Site icon Vistara News

ವಿಸ್ತಾರ Explainer | ಭಾರತದ ಜತೆ ಚೀನಾ ಗಡಿ ಕಿರಿಕ್‌; ಏನಿದರ ಹಿನ್ನೆಲೆ?

India and China Border Issue

| ಮಲ್ಲಿಕಾರ್ಜುನ ತಿಪ್ಪಾರ, ಬೆಂಗಳೂರು

ಮ್ಮು-ಕಾಶ್ಮೀರದ ಲಡಾಕ್‌ ವಾಸ್ತವ ಗಡಿ ನಿಯಂತ್ರಣ ರೇಖೆ (LAC) ಬಳಿ ವರ್ಷಗಟ್ಟಲೆ ಬಿಕ್ಕಟ್ಟು ಸೃಷ್ಟಿಸಿದ್ದ ಕುತಂತ್ರಿ ಚೀನಾ ಈಗ ಅರುಣಾಚಲ ಪ್ರದೇಶ ತವಾಂಗ್‌ ಸೆಕ್ಟರ್‌ನ ಗಡಿಯಲ್ಲಿ ಉಪಟಳ ಆರಂಭಿಸಿದೆ. ಅರುಣಾಚಲ ಪ್ರದೇಶದ ಗಡಿಯಲ್ಲಿ ಡಿಸೆಂಬರ್‌ 9ರಂದು ಭಾರತ ಹಾಗೂ ಚೀನಾ ಯೋಧರ ಮಧ್ಯೆ ಭಾರಿ ಪ್ರಮಾಣದಲ್ಲಿ ಹೊಡೆದಾಟ (India China Clash) ನಡೆದಿದ್ದು, ಚೀನಾ ಸೈನಿಕರನ್ನು ಭಾರತದ ಸೈನಿಕರು (ವಿಸ್ತಾರ Explainer) ಬಗ್ಗುಬಡಿದಿದ್ದಾರೆ.

ಅರುಣಾಚಲ ಪ್ರದೇಶದ ಮೇಲೆ ಮೊದಲಿನಿಂದಲೂ ಚೀನಾ ಹಿಡಿತ ಸಾಧಿಸಲು ಯತ್ನಿಸುತ್ತಿದ್ದು, ಅದು ಸಾಧ್ಯವಾಗಿಲ್ಲ. ಇದರ ಬದಲಾಗಿ ಗಡಿಯಲ್ಲಿ ಚೀನಾ ಉಪಟಳ ಮಾಡುತ್ತದೆ. ಇಂತಹ ಉಪಟಳದ ಭಾಗವಾಗಿಯೇ ಡಿಸೆಂಬರ್‌ 9 ರಂದು ಭಾರತದ ಸೈನಿಕರನ್ನು ಕೆಣಕಿದ್ದಾರೆ. ಇದಕ್ಕೆ ಭಾರತದ ಯೋಧರು ಸರಿಯಾಗಿ ತಿರುಗೇಟು ನೀಡಿದ್ದಾರೆ. ಸಂಘರ್ಷದಲ್ಲಿ ನಮ್ಮ ದೇಶದ 6 ಯೋಧರು ಗಾಯಗೊಂಡಿದ್ದಾರೆ. ಆದರೆ, ಕಮ್ಯುನಿಸ್ಟ್‌ ರಾಷ್ಟ್ರದ ಹೆಚ್ಚಿನ ಯೋಧರಿಗೆ ಗಾಯಗಳಾಗಿವೆ ಎಂದು ಮೂಲಗಳು ತಿಳಿಸಿವೆ. ಭಾರತದ ಗಾಯಾಳು ಯೋಧರಿಗೆ ಗುವಾಹಟಿಯಲ್ಲಿ ಚಿಕಿತ್ಸೆ ನೀಡಲಾಗುತ್ತಿದೆ ಎಂದು ತಿಳಿದು ಬಂದಿದೆ.

