Site icon Vistara News

ವಿಸ್ತಾರ Explainer: ಯಾರು ಈ ಖಲಿಸ್ತಾನಿ, ಪ್ರತ್ಯೇಕತಾವಾದಿ ನಾಯಕ ಅಮೃತ್​ಪಾಲ್​ ಸಿಂಗ್‌?

Amritpal Singh

ಖಲಿಸ್ತಾನಿಗಳ ನಾಯಕ, ಬೋಧಕ, ವಾರಿಸ್ ಪಂಜಾಬ್ ದೇ ಮುಖ್ಯಸ್ಥ ಅಮೃತ್​ ಪಾಲ್​ ಸಿಂಗ್​ನನ್ನು ಪಂಜಾಬ್​ ಪೊಲೀಸರು ಬೆನ್ನಟ್ಟಿದ್ದಾರೆ. ಆರಂಭದಲ್ಲಿ ಈತನನ್ನು ನಾಕೋದರ್​​ನ ಬಳಿ ಅರೆಸ್ಟ್ ಮಾಡಲಾಗಿದೆ (Amritpal Sing) ಎಂದು ಮಾಹಿತಿ ಲಭ್ಯವಾಗಿತ್ತಾದರೂ, ಆ ಬಳಿಕ ಆತ ಪರಾರಿಯಾದ ಎಂದು ಪೊಲೀಸರು ತಿಳಿಸಿದ್ದರು. ಇದೀಗ ಆತ ಅರೆಸ್ಟ್‌ ಆಗಿದ್ದು, ಅಸ್ಸಾಂ ಜೈಲಿಗೆ ಕಳಿಸಲಾಗಿದೆ. ಇತ್ತೀಚೆಗೆ ಸಖತ್​ ಸದ್ದು ಮಾಡುತ್ತಿದ್ದ, ರಕ್ಷಣಾ ವ್ಯವಸ್ಥೆಗೆ ಬೆದರಿಕೆಯೊಡ್ಡಿದ್ದ ಈ ಅಮೃತ್​ ಪಾಲ್​ ಸಿಂಗ್ ಯಾರು? ಅವನ ಹಿನ್ನೆಲೆ ಏನು..ಇಲ್ಲಿದೆ ವಿಸ್ತೃತ ಮಾಹಿತಿ.

ಫೆಬ್ರವರಿಯಲ್ಲಿ ಅಮೃತಸರದ ಬಳಿಯ ಅಜ್ನಾಲಾದಲ್ಲಿ ಪೊಲೀಸ್‌ ಠಾಣೆ ಮೇಲೆ ನಡೆದ ದಾಳಿ ನಡೆದಿತ್ತು. ಪೊಲೀಸ್‌ ಠಾಣೆಗಳ ಮೇಲೆ ಗುಂಪು ದಾಳಿ ಭಾರತದಲ್ಲಿ ಹೊಸತಲ್ಲ. ಆದರೆ ಈ ಸಲ ಖಲಿಸ್ತಾನ್‌ ಪ್ರತಿಪಾದಕ ಅಮೃತ್‌ಪಾಲ್‌ ಸಿಂಗ್‌ ನೇತೃತ್ವದಲ್ಲಿ ದಾಳಿ ಈಗ ಹೊಸ ಆತಂಕಕ್ಕೆ ಕಾರಣವಾಗಿತ್ತು. ಅಲ್ಲಿಂದಲೂ ಆತನ ವಿರುದ್ಧದ ಪೊಲೀಸ್ ಕಾರ್ಯಾಚರಣೆ ತೀವ್ರಗೊಂಡಿತ್ತು.

