Site icon Vistara News

ವಿಸ್ತಾರ ಸಂಪಾದಕೀಯ: ಔಷಧಗಳ ದರ ಇಳಿಕೆಗೆ ಕೇಂದ್ರದ ಕ್ರಾಂತಿಕಾರಕ ಕ್ರಮ

Medicine Price

False And Misleading: Central Government on reports of hike in medicine prices

ಭಾರತೀಯ ಔಷಧೀಯ ಕ್ಷೇತ್ರದಲ್ಲಿ ಕ್ರಾಂತಿಕಾರಿ ಬದಲಾವಣೆಗೆ ಕೇಂದ್ರ ಸರ್ಕಾರ ಮುನ್ನುಡಿ ಬರೆದಿದೆ. ನಾಲ್ಕು ಅಪರೂಪದ ಕಾಯಿಲೆಗಳಿಗೆ ಸ್ವದೇಶಿ ಔಷಧಗಳನ್ನು (Made in India) ಭಾರತ ಆವಿಷ್ಕರಿಸಿದೆ. ಇವುಗಳಿಂದಾಗಿ ಮುಂದಿನ ದಿನಗಳಲ್ಲಿ ಈ ಕಾಯಿಲೆಗಳ ಚಿಕಿತ್ಸೆಯ ವೆಚ್ಚ 100 ಪಟ್ಟು ಇಳಿಯಲಿದೆ. ಟೈರೋಸಿನೇಮಿಯಾ ಟೈಪ್, ಗೌಚರ್ಸ್ ಕಾಯಿಲೆ, ವಿಲ್ಸನ್ ಕಾಯಿಲೆ ಮತ್ತು ಡ್ರಾವೆಟ್ ಅಥವಾ ಲೆನಾಕ್ಸ್ ಗ್ಯಾಸ್ಟಾಟ್ ಸಿಂಡ್ರೋಮ್ ಸೆಳೆತಗಳು ಸದ್ಯ ಸ್ವದೇಶಿ ಔಷಧ ಕಂಡುಹಿಡಿಯಲಾಗಿರುವ ಕಾಯಿಲೆಗಳು. ಕೇಂದ್ರ ಸರ್ಕಾರವು 13 ಅಪರೂಪದ ರೋಗಗಳು ಮತ್ತು ಜೀವಕೋಶ ರೋಗಗಳ ಔಷಧ ತಯಾರಿಕೆಗೆ ಆದ್ಯತೆ ನೀಡಿದೆ. ಫಾರ್ಮಾ ಕಂಪನಿಗಳು, ವಿಜ್ಞಾನಿಗಳು, ಔಷಧ ನಿಯಂತ್ರಕರು ಮತ್ತು ಶಿಕ್ಷಣ ತಜ್ಞರೊಂದಿಗೆ ಚರ್ಚಿಸಿದ ನಂತರ ಔಷಧಗಳ ಉತ್ಪಾದನೆಯನ್ನು ಪ್ರಾರಂಭಿಸಲಾಗುತ್ತದೆ. ಇದು ಕ್ರಾಂತಿಕಾರಿ ಬದಲಾವಣೆಗೆ ಕಾರಣವಾಗಲಿದೆ. ಸ್ವದೇಶಿ ನಿರ್ಮಿತ ಔಷಧಗಳ ಬೆಲೆಯಲ್ಲಿ ಭಾರಿ ವ್ಯತ್ಯಾಸ ಕಂಡುಬರಲಿದೆ.

