Site icon Vistara News

ವಿಸ್ತಾರ Explainer | ʻಗೋಡ್ಸೆʼ ಪದ ಸಂಸದೀಯ, ಅಸಂಸದೀಯ! ಇಲ್ಲಿದೆ unparliamentary words ಇತಿಹಾಸ

loksabha

ಅಸಂಸದೀಯ ಪದಗಳ ಪಟ್ಟಿಗೆ ಪದಗಳನ್ನು ಸೇರಿಸಲಾಗುತ್ತದೆ ಹೊರತು ಕೈಬಿಡುವುದು ಅಪರೂಪ. ಅಂಥ ಒಂದು ವಿಶಿಷ್ಟ ನಿದರ್ಶನ ಇಲ್ಲಿದೆ. ʻಗೋಡ್ಸೆʼ ಎಂಬ ಪದವನ್ನು 1958ರಲ್ಲಿ ಸಂಸದೀಯ ಬಳಕೆಯಿಂದ ಕೈಬಿಡಲಾಗಿತ್ತು. ಅದಕ್ಕೆ ಕಾರಣ, ಒಬ್ಬ ಸಂಸದರು ಆಗಿನ ಪ್ರಧಾನಿ ಜವಾಹರಲಾಲ್‌ ನೆಹರೂ ಅವರನ್ನು ಗಾಂಧಿ ಹಂತಕ ನಾಥೂರಾಮ್‌ ಗೋಡ್ಸೆಗೆ ಸಮೀಕರಿಸಿ ಮಾತನಾಡಿದ್ದು.

1962ರಲ್ಲಿ ಇನ್ನೊಮ್ಮೆ ಈ ಪದವನ್ನು ಅಸಂಸದೀಯ ಪಟ್ಟಿಯಲ್ಲಿ ಸೇರಿಸಿದೆ ಎಂದು ಸ್ಪಷ್ಟಪಡಿಸಲಾಯಿತು- ಆ ವರ್ಷ ಸಂಸದನೊಬ್ಬ ಸ್ವಾಮಿ ವಿವೇಕಾನಂದರನ್ನು ಗೋಡ್ಸೆಗೆ ಹೋಲಿಸಿದ್ದ. ಆದರೆ 2015ರಲ್ಲಿ ಬಿಕ್ಕಟ್ಟು ಎದುರಾಯಿತು. ನಾಸಿಕ್‌ನಿಂದ ಹೇಮಂತ್‌ ತುಕಾರಾಮ್‌ ಗೋಡ್ಸೆ ಎಂಬವರು ಶಿವಸೇನೆ ಸಂಸದರಾಗಿ ಆರಿಸಿ ಬಂದರು. ಸಂಸದರ ಹೆಸರನ್ನೇ ಉಚ್ಚರಿಸಬಾರದು ಎಂಬ ಸನ್ನಿವೇಶ ನಿರ್ಮಾಣವಾಯಿತು. ಆ ಸಂಸದರು ಸ್ಪೀಕರ್‌ಗೆ ಮನವಿ ಮಾಡಿದರು. ಇದನ್ನು ಪರಿಗಣಿಸಿ ಆಗಿನ ಸ್ಪೀಕರ್‌ ಸುಮಿತ್ರಾ ಮಹಾಜನ್‌ ಅವರು ಗೋಡ್ಸೆ ಪದವನ್ನು ಅಸಂಸದೀಯ ಪದಗಳ ಪಟ್ಟಿಯಿಂದ ಕೈಬಿಟ್ಟರು. ಆದರೂ, ಈ ಪದದ ಬಳಕೆಯ ಸಾಂದರ್ಭಿಕತೆಯನ್ನು ಗಣನೆಗೆ ತೆಗೆದುಕೊಳ್ಳಲಾಗುತ್ತದೆ. ಉದಾಹರಣೆಗೆ ನಾಥೂರಾಮ್‌ ಗೋಡ್ಸೆಯನ್ನು ಶ್ಲಾಘಿಸುವುದು ಅಸಂಸದೀಯ. ಆದರೆ ʻಮಹಾತ್ಮ ಗಾಂಧಿಯನ್ನು ಗೋಡ್ಸೆ ಕೊಂದʼ ಎಂಬ ವಾಸ್ತವವನ್ನು ಉಲ್ಲೇಖಿಸುವುದು ಅಸಂಸದೀಯವಲ್ಲ.

