Site icon Vistara News

ವಿಸ್ತಾರ Explainer: ಇನ್ನು ಜನನ ಮತ್ತು ಮರಣ ನೋಂದಣಿ ಕಡ್ಡಾಯ! ಏನಿದು ಹೊಸ ವಿಧೇಯಕ, ಯಾಕೆ?

birth registration

ಹೊಸದಿಲ್ಲಿ: ಜನನ ಮತ್ತು ಮರಣ ನೋಂದಣಿ (ತಿದ್ದುಪಡಿ) ಮಸೂದೆ- 2023 (Registration Of Births and Deaths (Amendment) Bill- 2023) ಅನ್ನು ಬುಧವಾರ ಅಂಗೀಕರಿಸಿದೆ. ಜುಲೈ 26ರಂದು ಇದನ್ನು ಲೋಕಸಭೆಯಲ್ಲಿ ಮಂಡಿಸಲಾಗಿತ್ತು. 1969ರಲ್ಲಿ ತಂದ ಜನನ ಮತ್ತು ಮರಣಗಳ ನೋಂದಣಿ ಕಾಯಿದೆ ಇದೇ ಮೊದಲ ಬಾರಿಗೆ ತಿದ್ದುಪಡಿ ಕಾಣುತ್ತಿದೆ. ಹಲವು ಪ್ರಮುಖ ತಿದ್ದುಪಡಿಗಳನ್ನು ಇದರಲ್ಲಿ ಮಾಡಲಾಗಿದೆ.

ಪ್ರಮಾಣಪತ್ರ ಕಡ್ಡಾಯ

ಈ ಕಾಯಿದೆ ಜಾರಿಗೆ ಬಂದ ನಂತರ ಜನಿಸಿದ ಯಾವುದೇ ವ್ಯಕ್ತಿಯ ಜನ್ಮ ದಿನಾಂಕ/ಮರಣ ದಿನಾಂಕ ಮತ್ತು ಸ್ಥಳವನ್ನು ಸಾಬೀತುಪಡಿಸಲು ಜನನ ಮತ್ತು ಮರಣ ಪ್ರಮಾಣಪತ್ರದ ಬಳಕೆ ಕಡ್ಡಾಯವಾಗಲಿದೆ. ಜನನ ಪ್ರಮಾಣಪತ್ರದ ಮಾಹಿತಿಯನ್ನು ಶಿಕ್ಷಣ ಸಂಸ್ಥೆಗಳಿಗೆ ಪ್ರವೇಶ, ಮತದಾರರ ಪಟ್ಟಿ ತಯಾರಿಕೆ, ಸರ್ಕಾರಿ ಹುದ್ದೆಗೆ ನೇಮಕಾತಿ ಮತ್ತು ಕೇಂದ್ರ ಸರ್ಕಾರ ನಿರ್ಧರಿಸುವ ಇತರ ಉದ್ದೇಶಗಳಿಗಾಗಿ ಬಳಸಲಾಗುತ್ತದೆ. ಇದನ್ನು ಆಧಾರ್‌ಗೂ ಜೋಡಿಸಲಾಗುತ್ತದೆ.

ಈ ಪ್ರಮಾಣಪತ್ರವು ವ್ಯಕ್ತಿಯ ವಯಸ್ಸನ್ನು ನಿರ್ಧರಿಸುವ ಏಕೈಕ ನಿರ್ಣಾಯಕ ಪುರಾವೆಯಾಗಲಿದೆ. ಜನನ ಪ್ರಮಾಣಪತ್ರವನ್ನು ಹೊಂದಿರದ ವ್ಯಕ್ತಿಯ ಮತದಾನದ ಹಕ್ಕು ಮೊಟಕಾಗಲಿದೆ. ಸರ್ಕಾರಿ ಉದ್ಯೋಗ ಅಥವಾ ಶಿಕ್ಷಣ ಸಂಸ್ಥೆಗಳಿಗೆ ಪ್ರವೇಶಕ್ಕಾಗಿ ಅರ್ಜಿ ಸಲ್ಲಿಸಲು ಸಾಧ್ಯವಿಲ್ಲ. ಜನನ ಮತ್ತು ಮರಣಗಳ ರಾಷ್ಟ್ರೀಯ ಡೇಟಾಬೇಸ್ ಅನ್ನು ಚುನಾವಣಾ ಪಟ್ಟಿ, ಪಡಿತರ ಚೀಟಿ, ಆಧಾರ್‌ನಂಥ ಇತರ ಡೇಟಾಬೇಸ್‌ಗಳೊಂದಿಗೆ ಹಂಚಿಕೊಳ್ಳಲಾಗುತ್ತದೆ. ಅಂದರೆ ಇನ್ನು ಮುಂದೆ ಜನನ- ಮರಣ ಪ್ರಮಾಣ ಪತ್ರ ಕಡ್ಡಾಯವಾದಂತೆಯೇ.

