ಕತಾರ್‌ನಲ್ಲಿ(Qatar) ಬೇಹುಗಾರಿಕೆ (Espionage) ಆರೋಪದ ಮೇಲೆ ಮರಣದಂಡನೆ ಶಿಕ್ಷೆಗೊಳಗಾಗಿ ಜೈಲಿನಲ್ಲಿದ್ದ ಎಂಟು ಭಾರತೀಯ ನೌಕಾಪಡೆ ಹಿರಿಯ ಯೋಧರನ್ನು (Indian Navy Veterans) ಬಿಡುಗಡೆ ಮಾಡಲಾಗಿದೆ ಎಂದು ಅಲ್ಲಿನ ಸರಕಾರ ಸೋಮವಾರ ತಿಳಿಸಿದೆ. ಅವರಲ್ಲಿ ಏಳು ಮಂದಿ ಈ ಮಧ್ಯಪ್ರಾಚ್ಯ ದೇಶದಲ್ಲಿ 18 ತಿಂಗಳ ಜೈಲು ವಾಸದ ನಂತರ ಈಗಾಗಲೇ ಭಾರತಕ್ಕೆ ಮರಳಿದ್ದಾರೆ. ಇದು ಭಾರತದ ರಾಜತಾಂತ್ರಿಕ (Indian diplomacy) ಜಾಣ್ಮೆ, ಕತಾರ್ ಜೊತೆಗೆ ಪ್ರಧಾನಿ ನರೇಂದ್ರ ಮೋದಿ (Narendra Modi) ಹೊಂದಿರುವ ಸೌಹಾರ್ದ ಸಂಬಂಧಕ್ಕೆ ದೊರೆತ ಜಯವಾಗಿದೆ(Vistara Editorial).
ಕತಾರ್‌ನಲ್ಲಿ ಬಂಧಿತರಾಗಿದ್ದ, ದಹ್ರಾ ಗ್ಲೋಬಲ್ ಕಂಪನಿಯಲ್ಲಿ ಕೆಲಸ ಮಾಡುತ್ತಿದ್ದ ಎಂಟು ಭಾರತೀಯ ಪ್ರಜೆಗಳ ಬಿಡುಗಡೆಯನ್ನು ಭಾರತ ಸರ್ಕಾರ ಸ್ವಾಗತಿಸುತ್ತದೆ. ಅವರಲ್ಲಿ ಎಂಟು ಮಂದಿಯಲ್ಲಿ ಏಳು ಮಂದಿ ಭಾರತಕ್ಕೆ ಮರಳಿದ್ದಾರೆ. ಕತಾರ್ ರಾಜ್ಯದ ಅಮೀರ್ ಅವರ ನಿರ್ಧಾರವನ್ನು ನಾವು ಪ್ರಶಂಸಿಸುತ್ತೇವೆ ಎಂದು ವಿದೇಶಾಂಗ ಸಚಿವಾಲಯ ತಿಳಿಸಿದೆ. ಈಗ ಶಿಕ್ಷೆಗೆ ಗುರಿಯಾಗಿದ್ದ ಎಂಟೂ ಅಧಿಕಾರಿಗಳನ್ನು 2022ರ ಆಗಸ್ಟ್‌ನಲ್ಲಿ ಬೇಹುಗಾರಿಕೆ ಆರೋಪದ ಮೇಲೆ ಬಂಧಿಸಲಾಗಿತ್ತು. ಅವರ ವಿರುದ್ಧ ಬೇಹುಗಾರಿಕೆ ಮತ್ತು ಸರ್ಕಾರಿ ಪ್ರಾಯೋಜಿತ ಭಯೋತ್ಪಾದನೆಯ ಆರೋಪ ಹೊರಿಸಲಾಗಿತ್ತು. ಕತಾರ್‌ನ ರಹಸ್ಯ ನೌಕಾ ಯೋಜನೆಗೆ ಸಂಬಂಧಿಸಿದಂತೆ ಬೇಹುಗಾರಿಕೆ ಮಾಡುತ್ತಿದ್ದರು. ಇಸ್ರೇಲ್‌ಗಾಗಿ ಕತಾರ್‌ನ ಸುಧಾರಿತ ಜಲಾಂತರ್ಗಾಮಿ ನೌಕೆಗಳ ಮೇಲೆ ಬೇಹುಗಾರಿಕೆ ನಡೆಸುತ್ತಿದ್ದರು ಎಂಬ ಆರೋಪದ ಹಿನ್ನೆಲೆಯಲ್ಲಿ ಅಲ್ಲಿನ ನ್ಯಾಯಾಲಯವು ಅವರಿಗೆ ಶಿಕ್ಷೆ ವಿಧಿಸಿತ್ತು.
