ಜಗತ್ತಿನ ಇತರ ದೇಶಗಳಿಗೆ ಹೋಲಿಸಿದರೆ, ಅಲ್ಪಸಂಖ್ಯಾತರನ್ನು (Minority Community) ಒಳಗೊಳ್ಳುವ ಕ್ರಮಗಳಲ್ಲಿ ಭಾರತ ನಂ.1 ಸ್ಥಾನದಲ್ಲಿದೆ ಎಂದು ಸಿಪಿಎ (ಸೆಂಟರ್ ಫಾರ್ ಪಾಲಿಸಿ ಅನಾಲಿಸಿಸ್) ಜಾಗತಿಕ ವರದಿ ಹೇಳಿದೆ. ಇದೊಂದು ಸ್ವತಂತ್ರ ಅಂತಾರಾಷ್ಟ್ರೀಯ ಸಂಸ್ಥೆ. 110 ರಾಷ್ಟ್ರಗಳಲ್ಲಿ ಸಮೀಕ್ಷೆ ನಡೆಸಿದಾಗ ಭಾರತವೇ ಅಲ್ಪಸಂಖ್ಯಾತರಿಗೆ ಹೆಚ್ಚು ಸುರಕ್ಷಿತ ಜಾಗ. ಬೇರೆ ದೇಶಗಳಿಗೆ ಹೋಲಿಸಿದರೆ ಭಾರತದಲ್ಲಿ ಅಲ್ಪಸಂಖ್ಯಾತರ ಮೇಲೆ ಯಾವುದೇ ನಿರ್ಬಂಧ ಇಲ್ಲ. ಭಾರತದ ಸಂವಿಧಾನವು ಸಂಸ್ಕೃತಿ ಮತ್ತು ಶಿಕ್ಷಣ ಎರಡರಲ್ಲೂ ಧಾರ್ಮಿಕ ಅಲ್ಪಸಂಖ್ಯಾತರನ್ನು ಪ್ರೋತ್ಸಾಹಿಸುವ ವಿಶಿಷ್ಟ, ವಿಶೇಷ ವಿಧಿಗಳನ್ನು ಹೊಂದಿದೆ ಎಂದೂ ಈ ವರದಿ ಉಲ್ಲೇಖಿಸಿದೆ. ಭಾರತದ ನಂತರದ 4 ಸ್ಥಾನಗಳಲ್ಲಿ ಪನಾಮಾ, ಜಪಾನ್, ದಕ್ಷಿಣ ಕೊರಿಯಾ ಮತ್ತು ಅಮೆರಿಕ ದೇಶಗಳಿವೆ.
ಈ ವರದಿಯ ಸಾರಾಂಶ ಭಾರತಕ್ಕೆ ಜಾಗತಿಕವಾಗಿ ಹೆಮ್ಮೆಯ ಸಂಗತಿ. ಆದರೆ ಇದು ಹೊಸ ಸಂಗತಿಯೇನಲ್ಲ. ತಮಾಷೆ ಎಂದರೆ, ನರೇಂದ್ರ ಮೋದಿಯವರ ಆಡಳಿತದಲ್ಲಿ ಮುಸ್ಲಿಮರು ಆತಂಕ ಅನುಭವಿಸುತ್ತಿದ್ದಾರೆ ಎಂದು ಪ್ರಚಾರ ಮಾಡಲು ಹೊರಟಿದ್ದ ಬಿಬಿಸಿ ಸುದ್ದಿಸಂಸ್ಥೆಯ ಮಾತೃನೆಲವಾದ ಇಂಗ್ಲೆಂಡ್ ಈ ವರದಿಯಲ್ಲಿ 54ನೇ ಸ್ಥಾನದಲ್ಲಿದೆ! ಭಾರತದ ಅಲ್ಪಸಂಖ್ಯಾತ ನೀತಿಯು ವೈವಿಧ್ಯತೆಯನ್ನು ಬೆಳೆಸುವ ಕಾರ್ಯತಂತ್ರದ ಮೇಲೆ ರೂಪಿಸಲ್ಪಟ್ಟಿದೆ. ಉಳಿದ ಯಾವುದೇ ದೇಶಗಳ ಸಂವಿಧಾನವು ಭಾಷಾ ಮತ್ತು ಧಾರ್ಮಿಕ ಅಲ್ಪಸಂಖ್ಯಾತರ ಬೆಂಬಲಕ್ಕೆ ಸ್ಪಷ್ಟವಾದ ಖಾತರಿಗಳನ್ನು ಹೊಂದಿಲ್ಲ ಎಂದು ವರದಿಯಲ್ಲಿ ತಿಳಿಸಲಾಗಿದೆ. ಅಲ್ಪಸಂಖ್ಯಾತರು ಭಾರತದಲ್ಲಿ ಗರಿಷ್ಠ ಸ್ವಾತಂತ್ರ್ಯ ಅನುಭವಿಸುತ್ತಿದ್ದಾರೆ ಎನ್ನುವುದನ್ನು ಸಾರಲು ಈ ವರದಿಯೇನೂ ಬೇಕಿರಲಿಲ್ಲ.
