Site icon Vistara News

ವಿಸ್ತಾರ Explainer: ಬಾಹ್ಯಾಕಾಶದಲ್ಲಿ ಚೀನಾದ ಸೇನಾ ನೆಲೆ; ಇನ್ನು ಆಕಾಶದಿಂದಲೇ ಎರಗಲಿದೆ ಹೈಪರ್‌ಸಾನಿಕ್ ಕ್ಷಿಪಣಿ!

near space command

ಮಾರಣಾಂತಿಕ ಹೈಪರ್‌ಸಾನಿಕ್ (Hypersonic) ಶಸ್ತ್ರಾಸ್ತ್ರಗಳನ್ನು ಹೊಂದಿರುವ ವಿಶ್ವದ ಮೊದಲ ʼನಿಯರ್-ಸ್ಪೇಸ್ ಕಮಾಂಡ್’ (near-space command) ಅನ್ನು ಚೀನಾ ನಿರ್ಮಿಸಿದೆ ಎಂದು ಹಾಂಗ್ ಕಾಂಗ್‌ನ ಎಸ್‌ಸಿಎಂಪಿ ಪತ್ರಿಕೆ ವರದಿ ಮಾಡಿದೆ. ಆ ನೆಲೆ, ಇನ್ನು ಮುಂದೆ ಚೀನಾದ ಪೀಪಲ್ಸ್ ಲಿಬರೇಶನ್ ಆರ್ಮಿಯ (peoples liberation army) ಐದನೇ ಪಡೆಯಾಗಿ ಕಾರ್ಯನಿರ್ವಹಿಸಲಿದೆಯಂತೆ. ಉಳಿದ ನಾಲ್ಕು ಪಡೆಗಳು ಭೂಸೇನೆ, ನೌಕಾಪಡೆ, ವಾಯುಪಡೆ ಮತ್ತು ರಾಕೆಟ್ ಫೋರ್ಸ್.

ಇದರೊಂದಿಗೆ, ʼಬಾಹ್ಯಾಕಾಶವೇ ಮುಂದಿನ ಸಮರ ತಾಣʼ ಎಂಬ ಅಭಿಪ್ರಾಯವನ್ನು ನಿಜಗೊಳಿಸುವತ್ತ ಚೀನಾ ಹೆಜ್ಜೆ ಹಾಕಿದೆ. ಭವಿಷ್ಯದಲ್ಲಿ ನಡೆಯಬಹುದಾದ ಯುದ್ಧಗಳಲ್ಲಿ ಹೈಪರ್‌ಸಾನಿಕ್‌ ಶಸ್ತ್ರಾಸ್ತ್ರಗಳು ಮಹತ್ವದ ಪಾತ್ರವನ್ನು ವಹಿಸಲಿದೆ. ಸಾವಿರಾರು ಕಿಲೋಮೀಟರ್‌ ದೂರದಿಂದ ಪ್ರಯೋಗವಾಗುವ ಈ ಕ್ಷಿಪಣಿಗಳು ಕಣ್ಣೆವೆ ಮುಚ್ಚಿ ತೆರೆಯುವಷ್ಟರಲ್ಲಿ ಗುರಿಯನ್ನು ಧ್ವಂಸ ಮಾಡಬಲ್ಲವು. ಶತ್ರು ದೇಶದತ್ತ ಕಣ್ಣಿಟ್ಟಿರುವ ರೇಡಾರ್‌ಗಳು ಇವುಗಳನ್ನು ಪತ್ತೆ ಹಚ್ಚಬಲ್ಲವು. ಆದರೆ ತಡೆಯುವುದು ಕಷ್ಟ. ಇನ್ನು ಬಾಹ್ಯಾಕಾಶ ನೆಲೆಯಿಂದ ಇವು ಉಡಾವಣೆಯಾದರೆ ಸದ್ಯಕ್ಕಂತೂ ಯಾರೂ ತಡೆಯಲಾರರು. ಚೀನಾ ಈ ನಿಟ್ಟಿನಲ್ಲಿ ಎಲ್ಲ ದೇಶಗಳಿಗಿಂತ ಮುಂದೆ ದಾಪುಗಾಲಿಟ್ಟಿದೆ.