ಈಗೇಕೆ ಅಸಂಸದೀಯ ಪದಗಳ ಚರ್ಚೆ?

ಜುಲೈ 18ರಿಂದ ಮುಂಗಾರು ಅಧಿವೇಶನ ಪ್ರಾರಂಭವಾಗುತ್ತಿದೆ. ಈ ಹಿನ್ನೆಲೆಯಲ್ಲಿ ಲೋಕಸಭಾ ಕಾರ್ಯಾಲಯ ಒಂದು ಕಿರುಹೊತ್ತಿಗೆಯನ್ನು ಬಿಡುಗಡೆ ಮಾಡಿದೆ. ಅದರಲ್ಲಿ ಸಂಸತ್‌ ಕಲಾಪದ ಚರ್ಚೆಯಲ್ಲಿ ಯಾವೆಲ್ಲ ಪದಗಳನ್ನು ಪ್ರಯೋಗ ಮಾಡಬಾರದು ಎಂಬುದನ್ನು ಉಲ್ಲೇಖಿಸಲಾಗಿದೆ. ಈ ಶಬ್ದಗಳನ್ನು ʼಅಸಂಸದೀಯʼ ಎಂದು ವ್ಯಾಖ್ಯಾನಿಸಲಾಗಿದೆ. ಅಧಿವೇಶನದ ವೇಳೆ ಈ ಶಬ್ದಗಳನ್ನು ಬಳಸುವಂತಿಲ್ಲ.

ಪಟ್ಟಿ ಸೇರಿದ ಪ್ರಮುಖ ಶಬ್ದಗಳು

Jumlajeevi (ಪೊಳ್ಳು ಮಾತುಗಳನ್ನಾಡುವವ), Baal Buddhi (ಬಾಲಿಶ ಬುದ್ಧಿ), Covid spreader (ಕೊವಿಡ್‌ ಸೋಂಕು ಹರಡುವವ), Snoopgate (ಅಕ್ರಮ ನಿಗಾ), Anarchist (ಅರಾಜಕತಾವಾದಿ), Shakuni (ಕುತಂತ್ರಿಗೆ ಬಳಸುವ ಪರ್ಯಾಯ ಪದ), Dictatorial (ಸರ್ವಾಧಿಕಾರಿ), Taanashah ಮತ್ತು Taanashahi (ಸರ್ವಾಧಿಕಾರಿ-ಸರ್ವಾಧಿಕಾರವನ್ನು ಸೂಚಿಸುವ ಹಿಂದಿ ಶಬ್ದಗಳು), Vinash Purush (ವಿಧ್ವಂಸಕಾರಿ ಮನುಷ್ಯ), Jaichand (ಜತೆಗಿದ್ದುಕೊಂಡು ವಂಚನೆ ಮಾಡುವವರಿಗೆ ಬಳಸುವ ಪದ), Khalistani (ಖಲಿಸ್ತಾನಿ), khoon se kheti (ರಕ್ತದಿಂದ ಫಸಲು), Dohra charitra (ದ್ವಿಪಾತ್ರ), Nikamma (ಅನುಪಯುಕ್ತ), Nautanki (ಗಿಮಿಕ್‌), Dhindora Peetna (ಡ್ರಮ್‌ ಬಾರಿಸುವುದು), Behri Sarkar (ಚಂದಾ ಎತ್ತುವ ಸರ್ಕಾರ).
ಚಮಚಾ, ಲಾಲಿಪಾಪ್‌, ಭ್ರಷ್ಟ, ನಾಟಕ ಮಾಡುವವ, ಚಮಚಾಗಿರಿ, ಚೇಲಾಗಳು, ದಲ್ಲಾಳಿ, ದಾದಾಗಿರಿ, ವಿಶ್ವಾಸಘಾತ್‌, ಲೈಂಗಿಕ ದೌರ್ಜನ್ಯ, ನಿಂದನೆ ಮತ್ತಿತರ ಅರ್ಥ ಬರುವ ಹಿಂದಿ-ಇಂಗ್ಲಿಷ್‌ ಶಬ್ದಗಳನ್ನೂ ಬಳಸುವಂತಿಲ್ಲ.