ಈ ದಾಳಿಗೇನು ಕಾರಣ?
ಅಮೃತ್‌ಪಾಲ್‌ ಸಿಂಗ್‌ನ ಸಹಚರ ಲವ್‌ಪ್ರೀತ್‌ ಸಿಂಗ್‌ ತೂಫಾನ್‌ ಎಂಬಾತನನ್ನು ಪೊಲೀಸರು ಬಂಧಿಸಿ ಠಾಣೆಯಲ್ಲಿ ವಿಚಾರಣೆಗೆ ಒಳಪಡಿಸಿದ್ದರು. ಅಮೃತ್‌ಪಾಲ್‌ ಸಿಂಗ್‌ನನ್ನು ಕಟುವಾಗಿ ಟೀಕಿಸುತ್ತಿದ್ದ ಒಬ್ಬ ವ್ಯಕ್ತಿಯನ್ನು ಅಪಹರಿಸಿ ಹಿಗ್ಗಾಮುಗ್ಗಾ ಹಲ್ಲೆ ನಡೆಸಿದ್ದಾನೆ ಎಂಬುದು ಲವ್‌ಪ್ರೀತ್‌ನ ಮೇಲಿದ್ದ ದೂರು. ಇದರಿಂದ ಕೆರಳಿದ ಅಮೃತ್‌ಪಾಲ್‌ ಮತ್ತು ಆತನ ಬೆಂಬಲಿಗರು ದೊಡ್ಡ ಸಂಖ್ಯೆಯಲ್ಲಿ ದೊಣ್ಣೆ ಕತ್ತಿಗಳನ್ನು ಹಿಡಿದುಕೊಂಡು ಅಜ್ನಾಲಾ ಪೊಲೀಸ್‌ ಠಾಣೆಗೆ ನುಗ್ಗಿದರು. ಇದರಿಂದ ಬೆದರಿದ ಪೊಲೀಸರು ಲವ್‌ಪ್ರೀತ್‌ನನ್ನು ಬಿಡುಗಡೆ ಮಾಡಿದ್ದೂ ಅಲ್ಲದೇ, ಆತ ನಿರ್ದೋಷಿ ಎಂದು ಸಾಬೀತುಪಡಿಸುವ ಸಾಕ್ಷ್ಯಗಳು ದೊರೆತಿವೆ ಎಂದು ತಾವೇ ಘೋಷಿಸಿಯೂ ಬಿಟ್ಟರು. ಇದೀಗ ಅಮೃತ್‌ಪಾಲ್‌ ವಿಜಯದ ನಗು ನಗುತ್ತಿದ್ದಾನೆ. ಇದರಿಂದ ಅಭಿಮಾನಿಗಳ ಕಣ್ಣಿನಲ್ಲಿ ಆತನ ತೂಕ ಇನ್ನಷ್ಟು ಹೆಚ್ಚಿದೆ. ಸಮಾಜಘಾತುಕ ಶಕ್ತಿಯ ಮುಂದೆ ಪೊಲೀಸರು ಮಂಡಿಯೂರಿದ ಈ ಘಟನೆ ದೇಶದ ಚಿತ್ತ ಇತ್ತ ಹರಿಯುವಂತೆ ಮಾಡಿದೆ.

ಯಾರಿವನು ಅಮೃತ್‌ಪಾಲ್?‌

#image_title

ಅಮೃತಸರದ ಜಲ್ಲುಪುರ್‌ ಖೇರಾ ಎಂಬ ಗ್ರಾಮದಲ್ಲಿ 1993ರಲ್ಲಿ ಜನಿಸಿದ ಅಮೃತ್‌ಪಾಲ್‌, 12ನೇ ತರಗತಿವರೆಗೆ ಓದಿದ. 2012ರಲ್ಲಿ ಭಾರತ ತೊರೆದು, ದುಬೈಯಲ್ಲಿ ತನ್ನ ಚಿಕ್ಕಪ್ಪನ ಟ್ರಾನ್ಸ್‌ಪೋರ್ಟ್‌ ಕಂಪನಿಯಲ್ಲಿ ದುಡಿದ. ಈತ ಪಂಜಾಬ್‌ನ ಪೊಲೀಸರ ಹಾಗೂ ರಾಜಕಾರಣಿಗಳ ಗಮನಕ್ಕೆ ಬಂದುದೇ ಆರು ತಿಂಗಳ ಹಿಂದೆ- ʼವಾರಿಸ್‌ ಪಂಜಾಬ್‌ ದೇʼ ಸಂಘಟನೆಯ ಮುಖ್ಯಸ್ಥನಾಗಿ ನಿಯುಕ್ತನಾದ ಸಂದರ್ಭದಲ್ಲಿ. ಈ ಸಂಘಟನೆಯನ್ನು ಸ್ಥಾಪಿಸಿದವನು ನಟ, ಚಳವಳಿಗಾರ ದೀಪ್‌ ಸಿಧು. ಇವನು 2022ರ ಫೆಬ್ರವರಿಯಲ್ಲಿ ರಸ್ತೆ ಅಪಘಾತದಲ್ಲಿ ತೀರಿಕೊಂಡಿದ್ದ. ಇವನನ್ನು ಸರ್ಕಾರ ಸಾಯಿಸಿದೆ ಎಂದು ಅಮೃತ್‌ಪಾಲ್‌ ಮತ್ತು ಬೆಂಬಲಿಗರು ಆರೋಪಿಸುತ್ತ ಬಂದಿದ್ದಾರೆ.