ಚೀನಾದ ಬಾಹ್ಯಾಕಾಶ ಸಮರನೆಲೆಯನ್ನು ಯಾವಾಗ ಸ್ಥಾಪಿಸಲಾಯಿತು ಎಂಬುದು ಸ್ಪಷ್ಟವಾಗಿಲ್ಲ. ಆದರೆ ಇದು ಇನ್ನೂ ಅಭಿವೃದ್ಧಿಯ ಹಂತದಲ್ಲಿದೆ ಎಂದು ನಂಬಲಾಗಿದೆ. SCMP ಉಲ್ಲೇಖಿಸಿರುವ ಚೀನಾದ ರಾಷ್ಟ್ರೀಯ ರಕ್ಷಣಾ ತಂತ್ರಜ್ಞಾನ ವಿಶ್ವವಿದ್ಯಾಲಯದ ಸಂಶೋಧಕರ ಪ್ರಕಾರ, ನೆಲೆಯ ಘಟಕಗಳ ಸ್ಥಾಪನೆಯು ಇನ್ನೂ ಪೂರ್ತಿಯಾಗಿಲ್ಲ ಹಾಗೂ ಯುದ್ಧ ಕಾರ್ಯಾಚರಣೆಗಳನ್ನು ಇನ್ನೂ ಪ್ರಮಾಣೀಕರಿಸಲಾಗಿಲ್ಲ. ಕಮಾಂಡ್ ಮತ್ತು ಕಂಟ್ರೋಲ್ ಅಧಿಕಾರ, ಕಮಾಂಡ್ ವಿಧಾನಗಳ ಆಯ್ಕೆ, ಕಾರ್ಯನಿರ್ವಾಹಕ ಆದೇಶಗಳ ಅನುಷ್ಠಾನ ಮತ್ತು ಕಮಾಂಡ್ ಸಂವಹನಕ್ಕೆ ಬೆಂಬಲ ಇತ್ಯಾದಿಗಳನ್ನೆಲ್ಲ ಜೋಡಿಸಿಕೊಳ್ಳಬೇಕಾಗಿದೆ.

ಬಾಹ್ಯಾಕಾಶವೇ ಮುಂದಿನ ಯುದ್ಧಭೂಮಿ

ಬಾಹ್ಯಾಕಾಶದಿಂದ ಅತ್ಯಾಧುನಿಕ ಯಂತ್ರಗಳ ಮೂಲಕ ಸ್ಪಷ್ಟವಾಗಿ ಭೂಮಿಯ ಮೇಲೆ ಕಣ್ಣಿಡಬಹುದಾಗಿದೆ. ಹೀಗಾಗಿ ಬಾಹ್ಯಾಕಾಶದಿಂದ ಬೇಹುಗಾರಿಕೆ ಈಗಾಗಲೇ ನಡೆಯುತ್ತಿದೆ. ಪ್ರತಿಯೊಂದು ದೇಶದ ಉಪಗ್ರಹವೂ ಇನ್ನೊಂದು ದೇಶದ ಮೇಲೆ ಕಣ್ಣುಗಳನ್ನಿಟ್ಟಿದೆ. ಚೀನಾ ಅಂತೂ ಅದು ತನ್ನ ಪ್ರತಿಸ್ಪರ್ಧಿಗಳಿಂತ ತಾನು ಎಷ್ಟೋ ಎತ್ತರದಲ್ಲಿರಲು ಬಯಸುವ ದೇಶ.