ನಮ್ಮ ದೇಶದಲ್ಲಿ ಆರು ಧರ್ಮಗಳ (ಮುಸ್ಲಿಂ, ಕ್ರೈಸ್ತ, ಸಿಖ್, ಜೈನ, ಬೌದ್ಧ, ಪಾರ್ಸಿ) ಅಲ್ಪಸಂಖ್ಯಾತರು ಒಟ್ಟಾಗಿ ಒಟ್ಟಾರೆ ಜನಸಂಖ್ಯೆಯ 19.3%ದಷ್ಟು ಇದ್ದಾರೆ. ಅಲ್ಪಸಂಖ್ಯಾತರ ಹಿತವನ್ನೂ ಬಹುಸಂಖ್ಯಾತರಂತೆಯೇ ಕಾಯಲು ನಮ್ಮ ಸಂವಿಧಾನದಲ್ಲೂ ʼಧರ್ಮನಿರಪೇಕ್ಷತೆʼಯನ್ನು ಸೇರಿಸಲಾಗಿದೆ. ಅಲ್ಪಸಂಖ್ಯಾತ ಹಿತಚಿಂತನೆ ನೋಡಿಕೊಳ್ಳುವುದಕ್ಕಾಗಿಯೇ ಕೇಂದ್ರದಲ್ಲಿ ʼಅಲ್ಪಸಂಖ್ಯಾತರ ವ್ಯವಹಾರಗಳ ಸಚಿವಾಲಯʼ ಇದೆ. ಈ ದೇಶದ ಮುಖ್ಯಮಂತ್ರಿ, ರಾಜ್ಯಪಾಲ, ರಾಷ್ಟ್ರಪತಿ ಹುದ್ದೆಯನ್ನೂ ಭಾರತೀಯ ಅಲ್ಪಸಂಖ್ಯಾತರು ಜನಮತದಿಂದಲೇ ಅಲಂಕರಿಸಿದ್ದಾರೆ.
ಭಾರತದ ಜನಸಂಖ್ಯೆಯ ಸುಮಾರು 14%ದಷ್ಟು, ಅಂದರೆ 20 ಕೋಟಿ ಮಂದಿ ಮುಸ್ಲಿಮರು ಇಲ್ಲಿ ಇದ್ದಾರೆ. ಇದು ದೇಶದ ಎರಡನೇ ಅತಿ ದೊಡ್ಡ ಧಾರ್ಮಿಕ ಸಮುದಾಯ. ಇಂಡೋನೇಷ್ಯಾ ಹಾಗೂ ಪಾಕಿಸ್ತಾನದ ಬಳಿಕ ಅತಿ ಹೆಚ್ಚು ಮುಸ್ಲಿಮರು ಇರುವ ದೇಶ ಎಂದರೆ ಭಾರತ. ಇನ್ನುಳಿದ ಇಸ್ಲಾಮಿಕ್ ದೇಶಗಳೆನಿಸಿಕೊಂಡವು ಕೂಡ ಭಾರತದಷ್ಟು ಸಂಖ್ಯೆಯ ಮುಸ್ಲಿಮರನ್ನು ಹೊಂದಿಲ್ಲ. ಭಾರತದಲ್ಲಿ ಎರಡೂ ಧರ್ಮಗಳೂ ಸಾಕಷ್ಟು ಕೊಡುಕೊಳ್ಳುವಿಕೆ ಮಾಡಿಕೊಂಡು ಸಾಮರಸ್ಯದಿಂದ ಬಾಳುತ್ತಿವೆ. ಪಾಕಿಸ್ತಾನ, ಇರಾನ್ ಮುಂತಾದ ಅಪ್ಪಟ ಮುಸ್ಲಿಂ ದೇಶಗಳಿಗಿಂತ ಭಾರತೀಯ ಮುಸ್ಲಿಮರು ಹೆಚ್ಚು ಸ್ವಾತಂತ್ರ್ಯ ಮತ್ತು ಸೌಕರ್ಯ ಹೊಂದಿದ್ದಾರೆ. ಭಾರತದಲ್ಲಿ ಮುಸ್ಲಿಮರಿಗೆ ಯಾವುದೇ ಅಪಾಯ ಇಲ್ಲ ಎಂದು ಆರೆಸ್ಸೆಸ್ ಮುಖ್ಯಸ್ಥ ಮೋಹನ ಭಾಗವತ್ ಕೂಡ ಇತ್ತೀಚೆಗೆ ಹೇಳಿದ್ದರು. ಹಾಗೆ ನೋಡಿದರೆ ಮುಸ್ಲಿಂ ದೇಶಗಳಲ್ಲೇ ಮುಸ್ಲಿಮರು ಸುರಕ್ಷಿತವಾಗಿಲ್ಲ. ಪಾಕಿಸ್ತಾನ, ಆಫ್ಘಾನಿಸ್ತಾನದ ಮಸೀದಿಗಳಲ್ಲೇ ಬಾಂಬ್ ಇಟ್ಟು ಸ್ಫೋಟಿಸಲಾಗುತ್ತಿದೆ. ಇನ್ನು ಅಲ್ಲಿಯ ಅಲ್ಪಸಂಖ್ಯಾತರು ನಿತ್ಯ ನರಕ ಯಾತನೆ ಅನುಭವಿಸುತ್ತಿದ್ದಾರೆ. ಆ ದೇಶಗಳಲ್ಲಿ ಅರಾಜಕತೆ ಇದೆ. ಅಲ್ಲಿಯ ಜನ ಎರಡು ಹೊತ್ತಿನ ತುತ್ತಿಗೆ ಪರದಾಡುತ್ತಿದ್ದಾರೆ.