ಇದು ಹೊಸ ಕ್ರಮವೇ?

ಹೀಗೆ ಲೋಕಸಭೆ ಮತ್ತು ರಾಜ್ಯಸಭೆ ಅಧಿವೇಶನದಲ್ಲಿ ಬಳಸಬಾರದ ಶಬ್ದಗಳ ಪಟ್ಟಿ ಹೊರಬೀಳುತ್ತಿದ್ದಂತೆ ವಿವಾದ ಎದ್ದಿದೆ. ಸರ್ಕಾರವನ್ನು ಟೀಕಿಸುವ ಪದಗಳನ್ನು ಬಳಸದಂತೆ ಮಾಡಲಾಗಿದೆ ಎಂದು ಪ್ರತಿಪಕ್ಷಗಳು ತಿರುಗಿಬಿದ್ದಿವೆ. ʻಹೊಸದಾಗಿ ಯಾವುದೇ ಶಬ್ದಗಳನ್ನೂ ನಿಷೇಧ ಮಾಡಿಲ್ಲ. ಅಸಂಸದೀಯ ಶಬ್ದಗಳ ಬಿಡುಗಡೆ ಕ್ರಮ ಮೊದಲಿನಿಂದಲೂ ಇತ್ತು. ಇದೀಗ ಉಲ್ಲೇಖಿಸಲಾದ ಒಂದಷ್ಟು ಶಬ್ದಗಳು ಹಳೇ ದಾಖಲೆಯಲ್ಲಿಯೂ ಇದ್ದವು. ಅಳಿಸಿಹೋಗಿದ್ದವನ್ನು ಮತ್ತೆ ಸಂಕಲನ ಮಾಡಿ ಪ್ರಿಂಟ್‌ ಮಾಡಿದ್ದೇವೆ. ಬಳಸಬೇಡಿ ಎಂದು ಸಲಹೆಯನ್ನಷ್ಟೇ ಕೊಟ್ಟಿದ್ದೇವೆʼ ಎಂದು ಲೋಕಸಭಾ ಸ್ಪೀಕರ್‌ ಓಂ ಬಿರ್ಲಾ ಸ್ಪಷ್ಟನೆ ಕೊಟ್ಟಿದ್ದಾರೆ.

ಇದು ಬಿಜೆಪಿ ತಂದಿರುವ ಕ್ರಮವೇನೂ ಅಲ್ಲ. 1950ರಿಂದಲೇ ಬಳಕೆಯಲ್ಲಿದೆ. 1986, 1992, 1999, 2004, 2009ರಲ್ಲಿ ಹೀಗೆ ಪದಗಳನ್ನು ಪಟ್ಟಿ ಮಾಡಲಾಗಿದೆ. 2010ರಿಂದೀಚೆಗೆ ಪ್ರತಿವರ್ಷ ಪರಿಷ್ಕರಿಸಲಾಗುತ್ತಿದೆ.

ಸಂವಿಧಾನ ಏನು ಹೇಳುತ್ತದೆ?

ಸಂವಿಧಾನದ ಆರ್ಟಿಕಲ್‌ 105(2)ರ ಪ್ರಕಾರ- ʻʻಸಂಸದರು ಸದನದಲ್ಲಿ ಅಥವಾ ಸಮಿತಿಯ ಮುಂದೆ ಆಡಿದ ಯಾವುದೇ ಮಾತು, ಮಾಡಿದ ಟೀಕೆ, ನೀಡಿದ ಮತಗಳಿಗಾಗಿ ಯಾವುದೇ ಕೋರ್ಟ್‌ನಲ್ಲಿ ಅವರನ್ನು ವಿಚಾರಣೆಗೆ ಎಳೆಯುವಂತಿಲ್ಲ.ʼʼ