ಅರುಣಾಚಲದಲ್ಲಿ ಆಗಿದ್ದೇನು?
ಡಿಸೆಂಬರ್ 9ರಂದು ಅರುಣಾಚಲದ ವಾಸ್ತವ ಗಡಿ ರೇಖೆ(ಎಲ್ಎಸಿ) ಬಳಿಯ ತವಾಂಗ್‌ ಪ್ರದೇಶದ ಯಾಂಗತ್ಸೆ ಎಂಬಲ್ಲಿ ಚೀನಾದ ಪೀಪಲ್ಸ್ ಲಿಬರೇಷನ್ ಆರ್ಮಿ(ಪಿಎಲ್ಎ)ಯ 300ರಿಂದ 400 ಸೈನಿಕರು ಮತ್ತು ಭಾರತದ ಸೈನಿಕರು ಗಡಿಯಲ್ಲಿ ಕಾದಾಟಕ್ಕೆ ನಿಂತರು. ಭಾರತ ಮತ್ತು ಚೀನಾ ಮಧ್ಯೆ ಲಡಾಕ್‌ನಿಂದ ಅರುಣಾಚಲ ಪ್ರದೇಶದವರೆಗೂ 3488 ಕಿ.ಮೀ ಗಡಿ ಇದೆ. ಕಳೆದ ಎರಡು ವರ್ಷಗಳಿಂದ ಈ ಗಡಿಯಲ್ಲಿ ಉಭಯ ರಾಷ್ಟ್ರಗಳ ಮಧ್ಯೆ ಸಂಘರ್ಷ ಆಗಾಗ ತಲೆದೋರುತ್ತಿದೆ.

ಅರುಣಾಚಲ ಪ್ರದೇಶದ ತವಾಂಗ್ ಜಿಲ್ಲಾ ಕೇಂದ್ರದ ನೋಟ.

ಯಾಂಗತ್ಸೆ ಸೂಕ್ಷ್ಮ ಪ್ರದೇಶ ಏಕೆ?
ಅರುಣಾಚಲ ಪ್ರದೇಶವು ಭಾರತಕ್ಕೆ ಸೇರಿದ್ದು ಎಂದು ಅಂತಾರಾಷ್ಟ್ರೀಯ ಸಮುದಾಯವು ಒಪ್ಪಿಕೊಂಡಿದೆ. ಆದರೆ, ಇದಕ್ಕೆ ಚೀನಾದ ತಕರಾರಿದೆ. ಆ ಪ್ರದೇಶ ತನ್ನದು ಎಂದು ಆಗಾಗ ಕಾಲು ಕೆದರಿಕೊಂಡು ಭಾರತದ ಜತೆ ಜಗಳ ಕಾಯುತ್ತದೆ. ಚೀನಾದ ಪ್ರಕಾರ ಅರುಣಾಚಲ ಪ್ರದೇಶವು ದಕ್ಷಿಣ ಟಿಬೆಟ್‌ನ ಭಾಗವಾಗಿದ್ದು, ಅದು ತನಗೇ ಸೇರಬೇಕು ಎಂದು ವಾದಿಸುತ್ತದೆ. ಚೀನಾದ ಪ್ರಮುಖ ಆಸಕ್ತಿಯು ಭೂತಾನ್ ಮತ್ತು ಟಿಬೆಟ್ ಗಡಿಯಲ್ಲಿರುವ ವಾಯವ್ಯ ಅರುಣಾಚಲದಲ್ಲಿ ಆಯಕಟ್ಟಿನ ಸ್ಥಳವಾಗಿರುವ ತವಾಂಗ್‌‌ನ ಯಾಂಗತ್ಸೆ ಮೇಲಿದೆ. ಈ ಪ್ರದೇಶವು ನಿಯಮಿತವಾಗಿ ಚೀನೀ ಆಕ್ರಮಣಗಳಿಗೆ ಸಾಕ್ಷಿಯಾಗಿದೆ. 1962ರ ಯುದ್ಧದಲ್ಲಿ ಭಾರತೀಯ ಪಡೆಗಳು ತವಾಂಗ್‌ನಲ್ಲಿ ಚೀನಾದ ಪಡೆಗಳೊಂದಿಗೆ ಹೋರಾಡಿದ್ದವು. ಈ ಪ್ರದೇಶವು ಟಿಬೆಟ್‌ನ ಜನರಿಗೆ ಸಾಂಸ್ಕೃತಿಕ ಸಂಪರ್ಕವನ್ನು ಹೊಂದಿದೆ. ಇತ್ತೀಚಿಗಷ್ಟೇ, ಅಂದರೆ 2021ರ ಅಕ್ಟೋಬರ್‌ನಲ್ಲಿ ಚೀನಾ ಪಡೆಗಳು ಯಾಂಗತ್ಸೆಯಲ್ಲಿ 17,000 ಅಡಿ ಶಿಖರದ ಮೇಲೆ ನಿಯಂತ್ರಣ ಸ್ಥಾಪಿಸಲು ಪ್ರಯತ್ನಿಸಿದ್ದವು. ಆದರೆ, ಭಾರತೀಯ ಸೈನಿಕರು ಚೀನಾ ಸೈನ್ಯದ ಪ್ರಯತ್ನವನ್ನು ಹಾಳು ಮಾಡಿ ಮತ್ತು ಸೇನೆಯನ್ನು ಹಿಮ್ಮೆಟ್ಟಿಸುವಲ್ಲಿ ಯಶಸ್ವಿಯಾಗಿದ್ದರು.

