Site icon Vistara News

ವಿಸ್ತಾರ ಸಂಪಾದಕೀಯ: ವಿದೇಶಗಳೊಂದಿಗೆ ರೂಪಾಯಿಯಲ್ಲಿ ವ್ಯವಹಾರ, ಭಾರತದ ಇನ್ನೊಂದು ಜಿಗಿತ

Vistara Editorial, transaction in rupees with foreign countries, another achievement of India

ಭಾರತವು ರೂಪಾಯಿ ಮೂಲಕವೇ ಹಣ ಪಾವತಿಸಿ ಯುಎಇಯಿಂದ (UAE) ಕಚ್ಚಾ ತೈಲ ಆಮದು ಮಾಡಿಕೊಂಡು ಇತಿಹಾಸ ಸೃಷ್ಟಿಸಿದೆ. ಈ ಇತಿಹಾಸವೀಗ ಮತ್ತೊಂದು ಮುನ್ನಡೆಗೆ ಕಾರಣವಾಗಿದೆ. ರೂಪಾಯಿ ಮೂಲಕವೇ ವಹಿವಾಟು ನಡೆಸಿ ಬೇರೆ ಕ್ಷೇತ್ರಗಳಲ್ಲಿ ಆಮದು ಒಪ್ಪಂದ ಮಾಡಿಕೊಳ್ಳಲು ಇದು ನೆರವಾಗಿದೆ ಎಂದು ಕೇಂದ್ರ ಸರ್ಕಾರದ (Central Government) ಹಿರಿಯ ಅಧಿಕಾರಿಗಳು ಮಾಹಿತಿ ನೀಡಿದ್ದಾರೆ. ಕಳೆದ ಜುಲೈನಲ್ಲಿ ಪ್ರಧಾನಿ ನರೇಂದ್ರ ಮೋದಿ ಅವರು ಯುಎಇ ಪ್ರವಾಸ ಕೈಗೊಂಡಾಗ ರೂಪಾಯಿಯಲ್ಲೇ ವಹಿವಾಟು ನಡೆಸುವ ಕುರಿತು ಮಹತ್ವದ ಒಪ್ಪಂದ ಮಾಡಿಕೊಂಡಿದ್ದರು. ಭಾರತ ಹಾಗೂ ಯುಎಇ ನಡುವಿನ ವಹಿವಾಟಿನಲ್ಲಿ ಡಾಲರ್‌ ಬಳಕೆಯನ್ನು ಕಡಿಮೆ ಮಾಡುವುದು ಹಾಗೂ ರೂಪಾಯಿಗೆ ಹೆಚ್ಚಿನ ಆದ್ಯತೆ ನೀಡುವ ದೃಷ್ಟಿಯಿಂದ ಎರಡೂ ದೇಶಗಳು ಒಪ್ಪಂದ ಮಾಡಿಕೊಂಡಿವೆ. ಇದರಿಂದ ಸಂಕಷ್ಟದ ಸಂದರ್ಭಗಳಲ್ಲಿ ಜಾಗತಿಕವಾಗಿ ರೂಪಾಯಿ ಮೌಲ್ಯವನ್ನು ಕಡಿಮೆಗೊಳಿಸುವ ಸಾಧ್ಯತೆಯನ್ನು ಕಡಿಮೆ ಮಾಡುವುದು ಕೂಡ ಕೇಂದ್ರ ಸರ್ಕಾರದ ಉದ್ದೇಶವಾಗಿದೆ. ಇದರಿಂದ ಹಲವು ಲಾಭಗಳಿವೆ(Vistara Editorial).