ಹಾಗೆಂದು ಸಂಸದರು ಬಾಯಿಗೆ ಬಂದದ್ದನ್ನೆಲ್ಲ ಮಾತಾಡುವಂತಿಲ್ಲ. ಘನತೆಯಿಲ್ಲದ, ಅಸಭ್ಯ, ಮಾನಹಾನಿಕಾರಕ ಮಾತುಗಳನ್ನು ಬಳಸುವಂತಿಲ್ಲ. ಲೋಕಸಭೆಯಲ್ಲಿ ವ್ಯವಹಾರದ ಕಾರ್ಯವಿಧಾನ ಮತ್ತು ನಡವಳಿಕೆಯ ನಿಯಮಾವಳಿಯ 380ನೇ ನಿಯಮದ ಪ್ರಕಾರ, ʼʼಯಾವುದೇ ಪದಗಳನ್ನು ಬಳಸುವುದು ಮಾನಹಾನಿಕರ, ಅಸಭ್ಯ ಅಥವಾ ಸಂಸತ್ತಿನ ಘನತೆಗೆ ತಕ್ಕುದಲ್ಲ ಎಂದು ಸ್ಪೀಕರ್‌ ಭಾವಿಸಿದರೆ, ಅಂಥ ಪದಗಳನ್ನು ಚರ್ಚೆಯ ಸಂದರ್ಭದಿಂದ ಹೊರಗಿಡಲು ಅವರಿಗೆ ಅಧಿಕಾರವಿದೆ.ʼʼ

ಹೀಗೆ ಅಸಾಂಸದಿಕ ರೀತಿಯಲ್ಲಿ ನಡೆದ ಸದನದ ಕಲಾಪದ ಭಾಗವನ್ನು ನಕ್ಷತ್ರ ಚಿಹ್ನೆಗಳಿಂದ ಗುರುತಿಸಬೇಕು ಮತ್ತು ʻಪೀಠದ ಆದೇಶದಂತೆ ತೆಗೆದುಹಾಕಲಾಗಿದೆ’ ಎಂದು ವಿವರಣಾತ್ಮಕ ಅಡಿಟಿಪ್ಪಣಿಯನ್ನು ಸೇರಿಸಬೇಕು.

ಬಳಸಿದರೆ ಏನಾಗುತ್ತದೆ?

ಬಿಜೆಪಿಯೇತರ ಸರ್ಕಾರಗಳ ಪದಗಳೂ ಇವೆ!

ಇಲ್ಲಿ ಗಮನಿಸಬೇಕಾದ್ದೆಂದರೆ, ರಾಜ್ಯ ಸರ್ಕಾರದ ವಿಧಾನಸಭೆ- ವಿಧಾನಪರಿಷತ್ತುಗಳಲ್ಲೂ ಬಳಸಬಾರದ ಅಸಂಸದೀಯ ಪದಗಳನ್ನು ಆಯಾ ರಾಜ್ಯ ಸರ್ಕಾರಗಳ ಸಂಸತ್‌ ಸಮಿತಿ ಪಟ್ಟಿ ಮಾಡುತ್ತದೆ. ಈ ವರ್ಷ ಮಾಡಲಾದ 62 ಪದಗಳ ಪಟ್ಟಿಯಲ್ಲಿ, ಬಿಜೆಪಿಯೇತರ ರಾಜ್ಯ ಸರ್ಕಾರಗಳು ಪಟ್ಟಿ ಮಾಡಿದ ಹಲವು ಪದಗಳೂ ಸೇರಿವೆ. ಲಾಲಿಪಾಪ್‌, ಗಾಸಿಪರ್‌, ಹೂಲಿಗಾನಿಸಂ, ಹ್ಯುಮಿಲಿಯೇಟೆಡ್‌, ಶೇಮ್‌, ಶೇಮ್‌ಫುಲ್‌ ಪದಗಳು ಕಳೆದ ವರ್ಷ ಪಂಜಾಬ್‌ ಸರ್ಕಾರದಿಂದ ಉಚ್ಛಾಟಿತಗೊಂಡಿದ್ದವು. atam, shatam, aksham, anpadh, anargal ಪದಗಳು ಚತ್ತೀಸ್‌ಗಢ ಹಾಗೂ ರಾಜಸ್ಥಾನ ವಿಧಾನಸಭೆಗಳ ಕೊಡುಗೆ. ಹಾಗೇ ಕಾಮನ್‌ವೆಲ್ತ್‌ ಒಕ್ಕೂಟದ ಇತರ ಕೆಲವು ದೇಶಗಳು ಅಸಂಸದೀಯ ಎಂದು ಪರಿಗಣಿಸಿದ ಪದಗಳನ್ನು ನಮ್ಮಲ್ಲಿ ಸೇರಿಸಿಕೊಳ್ಳಲಾಗಿದೆ. ʻಭ್ರಷ್ಟʼ “ಭ್ರಷ್ಟ ವ್ಯಕ್ತಿʼ ಪದಗಳನ್ನು 1980ರಲ್ಲಿ, `ಅಯೋಗ್ಯ ಮಂತ್ರಿ’ ಪದವನ್ನು 1976ರಲ್ಲೂ ಅಸಂಸದೀಯಗೊಳಿಸಲಾಗಿದೆ.