ಏನಿದು ಎಲ್ಎಸಿ?
ಲೈನ್ ಆಫ್ ಆ್ಯಕ್ಚುವಲ್ ಕಂಟ್ರೋಲ್( Line of Actual Control-LAC)ದ ಹೃಸ್ವರೂಪವೇ ಎಲ್ಎಸಿ. ಈ ಗಡಿ ರೇಖೆಯು ಗಾಲ್ವಾನ್‌‌ನಿಂದ ಶ್ಯೋಕ್ ನದಿಗಳ ಸಂಗಮದವರೆಗೆ ಹರಡಿಕೊಂಡಿದೆ. ಇತ್ತೀಚಿನ ವರ್ಷಗಳಲ್ಲಿ ಭಾರತ ಮತ್ತು ಚೀನಾ ಎರಡೂ ಈ ಗಡಿಯಲ್ಲಿ ಗಸ್ತು ತಿರುಗುತ್ತಿವೆ. ಗಲ್ವಾನ್ ಸಂಘರ್ಷದ ಬಳಿಕ, ಚೀನಾ ಇಡೀ ಗಲ್ವಾನ್ ಕಣಿವೆಯ ಚೀನಾದ ಗಡಿಯೊಳಗೇ ಇದೆ ಎಂದು ಹೇಳಿಕೊಂಡಿತ್ತು.

ಸಂಘರ್ಷಗಳು ನಿರಂತರ…
ಭಾರತ ಮತ್ತು ಚೀನಾ ಮಧ್ಯೆ ಗಡಿ ರೇಖೆಗೆ ಸಂಬಂಧಿಸಿದಂತೆ ಸಂಘರ್ಷಗಳು ನಿರಂತರವಾಗಿವೆ. ಉಭಯ ರಾಷ್ಟ್ರಗಳು ಒಂದು ಬಾರಿ ಯುದ್ಧ ಕೂಡ ಮಾಡಿವೆ. ಏಷ್ಯಾದ ಎರಡು ಬಲಾಢ್ಯ ರಾಷ್ಟ್ರಗಳಾಗಿರುವ ಚೀನಾ ಮತ್ತು ಭಾರತವು ಸುಮಾರು 3488 ಕಿ.ಮೀ ಉದ್ದದಷ್ಟು ಗಡಿಯನ್ನು ಹಂಚಿಕೊಂಡಿದ್ದು, ಇಲ್ಲಿ ಆಗಾಗ ಕಾಳಗಗಳು ನಡೆಯುತ್ತಲೇ ಇರುತ್ತವೆ.

