Site icon Vistara News

ವಿಸ್ತಾರ Explainer: ಮತ್ತೆ ಮತ್ತೆ ಆಪರೇಷನ್‌ ಪಾಲಿಟಿಕ್ಸ್‌, ರಾಜಕೀಯ ಕೋಲಾಹಲ

maharastra crises

ಶಿವಸೇನೆಯ ಶಾಸಕ, ಸಚಿವ ಏಕನಾಥ ಶಿಂಧೆ ಮೂಲಕ ಮಹಾರಾಷ್ಟ್ರದಲ್ಲಿ ನಡೆಯುತ್ತಿರುವುದು ಮತ್ತೊಂದು ಸುತ್ತಿನ ಆಪರೇಷನ್‌ ರಾಜಕೀಯ ಎಂಬ ಅನುಮಾನ ದಟ್ಟವಾಗಿದೆ. ಕರ್ನಾಟಕದಲ್ಲಿ, ಮಧ್ಯಪ್ರದೇಶದಲ್ಲಿ, ಗೋವಾದಲ್ಲಿ ನಡೆದ ಈ ಆಪರೇಶನ್‌ ಪ್ರಕ್ರಿಯೆ ಮಹಾರಾಷ್ಟ್ರದಲ್ಲೂ ಮತ್ತೊಮ್ಮೆ ನಡೆಯಲಿದೆಯಾ? ಭಾರತದಲ್ಲಿ ಈಗ ಸಾಮಾನ್ಯ ಆಗಿಬಿಡುತ್ತಿದೆಯಾ ಆಪರೇಷನ್‌ ಪಾಲಿಟಿಕ್ಸ್? ಇನ್ನೊಂದು ಪಕ್ಷದಿಂದ ಶಾಸಕರನ್ನು ಅಪಹರಿಸುವ ಆಪರೇಷನ್‌ ಈ ಹಿಂದೆ ಎಲ್ಲೆಲ್ಲಿ ನಡೆದಿತ್ತು? ಈ ಕುರಿತು ವಿವರವಾಗಿ ನೋಡೋಣ.

ಮಹಾರಾಷ್ಟ್ರದಲ್ಲಿ ಈಗ ಏನಾಗ್ತಿದೆ?

ಮಹಾರಾಷ್ಟ್ರದ ಮೈತ್ರಿ ಸರ್ಕಾರಕ್ಕೀಗ ಪತನದ ಭಯ ಶುರುವಾಗಿದೆ. ಅದಕ್ಕೆ ಕಾರಣ, ಶಿವಸೇನೆಯ ನಾಯಕ, ಮಹಾರಾಷ್ಟ್ರ ನಗರಾಭಿವೃದ್ಧಿ ಸಚಿವ ಏಕನಾಥ್‌ ಶಿಂಧೆ, ತಮ್ಮ 11 ಮಂದಿ ಬೆಂಬಲಿಗ ಶಾಸಕರೊಂದಿಗೆ ಸೂರತ್‌ನ ರೆಸಾರ್ಟ್‌ ಸೇರಿಕೊಂಡು ಯಾರ ಸಂಪರ್ಕಕ್ಕೂ ಸಿಗದಂತಾಗಿದ್ದಾರೆ. ಈಗವರು ಗುಜರಾತ್ ನಿಂದ ಅಸ್ಸಾಂಗೆ ಶಿಫ್ಟ್ ಆಗಿದ್ದಾರೆ.

21 ಶಾಸಕರು ರೆಸಾರ್ಟ್‌ಗೆ ಹೋಗಿದ್ದಾರೆಂದು ಹೇಳಲಾಗುತ್ತಿದೆ. ಹೀಗೆ ರೆಸಾರ್ಟ್‌ ಸೇರಿಸಿಕೊಂಡ ಸಚಿವರು-ಶಾಸಕರು ಸರ್ಕಾರವನ್ನು ಪತನ ಮಾಡದೆ ವಾಪಸ್‌ ಬಂದಿರುವ ಉದಾಹರಣೆ ತುಂಬ ಕಡಿಮೆ. ಹೀಗಾಗಿ ಮಹಾರಾಷ್ಟ್ರ ರಾಜಕೀಯದಲ್ಲಿ ಬಿಕ್ಕಟ್ಟು ಪ್ರಾರಂಭವಾಗಿದ್ದು ಮೇಲ್ನೋಟಕ್ಕೆ ಗೋಚರಿಸುತ್ತಿದೆ.