ಅಮೃತ್‌ಪಾಲ್‌ ಯಾವತ್ತೂ ಸಿಧುವನ್ನು ಭೇಟಿ ಮಾಡಿದವನೇ ಅಲ್ಲ. ಆದರೆ ಆನ್‌ಲೈನ್‌ನಲ್ಲಿ ತನ್ನನ್ನು ಅತ್ಯಂತ ಪ್ರಭಾವಿಸಿದ್ದ ಎಂದು ಹೇಳಿಕೊಳ್ಳುತ್ತಾನೆ. ಸಿಧುವಿನ ಸಾವಿನ ವಾರ್ಷಿಕೋತ್ಸವದ ಸಂದರ್ಭದಲ್ಲಿ, ಸಿಧುವಿನ ಸಲಹೆಯಂತೆ ತಾನು ಗಡ್ಡ ಟ್ರಿಮ್‌ ಮಾಡಿಕೊಳ್ಳುವುದು ಬಿಟ್ಟಿರುವುದಾಗಿ ಹೇಳಿದ.

ಕಳೆದ ಸೆಪ್ಟೆಂಬರ್‌ 25ರಂದು ಆನಂದ್‌ಪುರ ಸಾಹಿಬ್‌ನಲ್ಲಿ ನಡೆದ ಸಿಖ್‌ ಧರ್ಮದ ಸಾಂಪ್ರದಾಯಿಕ ಬ್ಯಾಪ್ಟಿಸಂ ಕಾರ್ಯಕ್ರಮದಲ್ಲಿ ಭಾಗವಹಿಸಿದ ಅಮೃತ್‌ಪಾಲ್‌, ʼಅಮೃತಧಾರಿ ಸಿಖ್‌ʼ ಎನಿಸಿದ. ಈ ಕಾರ್ಯಕ್ರಮಕ್ಕೆ ಹರಿದುಬಂದ ಜನಸಾಗರ ನೋಡಿ ಪಂಜಾಬ್‌ ಅವಾಕ್ಕಾಯಿತು. ಇದಾದ ನಾಲ್ಕು ದಿನಗಳ ನಂತರ ಸೆ.29ರಂದು ಮಹತ್ವದ ಹೊಣೆ ಹೊರುವವರು ಈಡೇರಿಸುವ ಪೇಟ ಧರಿಸುವ ʼದಸ್ತರ್‌ ಬಂದಿʼ ಕಾರ್ಯಕ್ರಮ ನಡೆಯಿತು. ಇದಕ್ಕೂ ದಾಖಲೆ ಸಂಖ್ಯೆಯ ಅಭಿಮಾನಿಗಳು ನೆರೆದಿದ್ದರು. ಇದು ನಡೆದುದು ರೋಡೆ ಗ್ರಾಮದಲ್ಲಿ. ಅದು ಖಲಿಸ್ತಾನ್‌ ಚಳವಳಿಯ ರಾಕ್ಷಸ ಭಯೋತ್ಪಾದಕನಾಗಿದ್ದ ಜರ್ನೈಲ್‌ ಸಿಂಗ್‌ ಭಿಂದ್ರಾನ್‌ವಾಲೆಯ ಜನ್ಮಸ್ಥಳ.