ಮ್ಯಾಕ್‌ಮಹೋನ್ ಲೈನ್ ಒಪ್ಪದ ಚೀನಾ
ಬ್ರಿಟಿಷ್ ವಷಾಹತುಷಾಹಿ ಅಧಿಕಾರಸ್ಥರಿಂದ ಚೀನಾ ಜತೆಗಿನ ಗಡಿ ಸಂಘರ್ಷವು ಭಾರತಕ್ಕೆ ಬಳುವಳಿಯಾಗಿ ಬಂದಿದೆ. ಬ್ರಿಟಿಷ್ ಆಡಳಿತಗಾರರು 1914ರಲ್ಲಿ ಟೆಬೆಟಿಯನ್ ಮತ್ತು ಚೀನೀ ಸರ್ಕಾರಗಳೊಂದಿಗೆ ಸಮಾವೇಶ ನಡೆಸಿ, ಗಡಿಯನ್ನು ಗುರುತಿಸುವ ಕೆಲಸವನ್ನು ಮಾಡಿದರು. ಆದರೆ, ಈ ವೇಳೆ ಗುರುತಿಸಲಾದ ಮ್ಯಾಕ್‌ಮಹೋನ್ ಲೈನ್ ಅನ್ನು ಚೀನಿ ಸರ್ಕಾರ ಒಪ್ಪಿಕೊಳ್ಳಲೇ ಇಲ್ಲ. ಇದರಿಂದಾಗಿ ಪ್ರಸ್ತುತ 90,000 ಚದರ ಕಿಲೋಮೀಟರ್ (34,750 ಚದರ ಮೈಲುಗಳು) ಭೂಪ್ರದೇಶವು ತನ್ನದೆಂದು ಚೀನಾ ವಾದಿಸುತ್ತಿದೆ. ಇದರಲ್ಲಿ ಭಾರತದ ಅರುಣಾಚಲ ಪ್ರದೇಶವೂ ಇದೆ.

ಸಂಘರ್ಷ ಯಾವಾಗ ಶುರು?
ಭಾರತದ ಪ್ರಧಾನಿ ಜವಾಹರ ಲಾಲ್ ನೆಹರು ಅವರು 1959ರಲ್ಲಿ ಬೀಜಿಂಗ್‌ಗೆ ಭೇಟಿ ನೀಡಿದ್ದರು. ಆಗ ಮೊದಲ ಬಾರಿಗೆ ಗಡಿ ವಿವಾದವು ಪ್ರಸ್ತಾಪವಾಯಿತು. ಚೀನಿ ನಕಾಶೆಯಲ್ಲಿ ಅಧಿಕಾರಿಗಳು ತೋರಿಸಿರುವ ಗಡಿಯ ಬಗ್ಗೆ ನೆಹರು ಅವರು ಆಕ್ಷೇಪಿಸಿದರು. ಆಗ, ಚೀನಾದ ಪ್ರಧಾನಿಯಾಗಿದ್ದ ಝೌ ಎನ್‌ಲೈ ಅವರು, ತಮ್ಮ ದೇಶವು ವಷಾಹತು ಗಡಿಯನ್ನು ಒಪ್ಪಿಕೊಂಡಿಲ್ಲ ಎಂದು ಹೇಳಿದ್ದರು. ಆಗಿನಿಂದಲೇ ಉಭಯ ರಾಷ್ಟ್ರಗಳ ಮಧ್ಯೆ ಗಡಿ ಸಂಘರ್ಷ ಶುರುವಾಯಿತು.