ಕಳೆದ ಆಗಸ್ಟ್‌ನಲ್ಲಿ ಯುಎಇಯ ಅಬುಧಾಬಿ ನ್ಯಾಷನಲ್‌ ಆಯಿಲ್‌ ಕಂಪನಿ (ಎಡಿಎನ್‌ಒಸಿ)ಯಿಂದ ಭಾರತದ ಇಂಡಿಯನ್‌ ಆಯಿಲ್‌ ಕಾರ್ಪೊರೇಷನ್‌ (ಐಒಸಿ) ಸಂಸ್ಥೆಯು ರೂಪಾಯಿ ಮೂಲಕವೇ ಹಣ ಪಾವತಿಸಿ ಲಕ್ಷಾಂತರ ಬ್ಯಾರೆಲ್‌ ಕಚ್ಚಾ ತೈಲ ಖರೀದಿಸಿದೆ. ಭಾರತ ಮತ್ತು ಯುಎಇ ನಡುವೆ ಸ್ಥಳೀಯ ಕರೆನ್ಸಿ ಸೆಟಲ್‌ಮೆಂಟ್ (ಎಲ್‌ಸಿಎಸ್) ಅನ್ವಯ ಖರೀದಿ ಮಾಡಿದೆ. ಈ ಒಪ್ಪಂದವೀಗ ಬೇರೆ ವ್ಯಾಪಾರ ಒಪ್ಪಂದಗಳನ್ನು ಮಾಡಿಕೊಳ್ಳಲು ಕೂಡ ನೆರವಾಗುತ್ತಿದೆ ಎಂದು ಅಧಿಕಾರಿಗಳು ತಿಳಿಸಿದ್ದಾರೆ. ಭಾರತಕ್ಕೆ ಬೇಕಾಗಿರುವ ಒಟ್ಟು ಬೇಡಿಕೆಯ ಕಚ್ಚಾ ತೈಲದಲ್ಲಿ ಶೇ.85ರಷ್ಟು ಕಚ್ಚಾ ತೈಲವನ್ನು ಆಮದು ಮಾಡಿಕೊಳ್ಳುತ್ತದೆ. ಕಚ್ಚಾ ತೈಲಕ್ಕಾಗಿ ಭಾರತವು ಆಮದು ಮೇಲೆ ಹೆಚ್ಚು ಅವಲಂಬಿತವಾಗಿರುವ ಕಾರಣ ರೂಪಾಯಿಯಲ್ಲೇ ವಹಿವಾಟು ನಡೆಸುವುದು ಪ್ರಮುಖವಾಗಿದೆ. ರಷ್ಯಾದ ಕೆಲ ತೈಲ ಕಂಪನಿಗಳಿಗೂ ಭಾರತವು ರೂಪಾಯಿ ಪಾವತಿಸುವ ಮೂಲಕವೇ ಆಮದು ಮಾಡಿಕೊಳ್ಳುತ್ತಿದೆ. ಅದರಲ್ಲೂ ಯುಎಇ ಜತೆ ಮಾಡಿಕೊಂಡಿರುವ ಒಪ್ಪಂದವು ಹತ್ತಾರು ಕ್ಷೇತ್ರಗಳಲ್ಲಿ ವ್ಯಾಪಾರ ಒಪ್ಪಂದ ಮಾಡಿಕೊಳ್ಳಲು ನೆರವಾಗುತ್ತಿದೆ. ಈಗಾಗಲೇ ಜಗತ್ತಿನ 18 ರಾಷ್ಟ್ರಗಳ ಜತೆ ರೂಪಾಯಿಯಲ್ಲೇ ವಹಿವಾಟು ನಡೆಸಲು ಭಾರತದ ಸಾರ್ವಜನಿಕ ವಲಯದ ಬ್ಯಾಂಕ್‌ಗಳಿಗೆ (PSU) ಆರ್‌ಬಿಐ ಅನುಮತಿ ನೀಡಿದೆ. ಹಾಗಾಗಿ, ಮುಂದಿನ ದಿನಗಳಲ್ಲಿ ಹೆಚ್ಚಿನ ಪ್ರಮಾಣದಲ್ಲಿ ರೂಪಾಯಿ ಮೂಲಕವೇ ವಹಿವಾಟು ನಡೆಯುವ ಸಾಧ್ಯತೆ ಹೆಚ್ಚಿವೆ.