ಪದಗಳ ಬಳಕೆಯ ಸನ್ನಿವೇಶ

ಕೆಲವೊಮ್ಮೆ ಪದ ಬಳಕೆಯ ಸನ್ನಿವೇಶವನ್ನು ಅನುಸರಿಸಿ ಅದು ಅಸಂಸದೀಯವೋ ಸಂಸದೀಯವೋ ಎಂಬುದು ತೀರ್ಮಾನವಾಗುತ್ತದೆ. ಉದಾಹರಣೆಗೆ, ಒಮ್ಮೆ ಬಿಜೆಪಿ ಸಂಸದರೆ ಸುಷ್ಮಾ ಸ್ವರಾಜ್ ಅವರು ʻʻಪಾಕಿಸ್ತಾನ ಸುಳ್ಳು ಹೇಳುತ್ತಿದೆʼʼ ಎಂದು ಹೇಳಿದ್ದರು. ʻಸುಳ್ಳುʼ ಎಂಬ ಪದ ಅಸಂಸದೀಯ. ಆದರೆ ಈ ಸನ್ನಿವೇಶದಲ್ಲಿ ʻಸುಳ್ಳುʼ ಪದವನ್ನು ಬಳಸುವುದು ಯಾವುದೇ ರೀತಿಯಲ್ಲೂ ಸಂಸತ್ತಿನ ಘನತೆಗೆ ಹಾನಿ ತರುವಂತಿರಲಿಲ್ಲ. ಹೀಗಾಗಿ ಅದನ್ನು ಕಡತದಲ್ಲಿ ಉಳಿಸಿಕೊಳ್ಳಲಾಯಿತು.

ಹೇಗೆ ಪಟ್ಟಿ ಮಾಡಲಾಗುತ್ತದೆ?

ಒಂದು ಪದ ಅಸಂಸದೀಯವೋ ಅಲ್ಲವೋ ಎಂದು ನಿರ್ಧರಿಸುವುದು ಹೇಗೆ? ಸಂಸತ್ತಿನ ಮಾತುಕತೆಗಳನ್ನು ದಾಖಲಿಸಿಕೊಳ್ಳುವವರು, ವರದಿ ಮಾಡುವವರು ಯಾವುದೇ ಪದ ಅಸಭ್ಯ ಅನಿಸಿದಾಗ ಆ ಬಗ್ಗೆ ಸ್ಪೀಕರ್‌ಗೆ ಮಾಹಿತಿ ನೀಡುತ್ತಾರೆ. ಅದನ್ನು ಸ್ಪೀಕರ್‌ ಪರಿಶೀಲಿಸಿ, ಕಡತದಲ್ಲಿ ಉಳಿಸಿಕೊಳ್ಳಬೇಕೇ ಬೇಡವೇ ಎಂದು ತೀರ್ಮಾನಿಸುತ್ತಾರೆ. ಕೈಬಿಟ್ಟರೆ, ನಂತರದ ಆಡಿಯೋ ಅಥವಾ ವಿಡಿಯೋ ಚಿತ್ರಿಕೆಗಳಲ್ಲಿ ಆ ಪದ ಬಳಸಿದ ಜಾಗದಲ್ಲಿ ʻಬೀಪ್‌ʼ ಬರುವಂತೆ ಮಾಡಲಾಗುತ್ತದೆ. ಅಧಿವೇಶನದ ಕೊನೆಯಲ್ಲಿ ಇಂಥ ಪದಗಳ ಪಟ್ಟಿಯನ್ನು ಮಾಡಿಕೊಂಡು, ಅದನ್ನು ಅಂತಿಮ ಪಟ್ಟಿಗೆ ಸೇರಿಸಲಾಗುತ್ತದೆ.