ಏನಿದು ಮ್ಯಾಕ್‌ಮಹೋನ್ ಲೈನ್?
ಮ್ಯಾಕ್‌ಮಹೋನ್ ಲೈನ್ ಎಂಬುದು ಚೀನಾ ಮತ್ತು ಭಾರತದ ನಡುವಿನ ಗಡಿಯನ್ನು ಗುರುತಿಸುವ ಒಂದು ರೇಖೆಯಾಗಿದೆ. ಈಸ್ಟ್ ಇಂಡಿಯಾ ಕಂಪನಿಯ ಅಧಿಕಾರಿಯಾಗಿದ್ದ ಸರ್‌ ಹೆನ್ರಿ ಮ್ಯಾಕ್‌ಮಹೋನ್‌ ಎಂಬಾತ ಬಳಿಕ ಬ್ರಿಟಿಷ್‌ ಆಡಳಿತವನ್ನು ಸೇರಿಕೊಂಡಿದ್ದ. ಮ್ಯಾಕ್‌ಮಹೋನ್ ವಿದೇಶಾಂಗ ಕಾರ್ಯದರ್ಶಿಯಾಗಿದ್ದ. ಈ ಸಂದರ್ಭದಲ್ಲಿ, ಅಂದರೆ 1914ರಲ್ಲಿ ಭಾರತ-ಚೀನಾ ನಡುವಿನ ಗಡಿರೇಖೆಯನ್ನು ಗುರುತಿಸಲು ಮುಂದಾದ. ಆಗ ಬ್ರಿಟಿಷ್‌ ಇಂಡಿಯಾ ಮತ್ತು ಟಿಬೆಟ್‌ ನಡುವೆ ನಡೆದ ಸಿಮ್ಲಾ ಒಪ್ಪಂದದಲ್ಲಿ ಪ್ರಮುಖ ಪಾತ್ರ ವಹಿಸಿದ. ಆತ, ಅಂದು ನಕಾಶೆ ಮೇಲೆ ಎಳೆದ ಒಂದು ರೇಖೆಯನ್ನು ಮ್ಯಾಕ್‌ಮಹೋನ್ ಲೈನ್ ಎಂದು ಗುರುತಿಸಲಾಗುತ್ತದೆ. ಆದರೆ, ಈ ಗಡಿ ರೇಖೆಗೆ ಚೀನಾ ಎಂದಿಗೂ ಮಾನ್ಯತೆ ನೀಡಲಿಲ್ಲ. ಹಾಗಾಗಿ, ಬ್ರಿಟಿಷರು ಮಾಡಿದ ಎಡವಟ್ಟಿನ ದುಷ್ಪರಿಣಾಮವನ್ನು ಭಾರತವು ಇಂದಿಗೂ ಕಿರುಕುಳ ಎದುರಿಸುತ್ತಿದೆ.

1962ರ ಭಾರತ-ಚೀನಾ ಯುದ್ಧ
ಭಾರತ-ಚೀನಾ ನಡುವಿನ ಅತಿ ದೊಡ್ಡ ಸಂಘರ್ಷವಿದು. 1962ರಲ್ಲಿ ಚೀನಿ ಸೇನಾ ಪಡೆಯು ಗಡಿಯ ವಿವಾದಿತ ಪ್ರದೇಶದಲ್ಲಿ ದಂಡೆತ್ತಿ ಬಂದಿತು. ಆಗ ಭಾರತ ಮತ್ತು ಚೀನಾ ನಡುವೆ ಸುಮಾರು ನಾಲ್ಕು ವಾರಗಳ ಕಾಲ ಯುದ್ಧ ನಡೆಯಿತು. ಯುದ್ಧದ ಪರಿಣಾಮ ನಮ್ಮ ಸಾವಿರಾರು ಸೈನಿಕರು ಹುತಾತ್ಮರಾದರು. ಆಗ, ಯುದ್ಧ ವಿರಾಮ ನಡೆದು ಭಾರತದ ಅಕ್ಸಾಯಿ ಚಿನ್ ಪ್ರದೇಶ ತನ್ನದೆಂದು ಚೀನಾ ವಶಪಡಿಸಿಕೊಂಡಿತು. ಈ ಪ್ರದೇಶವು ಟಿಬೆಟ್‌ನಿಂದ ವೆಸ್ಟರ್ನ್ ಚೀನಾಗೆ ಸಂಪರ್ಕಿಸುವ ಕಾರಿಡಾರ್ ಆಗಿದೆ. ಆದರೆ, ಭಾರತವು ಈಗಲೂ ಈ ಪ್ರದೇಶವು ತನ್ನದೆಂದು ಅಂತಾರಾಷ್ಟ್ರೀಯವಾಗಿ ವಾದಿಸುತ್ತಲೇ ಇದೆ. ಈ ಯುದ್ಧದಲ್ಲಿ ಭಾರತವು ಅಕ್ಸಾಯಿ ಚಿನ್ ಮತ್ತು ನಮ್ಮ ಯೋಧರನ್ನು ಕಳೆದುಕೊಳ್ಳಬೇಕಾಯಿತು.