ರೂಪಾಯಿಯನ್ನು ಅಂತಾರಾಷ್ಟ್ರೀಯ ವಾಣಿಜ್ಯದಲ್ಲಿ ಜಾಗತಿಕವಾಗಿ ಸ್ವೀಕಾರಾರ್ಹಗೊಳಿಸುವುದು ಭಾರತ ಸರ್ಕಾರದ ಗುರಿಯಾಗಿದೆ. ದೇಶಗಳು ಸರಕು ಮತ್ತು ಸೇವೆಗಳನ್ನು ಆಮದು ಮಾಡಿಕೊಳ್ಳುವಾಗ ಮತ್ತು ರಫ್ತು ಮಾಡುವಾಗ ವಿದೇಶಿ ಕರೆನ್ಸಿಯಲ್ಲಿ ಪಾವತಿಗಳನ್ನು ಮಾಡಬೇಕಾಗುತ್ತದೆ. ಅಮೆರಿಕನ್‌ ಡಾಲರ್ (USD) ಪ್ರಪಂಚದ ಮೀಸಲು ಕರೆನ್ಸಿಯಾಗಿದೆ. ಹೀಗಾಗಿ ಈ ವ್ಯವಹಾರಗಳಲ್ಲಿ ಹೆಚ್ಚಿನವು ಡಾಲರ್‌ಗಳಲ್ಲಿ ನಡೆಯುತ್ತವೆ. ಭಾರತೀಯ ಖರೀದಿದಾರರು ಜರ್ಮನಿಯ ಮಾರಾಟಗಾರರೊಂದಿಗೆ ವ್ಯವಹಾರಕ್ಕೆ ತೊಡಗಿದರೆ, ಮೊದಲು ರೂಪಾಯಿಗಳನ್ನು ಡಾಲರ್‌ಗೆ ಪರಿವರ್ತಿಸಬೇಕು. ಮಾರಾಟಗಾರ ಆ ಡಾಲರ್‌ಗಳನ್ನು ಸ್ವೀಕರಿಸಿದ ನಂತರ ಅದನ್ನು ಯುರೋಗಳಾಗಿ ಪರಿವರ್ತಿಸಲಾಗುತ್ತದೆ. ಯುಎಇಯಲ್ಲೂ ಹೀಗೆಯೇ. ಅಲ್ಲಿ ಡಾಲರ್‌ಗಳನ್ನು ಪಡೆದು ಅವುಗಳನ್ನು ಅಲ್ಲಿನ ಕರೆನ್ಸಿ ದಿರ್ಹಮ್‌ಗೆ ಪರಿವರ್ತಿಸಲಾಗುತ್ತದೆ. ಒಂದು ಕರೆನ್ಸಿಯಿಂದ ಇನ್ನೊಂದಕ್ಕೆ ಪರಿವರ್ತನೆ ಪ್ರಕ್ರಿಯೆಗೆ ಅಗಾಧ ವೆಚ್ಚ ಅಥವಾ ಕಮಿಷನ್‌ ಪಾವತಿಸಬೇಕಾಗುತ್ತದೆ. ಜಾಗತಿಕ ತಂತ್ರಜ್ಞಾನ ಕಂಪನಿ ವೈಸ್‌ನ ಅಧ್ಯಯನದ ಪ್ರಕಾರ, 2020ರಲ್ಲಿ ಕರೆನ್ಸಿ ಪರಿವರ್ತನೆ ಸೇರಿದಂತೆ ವಿದೇಶಿ ವಿನಿಮಯ ಶುಲ್ಕವಾಗಿ ಭಾರತ 263 ಶತಕೋಟಿ ರೂಪಾಯಿ ಮೊತ್ತವನ್ನು ಪಾವತಿಸಿದೆ. ನೇರವಾಗಿ ರೂಪಾಯಿಗಳನ್ನು ಪಾವತಿಸುವಂತಾದರೆ, ಈ ಮೊತ್ತ ಉಳಿಯುತ್ತದೆ.