ಅಕ್ಟೋಬರ್‌ನಲ್ಲಿ 11ನೇ ಚೀನಾ ಕಮಾಂಡ್ ಮತ್ತು ಕಂಟ್ರೋಲ್ ಕಾನ್ಫರೆನ್ಸ್‌ನಲ್ಲಿ ವರದಿ ಮಂಡಿಸಿದ ತಜ್ಞರ ತಂಡವು, “ಭವಿಷ್ಯದ ಯುದ್ಧಗಳ ಫಲಿತಾಂಶವನ್ನು ನಿರ್ಧರಿಸುವ ಬಾಹ್ಯಾಕಾಶಕ್ಕೆ ಸಮೀಪದ ನೆಲೆಯು ತೀವ್ರ ಪೈಪೋಟಿಯ ವಲಯವಾಗಿದೆʼʼ ಎಂದು ಹೇಳಿತ್ತು.

ಶತ್ರುಗಳ ನಿರ್ಣಾಯಕ ಮಿಲಿಟರಿ ನೆಲೆಗಳನ್ನು ಗುರಿಯಾಗಿಸಲು ಚೀನಾದ ನಿಯರ್‌ ಸ್ಪೇಸ್‌ ಕಮಾಂಡ್ ಆಧುನಿಕ ಹೈಪರ್ಸಾನಿಕ್ ಕ್ಷಿಪಣಿಗಳೊಂದಿಗೆ ಸಜ್ಜುಗೊಂಡಿದೆ. ನಿರ್ಣಾಯಕ ಗುರಿಗಳ ಮೇಲೆ “ಕರುಣೆಯಿಲ್ಲದ” ದಾಳಿಗಳನ್ನು ನಡೆಸಲು ಇದು ಸಜ್ಜಾಗುತ್ತಿದೆ. ಜೊತೆಗೆ ಸ್ವಯಂಚಾಲಿತ ಡ್ರೋನ್‌ಗಳು ಮತ್ತು ಪತ್ತೇದಾರಿ ಬಲೂನ್‌ಗಳ ಮೂಲಕ ಜಗತ್ತಿನಾದ್ಯಂತ ಹೆಚ್ಚಿನ ಎತ್ತರದ ಕಣ್ಗಾವಲು ಮಾಡುತ್ತದೆ.

ದ್ವಿಮುಖ ಅಲಗಿನ ಕತ್ತಿ

ಸೂಪರ್-ಅಡ್ವಾನ್ಸ್ಡ್ ನಿಯರ್-ಸ್ಪೇಸ್ ಕಮಾಂಡ್ ಎರಡು ಅಂಚಿನ ಕತ್ತಿಯಂತೆ ಕಾರ್ಯನಿರ್ವಹಿಸುತ್ತದೆ ಎಂದು ಚೀನಾದ ಸಂಶೋಧಕರು ಅಭಿಪ್ರಾಯಪಟ್ಟಿದ್ದಾರೆ. ಇದು ಚೀನಾಕ್ಕೆ ಊಹಾತೀತ ವೇಗದಲ್ಲಿ ಭೂಮಿಯ ಮೇಲಿನ ಯಾವುದೇ ಗುರಿಯನ್ನು ಹೊಡೆಯುವ ಸಾಮರ್ಥ್ಯವನ್ನು ನೀಡುತ್ತದೆ. ಜತೆಗೆ ಅಂತರರಾಷ್ಟ್ರೀಯ ರಂಗದಲ್ಲಿ ಮಹತ್ವದ ರಾಜತಾಂತ್ರಿಕ ಸವಾಲುಗಳನ್ನು ಒಡ್ಡಲಿದೆ.

