ಖಲಿಸ್ತಾನ ಉಗ್ರಗಾಮಿಗಳನ್ನು ಬೆಂಬಲಿಸುತ್ತಿರುವ ವಿಚಾರದಲ್ಲಿ ಕೆನಡಾದ ಬಗ್ಗೆ ಭಾರತ ಖಡಕ್ ನಿಲುವು ತೆಗೆದುಕೊಂಡಿರುವ ಪರಿಣಾಮ, ಕೆನಡಾದ 41 ರಾಜತಾಂತ್ರಿಕರನ್ನು ಅದು ವಾಪಸ್ ಕರೆಸಿಕೊಳ್ಳಬೇಕಾಗಿ ಬಂದಿದೆ. ಅಷ್ಟೂ ಮಂದಿಗೆ ಹಿಂದಕ್ಕೆ ಹೋಗುವಂತೆ ಭಾರತ ಸ್ಪಷ್ಟ ನಿರ್ದೇಶನ ನೀಡಿತ್ತು. ರಾಜತಾಂತ್ರಿಕರು ಇದ್ದಲ್ಲಿ ಮಾತುಕತೆಗೆ ಸಾಧ್ಯವಾಗುತ್ತದೆ; ನಿಜ. ಆದರೆ ಕೆನಡಾದಂಥ ಮೊಂಡು ಬಿದ್ದ ದೇಶ ಒಂದು ಪಾಠ ಕಲಿಯುವುದು ಅಗತ್ಯವಾಗಿದೆ. ಭಾರತವನ್ನು ಅಷ್ಟು ಸುಲಭವಾಗಿ ಮಣಿಸಲು ಸಾಧ್ಯವಿಲ್ಲ ಎಂಬ ಸಂಗತಿಗೂ ಕೆನಡಾಗೂ ಇತರ ದೇಶಗಳಿಗೂ ಮನದಟ್ಟಾಗಬೇಕಿದೆ. ಈ ನಡುವೆ, ರಾಜತಾಂತ್ರಿಕರ ಹೊರಹಾಕುವಿಕೆಗೆ ಸಂಬಂಧಿಸಿ ಅಮೆರಿಕ ಹಾಗೂ ಬ್ರಿಟನ್‌ಗಳು ಕೆನಡಾವನ್ನು ಬೆಂಬಲಿಸಿವೆ. ಆದರೆ ಭಾರತ ತಾನು ಇದಕ್ಕೆ ಡೋಂಟ್ ಕೇರ್ ಎಂಬ ಸಂದೇಶ ರವಾನಿಸಿದೆ. ಈ ವಿಚಾರದಲ್ಲಿ ಯಾವುದೇ ಅಂತಾರಾಷ್ಟ್ರೀಯ ನಿಯಮ ಉಲ್ಲಂಘಿಸಿಲ್ಲ ಎಂದು ಭಾರತ ಸ್ಪಷ್ಟವಾಗಿ ಹೇಳಿದೆ. ಕೆನಡಾ ರಾಜತಾಂತ್ರಿಕರನ್ನು ಹೊರದಬ್ಬಿದ ಭಾರತದ ನಿರ್ಧಾರ ಸೂಕ್ತವಾಗಿಯೇ ಇದೆ.