ಕ್ಲೀನ್‌ ಶೇವ್‌ ಮಾಡಿಕೊಂಡಿರುತ್ತಿದ್ದ ಅಮೃತ್‌ಪಾಲ್‌ ಉದ್ದ ಗಡ್ಡ ಬಿಟ್ಟು ಖಲಿಸ್ತಾನ್‌ ಚಳವಳಿಯ ಮುಖವಾಣಿಯಾದ ಬೆಳವಣಿಗೆ ಬಲು ಶೀಘ್ರವಾಗಿ ನಡೆದಿದೆ. ಆತ ಭಿಂದ್ರಾನ್‌ವಾಲೆಯಂತೆಯೇ ದಿರಿಸು ಧರಿಸಿಕೊಳ್ಳುತ್ತಾನೆ. ಕೆಲವರು ಅವನನ್ನು ಈಗಾಗಲೇ ʼಎರಡನೇ ಭಿಂದ್ರಾನ್‌ವಾಲೆʼ ಎಂದು ಕರೆಯಲಾರಂಭಿಸಿದ್ದಾರೆ. ದುಬೈಯಿಂದ ಮರಳುತ್ತಿದ್ದಾಗ ತನ್ನನ್ನು ಸಣ್ಣದೊಂದು ತನಿಖೆಗೊಳಪಡಿಸಿದ್ದ ತನಿಖಾ ಸಂಸ್ಥೆಗಳ ಕ್ರಮದ ಬಗ್ಗೆ ಅವನು ಹಿಂದೆಯೇ ಕಿಡಿಕಾರಿದ್ದ. ಸಿಖ್‌ ಯುವಕನೊಬ್ಬ ತನ್ನ ತಾಯ್ನಾಡಿಗೆ ಹಿಂದಿರುಗುತ್ತಿರುವುದನ್ನು ಪ್ರಶ್ನೆ ಮಾಡುವದುಉ ಗುಲಾಮಿ ಮನಸ್ಥಿತಿ ಎಂದು ಜರೆದಿದ್ದ.

ಖಲಿಸ್ತಾನ ಪರ ನಿಲುವು
ಹಲವು ಸಮಯದಿಂದ ಆತ ಫೇಸ್‌ಬುಕ್‌ ಸೇರಿದಂತೆ ಸಾಮಾಜಿಕ ಜಾಲತಾಣಗಳಲ್ಲಿ ಖಲಿಸ್ತಾನ್ ಪರ ಪೋಸ್ಟ್‌ಗಳನ್ನು ಹಾಕುತ್ತಿದ್ದಾನೆ. ಹಿಂದು ರಾಷ್ಟ್ರ ವಾದ ಸರಿ ಎಂದಾದರೆ ಖಲಿಸ್ತಾನ್‌ ಯಾಕೆ ತಪ್ಪು ಎಂದು ಪ್ರಶ್ನಿಸುತ್ತಾನೆ. ಇವನು ಪಾರಂಪರಿಕ ಧಾರ್ಮಿಕ ತರಬೇತಿ ಪಡೆದು ಮುಖ್ಯಸ್ಥನಾಗಿಲ್ಲ. ರಾಜಕೀಯ ವಿಚಾರದಿಂದ ಆರಂಭಿಸಿ ಮತೀಯ ಗುರು ಎನಿಸಿಕೊಂಡವನು. ಧಾರ್ಮಿಕ ವಿಷಯಗಳನ್ನು ಉಲ್ಲೇಖಿಸುವಾಗ ಈತನ ತಿಳಿವಳಿಕೆಯ ಪೊಳ್ಳುತನ ಎದ್ದು ಕಾಣಿಸುತ್ತದೆ. ಆದರೂ ಈತನ ಕಠೋರ ರಾಜಕೀಯ ನಿಲುವುಗಳಿಂದಾಗಿ ಅಭಿಮಾನಿಗಳು ಈತನನ್ನು ಸುತ್ತುವರಿಯುತ್ತಾರೆ.