ವಿಧಾನ ಪರಿಷತ್‌ ರಿಸಲ್ಟ್ ಬೆನ್ನಿಗೇ ಕೋಲಾಹಲ

ಇದಕ್ಕೆ ಕಾರಣ ಆಗಿರುವುದು ವಿಧಾನ ಪರಿಷತ್‌ ಚುನಾವಣೆಯಲ್ಲಿ ಬಿಜೆಪಿ ಪಡೆದ ಗೆಲುವು. ಸೋಮವಾರ ಬಂದ ಫಲಿತಾಂಶದಂತೆ ಮಹಾರಾಷ್ಟ್ರ ವಿಧಾನ ಪರಿಷತ್‌ ಚುನಾವಣೆಯಲ್ಲಿ ಬಿಜೆಪಿಯ ನಾಲ್ವರು ಅಭ್ಯರ್ಥಿಗಳು ಗೆದ್ದಿದ್ದರೆ, ಶಿವಸೇನೆ ಮತ್ತು ಎನ್‌ಸಿಪಿಯ ತಲಾ ಇಬ್ಬರು ಗೆದ್ದಿದ್ದರು. ಮಹಾರಾಷ್ಟ್ರ ವಿಧಾನಸಭೆಯಲ್ಲಿ ಒಟ್ಟಾರೆ ಶಾಸಕರ ಬಲ 288. ಆದರೆ ಮಾನ್ಯತೆ ಪಡೆದ ಮತಗಳು 283 ಮಾತ್ರ. ಯಾಕೆಂದರೆ 288 ಸೀಟ್‌ಗಳಲ್ಲಿ ಒಂದು ಖಾಲಿಯಿದೆ. ಜೈಲು ಶಿಕ್ಷೆಗೊಳಗಾದ ಇಬ್ಬರು ಸದಸ್ಯರಿಗೆ ವಿಧಾನಪರಿಷತ್‌ ಚುನಾವಣೆಯಲ್ಲಿ ಮತದಾನದಲ್ಲಿ ಭಾಗವಹಿಸದಂತೆ ನಿರ್ಬಂಧಿಸಲಾಗಿತ್ತು. ವಿಧಾನಸಭೆಯಲ್ಲಿ ಬಿಜೆಪಿಗೆ ಇದ್ದಿದ್ದು 106 ಸದಸ್ಯಬಲವಾದರೂ ಬಿಜೆಪಿ ಅಭ್ಯರ್ಥಿಗಳಿಗೆ ಸುಮಾರು 20 ಮತಗಳು ಹೆಚ್ಚುವರಿಯಾಗಿ ಬಿದ್ದಿವೆ. ಈ 20 ಮತಗಳೂ ಶಿವಸೇನೆ-ಕಾಂಗ್ರೆಸ್‌ ಮತ್ತಿತರ ಪಕ್ಷಗಳ ಶಾಸಕರ ಅಡ್ಡ ಮತದಾನದಿಂದ ಬಂದಿದೆ.

ಹೀಗೆ ಅಡ್ಡ ಮತದಾನ ಮಾಡಿದ ಶಾಸಕರನ್ನು ಗುರುತಿಸಿ ಅವರ ಮೇಲೆ ಶಿವಸೇನೆ ಅಥವಾ ಎನ್‌ಸಿಪಿ ಕ್ರಮ ಕೈಗೊಳ್ಳಬಹುದು. ಆದರೆ ಅದಕ್ಕೂ ಮೊದಲೇ ರಾಜಕೀಯ ನಿರ್ಧಾರವನ್ನು ತೆಗೆದುಕೊಳ್ಳಲು ಬಿಜೆಪಿ ಮುಂದಾದಂತಿದೆ. ಹೀಗಾಗಿಯೇ ಏಕನಾಥ ಶಿಂಧೆ ಅವರು ಅಡ್ಡ ಮತದಾನ ಮಾಡಿದ ಶಾಸಕರನ್ನು ಕರೆದುಕೊಂಡು ರೆಸಾರ್ಟ್‌ಗೆ ತೆರಳಿದ್ದಾರೆ ಎನ್ನಲಾಗುತ್ತಿದೆ. ಈ ವಿಧಾನಪರಿಷತ್‌ ಚುನಾವಣೆಯಲ್ಲಿ ಬಿಜೆಪಿಗೆ ಮತ ಹಾಕಿದ ಎಲ್ಲ 20 ಶಾಸಕರೂ ಬಿಜೆಪಿ ಸೇರಿದರೆ ವಿಧಾನಸಭೆಯಲ್ಲಿ ಬಿಜೆಪಿ ಸದಸ್ಯ ಬಲ 126ಕ್ಕೆ ಏರುತ್ತದೆ. ಇದರಿಂದ ಮಹಾ ವಿಕಾಸ ಅಘಾಡಿ ಸರ್ಕಾರಕ್ಕೆ ಅಪಾಯವಂತೂ ಕಟ್ಟಿಟ್ಟ ಬುತ್ತಿ. ಯಾಕೆಂದರೆ ಬಹುಮತ ಸಂಗ್ರಹಿಸಲು ಇನ್ನಿತರ ಚಿಕ್ಕಪಕ್ಷಗಳು ಹಾಗೂ ಸ್ವತಂತ್ರ ಶಾಸಕರನ್ನು ಸೆಳೆದುಕೊಂಡು ಬಿಜೆಪಿ ಸರಕಾರ ರಚಿಸಬಹುದು.

ಮಹಾರಾಷ್ಟ್ರ ಸರಕಾರ ರಚನೆಯ ಹೈಡ್ರಾಮಾ!

