ಚೀನಾ ಪರವಾದ ನಿಲುವು ಹೊಂದಿರುವ, ಕಮ್ಯುನಿಸ್ಟ್ ರಾಷ್ಟ್ರದ ಕಪಟತನವನ್ನು ಅರಿತೂ ಆ ರಾಷ್ಟ್ರವನ್ನು ಬೆಂಬಲಿಸುವ ಮೊಹಮ್ಮದ್ ಮುಯಿಜು ಅವರು ಮಾಲ್ಡೀವ್ಸ್ ಅಧ್ಯಕ್ಷರಾಗಿ ಆಯ್ಕೆಯಾದಾಗಲೇ ಇಂತಹದ್ದೊಂದು ಉದ್ಧಟತನವನ್ನು ಭಾರತ ನಿರೀಕ್ಷಿಸಿತ್ತು. ಹಾಗಾಗಿ, ಚೀನಾ ಭೇಟಿಯ ಬಳಿಕ ಮೊಹಮ್ಮದ್ ಮುಯಿಜು ಅವರು, “ನಮ್ಮದು ಚಿಕ್ಕ ರಾಷ್ಟ್ರವಾದರೂ ನಮ್ಮನ್ನು ಹೆದರಿಸುವ ಪರವಾನಗಿಯನ್ನು ಯಾರಿಗೂ ಕೊಟ್ಟಿಲ್ಲ” ಎಂದು ಹೇಳಿರುವುದು, ಮಾಲ್ಡೀವ್ಸ್‌ನಿಂದ ಭಾರತವು ಸೈನಿಕರನ್ನು ಮಾರ್ಚ್ 15ರೊಳಗೆ ವಾಪಸ್ ಕರೆಸಿಕೊಳ್ಳಬೇಕು ಎಂಬುದಾಗಿ ಆಗ್ರಹಿಸಿರುವುದು, ಲಕ್ಷದ್ವೀಪಕ್ಕೆ ಮೋದಿ ಹೋಗಿದ್ದರ ಕುರಿತು ಸಚಿವರು ಅಪದ್ಧ ನುಡಿದಿರುವುದು ಸೇರಿ ದ್ವೀಪರಾಷ್ಟ್ರದ ಎಲ್ಲ ಉದ್ಧಟತನದ ವರ್ತನೆಗಳೇನೂ ಅನಿರೀಕ್ಷಿತವಲ್ಲ. ಆದರೆ, ಚೀನಾವನ್ನು ಮೆಚ್ಚಿಸಬೇಕು ಎಂಬ ಒಂದೇ ಕಾರಣಕ್ಕಾಗಿ ಕಷ್ಟಕಾಲದಲ್ಲಿ ನೆರವು ನೀಡಿದ, ಸ್ನೇಹಿತನಂತೆ ಪೊರೆದ, ಮಾಲ್ಡೀವ್ಸ್‌ನಲ್ಲಿ ಬಂಡುಕೋರರ ಹಾವಳಿ ಹೆಚ್ಚಾದಾಗ ಸರ್ಕಾರದ ಮಾನ ಉಳಿಸಿದ ಭಾರತದ ಬಗ್ಗೆಯೇ ಮಾಲ್ಡೀವ್ಸ್ ಇಂತಹ ಕುತಂತ್ರ ಮಾಡುತ್ತಿರುವುದು ಅಪಸವ್ಯ, ಕುಚೋದ್ಯ, ದಡ್ಡತನ, ಹುಂಬತನ, ಲಂಪಟತನದ ಪರಮಾವಧಿಯಾಗಿದೆ.