ಕ್ಯಾಪ್ಟನ್ ನವತೇಜ್ ಸಿಂಗ್ ಗಿಲ್, ಕ್ಯಾಪ್ಟನ್ ಸೌರಭ್ ವಸಿಷ್ಟ್, ಕಮಾಂಡರ್ ಪೂರ್ಣೇಂದು ತಿವಾರಿ, ಕ್ಯಾಪ್ಟನ್ ಬೀರೇಂದ್ರ ಕುಮಾರ್ ವರ್ಮಾ, ಕಮಾಂಡರ್ ಸುಗುಣಾಕರ್ ಪಕಾಲ, ಕಮಾಂಡರ್ ಸಂಜೀವ್ ಗುಪ್ತಾ, ಕಮಾಂಡರ್ ಅಮಿತ್ ನಾಗ್ಪಾಲ್ ಮತ್ತು ನಾವಿಕ ರಾಗೇಶ್ ಅವರು ಬಿಡುಗಡೆಯಾಗಿರುವ ಭಾರತೀಯ ನೌಕಾ ಪಡೆಯ ಹಿರಿಯರು. ಕಳೆದ ವರ್ಷ ಅಕ್ಟೋಬರ್ 26ರಂದು ಇವರಿಗೆ ಮರಣ ದಂಡನೆ ಘೋಷಿಸಲಾಗಿತ್ತು. ಈ ಸುದ್ದಿ ಭಾರತದಲ್ಲಿ ಭಾರೀ ಸಂಚಲನಕ್ಕೆ ಕಾರಣವಾಯಿತು. ಮಾತ್ರವಲ್ಲದೇ, ಶಿಕ್ಷೆಗೆ ಗುರಿಯಾದವರನ್ನು ತವರಿಗೆ ವಾಪಸ್ ಕರೆ ತರುವಂತೆ ಒತ್ತಡವು ಹೆಚ್ಚಿತ್ತು. ಪರಿಣಾಮ ಭಾರತವು ತನ್ನ ರಾಜತಾಂತ್ರಿಕ ಸಂಪರ್ಕಗಳನ್ನು ಬಳಸಿ, ಇದೀಗ ಯಶಸ್ವಿಯಾಗಿದೆ. ಮೇಲ್ನೋಟಕ್ಕೆ ಇದು ಉಭಯ ರಾಷ್ಟ್ರಗಳ ನಡುವಿನ ಅತ್ಯುತ್ತಮ ರಾಜತಾಂತ್ರಿಕ ಸಂಬಂಧದ ಫಲ ಎಂದು ಹೇಳಿದರೂ, ಪ್ರಧಾನಿ ನರೇಂದ್ರ ಮೋದಿ ಅವರ ವೈಯಕ್ತಿಕ ವರ್ಚಸ್ಸು ಇದರಲ್ಲಿ ಕೆಲಸ ಮಾಡಿದೆ. ವೈಯಕ್ತಿಕ ನೆಲೆಯಲ್ಲಿ ಅವರು ನಡೆಸಿದ ಪ್ರಯತ್ನಗಳು ಕೈಗೂಡಿವೆ. ಯಾಕೆಂದರೆ, ಇಡೀ ಪ್ರಕರಣವನ್ನು ಅವರು ನೇರವಾಗಿ ನಿರ್ವಹಣೆ ಮಾಡಿದ್ದಾರೆ.