2021ರಲ್ಲಿ ಕೆಂಪು ಕೋಟೆಯ ಮೇಲೆ ನಡೆದ ಗುಂಪು ದಾಳಿಯ ವೇಳೆ ಅದರ ನೇತೃತ್ವ ವಹಿಸಿದ್ದ ದೀಪ್‌ ಸಿಧುವಿನ ಕೃತ್ಯವನ್ನು ಈತ ಸಮರ್ಥಿಸಿಕೊಂಡಿದ್ದ. ಹೀಗಾಗಿ ದೀಪ್‌ ಸಿಧುವಿನ ಬೆಂಬಲಿಗರು ಈಗ ಈತನ ಕಡೆಗೆ ಸೇರಿಕೊಂಡಿದ್ದಾರೆ. ಆದರೆ ಕಳೆದ ಒಂದು ದಶಕದಿಂದ ಸಿಕ್ಖರ ಒಂದು ವರ್ಗದಲ್ಲಿ ಉಲ್ಬಣಿಸುತ್ತಿರುವ ವ್ಯಗ್ರತೆ ಈತನನ್ನು ಸೇರಿಕೊಳ್ಳುವಲ್ಲಿ ವ್ಯಕ್ತವಾಗುತ್ತಿದೆ. 2015ರ ಬೆಹ್ಬಲ್‌ ಕಾಲನ್‌ ಪೊಲೀಸ್‌ ಫೈರಿಂಗ್‌, ಬರ್ಗಾರಿ ಧರ್ಮನಿಂದನೆ ಪ್ರಕರಣಗಳ ಆರೋಪಿಗಳಿಗೆ ಶಿಕ್ಷೆಯಾಗಿಲ್ಲ ಎಂಬ ಸಿಟ್ಟಿದೆ. ಪಂಜಾಬಿನ ಸ್ಥಳೀಯ ಚಾನೆಲೊಂದಕ್ಕೆ ನೀಡಿರುವ ಸಂದರ್ಶನದಲ್ಲಿ, ಅಮೃತ್‌ಪಾಲ್‌ ಈ ಘಟನೆಗಳನ್ನು ಉಲ್ಲೇಖಿಸಿದ್ದಾನೆ. ಕ್ರೈಸ್ತ ಮಿಷನರಿಗಳ ಮೇಲೆ ಕಿಡಿ ಕಾರುತ್ತಾನೆ. ಇದೂ ಆತನ ಜನಪ್ರಿಯತೆಗೆ ಕಾರಣ. ಪಂಜಾಬ್‌ ಮೇಲ್ನೋಟಕ್ಕೆ ಶಾಂತವಾಗಿದ್ದರೂ 80-90ರ ದಶಕದ ಗಾಯಗಳು ಹಾಗೆಯೇ ಇವೆ.