RBI ಈಗ ಡಾಲರ್‌ಗಳಿಗಿಂತ ಭಾರತೀಯ ರೂಪಾಯಿಯಲ್ಲಿ ವ್ಯಾಪಾರ ವಹಿವಾಟು ಮಾಡಲು ಅವಕಾಶ ನೀಡುವ ಮೂಲಕ ಜಾಗತಿಕವಾಗಿ ರೂಪಾಯಿಯನ್ನು ಸ್ವೀಕಾರಾರ್ಹಗೊಳಿಸಲು ಪ್ರಯತ್ನಿಸುತ್ತಿದೆ. ಇದರಿಂದ ಡಾಲರ್‌ ಜೊತೆಗೆ ರೂಪಾಯಿಗೆ ಇರುವ ಗಣನೀಯ ಮೌಲ್ಯ ವ್ಯತ್ಯಾಸ ಕಾಲಾಂತರದಲ್ಲಿ ಕಡಿಮೆಯಾಗಲಿದೆ. ಇದು ಹಣದುಬ್ಬರವನ್ನೂ ಕಡಿಮೆಗೊಳಿಸುತ್ತದೆ. ನಾವು ಆಮದು ಮಾಡಿಕೊಳ್ಳುವ ವಸ್ತುಗಳ ಮೌಲ್ಯವನ್ನು ಭಾರತೀಯ ಕರೆನ್ಸಿಯಲ್ಲಿ ಅಳೆದಾಗ, ಅದು ಸಹಜವಾಗಿಯೇ ಭಾರತೀಯ ಮಾರುಕಟ್ಟೆಗೆ ಯಾವುದೇ ವಿನಿಮಯ ವ್ಯತ್ಯಾಸಗಳಿಲ್ಲದೆ ಸಹಜವಾಗಿರುತ್ತದೆ. ಈ ವ್ಯಾಪಾರ ವಹಿವಾಟುಗಳ ಹೊರತಾಗಿ, ಇತರ ದೇಶಗಳಿಗೆ ಭೇಟಿ ನೀಡುವ ಭಾರತೀಯ ಪ್ರವಾಸಿಗರು ಭೇಟಿ ನೀಡುವ ದೇಶದ ಕರೆನ್ಸಿಯಲ್ಲಿ ಅಥವಾ ಯಾವುದೇ ಸ್ವೀಕಾರಾರ್ಹ ಕರೆನ್ಸಿಯಲ್ಲಿ ಪಾವತಿಸಲು ಒತ್ತಾಯಿಸಲಾಗುತ್ತದೆ. ಸಾಮಾನ್ಯವಾಗಿ ಡಾಲರ್, ಯೂರೋ ಮತ್ತು ಪೌಂಡ್ ಎಲ್ಲಾ ದೇಶಗಳಲ್ಲಿ ಸ್ವೀಕಾರಾರ್ಹ. ಭಾರತ ಇಂದು ವಿಶ್ವದ ನಾಲ್ಕು ಅತಿ ದೊಡ್ಡ ಆರ್ಥಿಕತೆಗಳಲ್ಲಿ ಒಂದು. ಹೀಗಿರುವಾಗ, ಜಾಗತಿಕ ಮಾರುಕಟ್ಟೆಯಲ್ಲೂ ತನ್ನ ಕರೆನ್ಸಿಯ ಸ್ಥಾನವನ್ನು ಸ್ಥಾಪಿಸುವುದು ಭಾರತದ ಘನತೆಯನ್ನು ಇನ್ನೊಂದು ಹಂತಕ್ಕೆ ಎತ್ತರಿಸುತ್ತದೆ. ನೆರೆಹೊರೆಯ ಹಲವು ದೇಶಗಳು ಈಗಾಗಲೇ ಭಾರತೀಯ ರೂಪಾಯಿಗಳನ್ನು ಸ್ಥಳೀಯ ಪಾವತಿಗಳಿಗಾಗಿ ಸ್ವೀಕರಿಸುತ್ತಿವೆ. ಇದು ವ್ಯಾಪಕವಾಗಬೇಕಿದೆ. ಅದಕ್ಕೆ ಆರ್‌ಬಿಐ ಹಾಗೂ ಸರ್ಕಾರ ಇನ್ನಷ್ಟು ಪ್ರಯತ್ನಿಸಬೇಕಿದೆ.

ಈ ಸಂಪಾದಕೀಯವನ್ನೂ ಓದಿ: ವಿಸ್ತಾರ ಸಂಪಾದಕೀಯ: ರೈತರ ಆತ್ಮಹತ್ಯೆ ಕುರಿತು ಸಚಿವರ ಬೇಜವಾಬ್ದಾರಿ ಹೇಳಿಕೆ

Exit mobile version