ಸ್ಪೇಸ್‌ ಕಮಾಂಡ್‌ನಿಂದಾಗಿ ಚೀನಾ ಮುಂಚೂಣಿಯಲ್ಲಿದೆ ಎಂಬ ಅಂಶವು ಯುಎಸ್, ಯುಕೆ, ಭಾರತ ಮತ್ತು ರಷ್ಯಾದಂತಹ ಪ್ರಮುಖ ಅಂತಾರಾಷ್ಟ್ರೀಯ ಆಟಗಾರರನ್ನು ಮತ್ತಷ್ಟು ಸ್ಪರ್ಧಗೆ ಇಳಿಸಲಿದೆ. ಪತ್ರಿಕೆಯ ಪ್ರಕಾರ ಬಾಹ್ಯಾಕಾಶ ಕಮಾಂಡ್‌, ದೊಡ್ಡ ಸಂಖ್ಯೆಯ ಪತ್ತೇದಾರಿ ಬಲೂನ್‌ಗಳು, ಸೌರಶಕ್ತಿ ಚಾಲಿತ ಡ್ರೋನ್‌ಗಳು ಮತ್ತು ಇತರ ಪೋಷಕ ಸಾಧನಗಳನ್ನು ಹೊಂದಿದೆ. ಸ್ಪೇಸ್‌ ಕಮಾಂಡ್‌ ನೇರವಾಗಿ ಮಿಲಿಟರಿಯ ಉನ್ನತ ಮಟ್ಟದಿಂದಲೇ ನಿಯಂತ್ರಿಸಲ್ಪಡಲಿದೆ.

ಬಾಹ್ಯಾಕಾಶ-ಆಧಾರಿತ ಕಾರ್ಯಾಚರಣೆಗಳಿಗಿಂತ ಭಿನ್ನವಾಗಿ, ಪತ್ತೇದಾರಿ ಬಲೂನ್‌ಗಳು ಕೆಲವೊಮ್ಮೆ ಇತರ ರಾಷ್ಟ್ರಗಳ ಪ್ರದೇಶಗಳು ಅಥವಾ ಸೂಕ್ಷ್ಮ ಪ್ರದೇಶಗಳ ಮೇಲೆ ವಿಶೇಷ ಕಾರ್ಯಾಚರಣೆಗಳನ್ನು ನಡೆಸುತ್ತವೆ. ಈ ವರ್ಷದ ಅಮೆರಿಕದಲ್ಲಿ ಎರಡು ಪತ್ತೇದಾರಿ ಬಲೂನ್ ಕಾಣಿಸಿಕೊಂಡಿದ್ದವು. ಫೆಬ್ರವರಿಯಲ್ಲಿ ಅಲಾಸ್ಕಾದಿಂದ ಪೂರ್ವ ಕರಾವಳಿಗೆ ದಾಟಿದ ಚೀನಾದ ಬಲೂನ್, ವಿಶ್ವದ ಎರಡು ಮಹಾಶಕ್ತಿಗಳ ನಡುವಿನ ಸಂಬಂಧವನ್ನು ಮತ್ತಷ್ಟು ಅಪಾಯಕ್ಕೆ ತಳ್ಳಿತು.

ಹೇಗೆ ಕಾರ್ಯನಿರ್ವಹಿಸುತ್ತದೆ?

ಚೀನಾದ ಬಾಹ್ಯಾಕಾಶ ಕಮಾಂಡ್‌ನ ಮುಖ್ಯ ಉದ್ದೇಶವೇ ಯುದ್ಧದ ಸಂದರ್ಭದಲ್ಲಿ ಚೀನಾ ಗೆಲ್ಲಲು ಸಹಾಯ ಮಾಡುವುದು. ಅದು ಹೇಗೆ? ಸ್ಪೇಸ್‌ ಕಮಾಂಡ್‌ ಮೊದಲು ಶತ್ರುಗಳ ರಾಕೆಟ್ ಉಡಾವಣಾ ತಾಣಗಳನ್ನು ಗುರಿಯಾಗಿಸುತ್ತದೆ. ಚೀನಾದ ನಾಗರಿಕ ಅಥವಾ ಮಿಲಿಟರಿ ಉಪಗ್ರಹ ಜಾಲಗಳ ಮೇಲೆ ಉಪಗ್ರಹ ವಿರೋಧಿ ಕ್ಷಿಪಣಿಗಳನ್ನು ಹಾರಿಸುವ ಸಾಮರ್ಥ್ಯವನ್ನು ತಡೆಯುತ್ತದೆ.