ರಾಜತಾಂತ್ರಿಕರನ್ನು ಹಿಂದಕ್ಕೆ ಕರೆಸಿಕೊಳ್ಳುವಂತೆ ಕೆನಡಾವನ್ನು ಒತ್ತಾಯಿಸಬೇಡಿ. ಭಿನ್ನಾಭಿಪ್ರಾಯಗಳನ್ನು ಪರಿಹರಿಸಲು ರಾಜತಾಂತ್ರಿಕರ ಅಗತ್ಯವಿದೆ ಎಂದು ಅಮೆರಿಕ ಹಾಗೂ ಬ್ರಿಟನ್ ದೇಶಗಳು ಭಾರತಕ್ಕೆ ಬೋಧನೆ ಮಾಡಿವೆ. ಹಾಗೆಯೇ, ಖಲಿಸ್ತಾನ್ ನಿಜ್ಜರ್ ಹತ್ಯೆಗೆ ಸಂಬಂಧಿಸಿ ಕೆನಡಾ ನಡೆಸುತ್ತಿರುವ ತನಿಖೆಯಲ್ಲಿ ಸಹಕರಿಸಲು ನಾವು ಭಾರತ ಸರ್ಕಾರವನ್ನು ಒತ್ತಾಯಿಸಿದ್ದೇವೆ ಎಂದಿವೆ. ಆದರೆ ಈ ದೇಶಗಳು, ಕೆನಡಾದಲ್ಲಿ ಖಲಿಸ್ತಾನ್ ಉಗ್ರರು ಮಿತಿ ಮೀರಿ ತಮ್ಮ ಪ್ರಭಾವ ಹೆಚ್ಚಿಸಿಕೊಂಡಿರುವ ಬಗ್ಗೆ, ಅದರಿಂದ ಕೆನಡಾದಲ್ಲಿರುವ ಭಾರತೀಯರಿಗೆ ಉಂಟಾಗುತ್ತಿರುವ ಸಮಸ್ಯೆಗಳ ಬಗ್ಗೆ ತುಟಿ ಪಿಟಕ್ ಎಂದಂತಿಲ್ಲ. ಕೆನಡಾ ಪ್ರಧಾನಿ ಜಸ್ಟಿನ್ ಟ್ರುಡೊ ಕೂಡ ಬ್ರಿಟನ್, ಯುಎಇ ಎಂದೆಲ್ಲ ಓಡಾಡುತ್ತ ತಮ್ಮ ಕರುಣಾಜನಕ ಪರಿಸ್ಥಿತಿಯ ಬಗ್ಗೆ ಗೋಳು ತೋಡಿಕೊಳ್ಳುವ ಕೆಲಸ ಮುಂದುವರಿಸುತ್ತಿದ್ದಾರೆ. ಭಾರತದ ವಿರುದ್ಧ ಜಾಗತಿಕ ಅಭಿಪ್ರಾಯ ರೂಪಿಸುವುದು ಅವರ ಉದ್ದೇಶ ಇರುವಂತಿದೆ. ಆದರೆ ಸರಿಯಾದ ಒಂದು ವಿಮಾನ ಇಟ್ಟುಕೊಳ್ಳಲಾಗದ ಈ ಪ್ರಧಾನಿಯ ಮಾತನ್ನು ಅವರೆಲ್ಲ ಗಂಭೀರವಾಗಿ ತೆಗೆದುಕೊಳ್ಳುತ್ತಾರೆ ಅನಿಸುವುದಿಲ್ಲ. ವಿಶ್ಲೇಷಕರು ಹೇಳುವ ಪ್ರಕಾರ ಅಮೆರಿಕ ಮತ್ತು ಬ್ರಿಟನ್, ಭಾರತದೊಂದಿಗಿನ ಬಾಂಧವ್ಯವನ್ನು ಹಾಳುಮಾಡಿಕೊಳ್ಳಲು ಬಯಸುವುದಿಲ್ಲ. ಯಾಕೆಂದರೆ ಏಷ್ಯಾದಲ್ಲಿ ತಮ್ಮ ಪ್ರಮುಖ ಪ್ರತಿಸ್ಪರ್ಧಿಯಾಗಿರುವ ಚೀನಾದ ವಿರುದ್ಧ ಸಮತೋಲನ ಸಾಧಿಲು ಅವುಗಳಿಗೆ ಭಾರತದ ಅಗತ್ಯವಿದೆ.