ಮಹಾರಾಷ್ಟ್ರ ಸರಕಾರ ಹಲವು ಪಕ್ಷಗಳ ಮೈತ್ರಿಯ ಮೇಲೆ ನಿಂತಿದೆ. ಹೀಗಾಗಿ ಅದನ್ನು ಉರುಳಿಸಲು ಪ್ರಯತ್ನಗಳು ನಡೆಯುತ್ತಲೇ ಇವೆ. 2019ರಲ್ಲಿ ಮಹಾರಾಷ್ಟ್ರ ಸರ್ಕಾರ ರಚನೆಯಾಗುವಾಗಲೂ ಹೈಡ್ರಾಮಾ ನಡೆದಿತ್ತು. ರಾಜ್ಯದಲ್ಲಿ ಒಟ್ಟು 288 ವಿಧಾನಸಭಾ ಕ್ಷೇತ್ರಗಳು ಇದ್ದು, 2019ರಲ್ಲಿ ನಡೆದ ಚುನಾವಣೆಯಲ್ಲಿ ಬಿಜೆಪಿ 106 ಕ್ಷೇತ್ರ, ಶಿವಸೇನೆ 55, ಕಾಂಗ್ರೆಸ್‌ 44 ಮತ್ತು ಎನ್‌ಸಿಪಿ 52 ಸೀಟ್‌ ಗೆದ್ದುಕೊಂಡಿತ್ತು. ಮುಖ್ಯಮಂತ್ರಿ ಹುದ್ದೆಯನ್ನು 50:50 ಹಂಚಿಕೆ ಮಾಡಿಕೊಳ್ಳುವ ವಿಚಾರಕ್ಕೆ ಬಿಜೆಪಿ ಮತ್ತು ಅದರ ಮೈತ್ರಿಪಕ್ಷವಾಗಿದ್ದ ಶಿವಸೇನೆ ನಡುವೆ ಜಗಳ ಶುರುವಾಗಿತ್ತು. ಹೀಗಾಗಿ ಚುನಾವಣೆ ನಡೆದು ಎರಡು ವಾರಗಳೇ ಕಳೆದುಹೋದರೂ ಸರ್ಕಾರ ರಚನೆಯಾಗಲಿಲ್ಲ. ರಾಷ್ಟ್ರಪತಿ ಆಳ್ವಿಕೆಯೂ ಜಾರಿಯಾಗಿತ್ತು.

ಅಚ್ಚರಿ ಎಂಬಂತೆ ಬಿಜೆಪಿಯ ದೇವೇಂದ್ರ ಫಡ್ನವೀಸ್‌ ಅವರು ಎನ್‌ಸಿಪಿ ನಾಯಕ ಅಜಿತ್‌ ಪವಾರ್‌ ಜತೆ ಸೇರಿಬಿಟ್ಟಿದ್ದರು. 2019ರ ನವೆಂಬರ್‌ 23ರಂದು ಫಡ್ನವೀಸ್‌ ಮುಖ್ಯಮಂತ್ರಿಯಾಗಿ, ಅಜಿತ್‌ ಪವಾರ್‌ ಉಪಮುಖ್ಯಮಂತ್ರಿಯಾಗಿ ಪ್ರಮಾಣ ವಚನ ಸ್ವೀಕಾರ ಮಾಡಿದರು. ಆದರೆ ಇದು ತುಂಬ ದಿನ ಉಳಿಯಲಿಲ್ಲ. ಪ್ರತಿಪಕ್ಷಗಳು ಸುಪ್ರೀಂಕೋರ್ಟ್‌ ಮೆಟ್ಟಿಲೇರಿದವು. ಇಷ್ಟೆಲ್ಲ ನಾಟಕೀಯ ಬೆಳವಣಿಗೆಯಾದ ಬಳಿಕ ಅಜಿತ್‌ ಪವಾರ್‌ ತಮ್ಮ ಹುದ್ದೆಗೆ ರಾಜೀನಾಮೆ ಕೊಟ್ಟು ತಮ್ಮ ಪಕ್ಷ ಎನ್‌ಸಿಪಿ ಗೂಡು ಸೇರಿಕೊಂಡರು. ನಂತರ ಶಿವಸೇನೆ-ಕಾಂಗ್ರೆಸ್‌ ಮತ್ತು ಎನ್‌ಸಿಪಿ ಮೈತ್ರಿಯಲ್ಲಿ ಮಹಾ ವಿಕಾಸ್‌ ಅಘಾಡಿ ಸರ್ಕಾರ ರಚನೆಯಾಯಿತು.

ಸೈದ್ಧಾಂತಿಕ ಭಿನ್ನಮತಗಳು ಇದ್ದರೂ ಮಹಾರಾಷ್ಟ್ರದಲ್ಲಿ ಸರ್ಕಾರ ರಚನೆ ಮಾಡಬೇಕು ಎಂಬ ಒಂದೇ ಕಾರಣಕ್ಕೆ ಒಂದಾದ ಶಿವಸೇನೆ-ಕಾಂಗ್ರೆಸ್‌-ಎನ್‌ಸಿಪಿ ಪ್ರಾರಂಭದಿಂದಲೂ ಹಲವು ಭಿನ್ನಾಭಿಪ್ರಾಯಗಳನ್ನು ಎದುರಿಸುತ್ತಲೇ ಬಂದಿವೆ. ಅದರ ಲಾಭವವನ್ನು ಪಡೆಯಲು ಬಿಜೆಪಿ ಯತ್ನಿಸಿದೆ. ಕೆಲವೇ ದಿನಗಳ ಹಿಂದೆ ನಡೆದ ರಾಜ್ಯಸಭೆ ಚುನಾವಣೆಯಲ್ಲಿ ಮೂರು ಸೀಟ್‌ಗಳನ್ನು ಬಿಜೆಪಿ ಗೆದ್ದುಕೊಂಡಾಗ, ಮಹಾ ವಿಕಾಸ್‌ ಅಘಾಡಿ ಮೈತ್ರಿಯಲ್ಲಿ ಬಂಡಾಯ ಆರಂಭವಾಗುವ ಸಣ್ಣ ಮುನ್ಸೂಚನೆ ಸಿಕ್ಕಿತ್ತು. ಪಕ್ಷದ ವಕ್ತಾರ ಕೇಶವ್‌ ಉಪಾಧ್ಯಾಯ, ʼಎಂವಿಎ ಸರ್ಕಾರ ಶೀಘ್ರವೇ ಪತನವಾಗಲಿದೆ ಮತ್ತು ಬಿಜೆಪಿ ಅಧಿಕಾರಕ್ಕೆ ಏರಲಿದೆʼ ಎಂದು ಹೇಳಿಕೆ ನೀಡಿದ್ದರು. ಈ ಹಿನ್ನೆಲೆಯಲ್ಲೇ ಪ್ರಸ್ತುತ ಬೆಳವಣಿಗೆಯನ್ನು ನೋಡಬೇಕಿದೆ.