ಇತ್ತೀಚೆಗೆ ಔಷಧ ಬೆಲೆ ನಿರ್ಧರಿಸುವ ರಾಷ್ಟ್ರೀಯ ಔಷಧ ಬೆಲೆ ಪ್ರಾಧಿಕಾರದ ಸಭೆಯ ಬಳಿಕ, 74 ಔಷಧಿಗಳ ಚಿಲ್ಲರೆ ಬೆಲೆಯನ್ನು ಇಳಿಸಲಾಗಿತ್ತು. ಪಾರಸಿಟಮಲ್‌, ನೋವು ನಿವಾರಕ ಔಷಧಗಳೂ, ಆ್ಯಂಟಿ ಬಯೋಟಿಕ್‌, ಹೃದ್ರೋಗ ಔಷಧಗಳು, ರಕ್ತದೊತ್ತಡ ನಿಯಂತ್ರಣ ಮಾತ್ರೆಗಳು, ಮಧುಮೇಹ ನಿಯಂತ್ರಣ ಔಷಧಗಳು ಸೇರಿದಂತೆ ಜನಸಾಮಾನ್ಯರು ಹೆಚ್ಚಾಗಿ ಬಳಸುವ ಹಾಗೂ ಸಾಮಾನ್ಯ ಚಿಕಿತ್ಸೆಗೆ ಬಳಸುವ ಮೆಡಿಸಿನ್‌ ದರ 6.73% ಇಳಿಕೆಯಾಗಿದೆ. ಇನ್ನು ಅಪರೂಪದ ಕಾಯಿಲೆಗಳಿಗೆ ಚಿಕಿತ್ಸೆ ನೀಡಲು ಬಳಸುವ ಎಲ್ಲ ಔಷಧಗಳನ್ನು ಇಲ್ಲಿಯವರೆಗೆ ಆಮದು ಮಾಡಿಕೊಳ್ಳಲಾಗುತ್ತಿತ್ತು. ಆದ್ದರಿಂದ ಇವು ದುಬಾರಿಯಾಗಿದ್ದವು. ಇದೀಗ ಇಲ್ಲೇ ತಯಾರಿಸಲಾಗುವುದರಿಂದ ವೆಚ್ಚ 100 ಪಟ್ಟು ಕಡಿಮೆ ಆಗುತ್ತದೆ. ಉದಾಹರಣೆಗೆ ಸ್ವೀಡನ್‌ನ 5 ಲಕ್ಷ ರೂ. ಬೆಲೆಯ 2 ಎಂ.ಜಿ. ಮಾತ್ರೆ ಭಾರತದಲ್ಲಿ 6,500 ರೂ.ಗೆ ಲಭ್ಯವಾಗಲಿದೆ. ಇದು ಮಹತ್ವದ್ದು.

ಅಪರೂಪದ ಕಾಯಿಲೆಗಳ ಔಷಧಗಳು ಯಾವಾಗಲೂ ದುಬಾರಿ. ಅಪರೂಪದ ಕಾಯಿಲೆಗಳು ಬಾಧಿಸುವ ರೋಗಿಗಳ ಸಂಖ್ಯೆ ಕಡಿಮೆ. ಹೀಗಾಗಿ ಇವುಗಳಿಗೆ ನೀಡಬೇಕಿರುವ ಔಷಧಗಳ ಸಂಶೋಧನೆ, ಆವಿಷ್ಕಾರ ನಡೆಸಲು ಮುಂದಾಗುವ ಕಂಪನಿಗಳು ಕಡಿಮೆ. ವಿದೇಶಗಳಿಂದ ತರಿಸಬೇಕಿರುವ ಔಷಧಗಳ ಬೆಲೆ ದುಬಾರಿ. ನಿಟಿಸಿನೋನ್ (ಕ್ಯಾಪ್ಸೂಲ್‌) ಅನ್ನು ಟೈರೋಸಿನೇಮಿಯಾ ಟೈಪ್ 1 ಚಿಕಿತ್ಸೆಗೆ ಬಳಸಲಾಗುತ್ತದೆ. ಇತರ ದೇಶಗಳಿಂದ ಖರೀದಿಸಿದರೆ ಈ ಔಷಧಿಯ ಬೆಲೆ ವರ್ಷಕ್ಕೆ 2.2 ಕೋಟಿ ರೂ. ಇದನ್ನೇ ಭಾರತೀಯ ಕಂಪೆನಿಯು ವರ್ಷಕ್ಕೆ 2.5 ಲಕ್ಷ ರೂ. ವೆಚ್ಚದಲ್ಲಿ ತಯಾರಿಸುತ್ತಿದೆ. ಗೌಚರ್ ಕಾಯಿಲೆಯ ಚಿಕಿತ್ಸೆಗಾಗಿ ಶಿಫಾರಸು ಮಾಡಲಾದ ಎಲಿಗ್ಲುಸ್ಟಾಟ್ ಔಷಧವು ಭಾರತದಲ್ಲಿ ವರ್ಷಕ್ಕೆ 3-6 ಲಕ್ಷ ರೂ.ಗೆ ಲಭ್ಯ. ಸಿಕ್ಕಲ್‌ ಸೆಲ್‌ ಅನೀಮಿಯಾ (Sickle Cell Anemia) ಕಾಯಿಲೆಯ ಚಿಕಿತ್ಸೆಗೆ ಬಳಸುವ ಹೈಡ್ರಾಕ್ಸಿಯೂರಿಯಾ ಔಷಧವೂ ಕಡಿಮೆ ಬೆಲೆಯಲ್ಲಿ ದೊರೆಯುತ್ತಿದೆ. ಅಪರೂಪದ ಕಾಯಿಲೆಗಳಿಗೆ ಪ್ರಸ್ತುತ ಎಂಟು ರೀತಿಯ ಜೆನರಿಕ್ ಔಷಧಗಳಿವೆ ಮತ್ತು ನಾಲ್ಕು ರೀತಿಯ ಔಷಧಗಳು ಭಾರತದಲ್ಲಿ ಲಭ್ಯ. ಮುಂದಿನ ವರ್ಷ ಇನ್ನೂ ನಾಲ್ಕು ರೀತಿಯ ಔಷಧಗಳು ಲಭ್ಯವಾಗಲಿದೆ.