ಇಲ್ಲಿನ ಸುರಕ್ಷತೆಯ ಮಾತು ಕ್ರೈಸ್ತರಿಗೂ ಅನ್ವಯಿಸುತ್ತದೆ. ಇಲ್ಲಿನ ಜನಸಂಖ್ಯೆಯ 2.3% (ಸುಮಾರು 2.8 ಕೋಟಿ) ಕ್ರೈಸ್ತರಿದ್ದಾರೆ. ಕ್ರೈಸ್ತ ಮಿಷನರಿಗಳು ತಮ್ಮ ಧರ್ಮ ಪ್ರಚಾರಕ್ಕೆ ಭಾರತಕ್ಕೆ ಬಂದ ಕಾಲದಿಂದಲೂ ಹಿಂದೂಗಳು ಅವರ ಜತೆ ಸಹಿಷ್ಣುತೆಯಿಂದ ಬದುಕಿ ಬಾಳಿದ್ದಾರೆ. ಕ್ರೈಸ್ತರಾದ ಪಾಶ್ಚಾತ್ಯರ ಜ್ಞಾನಶಾಖೆಗಳ ಧಾರಾಳ ಉಪಯುಕ್ತತೆಯನ್ನು ಭಾರತ ಪಡೆದಿದೆ. ಕ್ರೈಸ್ತರು ನಡೆಸುತ್ತಿರುವ ಶಿಕ್ಷಣ ಸಂಸ್ಥೆಗಳು ಶತಮಾನಗಳಿಂದಲೂ ನಮ್ಮ ಜನಜೀವನದ ಜತೆ ಹಾಸುಹೊಕ್ಕಾಗಿವೆ.
ಇದನ್ನೂ ಓದಿ : ವಿಸ್ತಾರ ಸಂಪಾದಕೀಯ: ರಕ್ಷಣೆ ಮತ್ತು ಇಂಧನದಲ್ಲಿ ಸ್ವಾವಲಂಬನೆಯತ್ತ ಭಾರತದ ಹೆಜ್ಜೆ
ಈ ವರದಿ ಹಾಗೂ ಅಂಕಿಅಂಶಗಳು ನಮ್ಮ ಕಣ್ಣು ತೆರೆಸಬೇಕು. ಇಷ್ಟಾಗಿಯೂ ಕೆಲವು ಜನ ಆಗಾಗ ಪಾಕಿಸ್ತಾನ್ ಜಿಂದಾಬಾದ್ ಘೋಷಣೆ ಕೂಗುತ್ತಿರುವುದು, ತಾವು ಭಾರತದಲ್ಲಿ ಅನುಭವಿಸುತ್ತಿರುವ ಸ್ವಾತಂತ್ರ್ಯವನ್ನು ಅವಮಾನಿಸಿದಂತೆಯೇ ಸರಿ. ಅಲ್ಪಸಂಖ್ಯಾತರಿಗೆ ಇಲ್ಲಿ ರಕ್ಷಣೆಯಿಲ್ಲ ಎಂದು ಹುಯಿಲೆಬ್ಬಿಸುವುದನ್ನೇ ಕಾಯಕ ಮಾಡಿಕೊಂಡ ಕೆಲವರಿದ್ದಾರೆ. ವಿಶ್ವಸಂಸ್ಥೆ ಸೇರಿದಂತೆ ಅಂತಾರಾಷ್ಟ್ರೀಯ ವೇದಿಕೆಗಳಲ್ಲಿ ಕೆಲವು ದೇಶಗಳು ಆಗಾಗ ಭಾರತದಲ್ಲಿ ಅಲ್ಪಸಂಖ್ಯಾತರ ಸುರಕ್ಷತೆಯ ಪ್ರಶ್ನೆ ಎತ್ತುತ್ತಿವೆ. ಅಂಥ ದೇಶಗಳು, ಈಗ ಬಿಡುಗಡೆಯಾಗಿರುವ ಸಿಪಿಎ ವರದಿಯಲ್ಲಿ ತಮ್ಮ ದೇಶದ ಸ್ಥಾನ ಯಾವ ಕ್ರಮಾಂಕದಲ್ಲಿದೆ ಎನ್ನುವುದನ್ನು ಮೊದಲು ನೋಡಿಕೊಳ್ಳಲಿ. ದೇಶದೊಳಗಿದ್ದು ಅಪಪ್ರಚಾರ ಮಾಡುವ ಹಿತಶತ್ರುಗಳೂ ಇದನ್ನು ಗಮನಿಸಲಿ.