ಖಲಿಸ್ತಾನ ಉಗ್ರರ ಉಪಟಳಕ್ಕೆ ಸಂಬಂಧಿಸಿ ಮೊದಲು ರಾಜತಾಂತ್ರಿಕರನ್ನು ಹೊರ ಹಾಕಿದ್ದು ಕೆನಡಾವೇ ಹೊರತು ಭಾರತ ಅಲ್ಲ. ಭಾರತ ಪ್ರತಿಕಾರದ ಕ್ರಮ ತೆಗೆದುಕೊಳ್ಳಲೇ ಬೇಕಿತ್ತು. ಭಯೋತ್ಪಾದಕ ಹರ್‌ದೀಪ್ ಸಿಂಗ್ ನಿಜ್ಜರ್ ಹತ್ಯೆಯಲ್ಲಿ ತನ್ನ ಪಾತ್ರವಿಲ್ಲ ಎಂದು ಭಾರತ ಈಗಾಗಲೇ ಪ್ರತಿಪಾದಿಸಿದೆ. ಆದರೆ ಯಾವ ಸಾರ್ವಭೌಮ ದೇಶವೂ ತನ್ನ ವಿರುದ್ಧ ನಡೆಯುವ ಪಿತೂರಿಗಳನ್ನು ನೋಡುತ್ತಾ ಸುಮ್ಮನಿರಲು ಸಾಧ್ಯವಿಲ್ಲ. ಒಂದು ವೇಳೆ ನಿಜ್ಜರ್ ಹತ್ಯೆಯಲ್ಲಿ ಭಾರತದ ಪಾತ್ರವೇ ಇರುವುದು ಹೌದಾದರೆ, ಕೆನಡಾ ತನ್ನ ಇಂಟಲಿಜೆನ್ಸ್ ವೈಫಲ್ಯದ ಬಗೆಗೂ ತಲೆ ಕೆಡಿಸಿಕೊಳ್ಳಬೇಕಲ್ಲವೆ? ಹಾಗೆಯೇ ಖಲಿಸ್ತಾನ ಉಗ್ರರು ತನ್ನ ದೇಶದಲ್ಲಿ ನಡೆಸುತ್ತಿರುವುದೇನು, ಅವರ ಕಾರ್ಯಾಚರಣೆಯಿಂದ ಭಾರತಕ್ಕೆ ಏನು ಸಮಸ್ಯೆ, ಇದು ಉಭಯ ದೇಶಗಳ ಸಂಬಂಧಕ್ಕೆ ಹೇಗೆ ಧಕ್ಕೆಯಾಗಲಿದೆ- ಎಂಬುದರ ಬಗ್ಗೆಯೂ ಗಂಭೀರವಾಗಿ ಯೋಚಿಸಬೇಕಿತ್ತು. ಖಲಿಸ್ತಾನಿ ಉಗ್ರರು ಹಾಗೂ ಅವರಿಂದ ಬರುವ ಹಣ ಬೇಕು, ಭಾರತ ಬೇಡ ಎಂದಾದರೆ ಅದರ ದುಷ್ಪರಿಣಾಮಗಳನ್ನೂ ಎದುರಿಸಲು ಸಿದ್ಧ ಇರಬೇಕು.
ಇದನ್ನೂ ಓದಿ: ರಾಜತಾಂತ್ರಿಕ ಸಿಬ್ಬಂದಿ ವಿಚಾರದಲ್ಲಿ ಕೆನಡಾ ಪರ ನಿಂತ ಅಮೆರಿಕ, ಬ್ರಿಟನ್; ಡೋಂಟ್ ಕೇರ್ ಎಂದ ಭಾರತ
ಈಗ ಕೆನಡಾಗೆ ಬಿಸಿ ತಟ್ಟಿದೆ. ಅದು ಈಗ ಬಾಯಿ ಬಡಿದುಕೊಳ್ಳುತ್ತಿದೆ. ಈ ವಿಚಾರದಲ್ಲಿ ಅಮೆರಿಕ ಮತ್ತು ಬ್ರಿಟನ್ ಭಾರತಕ್ಕೆ ಬುದ್ಧಿ ಹೇಳಲು ಯತ್ನಿಸುತ್ತಿರುವುದು ಶುದ್ಧ ಅಧಿಕ ಪ್ರಸಂಗತನ. ಈ ವಿಚಾರದಲ್ಲಿ ಭಾರತ ತಾನು ಯಾವುದೇ ಅಂತಾರಾಷ್ಟ್ರೀಯ ನಿಯಮ ಉಲ್ಲಂಘಿಸಿಲ್ಲ ಎಂದು ಸ್ಪಷ್ಟಪಡಿಸಿದೆ. ಭಾರತದ ನಡೆ ಈ ವಿಚಾರದಲ್ಲಿ ಸ್ಫಟಿಕದಷ್ಟು ಸ್ಪಷ್ಟವಾಗಿದೆ. ಇದು ಕೆನಡಾಗೆ ತನ್ನನ್ನು ತಿದ್ದಿಕೊಳ್ಳುವ ಸಮಯ.