯುರೋಪ್ ಮತ್ತು ಅಮೆರಿಕಾಗಳ ನಿರ್ಬಂಧಗಳ ಪರಿಣಾಮವಾಗಿ ವನ್‌ವೆಬ್ ಉಪಗ್ರಹಗಳಿಗೆ ರಷ್ಯನ್ ಸಂಸ್ಥೆ ಫಾಕೆಲ್ ನಿರ್ಮಿಸುವ ಎಸ್‌ಪಿಡಿ – 50ಎಂ ಪ್ಲಾಸ್ಮಾ ಇಂಜಿನ್ ಲಭ್ಯವಾಗುತ್ತಿರಲಿಲ್ಲ. ವನ್‌ವೆಬ್ ಜೊತೆಗಿನ ಒಪ್ಪಂದದ ಪ್ರಕಾರ, ರಾಸ್‌ಕಾಸ್ಮೋಸ್ ಈಗಾಗಲೇ 13 ಉಡಾವಣೆಗಳನ್ನು ಕೈಗೊಂಡಿದ್ದು, ಇನ್ನೂ ಐದು ಉಡಾವಣೆಗಳು ನಡೆಯಬೇಕಿತ್ತು. ಕೊನೆಯ ಉಡಾವಣೆ ಆಗಸ್ಟ್ 2022ರಲ್ಲಿ ನಡೆಯಬೇಕಿತ್ತು.
ಬ್ರಿಟಿಷ್ ಸರ್ಕಾರ ಈ ಉಡಾವಣೆಯನ್ನು ಸ್ಥಗಿತಗೊಳಿಸುವಂತೆ ಸೂಚಿಸಿತ್ತು. ವನ್‌ವೆಬ್ ಸಂಸ್ಥೆಯ ಸರ್ಕಾರಿ ನಿಯಮಗಳು ಹಾಗೂ ಕಾರ್ಯಗಳ ಅಧಿಕಾರಿ ಕ್ರಿಸ್ ಮೆಕ್‌ಲಾಲಿನ್ ಈ ಉಡಾವಣೆಗಳನ್ನು ಅಮೆರಿಕಾ, ಜಪಾನ್ ಹಾಗೂ ಭಾರತಗಳಲ್ಲಿ ಕೈಗೊಳ್ಳುವ ಕುರಿತು ಯೋಚಿಸುವುದಾಗಿ ಹೇಳಿದ್ದರು. ಸೋಯುಜ಼್ ಉಡಾವಣೆಗಳನ್ನು ವಾಣಿಜ್ಯಿಕಗೊಳಿಸುವ ಅರಿಯಾನೆಸ್ಪೇಸ್ ತನ್ನ ಸಹಯೋಗಿಗಳೊಡನೆ ಕಾರ್ಯ ನಿರ್ವಹಿಸಿ, ಬೈಕಾನುರ್‌ನಲ್ಲಿರುವ ಉಪಕರಣಗಳನ್ನು ರಕ್ಷಿಸುವುದಾಗಿ ತಿಳಿಸಿತ್ತು.
ಬದಲಿ ಉಡಾವಣಾ ವ್ಯವಸ್ಥೆಯ ಹುಡುಕಾಟ
ವನ್‌ವೆಬ್ ಮಾರ್ಚ್ 21ರಂದು ತಾನು ಸ್ಯಾಟಲೈಟ್ ಇಂಟರ್ನೆಟ್ ಉದ್ಯಮದ ತನ್ನ ಎದುರಾಳಿ ಸ್ಪೇಸ್ಎಕ್ಸ್ ಮೂಲಕ ಉಳಿದ ಉಪಗ್ರಹಗಳ ಉಡಾವಣೆ ನಡೆಸುವುದಾಗಿ ತಿಳಿಸಿತು. ವನ್‌ವೆಬ್ ಸಿಇಓ ನೀಲ್ ಮಾಸ್ಟರ್‌ಸನ್ ಸ್ಪೇಸ್ಎಕ್ಸ್‌ಗೆ ಧನ್ಯವಾದ ಸಮರ್ಪಿಸಿದ್ದರು.
ಅವರ ಹೇಳಿಕೆಯ ಪ್ರಕಾರ, ಸ್ಪೇಸ್ಎಕ್ಸ್ ಇನ್ನುಳಿದ 220 ಉಪಗ್ರಹಗಳನ್ನು ತನ್ನ ಫಾಲ್ಕನ್ 9 ವರ್ಕ್‌ಹಾರ್ಸ್ ಮೂಲಕ ಉಡಾಯಿಸುವ ಭರವಸೆ ನೀಡಿತ್ತು. ಆದರೆ ಸ್ಪೇಸ್ಎಕ್ಸ್ ಮತ್ತು ವನ್‌ವೆಬ್ ನಡುವಿನ ಒಪ್ಪಂದದ ಸ್ಪಷ್ಟ ಮಾಹಿತಿ ಲಭ್ಯವಾಗಿರಲಿಲ್ಲ. ಸ್ಪೇಸ್ಎಕ್ಸ್ ಮೂಲಕ ಮೊದಲ ಉಡಾವಣೆ ವರ್ಷದ ಅಂತ್ಯದಲ್ಲಿ ನಡೆಯುವುದಾಗಿ ವನ್‌ವೆಬ್ ಹೇಳಿಕೆ ನೀಡಿತ್ತು.