ಹಾಗಿದ್ದರೆ ಈ ಆಪರೇಷನ್‌ಗಳು ಯಾಕೆ ನಡೆಯುತ್ತವೆ?

ಯಾವುದೇ ಪಕ್ಷ ಸರಕಾರ ರಚಿಸಲು ಕೆಲವೇ ಶಾಸಕರ ಮತಗಳು ಬೇಕಿವೆ ಎಂದಾದಾಗ, ಅವು ಬೇರೆ ಪಕ್ಷಗಳಿಂದ ಶಾಸಕರನ್ನು ಸೆಳೆದುಕೊಳ್ಳಲು ಯತ್ನಿಸುತ್ತವೆ. ಆದರೆ ಯಾವುದೇ ಶಾಸಕ ತನ್ನ ಪಕ್ಷದಲ್ಲಿದ್ದು ತನ್ನ ಪಕ್ಷದ ವಿಪ್‌ ಉಲ್ಲಂಘಿಸಿ ಬೇರೆ ಪಕ್ಷದ ನಾಯಕನಿಗೆ ವಿಶ್ವಾಸಮತ ಹಾಕಿದರೆ ಆತನನ್ನು ಶಾಸಕ ಸ್ಥಾನದಿಂದ ವಜಾ ಮಾಡಬಹುದು. ಇದು ಪಕ್ಷಾಂತರ ನಿಷೇಧಕ್ಕಾಗಿ ಬಳಸಲಾಗುವ ಸಂವಿಧಾನದ ಶೆಡ್ಯೂಲ್‌ 10ರಲ್ಲಿರುವ ನಿಯಮ. ಹೀಗಾಗಿ ಯಾವುದೇ ಶಾಸಕರು ಬೇರೊಂದು ಪಕ್ಷದ ನಾಯಕನಿಗೆ ವಿಧಾನಸಭೆಯಲ್ಲಿ ಮತ ಹಾಕುವುದಿದ್ದರೆ ವಿಶ್ವಾಸಮತ ನಡೆಯುವ ಸಂದರ್ಭದಲ್ಲಿ ತಲೆ ತಪ್ಪಿಸಿಕೊಳ್ಳುತ್ತಾರೆ. ಅವರನ್ನು ಸೆಳೆದುಕೊಳ್ಳುವ ಪಕ್ಷಗಳು ಈ ಶಾಸಕರನ್ನು ಗುಪ್ತವಾಗಿ ಬಹುದೂರದ ಐಷಾರಾಮಿ ರೆಸಾರ್ಟ್‌ಗಳಲ್ಲಿ ಭದ್ರಕಾವಲಿನಲ್ಲಿ ಇಟ್ಟು, ವಿಶ್ವಾಸಮತದ ಬಳಿಕ ರಾಜೀನಾಮೆ ಕೊಡಿಸುತ್ತಾರೆ.

ಇವರು ವಿಶ್ವಾಸಮತದಲ್ಲಿ ಭಾಗವಹಿಸುವುದಿಲ್ಲವಾದ್ದರಿಂಧ ಬಹುಮತದ ಅಗತ್ಯಕ್ಕೆ ಮತಗಳು ಕಡಿಮೆ ಸಾಕಾಗುತ್ತದೆ. ಪಕ್ಷದ ವಿಪ್‌ ವಿರುದ್ಧವಾಗಿ ಮತ ಚಲಾಯಿಸುವುದಿಲ್ಲವಾದ್ದರಿಂದ ಸದನದಿಂದ ವಜಾ ಎಂಬ ಪ್ರಶ್ನೆಯೂ ಬರುವುದಿಲ್ಲ. ಇದು ಆಧುನಿಕ ಭಾರತದ ದೊಡ್ಡ ರಾಜಕೀಯ ಪಕ್ಷಗಳು ಕಂಡುಕೊಂಡ ಆಪರೇಶನ್‌ ತಂತ್ರ. ಈ ತಂತ್ರವನ್ನು ಅತ್ಯಂತ ಯಶಸ್ವಿಯಾಗಿ “ಆಪರೇಶನ್‌ ಕಮಲʼ ಎಂಬ ಹೆಸರಿನಲ್ಲಿ ಮತ್ತೆ ಮತ್ತೆ ನಡೆಸಿದ ಪಕ್ಷ ಬಿಜೆಪಿ. ಇತರ ಪಕ್ಷಗಳೂ ನಡೆಸಿವೆ. ಆದರೆ ಬಿಜೆಪಿಯಷ್ಟು ಯಶಸ್ವಿಯಾಗಿಲ್ಲ.

ಹಾಗಿದ್ದರೆ ಈ ಹಿಂದೆ ನಡೆದ ರಾಜಕೀಯ ಆಪರೇಶನ್‌ಗಳು ಯಾವುವು? ಅವು ಯಾವಾಗ ಹೇಗೆ ನಡೆದವು? ನೋಡೋಣ ಬನ್ನಿ.