ರಾಷ್ಟ್ರೀಯ ಡೇಟಾಬೇಸ್‌

ವಿಧೇಯಕದಲ್ಲಿ ಉಲ್ಲೇಖಿಸಲಾಗಿರುವ ಉದ್ದೇಶಗಳು ಹಲವು. ಮುಖ್ಯವಾಗಿ, ಜನನ ಮತ್ತು ಮರಣಗಳ ರಾಷ್ಟ್ರೀಯ ಮತ್ತು ರಾಜ್ಯ ಮಟ್ಟದ ಡೇಟಾಬೇಸ್ ಅನ್ನು ಸೃಷ್ಟಿ ಮಾಡಲಾಗುತ್ತದೆ. ಇದು ಸಾರ್ವಜನಿಕ ಸೇವೆಗಳು, ಸರ್ಕಾರಗಳ ಕಾರ್ಯಕ್ರಮಗಳ ಪ್ರಯೋಜನಗಳ ಪಾರದರ್ಶಕ ವಿತರಣೆಗೆ ನೆರವಾಗಲಿದೆ. ಹಾಗೆಯೇ ಪ್ರಜೆಗಳ ಮಾಹಿತಿಯ ಇತರ ಡೇಟಾಬೇಸ್‌ಗಳನ್ನು ನವೀಕರಿಸಲೂ ಸಹಾಯ ಮಾಡಲಿದೆ. ಇಲ್ಲಿ ಜನನ ಹಾಗೂ ಮರಣ ದತ್ತಾಂಶದ ಸಂಘಟಿತ ಸಂಗ್ರಹ ಎಂದರೆ ಕಂಪ್ಯೂಟರ್ ನೆಟ್‌ವರ್ಕ್‌ ಮೂಲಕ ಎಲೆಕ್ಟ್ರಾನಿಕ್ ರೂಪದಲ್ಲಿ ಮಾಡುವ ಮಾಹಿತಿ ಸಂಗ್ರಹ.

ಜನಸಂಖ್ಯಾ ನೋಂದಣಿ, ಮತದಾರರ ಪಟ್ಟಿ, ಪಡಿತರ ಚೀಟಿ, ಚಾಲನಾ ಪರವಾನಗಿ ಮುಂತಾದವುಗಳಿಗೆ ಸಂಬಂಧಿಸಿದ ಡೇಟಾಬೇಸ್ ತಯಾರಿಕೆ ಅಥವಾ ನಿರ್ವಹಣೆ ಮಾಡುವ ಅಧಿಕಾರಿಗಳು ಈ ಜನನ ಮತ್ತು ಮರಣಗಳ ರಾಷ್ಟ್ರೀಯ ಡೇಟಾಬೇಸ್‌ನ ಮಾಹಿತಿಯನ್ನು ಪಡೆಯಬಹುದು. ಹಾಗೆಯೇ ಪಾಸ್‌ಪೋರ್ಟ್, ಆಸ್ತಿ ನೋಂದಣಿ ಮತ್ತು ರಾಷ್ಟ್ರೀಯ ಮಟ್ಟದಲ್ಲಿ ಇರುವ ಇತರ ಡೇಟಾಬೇಸ್‌ಗಳೂ ಇದರೊಂದಿಗೆ ಜೋಡಿಸಲ್ಪಡಲಿವೆ.