ಇದನ್ನೂ ಓದಿ: Made in India: ನಾಲ್ಕು ಅಪರೂಪದ ಕಾಯಿಲೆಗಳಿಗೆ ಸ್ವದೇಶಿ ಔಷಧ ಆವಿಷ್ಕಾರ; 100 ಪಟ್ಟು ಇಳಿಯಲಿದೆ ಚಿಕಿತ್ಸೆ ವೆಚ್ಚ!

ಹೀಗೇ ಕ್ಯಾನ್ಸರ್‌ ಔಷಧಗಳೂ ದುಬಾರಿಯಾಗಿವೆ. ಕ್ಯಾನ್ಸರ್‌ ರೋಗ ಎಷ್ಟು ಜೀವ ಹಿಂಡುತ್ತದೆಯೋ ಅದೇ ರೀತಿ ಇದರ ಚಿಕಿತ್ಸೆಯೂ ರೋಗಿಯ ಮನೆಯವರನ್ನು ಹಾಗೇ ಹಿಂಡಿಹಾಕುತ್ತದೆ. ಕೀಮೋಥೆರಪಿಗೆ ಬಳಸಲಾಗುವ ಒಂದೊಂದು ಇಂಜೆಕ್ಷನ್‌ನ ದರ ಸಾವಿರಗಳಲ್ಲಿದೆ. ಬಡವರು ಕ್ಯಾನ್ಸರ್‌ ಚಿಕಿತ್ಸೆಯೇ ಬೇಡ ಎಂದು ಕೈಚೆಲ್ಲುವಂತಾಗಲೂ ಇದರ ವೆಚ್ಚವೂ ಒಂದು ಕಾರಣ. ಹೀಗಾಗಬಾರದು. ಆರ್ಥಿಕವಾಗಿ ಅಶಕ್ತರಾದವರು ಕೂಡ ಕ್ಯಾನ್ಸರ್‌ ಹಾಗೂ ಅಪರೂಪದ ಕಾಯಿಲೆಗಳಿಗೆ ಸೂಕ್ತ ಚಿಕಿತ್ಸೆ ಪಡೆಯುವಂತಾಗಬೇಕು. ಈ ಉದ್ದೇಶದಿಂದ ಕೇಂದ್ರ ಸರ್ಕಾರ ಸ್ವತಂತ್ರ ಸಂಶೋಧನೆಗಳಿಗೂ ಕಂಪನಿ ಸಂಶೋಧನೆಗಳಿಗೂ ನೆರವು ನೀಡುತ್ತಿದೆ. ಜನೌಷಧಿ ಮಳಿಗೆಗಳನ್ನು ಹೆಚ್ಚಿನ ಸಂಖ್ಯೆಯಲ್ಲಿ ತೆರೆದು, ಅವು ಎಲ್ಲ ಕಡೆ ಲಭ್ಯವಾಗುವಂತೆ ನೋಡಿಕೊಳ್ಳುತ್ತಿದೆ. ಅಗತ್ಯವಿರುವವರು ಅವನ್ನು ಬಳಸುವುದು ಹಾಗೂ ಇತರರಿಗೂ ಆ ಬಗ್ಗೆ ಅರಿವು ಮೂಡಿಸುವುದು ಅಗತ್ಯ. ನಮ್ಮ ದೇಶದಲ್ಲಿ ಎಲ್ಲರೂ ಖಾಸಗಿ ಆಸ್ಪತ್ರೆಗಳಲ್ಲಿ ಚಿಕಿತ್ಸೆ ಪಡೆಯುವಷ್ಟು ಶ್ರೀಮಂತರಲ್ಲ; ಹೆಲ್ತ್‌ ಇನ್ಶೂರೆನ್ಸ್‌ಗಳನ್ನು ಮಾಡಿಸಿಕೊಳ್ಳುವವರ ಸಂಖ್ಯೆಯೂ ಕಡಿಮೆ. ಇಂಥ ದೇಶದಲ್ಲಿ ಆರೋಗ್ಯ ಸೇವೆಯನ್ನು ಅಗ್ಗವಾಗಿಸುವ ಒಂದೊಂದು ಸಂಶೋಧನೆಯೂ, ಒಂದೊಂದು ಹೆಜ್ಜೆಯೂ ಬಹು ಮಹತ್ವದ್ದಾಗುತ್ತದೆ.

ಈ ಸಂಗತಿ ಕುರಿತು ನಿಮ್ಮ ಅನಿಸಿಕೆ ಏನು? ಕಾಮೆಂಟ್‌ ಮೂಲಕ ತಿಳಿಸಿ

Exit mobile version