1967ರ ನಾಥು ಲಾ ಸಂಘರ್ಷ
ನಾಥು ಲಾ ಪಾಸ್ ಭಾರತದ ಈಶಾನ್ಯ ರಾಜ್ಯದ ಸಿಕ್ಕಿಂನಲ್ಲಿರುವ ಪ್ರಮುಖ ಹಾಗೂ ಭಾರತದ ಅತಿ ಎತ್ತರದ ಪರ್ವತ ಮಾರ್ಗವಾಗಿದೆ. ಭಾರತ ಮತ್ತು ಚೀನಾಗಳೆರಡಕ್ಕೂ ಈ ಪ್ರದೇಶವು ತುಂಬ ಮಹತ್ವದ್ದಾಗಿದೆ. ನಾಥು ಲಾ ಹಿಮಾಲಯದ ಡೋಂಗ್ಕ್ಯಾ ಶ್ರೇಣಿಯಲ್ಲಿನ ಟಿಬೆಟ್‌, ಚೀನಾದ ಯಡಾಂಗ್ ಕೌಂಟಿ, ನೇಪಾಳ ಮತ್ತು ಭಾರತದ ರಾಜ್ಯಗಳಾದ ಸಿಕ್ಕಿಂ ಮತ್ತು ಪಶ್ಚಿಮ ಬಂಗಾಳ ನಡುವಿನ ಸಂಪರ್ಕದ ಕೊಂಡಿಯಾಗಿದೆ. ಹಾಗಾಗಿ, ಈ ಪಾಸ್ ಮೇಲೆ ನಿಯಂತ್ರಣ ಸಾಧಿಸಲು ಚೀನಾ, ಭಾರತದ ಜತೆ ಆಗಾಗ ಸಂಘರ್ಷವನ್ನು ಮಾಡುತ್ತಲೇ ಇರುತ್ತದೆ. 1967ರಲ್ಲಿ ನಡೆದ ಸಂಘರ್ಷದಲ್ಲಿ ಫಿರಂಗಿ ದಾಳಿ ಸೇರಿದಂತೆ ಶಸ್ತ್ರಾಸ್ತ್ರಗಳನ್ನು ಬಳಸಲಾಗಿತ್ತು. ಇದರಿಂದಾಗಿ ಸಾಕಷ್ಟು ಸಾವು – ನೋವು ಸಂಭವಿಸಿತ್ತು. ಈ ಸಂಘರ್ಷದಲ್ಲಿ 80 ಭಾರತೀಯ ಯೋಧರು ಹುತಾತ್ಮರಾದರೆ, ಚೀನಾದ 400 ಯೋಧರು ಮೃತಪಟ್ಟಿದ್ದರು.