ಸದ್ಯಕ್ಕೆ ಯಾವುದೇ ಕಾನೂನಿನ ಹೊರತಾಗಿಯೂ ಮರಣ ಮತ್ತು ಜನನ ಪ್ರಮಾಣಪತ್ರಗಳನ್ನು ವ್ಯಕ್ತಿಯ ಜನ್ಮ ದಿನಾಂಕ, ಮರಣ ದಿನಾಂಕ ಮತ್ತು ಸ್ಥಳವನ್ನು ಸಾಬೀತುಪಡಿಸಲು ಬಳಸಲಾಗುತ್ತಿದೆ.

population

ಯಾವುದಕ್ಕೆಲ್ಲಾ ಬಳಸಬಹುದು

ಈ ಕೆಳಗಿನ ಉದ್ದೇಶಗಳಿಗಾಗಿ ಜನನ ಮತ್ತು ಮರಣಗಳ ನೋಂದಣಿ (ತಿದ್ದುಪಡಿ) ಕಾಯಿದೆಯ ದಾಖಲೆಗಳನ್ನು ಬಳಸುವ ಉದ್ದೇಶವಿದೆ:

(ಎ) ಶಿಕ್ಷಣ ಸಂಸ್ಥೆಗೆ ಪ್ರವೇಶ

(ಬಿ) ಚಾಲನಾ ಪರವಾನಗಿ ಪಡೆಯುವುದು

(ಸಿ) ಮತದಾರರ ಪಟ್ಟಿ ಸಿದ್ಧಪಡಿಸುವುದು

(ಡಿ) ಮದುವೆಯ ನೋಂದಣಿ

(ಇ) ಕೇಂದ್ರ ಸರ್ಕಾರ, ರಾಜ್ಯ ಸರ್ಕಾರ, ಸ್ಥಳೀಯ ಸಂಸ್ಥೆ, ಸಾರ್ವಜನಿಕ ವಲಯದ ಉದ್ಯಮ, ಯಾವುದೇ ಶಾಸನಬದ್ಧ ಅಥವಾ ಸ್ವಾಯತ್ತ ಸಂಸ್ಥೆಯಲ್ಲಿ ಹುದ್ದೆಗೆ ನೇಮಕಾತಿ

(ಎಫ್) ಪಾಸ್‌ಪೋರ್ಟ್ ನೀಡಿಕೆ

(ಜಿ) ಆಧಾರ್ ಸಂಖ್ಯೆಯನ್ನು ನೀಡುವುದು

(ಎಚ್) ಕೇಂದ್ರ ಸರ್ಕಾರವು ನಿರ್ಧರಿಸಬಹುದಾದ ಯಾವುದೇ ಇತರ ಉದ್ದೇಶ

ಕಾಯಿದೆ ಜಾರಿಗೆ ಬಂದ ಬಳಿಕ, ಎಲ್ಲಾ ವೈದ್ಯಕೀಯ ಸಂಸ್ಥೆಗಳು ವ್ಯಕ್ತಿಯ ಸಾವಿಗೆ ಕಾರಣದ ಬಗ್ಗೆ ಪ್ರಮಾಣಪತ್ರವನ್ನು ರಿಜಿಸ್ಟ್ರಾರ್‌ಗೆ ಮತ್ತು ಅದರ ಪ್ರತಿಯನ್ನು ಹತ್ತಿರದ ಸಂಬಂಧಿಗೆ ನೀಡುವುದನ್ನು ಕಡ್ಡಾಯವಾಗಿಸಲಿದೆ. ಜನನ ನೋಂದಣಿಯ ಸಂದರ್ಭದಲ್ಲಿ, ಪೋಷಕರು ಮತ್ತು ಮಾಹಿತಿದಾರರ ಆಧಾರ್ ಸಂಖ್ಯೆಗಳನ್ನು ಸಂಗ್ರಹಿಸಲು ಇದು ಅವಕಾಶ ನೀಡಲಿದೆ.