ಖಾಲಿತನ ತಂದಿಟ್ಟ ನಾಯಕತ್ವ
ಸಿಖ್‌ ರಾಜಕೀಯದಲ್ಲೂ ಅಮೃತ್‌ಪಾಲ್‌ ಅಂಥವರ ಸೃಷ್ಟಿಗೆ ಕಾರಣವಾಗಬಹುದಾದ ಒಂದು ನಿರ್ವಾತವಿದೆ. ಸಿಖ್‌ ರಾಜಕಾರಣಕ್ಕೆ ಇನ್ನೊಂದು ಹೆಸರಾಗಿದ್ದ ಶಿರೋಮಣಿ ಅಕಾಲಿ ದಳ ನಿಧಾನವಾಗಿ ತನ್ನ ನೆಲೆಯನ್ನು ಕಳೆದುಕೊಂಡಿದೆ. ಅಕಾಲಿ ದಳದ ಆಡಳಿತದ ಅಡಿಯಲ್ಲಿಯೇ ಸಂಭವಿಸಿದ ಹಲವಾರು ಘಟನೆಗಳಲ್ಲಿ ತಮಗೆ ನ್ಯಾಯ ದೊರಕಿಲ್ಲ ಎಂಬ ಆಕ್ರೋಶ ಸಿಕ್ಖರಲ್ಲಿದೆ. ಕಳೆದ ವರ್ಷದ ರಾಜ್ಯ ಚುನಾವಣೆಯಲ್ಲಿ ಅಕಾಲಿ ದಳ ಕೇವಲ ಮೂರು ಸ್ಥಾನಕ್ಕೆ ಇಳಿದಿದೆ. ಸಿಖ್ಖರ ಶ್ರೇಷ್ಠ ಧಾರ್ಮಿಕ ಹುದ್ದೆಯಾದ ಅಖಾಲ್‌ ತಖ್ತ್‌ನ ಜತೇದಾರ್‌ ಹಾಗೂ ಗುರುದ್ವಾರ ಸಮಿತಿಗಳು ಕೂಡ ಸಿಕ್ಖರ ಮೇಲಿನ ತಮ್ಮ ಹಿಡಿತ ಕಳೆದುಕೊಳ್ಳುತ್ತಿವೆ. ಮಾಜಿ ಜತೇದಾರ್‌ ಗುರ್‌ಬಚನ್‌ ಸಿಂಗ್‌ ಅವರನ್ನು, ಡೇರಾ ಸಚ್ಚಾ ಸೌಧಾದ ಗುರ್ಮೀತ್‌ ರಾಮ್‌ ರಹೀಮ್‌ನನ್ನು ಮನ್ನಿಸಿದ್ದಕ್ಕಾಗಿ ಖಂಡಿಸಸಲಾಗಿತ್ತು. 70ರ ದಶಕದಲ್ಲಿ ಇಂಥದೇ ಬೆಳವಣಿಗೆಗಳು ಭೀಂದ್ರಾನ್‌ವಾಲೆಯ ಹುಟ್ಟಿಗೆ ಕಾರಣವಾಗಿದ್ದವು. 1978ರಲ್ಲಿ ಬಾದಲ್‌ ಸರ್ಕಾರ ಇದ್ದಾಗ ನಿರಂಕಾರಿಗಳ ಜತೆಗಿನ ಸಂಘರ್ಷದಲ್ಲಿ 13 ಸಿಕ್ಖರು ಬಲಿಯಾದ ಘಟನೆ ಸಿಕ್ಖರನ್ನು ಹತಾಶಗೊಳಿಸಿತ್ತು. ಇಂದೂ ಅಂಥದೇ ಹತಾಶೆ ಅಮೃತ್‌ಪಾಲ್‌ನ ಬೆಳವಣಿಗೆಗೆ ಮುನ್ನುಡಿ ಹಾಡುತ್ತಿದೆ.

ಇಂದು ಅಮೃತ್‌ಪಾಲ್‌ನಲ್ಲಿ ಆಯುಧ ಧರಿಸಿದ ಆತನ ಬೆಂಬಲಿಗರು ಸದಾ ಕಾಯುತ್ತಿರುತ್ತಾರೆ. ಆತನ ಮಾತುಗಳು ಸೋಶಿಯಲ್‌ ಮೀಡಿಯಾದಲ್ಲಿ ಸಾಕಷ್ಟು ಶೇರ್‌ ಆಗುತ್ತವೆ, ಜನಪ್ರಿಯವಾಗುತ್ತವೆ. ಇವನ ಮಾತುಗಳು ಪಂಜಾಬಿ ಚಾನೆಲ್‌ಗಳ ಟಿಆರ್‌ಪಿ ಹೆಚ್ಚಿಸುತ್ತವೆ. ಈತನನ್ನು ಹಿಡಿತದಲ್ಲಿಡಲು ಪಂಜಾಬಿನ ಪೊಲೀಸರಿಗಾಗಲೀ ಸರ್ಕಾರದ ಬಳಿಯಾಗಲೀ ಯಾವುದೇ ಯೋಜನೆ ಇದ್ದಂತಿಲ್ಲ. ಸದ್ಯಕ್ಕೆ ಇವನು ಏನಾದರೂ ಕಾಲು ಜಾರಿ ತಪ್ಪು ಮಾಡಿದರೆ ಹಿಡಿಯುವುದಷ್ಟೇ ಇವರಿಗೆ ಸಾಧ್ಯವಾಗಲಿದೆ.

ಇದನ್ನೂ ಓದಿ: Pak New Plan | ಲಾಹೋರ್ ಗುರುದ್ವಾರಗಳಲ್ಲಿ ಖಲಿಸ್ತಾನ್ ಉಗ್ರರು, ಭಾರತೀಯ ಭಕ್ತರಿಗೆ ಬ್ರೈನ್ ವಾಷ್?

Exit mobile version