ಈ ದಾಳಿಗಳು ನಿಖರ, ವ್ಯಾಪಕವಾಗಿರುತ್ತವೆ. ಸಂಶೋಧಕರ ಪ್ರಕಾರ, ಇದು ಸಂಘರ್ಷದ ಆರಂಭಿಕ ಹಂತಗಳಲ್ಲಿ ಶತ್ರುಗಳ ನಿರ್ಣಾಯಕ ಮೂಲಸೌಕರ್ಯಗಳ ನಷ್ಟ ಉಂಟುಮಾಡುತ್ತದೆ. ಶತ್ರುಗಳ ಯುದ್ಧ ನೆಲೆಯನ್ನು ಭೇದಿಸುತ್ತದೆ ಮತ್ತು ಅದರ ಸಾಮರ್ಥ್ಯದ ಮೇಲೆ ತೀವ್ರ ದುಷ್ಪರಿಣಾಮ ಬೀರುತ್ತದೆ.

ಕಳೆದ 20 ವರ್ಷಗಳಿಂದ ಯುಕೆಯಲ್ಲಿ ಕೆಲಸ ಮಾಡುತ್ತಿರುವ ಒಬ್ಬರು ವಿಜ್ಞಾನಿ ಚೀನಾದ ಹೈಪರ್‌ಸಾನಿಕ್ ಪ್ರೋಗ್ರಾಂಗೆ ಸೇರಿದ್ದಾರೆ. ಜಾಂಗ್‌ ಯಾಂಗ್‌ಹೋ (Zhang Yonghao) ಎಂಬ ಹೆಸರಿನ ಇವರು ಮೂಲತಃ ಚೀನಾದವರು. 2000ನೇ ಇಸವಿಯಲ್ಲಿ ಬ್ರಿಟನ್‌ಗೆ ಬಂದ ಇವರು ಇಲ್ಲಿ ಕ್ಷಿಪಣಿ ತಂತ್ರಜ್ಞಾನದಲ್ಲಿ ಮಹತ್ವದ ಪಾತ್ರ ವಹಿಸಬಲ್ಲ ಏರೋಸ್ಪೇಸ್‌ ಇಂಜಿನಿಯರಿಂಗ್‌ನಲ್ಲಿ ಹೆಚ್ಚಿನ ಅಧ್ಯಯನ ನಡೆಸಿ, ಇದೀಗ ಚೀನಾ ಸೇರಿಕೊಂಡಿದ್ದಾರೆ.

ಹೈಪರ್‌ಸಾನಿಕ್‌ ಕ್ಷಿಪಣಿಗಳೆಂದರೆ ಶಬ್ದದಷ್ಟೇ ವೇಗವಾಗಿ ಚಲಿಸಬಲ್ಲ ಕ್ಷಿಪಣಿಗಳು. “ಇದು ಯುದ್ಧಗಳ ವೇಗವನ್ನು ಬದಲಾಯಿಸಬಹುದು ಮತ್ತು ಯುದ್ಧವು ಹೇಗೆ ಕೊನೆಗೊಳ್ಳುತ್ತದೆ ಎಂಬುದರ ಮೇಲೆ ಪ್ರಮುಖ ಪ್ರಭಾವವನ್ನು ತರಬಹುದು” ಎಂದು ಸಂಶೋಧಕರು ಹೇಳಿದ್ದಾರೆ. ಸಮರದ ಸನ್ನಿವೇಶದಲ್ಲಿ ತ್ವರಿತ ನಿರ್ಧಾರಗಳನ್ನು ತೆಗೆದುಕೊಳ್ಳಲು ಸಹಾಯ ಮಾಡಲು ಕೆಲವು ನಿರ್ಧಾರ ತೆಗೆದುಕೊಳ್ಳುವ ಅಧಿಕಾರವನ್ನು PLAಯ ಉನ್ನತ ಅಧಿಕಾರಿಗಳಿಂದ ಕಮಾಂಡ್ ಫೋರ್ಸ್‌ಗೆ ವರ್ಗಾಯಿಸಲಾಗುತ್ತದೆ.