ಕುಂದುಕೊರತೆ ಸರಿಪಡಿಸಲು ಕ್ರಮ

ರಿಜಿಸ್ಟ್ರಾರ್ ಅಥವಾ ಜಿಲ್ಲಾ ರಿಜಿಸ್ಟ್ರಾರ್ ಅವರ ಯಾವುದೇ ಕ್ರಮದಿಂದ ಯಾರಾದರೂ ಸಂತ್ರಸ್ತರಾದರೆ ಅಂಥವರ ಕುಂದುಕೊರತೆ ಪರಿಹರಿಸುವ ಬಗ್ಗೆಯೂ ವಿಧೇಯಕ ತಿಳಿಸಿದೆ. ಕಾಯಿದೆಯ ಪರಿಚ್ಛೇದ 25ರಲ್ಲಿ ಸೂಚಿಸಲಾದ ತಿದ್ದುಪಡಿಯ ಪ್ರಕಾರ, ಒಬ್ಬ ವ್ಯಕ್ತಿ ರಿಜಿಸ್ಟ್ರಾರ್‌ನ ಕ್ರಮ ಅಥವಾ ಆದೇಶದಿಂದ ಬಾಧಿತವಾಗಿದ್ದರೆ ಜಿಲ್ಲಾ ರಿಜಿಸ್ಟ್ರಾರ್‌ಗೆ ಒಂದು ತಿಂಗಳೊಳಗೆ ಮೇಲ್ಮನವಿ ಸಲ್ಲಿಸಬಹುದು. ಹಾಗೇ ಜಿಲ್ಲಾ ರಿಜಿಸ್ಟ್ರಾರ್ ವಿರುದ್ಧ ಮುಖ್ಯ ರಿಜಿಸ್ಟ್ರಾರ್‌ಗೆ ಮೇಲ್ಮನವಿ ಮಾಡಬಹುದು. ಮನವಿ ಮಾಡಿದ ದಿನಾಂಕದಿಂದ 90 ದಿನಗಳ ಅವಧಿಯಲ್ಲಿ ಇವುಗಳನ್ನು ಇತ್ಯರ್ಥ ಮಾಡಬೇಕು.

ಕಾಯಿದೆಯ ಉಲ್ಲಂಘನೆ ಮಾಡಿದವರಿಗೆ ದಂಡದ ಪ್ರಮಾಣ ಹೆಚ್ಚು ಮಾಡಲಾಗಿದೆ. ಉದಾಹರಣೆಗೆ, ಯಾವುದೇ ವ್ಯಕ್ತಿ ಸಮಂಜಸ ಕಾರಣವಿಲ್ಲದೆ ಮಾಹಿತಿ ನೀಡಲು ಅಥವಾ ಬರೆಯಲು ವಿಫಲವಾದರೆ, ಹೆಬ್ಬೆರಳಿನ ಗುರುತು ಅಥವಾ ಸಹಿ ನೀಡದಿದ್ದರೆ, ನೋಂದಣಿ ಉದ್ದೇಶಕ್ಕಾಗಿ ಕೇಳಿದ ಮಾಹಿತಿಗೆ ತಪ್ಪು ವೈಯಕ್ತಿಕ ವಿವರ ನೀಡಿದ್ದರೆ ಅದು ಅಪರಾಧವೆನಿಸುತ್ತದೆ. ಇದಕ್ಕೆ ದಂಡ ವಿಧಿಸಬಹುದು.