ಕರ್ನಾಟಕದಲ್ಲಿ ನಡೆದ ಮಹಾ ಆಪರೇಷನ್‌!

ಕರ್ನಾಟಕ ಈ ಹಿಂದೆ ಎರಡೆರಡು ಬಾರಿ ಇಂಥ ರಾಜಕೀಯ ಆಪರೇಷನ್‌ಗಳನ್ನು ಕಂಡಿದೆ. ಮೊದಲ ಬಾರಿಗೆ 2008ರಲ್ಲಿ. ಎರಡನೇ ಬಾರಿಗೆ 2019ರಲ್ಲಿ. ಎರಡು ಬಾರಿಯೂ ಇವುಗಳನ್ನು ನಡೆಸಿದ್ದು ಬಿಜೆಪಿ.

2008ರಲ್ಲಿ ಕರ್ನಾಟಕದಲ್ಲಿ ನಡೆದ ವಿಧಾನಸಭೆ ಚುನಾವಣೆಯಲ್ಲಿ ಬಿಜೆಪಿ 110 ಸ್ಥಾನಗಳನ್ನು ಪಡೆಯಿತು. ಆದರೆ ಸರಕಾರ ರಚಿಸಲು ಇನ್ನೂ ಮೂರು ಶಾಸಕರು ಬೇಕಾಗಿದ್ದರು. ವಿಧಾನಸಭೆಯಲ್ಲಿ ಬಹುಮತ ಸಾಧಿಸಲು ಬಿಜೆಪಿ ನಾಯಕ ಬಿ ಎಸ್‌ ಯಡಿಯೂರಪ್ಪ ಹಾಗೂ ಜನಾರ್ದನ ರೆಡ್ಡಿ ಪ್ಲಾನ್‌ ಮಾಡಿದರು. ಜೆಡಿಎಸ್‌ನಿಂದ ನಾಲ್ವರು ಹಾಗೂ ಕಾಂಗ್ರೆಸ್‌ನಿಂದ ಮೂವರು ಶಾಸಕರನ್ನು ತಮ್ಮ ಕಡೆಗೆ ಸೆಳೆದುಕೊಂಡರು. ನಂತರ ಇವರ ಸ್ಥಾನಗಳಿಗೆ ಬೈ ಎಲೆಕ್ಷನ್‌ ಘೋಷಿಸಲಾಯಿತು. ಇವರಲ್ಲಿ ಐವರನ್ನು ಬಿಜೆಪಿ ಗೆಲ್ಲಿಸಿಕೊಂಡು ಸರಕಾರ ಭದ್ರಪಡಿಸಿಕೊಂಡಿತು.

ಕರ್ನಾಟಕದ ಆಪರೇಶನ್‌ ಕಮಲದ ಎರಡನೇ ಆವೃತ್ತಿ ನಡೆದದ್ದು 2019ರಲ್ಲಿ. 2018ರ ಚುನಾವಣೆಯಲ್ಲಿ ಬಿಜೆಪಿ 104 ಸ್ಥಾನ ಗಳಿಸಿತ್ತು. ಆದರೆ ಜೆಡಿಎಸ್‌ ಹಾಗೂ ಕಾಂಗ್ರೆಸ್‌ ಸೇರಿಕೊಂಡು 120 ಸ್ಥಾನಬಲದ ಮೂಲಕ ಸರಕಾರ ರಚಿಸಿದವು. ಈ ಸರಕಾರ ರಚನೆಯಾದಂದಿನಿಂದಲೂ ಇದನ್ನು ಉರುಳಿಸಲು ಬಿಜೆಪಿ ಯತ್ನಿಸುತ್ತಲೇ ಇತ್ತು. 2019ರ ಜೂನ್‌ ಹಾಗೂ ಜುಲೈ ತಿಂಗಳಲ್ಲಿ ಕರ್ನಾಟಕ ರಾಜಕೀಯ ಮೊಗಸಾಲೆಯಲ್ಲಿ ನಾಟಕೀಯ ಬೆಳವಣಿಗೆಗಳು ನಡೆದವು. 16 ಜೆಡಿಎಸ್‌ ಹಾಗೂ ಕಾಂಗ್ರೆಸ್‌ ಶಾಸಕರು ಬಿಜೆಪಿ ಶಾಸಕರಾದ ರಮೇಶ ಜಾರಕಿಹೊಳಿ ಮತ್ತು ಆನಂದ್‌ ಸಿಂಗ್‌ ನೇತೃತ್ವದಲ್ಲಿ ಬಸ್‌ ಹತ್ತಿ ಮುಂಬಯಿಯ ಅಜ್ಞಾತ ಸ್ಥಳಕ್ಕೆ ಹೋದರು. ರಾಜ್ಯ ವಿಧಾನಸಭೆಯಲ್ಲಿ ಕೋಲಾಹಲ ಆರಂಭವಾಯಿತು. ಪ್ರತಿಪಕ್ಷ ಬಿಜೆಪಿ ವಿಶ್ವಾಸಮತಕ್ಕೆ ಆಗ್ರಹಿಸಿತು. ಈ ನಡುವೆ ಪ್ರಕರಣ ಸುಪ್ರೀಂ ಕೋರ್ಟ್‌ವರೆಗೂ ಹೋಯಿತು. ಸ್ಪೀಕರ್‌ ರಮೇಶ್‌ಕುಮಾರ್‌ ಅವರು ಬಂಡಾಯ ಶಾಸಕರನ್ನು ಅನರ್ಹಗೊಳಿಸಿದರು. ಈ ಅನರ್ಹತೆಯನ್ನು ಕೋರ್ಟ್‌ ಎತ್ತಿಹಿಡಿಯಿತು. ಆದರೆ ಅವರು ಚುನಾವಣೆಗೆ ಸ್ಪರ್ಧಿಸದಂತೆ ನಿರ್ದೇಶಿಸಲಿಲ್ಲ. ಶಾಸಕಬಲವಿಲ್ಲದ ಕಾರಣ ಕುಮಾರಸ್ವಾಮಿ ಸರಕಾರ ವಿಶ್ವಾಸಮತ ಸಾಬೀತುಪಡಿಸಲು ಆಗದೆ ಉರುಳಿತು. ಈ ಬಂಡಾಯ ಶಾಸಕರು ರಾಜೀನಾಮೆ ನೀಡಿದರು. ಬಿ ಎಸ್.‌ ಯಡಿಯೂರಪ್ಪ ಅವರು ಜುಲೈ 26ರಂದು 105 ಸ್ಥಾನಬಲದಿಂದ ಮುಖ್ಯಮಂತ್ರಿಯಾಗಿ ಬಿಜೆಪಿ ಸರಕಾರ ರಚಿಸಿದರು.