1975ರ ತುಲುಂಗ್ ಲಾ ದಾಳಿ
ಭಾರತ-ಚೀನಾ ಗಡಿಯಲ್ಲಿ ಸಂಘರ್ಷ ನಿರಂತರವಾಗಿರುತ್ತದೆ. ಆದರೆ, ಶಸ್ತ್ರಾಸ್ತ್ರಗಳನ್ನು ಬಳಸುವುದು ಕಡಿಮೆ. ಹಾಗೆಯೇ, 1975ರ ತುಲುಂಗ್ ಲಾ ಹೊಂಚು ದಾಳಿ ವೇಳೆ, ಉಭಯ ರಾಷ್ಟ್ರಗಳ ಸೈನಿಕರು ಪರಸ್ಪರ ಗುಂಡು ಹಾರಿಸಿದ್ದರು. ಇದೇ ಕೊನೆ, ಬಳಿಕ ಗಡಿಯಲ್ಲಿ ಗುಂಡಿನ ಚಕಮಕಿ ನಡೆದಿಲ್ಲ. ಅಂದು ಚೀನಿ ಸೈನಿಕರು ನಡೆಸಿದ ಗುಂಡಿನ ದಾಳಿಯಲ್ಲಿ ಅರುಣಾಚಲ ಪ್ರದೇಶದ ವಿಭಜನಾ ರೇಖೆಯಲ್ಲಿ ನಾಲ್ವರು ಭಾರತೀಯ ಸೈನಿಕರು ಹುತಾತ್ಮರಾಗಿದ್ದರು. ಚೀನಾವು ಭಾರತದ ಗಡಿಯನ್ನು ಮೀರಿ ಒಳಬರುವ ಪ್ರಯತ್ನವನ್ನು ಮಾಡುತ್ತಿದೆ ಎಂದು ಭಾರತವು ದೂರು ನೀಡಿತ್ತು. ಆದರೆ, ಚೀನಾ ಮಾತ್ರ ಈ ಆರೋಪವನ್ನು ತಳ್ಳಿ ಹಾಕಿತ್ತು.

2017ರ ಡೋಕ್ಲಾಮ್ ಸಂಘರ್ಷ
ಇತ್ತೀಚಿನ ವರ್ಷಗಳಲ್ಲಿ ಭಾರೀ ಆತಂಕಕ್ಕೆ ಕಾರಣವಾದ ಸಂಘರ್ಷಗಳ ಪೈಕಿ 2017ರ ಡೋಕ್ಲಾಮ್ ಸಂಘರ್ಷವೂ ಒಂದು. ಭೂತಾನ್, ಚೀನಾ ಮತ್ತು ಭಾರತಕ್ಕೆ ಆಯಕಟ್ಟಿನ ಸ್ಥಳವಾಗಿರುವ ಡೋಕ್ಲಾಮ್‌ನಲ್ಲಿ ಭಾರತ ಮತ್ತು ಚೀನಾ ಸೈನಿಕರು ಸಂಘರ್ಷಕ್ಕೆಇಳಿದಿದ್ದರು. ಈ ಪ್ರದೇಶದಲ್ಲಿ ಚೀನಾ ರಸ್ತೆ ನಿರ್ಮಾಣಕ್ಕೆ ಮುಂದಾಗಿತ್ತು. ಆಗ ಭಾರತೀಯ ಸೇನೆಯು ಇದಕ್ಕೆ ಆಕ್ಷೇಪ ವ್ಯಕ್ತಪಡಿಸಿ, ಚೀನಾ ಸೇನೆಯನ್ನು ಹಿಂದಕ್ಕೆ ಕಳುಹಿಸಿತ್ತು. ಡೋಕ್ಲಾಮ್ ಆಯಕಟ್ಟಿನ ದೃಷ್ಟಿಯಿಂದ ಮಹತ್ವದ್ದಾಗಿದೆ. ಭಾರತವನ್ನು ಈಶಾನ್ಯ ಭಾರತದ ರಾಜ್ಯಗಳೊಂದಿಗೆ ಸಂಪರ್ಕ ಕಲ್ಪಿಸುವ ಚಿಕನ್ ನೆಕ್ ಎಂದು ಕರೆಯಲಾಗುವ ಪ್ರದೇಶದ ಮೇಲೆ ನಿಯಂತ್ರಣ ಸಾಧಿಸಲು ಡೋಕ್ಲಾಮ್ ಮಹತ್ವದ ಪಾತ್ರ ನಿರ್ವಹಿಸುತ್ತದೆ. ಈ ಹಿನ್ನೆಲೆಯಲ್ಲಿ ಡೋಕ್ಲಾಮ್ ಪ್ರದೇಶದಲ್ಲಿ ರಸ್ತೆ ನಿರ್ಮಾಣಕ್ಕೆ ಚೀನಾ ಮುಂದಾಗಿತ್ತು. ಆಗ ಉಭ ರಾಷ್ಟ್ರಗಳ ಮಧ್ಯೆ ಗಡಿಯಲ್ಲಿ ಸಂಘರ್ಷವೇರ್ಪಟ್ಟಿತ್ತು. ಆ ಬಳಿಕ ಮಾತುಕತೆಯ ಮೂಲಕ ಸಂಘರ್ಷಕ್ಕೆ ಇತಿಶ್ರೀ ಹಾಡಲಾಯಿತು.