ಇತ್ತೀಚಿನ ಕೆಲವು ವರ್ಷಗಳಲ್ಲಿ ಅಂತಾರಾಷ್ಟ್ರೀಯವಾಗಿ ಭಾರತದ ಪ್ರಾಬಲ್ಯ ಹೆಚ್ಚಾಗುತ್ತಿದೆ. ಮುಖ್ಯವಾಗಿ ಮೋದಿಯವರ ನೇತೃತ್ವದ ವಿದೇಶಾಂಗ ನೀತಿ ಹಾಗೂ ಅಂತಾರಾಷ್ಟ್ರೀಯ ಸಂಬಂಧಗಳು ಎಲ್ಲರ ಮೆಚ್ಚುಗೆಗೆ ಅರ್ಹವಾಗುವಂತೆ ಇವೆ. ದೇಶವು ವಿಶ್ವದ ಐದನೇ ಬೃಹತ್ ಆರ್ಥಿಕತೆಯಾಗಿ ಬೆಳೆದು ನಿಂತಿದೆ. ಮೋದಿ ಸರ್ಕಾರದ ಚಾರಿತ್ರಿಕ ನಿರ್ಧಾರಗಳು ಹಾಗೂ ನೀತಿಗಳು ಫಲ ಕೊಡಲಾರಂಭಿಸಿವೆ. ಪಾಕಾಸ್ತಾನ ಜತೆ ಶತ್ರುತ್ವ ಹೊಂದಿದ್ದರೂ ಅರಬ್ ದೇಶಗಳ ಜತೆಗಿನ ಆತ್ಮೀಯ ಬಾಂಧವ್ಯ, ಅಂತಾರಾಷ್ಟ್ರೀಯ ಬಿಕ್ಕಟ್ಟುಗಳು ಉಂಟಾದಾಗ ತನ್ನ ಪ್ರಜೆಗಳಿಗೆ ಅದರಿಂದ ಸಂಕಷ್ಟ ಉಂಟಾಗದಂತೆ ನೋಡಿಕೊಳ್ಳುವ ಜಾಣ್ಮೆ, ಜೊತೆಗೇ ಬಲಿಷ್ಠ ಮಿಲಿಟರಿಯನ್ನೂ ಕಟ್ಟಿಕೊಳ್ಳುವ ವಿವೇಕ ಮುಂತಾದವುಗಳನ್ನೆಲ್ಲ ಇದರ ಮುಂದುವರಿಕೆಯಾಗಿ ನೋಡಬಹುದು. ಜಾಗತಿಕ ಸಂಬಂಧಗಳಲ್ಲಿ ಪಾರದರ್ಶಕತೆ, ಜನಹಿತ ನೀತಿ, ನೈತಿಕತೆ, ಪ್ರಾಮಾಣಿಕತೆ, ಪಂಚಶೀಲ ತತ್ವಗಳನ್ನು ಕಾಪಾಡಿಕೊಂಡು ಬಂದಿರುವ ವಿವೇಕಗಳಿಂದ ಇದು ಸಾಧ್ಯವಾಗಿದೆ. ಇದು ಜಾಗತಿಕವಾಗಿ ಭಾರತದ ಶಕ್ತಿ ವೃದ್ಧಿಯಾಗುತ್ತದೆ ಎಂಬುದರ ದ್ಯೋತಕ. ಜತೆಗೆ, ವಿವಿಧ ರಾಷ್ಟ್ರಗಳ ಜತೆಗೆ ಸಾಧಿಸುತ್ತಿರುವ ರಾಜತಾಂತ್ರಿಕ ಸಂಬಂಧಗಳು ಭಾರತವನ್ನು ಮತ್ತೊಂದು ಎತ್ತರಕ್ಕೆ ಕೊಂಡೊಯ್ದಿವೆ ಎನ್ನುವುದು ಸ್ಪಷ್ಟ. ಈ ಮಾತುಗಳನ್ನು ಕತಾರ್‌ನಲ್ಲಿ ಮರಣದಂಡನೆಗೆ ಗುರಿಯಾದ ಭಾರತೀಯ ನೌಕಾಪಡೆಯ ಹಿರಿಯರನ್ನು ವಾಪಸ್ ತವರಿಗೆ ಬರುವಂತೆ ಮಾಡಿರುವ ನಿದರ್ಶನವು ಪುಷ್ಟೀಕರಿಸುತ್ತದೆ.
ಈ ಸುದ್ದಿಯನ್ನೂ ಓದಿ: ವಿಸ್ತಾರ ಸಂಪಾದಕೀಯ: ಕನ್ನಡದಲ್ಲೇ ಸಿಆರ್‌ಪಿಎಫ್ ಪರೀಕ್ಷೆ! ಬ್ಯಾಂಕಿಂಗ್ ಪರೀಕ್ಷೆಗಳೂ ಕನ್ನಡದಲ್ಲಿ ನಡೆಯಲಿ