ಹೀಗೆ ಎರಡೆರಡು ಬಾರಿ ಕರ್ನಾಟಕದಲ್ಲಿ ಆಪರೇಶನ್‌ ಕಮಲ ಯಶಸ್ವಿಯಾಗಿದೆ. ಇದನ್ನೇ ಬಿಜೆಪಿ ಇತರ ಕೆಲವು ರಾಜ್ಯಗಳಲ್ಲಿಯೂ ಪ್ರಯೋಗಿಸಿದೆ.

ಇದನ್ನೂ ಓದಿ: ಮಹಾರಾಷ್ಟ್ರ ವಿಧಾನಸಭೆ ವಿಸರ್ಜನೆ ಸುಳಿವು ನೀಡಿದ ಶಿವಸೇನೆ ಸಂಸದ ಸಂಜಯ್‌ ರಾವತ್‌ !

ಮಧ್ಯಪ್ರದೇಶದಲ್ಲೂ ನಡೆದಿತ್ತು ಆಪರೇಷನ್

ಮಧ್ಯಪ್ರದೇಶದಲ್ಲಿ 2018 ನವೆಂಬರ್‌ನಲ್ಲಿ ನಡೆದ ಚುನಾವಣೆಯಲ್ಲಿ ಕಾಂಗ್ರೆಸ್‌ 114 ಸ್ಥಾನ ಪಡೆದು ದೊಡ್ಡ ಪಕ್ಷವಾಗಿ ಹೊರಹೊಮ್ಮಿದ್ದರೂ ಸರಕಾರ ರಚಿಸಲು ಬೇಕಾದ ಬಹುಮತ ಇರಲಿಲ್ಲ. ಆಗ ಅದು ಎಸ್‌ಪಿ, ಬಿಎಸ್‌ಪಿ ಹಾಗೂ ಸ್ವತಂತ್ರ ಶಾಸಕರ ಸಹಕಾರ ಪಡೆದು ಸರಕಾರ ರಚಿಸಿತ್ತು. ಕಮಲ್‌ನಾಥ್‌ ಮುಖ್ಯಮಂತ್ರಿಯಾದರು. ಇದರಿಂದ ಪಕ್ಷದ ಯುವನಾಯಕ ಜ್ಯೋತಿರಾದಿತ್ಯ ಸಿಂಧಿಯಾ ಅಸಮಾಧಾನಗೊಂಡಿದ್ದರು. 2020ರ ಮಾರ್ಚ್‌ನಲ್ಲಿ ಈ ಅಸಮಾಧಾನ ಸ್ಫೋಟಗೊಂಡಿತು. ಸಿಂಧಿಯಾ ಪಕ್ಷಕ್ಕೆ ರಾಜೀನಾಮೆ ಘೋಷಿಸಿ ಬಿಜೆಪಿ ಸೇರಿಕೊಂಡರು.
ಇವರ ಹಿಂದೆಯೇ 22 ಕಾಂಗ್ರೆಸ್‌ ಶಾಸಕರು ಕೂಡ ರಾಜೀನಾಮೆ ಸಲ್ಲಿಸಿದರು. ಇದಕ್ಕೂ ಮುನ್ನ ಈ ಬಂಡಾಯ ಶಾಸಕರಿಗೆ ಕರ್ನಾಟಕದ ಐಷಾರಾಮಿ ರೆಸಾರ್ಟ್‌ನಲ್ಲಿ ರಾಜೋಪಚಾರ ಒದಗಿಸಲಾಯಿತು. ಇದರಿಂದಾಗಿ ಕಮಲ್‌ನಾಥ್‌ ಸರಕಾರ ವಿಶ್ವಾಸಮತ ಕಳೆದುಕೊಂಡಿತು. ಮಾರ್ಚ್‌ 20ರಂದು ಮುಖ್ಯಮಂತ್ರಿ ಕಮಲ್‌ನಾಥ್ ಅವರು ವಿಧಾನಸಭೆಯಲ್ಲಿ ಬಲಾಬಲ ಪರೀಕ್ಷೆಗೆ ಮುಂಚಿತವಾಗಿಯೇ ರಾಜೀನಾಮೆ ಘೋಷಿಸಿದರು. ನಂತರ ಶಿವರಾಜ್‌ ಸಿಂಗ್‌ ಚೌಹಾಣ್‌ ಮುಖ್ಯಮಂತ್ರಿಯಾಗಿ ಪ್ರಮಾಣ ಸ್ವೀಕರಿಸಿ ಬಿಜೆಪಿ ಸರಕಾರ ರಚಿಸಿತು.