ಡಿಜಿಟಲ್, ಶಸ್ತ್ರಾಸ್ತ್ರ, ಬೇರೆ ದೇಶಗಳನ್ನು ಎತ್ತಿಕಟ್ಟುವುದು, ವೈರಾಣುಗಳ ಮೂಲಕ ಜೈವಿಕ ಯುದ್ಧ ಸಾರುವುದು ಆಧುನಿಕ ಜಗತ್ತಿನ ಯುದ್ಧ, ದಾಳಿಯ ಮಾದರಿಯಾಗಿರುವುದರಿಂದ ಈಗ ಯಾವ ದೇಶವೂ ಮಿತ್ರ ರಾಷ್ಟ್ರವಲ್ಲ, ಯಾವ ದೇಶವನ್ನೂ ಶತ್ರು ರಾಷ್ಟ್ರವೆಂದು ಘೋಷಿಸುವ ಕಾಲಘಟ್ಟದಲ್ಲಿ ನಾವಿದ್ದೇವೆ. ಆದರೆ, ಇತಿಹಾಸವನ್ನು ಅರಿಯದ, ಯಾರು ನಿಜವಾದ ಸ್ನೇಹಿತ, ಯಾರಿಂದ ಅಪಾಯವಿಲ್ಲ ಎಂಬುದನ್ನು ತಿಳಿಯದ ಮೊಹಮ್ಮದ್ ಮುಯಿಜು ಅವರು ಚೀನಾವನ್ನು ಓಲೈಸುತ್ತಿದ್ದಾರೆ. ಮೊದಲೇ, ಪ್ರಾದೇಶಿಕ ಹಪಹಪಿ ಇರುವ, ಗಡಿಯಲ್ಲಿ ಯೋಜನೆಗಳ ಮೂಲಕ, ಸಣ್ಣಪುಟ್ಟ ರಾಷ್ಟ್ರಗಳಿಗೆ ಸಾಲ ನೀಡುವ ಮೂಲಕ ಅವುಗಳ ಮೇಲೆ ಪ್ರಾಬಲ್ಯ ಸಾಧಿಸುವ ಚೀನಾ ಈಗ ಸಹಜವಾಗಿಯೇ ಮೊಹಮ್ಮದ್ ಮುಯಿಜು ಅವರನ್ನು ಪೋಷಿಸುತ್ತಿದೆ. ತನ್ನ ರಾಷ್ಟ್ರಕ್ಕೆ ಕರೆದು ಆತಿಥ್ಯ ನೀಡುತ್ತಿದೆ.
ಚೀನಾದಿಂದ ಸಾಲ ಪಡೆದ, ಆ ಸಾಲದ ಹಣವನ್ನೇ ಭಯೋತ್ಪಾದನೆ, ಗಡಿ ಯೋಜನೆಗಳಿಗೆ ಸುರಿದ ಪಾಕಿಸ್ತಾನ ಈಗ ಸಹಾಯಧನಕ್ಕಾಗಿ ಜಾಗತಿಕ ಸಂಸ್ಥೆಗಳು, ಬ್ಯಾಂಕ್‌ಗಳ ಎದುರು ಭಿಕ್ಷಾಪಾತ್ರೆ ಹಿಡಿದು ನಿಂತಿದೆ. ಆರ್ಥಿಕವಾಗಿ ದಿವಾಳಿಯಾಗಿರುವ ಪಾಕಿಸ್ತಾನದ ಬಳಿ ನೌಕರರಿಗೆ ಸಂಬಳ ಕೊಡಲು ಕೂಡ ಖಜಾನೆಯಲ್ಲಿ ಹಣವಿಲ್ಲದಂತಾಗಿದೆ. ಪಾಕಿಸ್ತಾನವನ್ನು ಕಬ್ಬಿನಂತೆ ಬಳಸಿಕೊಂಡ ಚೀನಾ, ರಸ ಹೀರಿದ ಬಳಿಕ ‘ಸಿಪ್ಪೆ’ಯನ್ನು ನಿರ್ದಯವಾಗಿ ಬಿಸಾಡಿದೆ. ಚೀನಾದ ತಾಳಕ್ಕೆ ಕುಣಿದ ಶ್ರೀಲಂಕಾದ ಪರಿಸ್ಥಿತಿ ಯಾವ ದೇಶಕ್ಕೂ ಬರಬಾರದು ಎಂದು ಪ್ರಾರ್ಥಿಸುವಂತಾಗಿದೆ. ಚೀನಾ ಬಲೆಗೆ ಸಿಲುಕಿ, ಕೊರೊನಾ ಅಲೆಗೆ ತತ್ತರಿಸಿದ ಶ್ರೀಲಂಕಾ ಆರ್ಥಿಕತೆಯು ಅಂಕೆಯಿಲ್ಲದಷ್ಟು ದಿವಾಳಿಯಾಗಿದೆ. ನಾಗರಿಕ, ಆಡಳಿತ, ಆರ್ಥಿಕ ಅರಾಜಕತೆಯ ಜಾಲಕ್ಕೆ ಸಿಲುಕಿದೆ.