ಕೆಲವೊಮ್ಮೆ ಪದಗಳಿಗಿಂತಲೂ ಸನ್ನೆಗಳು, ಅಭಿವ್ಯಕ್ತಿಗಳು, ವರ್ತನೆಗಳು ಕೂಡ ಅಸಂಸದೀಯ ಎಂದು ಪರಿಗಣನೆಗೆ ಒಳಗಾಗುತ್ತವೆ. ಇದನ್ನೂ ಕಡತ ಅಥವಾ ವಿಡಿಯೋ ದಾಖಲೆಗಳಿಂದ ಅಳಿಸಿಹಾಕಲು ಸ್ಪೀಕರ್‌ ನಿರ್ಧರಿಸುತ್ತಾರೆ. ʼʼನಿಮ್ಮದು ಡಬಲ್‌ ಸ್ಟಂಡರ್ಡ್‌ʼʼ ʻʻನೀವು ನ್ಯಾಯಯುತವಾಗಿ ನಡೆದುಕೊಳ್ಳಬೇಕುʼʼ ʻʻನಾನು ನಿಮ್ಮನ್ನು ಶಪಿಸುತ್ತೇನೆʼʼ ʻʻನನ್ನ ಬಾಯಿ ಮುಚ್ಚಲು ಪ್ರಯತ್ನಿಸಬೇಡಿʼʼ ಎಂಬಂಥ ವಾಕ್ಯಗಳು ಕೂಡ ಬಳಸಲು ಅನರ್ಹವಾದವುಗಳು.

ಅಸಂಸದೀಯ ವರ್ತನೆ

ಕೆಲವೊಮ್ಮೆ ಸಂಸದರ ಅಸಂಸದೀಯ ವರ್ತನೆಗಳೂ ಲೋಕಸಭೆ- ರಾಜ್ಯಸಭೆಗಳನ್ನು ಕಂಗೆಡಿಸುವುದು ಇದೆ. ಇಂಥ ಸಂದರ್ಭದಲ್ಲಿ ಅಂಥ ಸಂಸದರ ಮೇಲೆ ಸೂಕ್ತ ಕ್ರಮ ಕೈಗೊಳ್ಳುವ ಅಧಿಕಾರ ಸ್ಪೀಕರ್‌ರದು ಆಗಿರುತ್ತದೆ. ಅವರು ಸಂಸದನನ್ನು ಕೆಲವು ದಿನಗಳ ಮಟ್ಟಿಗೆ ಹೊರಹಾಕಬಹುದು, ಯಾವುದೇ ಸಮಿತಿಯ ಮುಂದೆ ವಿಚಾರಣೆಗೆ ಹಾಜರಾಗುವಂತೆ ನಿರ್ದೇಶಿಸಬಹುದು, ವಾಗ್ದಂಡನೆ ವಿಧಿಸಬಹುದು.

2021ರಲ್ಲಿ ತೃಣಮೂಲ ಕಾಂಗ್ರೆಸ್‌ ಸಂಸದ ಡೆರೆಕ್‌ ಓಬ್ರಿಯನ್‌ ಅವರು ಸದನದ ರೂಲ್‌ ಬುಕ್‌ ಅನ್ನು ಸ್ಪೀಕರ್‌ ಮೇಲೆ ಎಸೆದದ್ದಕ್ಕಾಗಿ, ಅವರನ್ನು ಲೋಕಸಭೆ ಅಧಿವೇಶನದ ಉಳಿದ ಅವಧಿಗೆ ಬಹಿಷ್ಕರಿಸಲಾಗಿತ್ತು. ಅದೇ ಅಧಿವೇಶನದ ಸಂದರ್ಭದಲ್ಲಿ, ಅಸಂಸದೀಯ ನಡವಳಿಕೆ ತೋರಿದ 12 ಮೇಲ್ಮನೆ ಸದಸ್ಯರನ್ನೂ ಬಹಿಷ್ಕರಿಸಲಾಗಿತ್ತು.

Exit mobile version