ಗೋವಾದಲ್ಲಿ ದಿಢೀರ್‌ ಸರಕಾರ ರಚನೆ

ಗೋವಾದಲ್ಲಿ 2017ರಲ್ಲಿ ವಿಧಾನಸಭೆ ಚುನಾವಣೆಯಲ್ಲಿ ಕಾಂಗ್ರೆಸ್‌ ಅತ್ಯಧಿಕ ಅಂದರೆ 17 ಸೀಟುಗಳನ್ನು ಗಳಿಸಿತು. ಬಿಜೆಪಿ ಗಳಿಸಿದ್ದು ಕೇವಲ 13. ಆದರೆ ಸರಕಾರ ರಚಿಸಲು ಬೇಕಿದ್ದ ಮ್ಯಾಜಿಕ್‌ ಫಿಗರ್‌ 21. ಕಾಂಗ್ರೆಸ್‌ಗೆ ಬೆಂಬಲ ನೀಡುವುದಾಗಿ ಚುನಾವಣೆಗೆ ಮೊದಲು ಘೋಷಿಸಿಕೊಂಡಿದ್ದ ಗೋವಾ ಫಾರ್ವರ್ಡ್‌ ಬ್ಲಾಕ್‌ ಪಕ್ಷದ ಮೂವರು ಶಾಸಕರನ್ನು ಬಿಜೆಪಿ ತನ್ನ ಕಡೆಗೆ ಸೆಳೆದುಕೊಂಡಿತು. ಇದಲ್ಲದೇ ಮಹಾರಾಷ್ಟ್ರವಾದಿ ಗೋಮಾಂತಕ ಪಾರ್ಟಿ, ಸ್ವತಂತ್ರ ಶಾಸಕರ ಜತೆ ಸೇರಿ ಸರಕಾರ ರಚಿಸಿತು. ಇದು ಕೂಡ ಆಪರೇಶನ್‌ ಕಮಲ ಎಂದೇ ಹೇಳಬಹುದು.

ಇದನ್ನೂ ಓದಿ: ಮಹಾರಾಷ್ಟ್ರ ರಾಜಕೀಯದಲ್ಲಿ ಮುಂದೇನಾಗಬಹುದು? ಸದನದಲ್ಲಿ ಬಲಾಬಲ ಏನು?

ಅರುಣಾಚಲ ಪ್ರದೇಶದಲ್ಲಿ ಸಾಮೂಹಿಕ ಗುಳೆ

ಅರುಣಾಚಲ ಪ್ರದೇಶದಲ್ಲಿ 2016ರಲ್ಲಿ ರಾಜ್ಯದ ಪೀಪಲ್ಸ್‌ ಪಾರ್ಟಿ ಆಫ್‌ ಅರುಣಾಚಲದ 33 ಜನ ಶಾಸಕರು ಸಾಮೂಹಿಕವಾಗಿ ರಾಜೀನಾಮೆ ನೀಡಿ, ಬಿಜೆಪಿಗೆ ಹೋದರು. ಅಲ್ಲಿಯವರೆಗೆ 44 ಸದಸ್ಯಬಲ ಹೊಂದಿದ್ದ ಪೇಮಾ ಕುಂಡು ಸರಕಾರ ಅಲ್ಪಮತಕ್ಕೆ ಕುಸಿದು ಬಿತ್ತು. ನಂತರ ಬಿಜೆಪಿ ಸರಕಾರ ರಚಿಸಿತು.

ಹಾಗಿದ್ದರೆ ಎಲ್ಲ ಆಪರೇಷನ್‌ಗಳು ಯಶಸ್ವಿಯಾಗಿವೆಯೇ? ಹಾಗೇನೂ ಇಲ್ಲ. ವಿಫಲಗೊಂಡ ಆಪರೇಶನ್‌ಗಳೂ ನಡೆದಿವೆ. 2019ರಲ್ಲಿ ಮಹಾರಾಷ್ಟ್ರದಲ್ಲಿ ಬಿಜೆಪಿ ನಡೆಸಿದ ಪ್ರಯತ್ನ ವಿಫಲಗೊಂಡಿತ್ತು.