ಸಹಭಾಗಿತ್ವದ ಯೋಜನೆಗಳ ಹೆಸರಿನಲ್ಲಿ ಚೀನಾ ಈಗಾಗಲೇ ಮಾಲ್ಡೀವ್ಸ್ ಹೆಗಲೇರಿ ಕೂತಿದೆ. ಮಾಲ್ಡೀವ್ಸ್‌ಗೆ ಚೀನಾ 1.3 ಶತಕೋಟಿ ಡಾಲರ್ (ಸುಮಾರು 10 ಸಾವಿರ ಕೋಟಿ ರೂ.) ಸಾಲ ನೀಡಿದೆ. ಮಾಲ್ಡೀವ್ಸ್ ಹೊಂದಿರುವ ಒಟ್ಟು ಸಾಲದ ಮೊತ್ತದಲ್ಲಿ ಚೀನಾ ನೀಡಿದ ಸಾಲದ ಪಾಲು ಶೇ.20ರಷ್ಟಿದೆ. ಸಾಲದ ಸುಳಿಯಿಂದ ಮಾಲ್ಡೀವ್ಸ್ ಹೊರಬರಬೇಕು ಎಂದರೆ ಮೊದಲು ಚೀನಾದಿಂದ ಸಾಲ ಪಡೆಯುವುದನ್ನು, ಅದರ ಹೂಡಿಕೆಯನ್ನು ನಿಲ್ಲಿಸಬೇಕು ಎಂದು ಈಗಾಗಲೇ ವಿಶ್ವಬ್ಯಾಂಕ್ ಎಚ್ಚರಿಸಿದೆ. ಆದರೆ, ಮೊಹಮ್ಮದ್ ಮುಯಿಜು ಅವರು ಇದಾವುದಕ್ಕೂ ಕ್ಯಾರೆ ಎನ್ನುತ್ತಿಲ್ಲ. ಚೀನಾಗೆ ಭೇಟಿ ನೀಡಿದ ಅವರು 20 ಒಪ್ಪಂದ ಮಾಡಿಕೊಂಡು ಬಂದಿದ್ದಾರೆ. ಇವುಗಳಲ್ಲಿ ಮೂಲ ಸೌಕರ್ಯಕ್ಕಿಂತ ಚೀನಾದ ಮಹತ್ವಾಕಾಂಕ್ಷೆಯ ಒಂದು ರಸ್ತೆ, ಒಂದು ಯೋಜನೆ (Belt and Road Initiative) ಅಡಿಯಲ್ಲಿ ಜಾರಿಯಾಗಬೇಕಾದ ಯೋಜನೆಗಳೇ ಒಪ್ಪಂದಗಳಲ್ಲಿ ಹೆಚ್ಚಿವೆ. ಹಾಗಾಗಿ, ಮುಂದೊಂದು ದಿನ ಶ್ರೀಲಂಕಾ, ಪಾಕಿಸ್ತಾನದಂತೆ ಮಾಲ್ಡೀವ್ಸ್‌ಅನ್ನೂ ಚೀನಾ ಆಪೋಷನ ತೆಗೆದುಕೊಂಡರೂ ಅಚ್ಚರಿ ಇಲ್ಲ.
ಹಾಗೆ ನೋಡಿದರೆ, ಭಾರತವು ಇತಿಹಾಸದುದ್ದಕ್ಕೂ ಯಾವುದೇ ದೇಶದ ಮೇಲೆ ದಾಳಿ ಮಾಡಿಲ್ಲ, ಆಕ್ರಮಣ ನಡೆಸಿಲ್ಲ. ಕುತಂತ್ರದ ಬುದ್ಧಿಯಂತೂ ಇಲ್ಲವೇ ಇಲ್ಲ. ಅಷ್ಟಕ್ಕೂ, 1980ರ ದಶಕದಲ್ಲಿ ಬೃಹತ್ ದಂಗೆಯಿಂದ ಕಂಗೆಟ್ಟಿದ್ದ ಮಾಲ್ಡೀವ್ಸ್ ಸರ್ಕಾರಕ್ಕೆ ಭಾರತ ಮಿಲಿಟರಿ ನೆರವು ನೀಡಿತ್ತು. ಬಂಡುಕೋರರನ್ನು ಮಟ್ಟ ಹಾಕಿದ್ದ ಭಾರತ ಅಲ್ಲಿನ ಅಧ್ಯಕ್ಷರ ತಲೆ ಉಳಿಸಿತ್ತು. ಅಂದು ನೆರವು ನೀಡಿದ ಭಾರತಕ್ಕೆ ಮಾಲ್ಡೀವ್ಸ್ ಎರಡು ಬಗೆಯುತ್ತಿದೆ ಎಂದು ಅಲ್ಲಿಯ ಜನರೇ ಸರಕಾರಕ್ಕೆ ಛೀಮಾರಿ ಹಾಕುತ್ತಿದ್ದಾರೆ. ಮಾಲ್ಡೀವ್ಸ್‌ನಲ್ಲಿಯೇ ಲಕ್ಷದ್ವೀಪದ ವಿಷಯಕ್ಕೆ ಕುರಿತಂತೆ ಸಚಿವರು ನೀಡಿದ ಉದ್ಧಟತನದ ಹೇಳಿಕೆಗಳಿಗೆ ಅಲ್ಲಿಯ ಜನ ಖಂಡನೆ ವ್ಯಕ್ತಪಡಿಸುತ್ತಿದ್ದಾರೆ.