ಇಸ್ರೋ ಜೊತೆಗಿನ ಒಪ್ಪಂದ
ಏಪ್ರಿಲ್ 21ರಂದು ವನ್‌ವೆಬ್ ಸಂಸ್ಥೆಯ ಪತ್ರಿಕಾ ಹೇಳಿಕೆಯಲ್ಲಿ ತಾನು ಇಸ್ರೋದ ವಾಣಿಜ್ಯಿಕ ಅಂಗಸಂಸ್ಥೆಯಾದ ನ್ಯೂ ಸ್ಪೇಸ್ ಇಂಡಿಯಾ ಜೊತೆ ಉಪಗ್ರಹ ಉಡಾವಣಾ ಒಪ್ಪಂದ ಮಾಡಿಕೊಂಡಿರುವುದಾಗಿ ಹೇಳಿತು. ಈ ಒಪ್ಪಂದದಡಿ ಮೊದಲ ಉಡಾವಣೆಯು ಶ್ರೀಹರಿಕೋಟಾದ ಸತೀಶ್ ಧವನ್ ಬಾಹ್ಯಾಕಾಶ ಕೇಂದ್ರದಿಂದ 2022ರಲ್ಲೇ ನಡೆಯಲಿದೆ ಎಂದು ತಿಳಿಸಿತು. ಈ ಮೂಲಕ ವನ್‌ವೆಬ್ ತನ್ನ ಉಪಗ್ರಹ ಉಡಾವಣೆಗಳನ್ನು ಪೂರ್ಣಗೊಳಿಸಿ, ಕನಿಷ್ಠ ಸುಪ್ತತೆಯ, ಅತಿವೇಗದ ಸಂಪರ್ಕ ಒದಗಿಸುವ ಲೋ ಆರ್ಬಿಟ್ ಸಂವಹನ ಉಪಗ್ರಹಗಳು ಕಾರ್ಯಾಚರಿಸುವಂತೆ ಮಾಡಲಿದೆ.
ಆದರೆ ಭಾರ್ತಿ ಗ್ರೂಪ್‌ನ ಅಂಗಸಂಸ್ಥೆಯಾದ ವನ್‌ವೆಬ್ ಈಗಾಗಲೇ ವರ್ಷದಿಂದ ಇಸ್ರೋ ಜೊತೆ ಮಾತುಕತೆ ನಡೆಸುತ್ತಿದೆ. ಇಸ್ರೋ ವ್ಯವಸ್ಥೆಯ ಮೂಲಕ, ಭಾರತದಿಂದ ಉಡಾವಣೆಗೊಳಿಸುವ ಪ್ರಥಮ ಖಾಸಗಿ ಸಂಸ್ಥೆಯ ಉಪಗ್ರಹ ಇದಾಗಿರಲಿದೆ ಎಂದು ಭಾರ್ತಿ ಎಂಟರ್‌ಪ್ರೈಸ್ ಅಧ್ಯಕ್ಷರಾದ ಸುನಿಲ್ ಭಾರ್ತಿ ಮಿತ್ತಲ್ ಹೇಳಿದ್ದಾರೆ.
2023ರ ಬೇಸಿಗೆ ವೇಳೆಗೆ ಐದು ಉಡಾವಣೆಗಳು ಪೂರ್ಣಗೊಳ್ಳಲಿವೆ ಎಂದು ವನ್‌ವೆಬ್ ತಿಳಿಸಿದೆ. ಅವುಗಳಲ್ಲಿ ಎರಡು ಉಡಾವಣೆಗಳು ಇಸ್ರೋ ಮೂಲಕ ನಡೆದರೆ, ಇನ್ನೂ ಮೂರು ಉಡಾವಣೆಗಳ ಭವಿಷ್ಯ ನಿರ್ಧಾರವಾಗಿಲ್ಲ. ಆದರೆ ಇಸ್ರೋಗೆ ಅವುಗಳ ಉಡಾವಣೆ ನಡೆಸುವ ಸಾಮರ್ಥ್ಯವಿದೆ. ಈ ರೀತಿ ರಷ್ಯಾದ ನಷ್ಟ ಭಾರತದ ಲಾಭವಾಗಿ ಪರಿಣಮಿಸಿದೆ.
ಇದನ್ನೂ ಓದಿ | Chandrayaan-3 | ಮುಂದಿನ ವರ್ಷ ಜೂನ್ ತಿಂಗಳಲ್ಲಿ ಚಂದ್ರಯಾನ-3ಕ್ಕೆ ಇಸ್ರೋ ಸಿದ್ಧತೆ