ರಾಜಸ್ಥಾನದಲ್ಲಿ ವಿಫಲ ಯತ್ನ

ರಾಜಸ್ಥಾನದಲ್ಲಿ ಅಶೋಕ್‌ ಗೆಹ್ಲೋಟ್‌ ಅವರ ನೇತೃತ್ವದ ಕಾಂಗ್ರೆಸ್‌ ಸರಕಾರವನ್ನು ಉರುಳಿಸಲು ಬಿಜೆಪಿ ನಡೆಸಿದ ಪ್ರಯತ್ನ ಯಶಸ್ವಿಯಾಗಲಿಲ್ಲ. ಇದಕ್ಕೆ ಬಿಜೆಪಿ ಬಳಸಿಕೊಂಡದ್ದು ಅಶೋಕ್‌ ಗೆಹ್ಲೋಟ್‌ ಹಾಗೂ ಯುವನಾಯಕ ಸಚಿನ್‌ ಪೈಲಟ್‌ ನಡುವೆ ಇದ್ದ ಅಸಮಾಧಾನವನ್ನು. ತನಗೆ ಮುಖ್ಯಮಂತ್ರಿ ಸ್ಥಾನ ತಪ್ಪಿದ ಅಸಮಾಧಾನದಿಂದ ಸಚಿನ್‌ ಪೈಲಟ್‌ ಪಕ್ಷದಿಂದ ದೂರ ನಿಂತರು. ಇವರ ಜತೆಗೆ 19 ಕಾಂಗ್ರೆಸ್‌ ಶಾಸಕರು ಸಹ ಹೊರಹೋಗಲು ಮುಂದಾದರು. ಆದರೆ ಅಶೋಕ್‌ ಗೆಹ್ಲೋಟ್‌ ಮತ್ತು ಕಾಂಗ್ರೆಸ್‌ನ ಕೆಲವು ಪ್ರಬಲ ನಾಯಕರು ಸೇರಿಕೊಂಡು ಕಾಂಗ್ರೆಸ್‌ ಶಾಸಕರಿಗೆ ಇನ್ನಷ್ಟು ಪ್ರಭಾವಿ ಸ್ಥಾನಗಳ ಆಮಿಷ ಒಡ್ಡಿ, ಸರಕಾರವನ್ನು ಉಳಿಸಿಕೊಳ್ಳಲು ಶಕ್ತರಾದರು. ಇದು ಆಪರೇಶನ್‌ ಕಮಲಕ್ಕೇ ನಡೆದ ತಿರುಮಂತ್ರ ಎಂದು ದಾಖಲಾಯಿತು.

ಉತ್ತರಾಖಂಡದ ಕೋಲಾಹಲ…

ಉತ್ತರಾಖಂಡದಲ್ಲಿಯೂ ಕಾಂಗ್ರೆಸ್‌ ಮೇಲೆ ಆಪರೇಷನ್‌ ನಡೆಸಲು ಕಾಂಗ್ರೆಸ್‌ ಪ್ರಯತ್ನಿಸಿತ್ತು. ಹರೀಶ್‌ ರಾವತ್‌ ಅವರ ನೇತೃತ್ವದ ಕಾಂಗ್ರೆಸ್‌ ಸರಕಾರದ ಅನೇಕ ಶಾಸಕರು ಬಂಡಾಯ ಏಳುವಂತೆ ಮಾಡುವಲ್ಲಿ 2016ರಲ್ಲಿ ಬಿಜೆಪಿ ಯಶಸ್ವಿಯಾಯಿತು. ಸರಕಾರವನ್ನು ಅಮಾನತಿನಲ್ಲಿ ಇಟ್ಟು ರಾಷ್ಟ್ರಪತಿ ಆಡಳಿತ ಬಂತು. ಆದರೆ ಇದರ ವಿರುದ್ಧ ರಾವತ್‌ ಕೋರ್ಟಿಗೆ ಹೋದರು. ಅನಗತ್ಯ ಅವಸರ ಮಾಡಿದ್ದಕ್ಕಾಗಿ ಕೇಂದ್ರವನ್ನು ಸುಪ್ರೀಂ ಕೋರ್ಟ್‌ ತರಾಟೆಗೆ ತೆಗೆದುಕೊಂಡಿತು. ರಾವತ್‌ ಸರಕಾರವನ್ನು ಬೀಳಿಸಲು ಸಾಧ್ಯವಾಗಲಿಲ್ಲ. ಹೀಗೆ ಆಪರೇಷನ್‌ ಇಲ್ಲಿ ವಿಫಲವಾಯಿತು.

ಇದನ್ನೂ ಓದಿ: ಮಹಾರಾಷ್ಟ್ರದಲ್ಲಿ ರಾಜಕೀಯ ಬಿರುಗಾಳಿಗೆ ಕಾರಣವಾಗಿರುವ ಏಕನಾಥ್‌ ಶಿಂಧೆ ಯಾರು?

ಆದರೆ ಈ ಬಾರಿ ಮಹಾರಾಷ್ಟ್ರದಲ್ಲಿ ಏನಾಗಲಿದೆ?

ಸರಕಾರ ರಚಿಸುವ ಸಣ್ಣ ಅವಕಾಶ ಇದ್ದರೂ ಬಿಜೆಪಿ ಬಿಟ್ಟುಕೊಡುವುದಿಲ್ಲ ಎಂಬುದು ಎಲ್ಲ ಕಡೆಯೂ ಇದುವರೆಗೆ ಸಾಬೀತಾಗುತ್ತಲೇ ಬಂದಿದೆ. ಹಾಗಾದರೆ ಮಹಾರಾಷ್ಟ್ರದಲ್ಲೂ ಮತ್ತೊಂದು ಸುತ್ತಿನ ಆಪರೇಶನ್‌ ಕಮಲ ನಡೆಯುತ್ತಿದೆಯಾ? ರಾಜಕೀಯ ಅಧಿಕಾರ ಪಡೆಯುವುದಕ್ಕಾಗಿ ನಡೆಯುವ ಈ ಅನೈತಿಕ ಆಪರೇಶನ್‌ಗಳಿಗೆ ಕೊನೆ ಇದೆಯೇ? ಅಥವಾ ಇದೇ ಇಂದಿನ ರಾಜಕೀಯದ ಮಾದರಿ ಎಂದು ಭಾವಿಸಬೇಕೇ? ಮಹಾರಾಷ್ಟ್ರದಲ್ಲಿ ಏನಾಗಲಿದೆ ಎಂಬ ಕುತೂಹಲವಿದೆ.

Exit mobile version