ವಿಪಕ್ಷಗಳ ಟೀಕೆ

ವಿಧೇಯಕದ ಬಗ್ಗೆ ಲೋಕಸಭೆಯಲ್ಲಿ ವಿಪಕ್ಷಗಳು ಟೀಕಿಸದೇ ಬಿಟ್ಟಿಲ್ಲ. ಹಿರಿಯರ ಆಸ್ತಿ ಅಥವಾ ಕಲ್ಯಾಣ ಯೋಜನೆಗಳ ಲಾಭ ಪಡೆಯಲು ಅವರ ಸುಳ್ಳು ಮರಣ ಪ್ರಮಾಣ ಪತ್ರ ಪಡೆಯುವ, ವಯಸ್ಸಾದ ಪಿಂಚಣಿದಾರರು ತಾವು ಜೀವಂತವಾಗಿದ್ದೇವೆ ಎಂಬುದಕ್ಕೆ ಪ್ರಮಾಣಪತ್ರ ಪಡೆಯಲು ಕಚೇರಿಯಿಂದ ಕಚೇರಿಗೆ ಅಲೆಯಬೇಕಾಗುವ ಸಮಸ್ಯೆಯ ಬಗ್ಗೆ ಲಾಲ್‌ಗಂಜ್‌ನ ಬಿಎಸ್‌ಪಿ ಸಂಸದೆ ಸಂಗೀತಾ ಆಜಾದ್ ಗಮನ ಸೆಳೆದರು.

“ಸಂವಿಧಾನವು ಖಾತರಿಪಡಿಸಿದ ಗೌಪ್ಯತೆಯ ಮೂಲಭೂತ ಹಕ್ಕನ್ನು ವಿಧೇಯಕದ ನಿಬಂಧನೆಗಳು ಉಲ್ಲಂಘಿಸುತ್ತವೆ. ಸುಪ್ರೀಂ ಕೋರ್ಟ್ ಪುಟ್ಟಸ್ವಾಮಿ ಪ್ರಕರಣದಲ್ಲಿ ನೀಡಿದ ತೀರ್ಪಿನಲ್ಲಿ ಹೇಳಿರುವಂತೆ ಈ ನಿಯಮಗಳು ಖಾಸಗಿತನದ ಉಲ್ಲಂಘನೆ. ಮಾಹಿತಿ ಸಂಗ್ರಹದ ಕೇಂದ್ರೀಕರಣವು ಸಾಮೂಹಿಕ ಕಣ್ಗಾವಲಿಗೆ ಕಾರಣವಾಗಲಿದೆ. ಕೆಲವರನ್ನು ಗುರಿಯಾಗಿಸಲು ಇದನ್ನು ಬಳಸುವ ಸಾಧ್ಯತೆಯಿದೆʼʼ ಎಂದು ಸಂಸದ ಅಸಾದುದ್ದೀನ್ ಓವೈಸಿ ಟೀಕಿಸಿದ್ದಾರೆ.

ಎಷ್ಟು ಜನನ, ಎಷ್ಟು ನೋಂದಣಿ?

ನಾಗರಿಕ ನೋಂದಣಿ ವ್ಯವಸ್ಥೆ (CRS) ಪ್ರಕಾರ, 2020ರಲ್ಲಿ ಭಾರತದಲ್ಲಿ ಒಟ್ಟು 2.422 ಕೋಟಿ ಜನನಗಳನ್ನು ನೋಂದಾಯಿಸಲಾಗಿದೆ. ಆ ವರ್ಷದಲ್ಲಿ 1,000 ಜನಸಂಖ್ಯೆಗೆ ಸರಾರಿ 19.5 ಮಕ್ಕಳು ಜನಿಸಿದ್ದಾರೆ. ಈ ಸರಾಸರಿ ತೆಗೆದುಕೊಂಡರೆ ಜನಸಂಖ್ಯೆಗೆ ಅನುಗಣವಾಗಿ ಅಂದಾಜು 2.643 ಕೋಟಿ ಮಕ್ಕಳು ಜನಿಸಿರಬಹುದು. ಆದರೆ ಜನನ ನೋಂದಣಿ ಆಗಿರುವುದು 91.6% ಮಾತ್ರ.

ಇದನ್ನೂ ಓದಿ: Amit Shah: ಜನನ- ಮರಣ ನೋಂದಣಿ ಜತೆಗೆ ಮತದಾರರ ಪಟ್ಟಿ ಜೋಡಣೆ: ಅಮಿತ್ ಶಾ

Exit mobile version