ಇದನ್ನೂ ಓದಿ: ಮಾರ್ಚ್ 15ರೊಳಗೆ ಸೇನೆ ಹಿಂತೆಗೆದುಕೊಳ್ಳಿ; ಚೀನಾ ಭೇಟಿ ಬೆನ್ನಲ್ಲೇ ಭಾರತಕ್ಕೆ ಮಾಲ್ಡೀವ್ಸ್ ಆಗ್ರಹ
ಅಲ್ಲದೆ, ಮಾಲ್ಡೀವ್ಸ್ ಆರ್ಥಿಕತೆಯ ಏಳಿಗೆಗೂ ಭಾರತದ ಕೊಡುಗೆ ಜಾಸ್ತಿ ಇದೆ. ಮಾಲ್ಡೀವ್ಸ್ ಪ್ರವಾಸೋದ್ಯಮ ಸಚಿವಾಲಯ ನೀಡಿದ ಮಾಹಿತಿ ಪ್ರಕಾರ, 2023ರಲ್ಲಿ ಭಾರತೀಯರೇ ಹೆಚ್ಚಿನ ಸಂಖ್ಯೆಯಲ್ಲಿ ಮಾಲ್ಡೀವ್ಸ್‌ಗೆ ತೆರಳಿದ್ದಾರೆ. 2023ರಲ್ಲಿ ಭಾರತದಿಂದ ಮಾಲ್ಡೀವ್ಸ್‌ಗೆ 2,09,198 ಜನ ಭೇಟಿ ನೀಡಿದರೆ, ರಷ್ಯಾದಿಂದ 2,09,146 ಪ್ರವಾಸಿಗರು ಭೇಟಿ ನೀಡಿದ್ದಾರೆ. ಇನ್ನು, ಚೀನಾದಿಂದ ಕಳೆದ ವರ್ಷ 1,87,118 ಮಂದಿ ಮಾಲ್ಡೀವ್ಸ್‌ಗೆ ಭೇಟಿ ನೀಡಿದ್ದಾರೆ. ಇದರಿಂದಾಗ ಮಾಲ್ಡೀವ್ಸ್ ಪ್ರವಾಸೋದ್ಯಮವು ಸಮೃದ್ಧ ಸ್ಥಿತಿಯಲ್ಲಿದೆ. ಹೀಗಿದ್ದರೂ, ಚೀನಾದ ಬೆಂಬಲ, ಕಾಸಿನ ಆಸೆಗೆ ಬಿದ್ದು ಮೊಹಮ್ಮದ್ ಮುಯಿಜು ಅವರು ಭಾರತದ ವಿರುದ್ಧ ಇಲ್ಲದ ಕುತಂತ್ರ ಮಾಡುತ್ತಿದ್ದಾರೆ. ಸಂಕಷ್ಟ ಎಂದು ಬಂದಾಗ ಭಾರತ ನೀಡಿದ ನೆರವನ್ನು ಮರೆತಿದ್ದಾರೆ. ‘ಭೂತಕಾಲ’ದಲ್ಲಿ ಭಾರತದ ನೆರವನ್ನು ಮರೆತು, ‘ಭವಿಷ್ಯ’ದಲ್ಲಿ ಚೀನಾ ತಂದೊಡ್ಡುವ ಅಪಾಯದ ಮುನ್ಸೂಚನೆಯನ್ನು ‘ವರ್ತಮಾನ’ದಲ್ಲಿ ಅರಿಯದ ಮೊಹಮ್ಮದ್ ಮುಯಿಜು ಅವರು ಮಾಲ್ಡೀವ್ಸ್‌ಗೆ ಪಾಕಿಸ್ತಾನ, ಶ್ರೀಲಂಕಾದ ದುಸ್ಥಿತಿ ತಂದೊಡ್ಡುವ ಕಾಲ ದೂರವಿಲ್ಲ. ಜಾಗತಿಕ ಮಟ್ಟದಲ್ಲಿ ಆರ್ಥಿಕ ಶಕ್ತಿಯಾಗಿ ಬೆಳೆಯುತ್ತಿರುವ, ಚೀನಾದ ಗೊಡ್ಡು ಬೆದರಿಕೆ, ಕುತಂತ್ರಗಳನ್ನು ಮೆಟ್ಟಿ ಮುಂದಡಿ ಇಡುತ್ತಿರುವ ಭಾರತಕ್ಕೆ ಮಾಲ್ಡೀವ್ಸ್‌ನ ಉದ್ಧಟತನಗಳು ಲೆಕ್ಕಕ್ಕೇ ಇಲ್ಲ. ಇದನ್ನು ಮೊಹಮ್ಮದ್ ಮುಯಿಜು ಅರಿಯಬೇಕಿದೆ ಅಷ್ಟೆ.
ಈ ಸಂಗತಿಯ ಕುರಿತು ನಿಮ್ಮ ಅನಿಸಿಕೆ ಏನು? ಕಾಮೆಂಟ್ ಮೂಲಕ ತಿಳಿಸಿ