ಹೈಪರ್‌ಸಾನಿಕ್ ಶಸ್ತ್ರಾಸ್ತ್ರಗಳು

ನಿಯರ್‌ ಸ್ಪೇಸ್‌ ಕಮಾಂಡ್‌, ಇದು ಬಾಹ್ಯಾಕಾಶಕ್ಕೆ ಅತಿ ನಿಕಟ ತಾಣದಲ್ಲಿ ಕಾರ್ಯನಿರ್ವಹಿಸುತ್ತದೆ. ಇದು ಸುಮಾರು 20km (12 ಮೈಲಿಗಳು) ಎತ್ತರದಲ್ಲಿ ಪ್ರಾರಂಭವಾಗುತ್ತದೆ ಮತ್ತು ಭೂಮಿಯಿಂದ 100kmನಲ್ಲಿ ಬಾಹ್ಯಾಕಾಶದ ಕೆಳಗಿನ ಗಡಿಯನ್ನು ತಲುಪುತ್ತದೆ.

ಅಲ್ಲಿನ ಗಾಳಿಯು ವಿಮಾನಗಳನ್ನು ಬೆಂಬಲಿಸದಂತೆ ತುಂಬಾ ತೆಳುವಾಗಿದೆ. ಅದಕ್ಕಾಗಿಯೇ ಇದನ್ನು ಮಿಲಿಟರಿ ವಿಮಾನಗಳು ತಪ್ಪಿಸುತ್ತವೆ. ಆದರೆ ಹೈಪರ್‌ಸಾನಿಕ್ ಆಯುಧಗಳು ಶಬ್ದದ ಐದು ಪಟ್ಟು ಹೆಚ್ಚು ವೇಗದಲ್ಲಿ ಕಾರ್ಯನಿರ್ವಹಿಸುತ್ತವೆ ಮತ್ತು ತಮ್ಮ ಅನಿರೀಕ್ಷಿತ ಗುಣದಿಂದ ವಾಯು ರಕ್ಷಣಾ ವ್ಯವಸ್ಥೆಗಳನ್ನು ಮೋಸಗೊಳಿಸುತ್ತವೆ. ಯುದ್ಧದ ಸಮಯದಲ್ಲಿ ನಿಯರ್-ಸ್ಪೇಸ್ ಕಮಾಂಡ್ PLAಯ ಇತರ ಶಾಖೆಗಳು ಹೊಂದಿರುವ ಹೈಪರ್ಸಾನಿಕ್ ಶಸ್ತ್ರಾಸ್ತ್ರಗಳ ಸಂಪೂರ್ಣ ನಿಯಂತ್ರಣವನ್ನು ಸಹ ತೆಗೆದುಕೊಳ್ಳುತ್ತದೆ.

ನಿಯರ್‌ ಸ್ಪೇಸ್‌ ಪಡೆಯ ಯಶಸ್ಸು “ಶತ್ರುಗಳ ದೌರ್ಬಲ್ಯದ ಆಳವಾದ ವಿಶ್ಲೇಷಣೆಯ ಆಧಾರದ ಮೇಲೆ ಯುದ್ಧದ ನವೀನ ತಂತ್ರಗಳನ್ನು ಹೆಚ್ಚಿನ ಪ್ರಮಾಣದಲ್ಲಿ ಅಳವಡಿಸುವುದರಲ್ಲಿದೆ.

ಇದನ್ನೂ ಓದಿ: Hypersonic Missile : ಕದನ ಕಣದಲ್ಲಿ ಸಂಚಲನ ಸೃಷ್ಟಿಸಿರುವ ಹೈಪರ್‌ಸಾನಿಕ್‌ ಕ್ಷಿಪಣಿಯಲ್ಲಿ ಏನೇನಿದೆ?

Exit mobile version