2020ರ ಗಲ್ವಾನ್ ಘನಘೋರ ಘರ್ಷಣೆ
ಭಾರತದ ಲಡಾಕ್ ವಲಯದಲ್ಲಿನ ಗಡಿಯಲ್ಲಿ ಭಾರತ ಮತ್ತು ಚೀನಾ ಸೈನಿಕರು 2020 ಮೇ ತಿಂಗಳಿನಿಂದಲೂ ಸಂಘರ್ಷ ನಿರತರಾಗಿದ್ದರು. ಆದರೆ, 2020ರ ಜೂನ್ ಹೊತ್ತಿಗೆ ಈ ಸಂಘರ್ಷ ಉಲ್ಬಣಗೊಂಡಿತ್ತು. ಉಭಯ ರಾಷ್ಟ್ರಗಳ ಸೈನಿಕರು ಗಲ್ವಾನ್ ಕಣಿವೆಯ ನದಿಯಲ್ಲಿ ಜಗಳ ಕಾಯ್ದರು. ಕೋಲು, ರಾಡ್, ಬಡಿಗೆಗಳನ್ನು ಹಿಡಿದುಕೊಂಡು ಪರಸ್ಪರ ಹೊಡೆದಾಡಿಕೊಂಡರು. ಈ ರೀತಿ ಹೊಡೆದಾಟವು ಸುಮಾರು 7 ಗಂಟೆಗಳ ಕಾಲ ನಡೆಯಿತು. ನಮ್ಮ ಭಾರತದ ಸುಮಾರು 20 ಯೋಧರು ಹುತಾತ್ಮರಾದರು. ಬಳಿಕ, ಈ ಸಂಘರ್ಷದಲ್ಲಿ ಚೀನಾ ತನ್ನ ಐದು ಸೈನಿಕರು ಮೃತರಾಗಿದ್ದಾರೆಂದು ಹೇಳಕೊಂಡಿತ್ತು. ಆದರೆ, ಆಸ್ಟ್ರೇಲಿಯಾದ ವೆಬ್‌ಸೈಟ್ ವರದಿಯ ಪ್ರಕಾರ, ಚೀನಾದ ಸುಮಾರು 38 ಯೋಧರು ಈ ಘರ್ಷಣೆಯಲ್ಲಿ ಮೃತಪಟ್ಟಿದ್ದರು.

ಇದನ್ನೂ ಓದಿ | ಭಾರತ-ಚೀನಾ ಗಡಿ ಸಂಘರ್ಷ; ಸಂಸತ್ ಅಧಿವೇಶನದ ಉಭಯ ಸದನಗಳಲ್ಲಿ ಇಂದು ಸಚಿವ ರಾಜನಾಥ್​ ಸಿಂಗ್​​ರಿಂದ ಮಾಹಿತಿ

Exit mobile version