Site icon Vistara News

ವಿಸ್ತಾರ Explainer | ಬಿಜೆಪಿ ಜತೆಗೆ ನಿತೀಶ್‌ ಕುಮಾರ್‌ ಮುನಿಸಿಗೆ ಕಾರಣಗಳೇನು? ಮುಂದೇನು ಗೇಮ್‌ ಪ್ಲ್ಯಾನ್‌?

nitish

ಎನ್‌ಡಿಎ ಹಾಗೂ ಪ್ರಧಾನ ಮಂತ್ರಿ ನರೇಂದ್ರ ಮೋದಿ ಅವರಿಂದ ಹಲವು ತಿಂಗಳುಗಳಿಂದ ಸತತವಾಗಿ ಅಂತರ ಕಾಪಾಡಿಕೊಂಡು ಬಂದಿರುವ ಬಿಹಾರ ಸಿಎಂ ನಿತೀಶ್‌ ಕುಮಾರ್‌ ಅವರು ನಾಳೆ ಕರೆದಿರುವ ಪಕ್ಷದ ತುರ್ತು ಸಭೆ ಈಗ ಕುತೂಹಲಕ್ಕೆ ಕಾರಣವಾಗಿದೆ. ಮೋದಿಯವರ ಜತೆಗೆ ಮುಖಾಮುಖಿ ಆಗುವ ಎಲ್ಲ ಕಾರ್ಯಕ್ರಮಗಳನ್ನು ಅವರು ತಪ್ಪಿಸುತ್ತಿರುವುದು, ಬಿಜೆಪಿಗೆ ನಿಕಟವಾಗಿರುವ ಪಕ್ಷದ ಮುಖಂಡ ಆರ್‌ಸಿಪಿ ಸಿಂಗ್‌ ಅವರನ್ನು ಪಕ್ಷದಿಂದ ಹೊರಹಾಕಿರುವುದು, ಆರ್‌ಜೆಡಿಗೆ ಸಮೀಪವಾಗುತ್ತಿರುವುದು- ಅವರು ಎನ್‌ಡಿಎಯಿಂದ ದೂರ ಸರಿಯಲು ಮಾಡುತ್ತಿರುವ ಪ್ರಯತ್ನಗಳೆಂದು ಭಾವಿಸಲಾಗಿದೆ.

ಅದೆಲ್ಲ ಸರಿ, ಆದರೆ ಬಿಜೆಪಿಯಿಂದ ನಿತೀಶ್‌ ದೂರವಾಗಲು ಬಯಸುತ್ತಿರುವುದಕ್ಕೆ ಕಾರಣಗಳೇನು?

ದೂರ ಸರಿಯುತ್ತಿರುವುದೇಕೆ?

2020ರ ಬಿಹಾರ ವಿಧಾನಸಭೆ ಚುನಾವಣೆ ಫಲಿತಾಂಶ ಕುತೂಹಲಕಾರಿಯಾಗಿತ್ತು. ರಾಜ್ಯದಲ್ಲಿ ಮೊತ್ತ ಮೊದಲ ಬಾರಿಗೆ ಸಂಯುಕ್ತ ಜನತಾ ದಳ (ಜೆಡಿಯು) ಅನ್ನೂ ಮೀರಿಸಿದ ಸ್ಥಾನಗಳನ್ನು ಬಿಜೆಪಿ ಪಡೆದಿತ್ತು. ಇನ್ನಷ್ಟು ಸೀಟು ಗಳಿಸುವ ಜೆಡಿಯು ಕನಸಿಗೆ ಎಲ್‌ಜೆಪಿ ಅಡ್ಡಗಾಲು ಹಾಕಿತ್ತು. ಆರ್‌ಜೆಡಿ ಇವೆರಡಕ್ಕಿಂತಲೂ ಅಧಿಕ ಸ್ಥಾನಗಳನ್ನು ಪಡೆದಿದ್ದರೂ ಜೊತೆಗಾರರಿಲ್ಲದೆ ಸರ್ಕಾರ ರಚಿಸಲು ಆಗಿರಲಿಲ್ಲ. ಜೆಡಿಯು (43) ಹಾಗೂ ಬಿಜೆಪಿ (74) ಜೊತೆ ಸೇರಿ ಸರ್ಕಾರ ರಚಿಸಿದ್ದವು.

ಇದರೊಂದಿಗೆ ದೊಡ್ಡ ಧ್ವನಿಯನ್ನು ರಾಜ್ಯ ರಾಜಕೀಯದಲ್ಲಿ ಜೆಡಿಯು ಕಳೆದುಕೊಂಡಿದ್ದರೂ, ಹಿಡಿತ ಬಿಡಲು ನಿತೀಶ್‌ ಕುಮಾರ್‌ ಸಿದ್ಧವಿರಲಿಲ್ಲ. ಸಿಎಂ ಪದವಿಯನ್ನು ಅವರು ಬಿಟ್ಟುಕೊಡಬೇಕಾದೀತು ಎಂದು ಭಾವಿಸಲಾಗಿತ್ತು. ಆದರೆ ಅವರಿಗೆ ಇದ್ದ ವರ್ಚಸ್ಸಿನ ಪರಿಣಾಮ, ಸಿಎಂ ಆಗಿ ನಿತೀಶ್ ಅವರೇ ಮುಂದುವರಿದರು. ಇದರ ಜತೆಗೆ ಬಿಜೆಪಿಯು ನಿತೀಶ್‌ಗೆ ಸಿಎಂ ಸ್ಥಾನವನ್ನು ಮರುಮಾತನಾಡದೆ ಬಿಟ್ಟು ಕೊಡಲು ಮತ್ತೊಂದು ಕಾರಣವೂ ಇತ್ತು. ಅದೆಂದರೆ ಮಹಾರಾಷ್ಟ್ರ ಚುನಾವಣೆ ಬಳಿಕ ಆದ ಮುಖಭಂಗ. ಮಿತ್ರಪಕ್ಷ ಶಿವಸೇನೆಯನ್ನು ತೊರೆದು ಎನ್‌ಸಿಪಿ ಜತೆ ಬಿಜೆಪಿ ಸರ್ಕಾರ ರಚಿಸಿತ್ತು. ಆದರೆ ಕೆಲವೇ ಗಂಟೆಗಳಲ್ಲಿ ಎನ್‌ಸಿಪಿ ಕೈಕೊಟ್ಟು ಶಿವಸೇನೆ ಜತೆ ಸೇರಿಕೊಂಡಿತು. ಇಂಥ ಸನ್ನಿವೇಶದಲ್ಲಿ ಬಿಹಾರದಲ್ಲೂ ಮುಖಭಂಗ ಆಗದಂತೆ ಬಿಜೆಪಿ ಎಚ್ಚರ ವಹಿಸಬೇಕಾಯಿತು. ನಿತೀಶ್‌ಗೆ ಸಿಎಂ ಸ್ಥಾನ ಕೊಡಲಾಗದು ಎಂದರೆ, ಜೆಡಿಯು-ಆರ್‌ಜೆಡಿ-ಕಾಂಗ್ರೆಸ್‌ ಮೈತ್ರಿ ಸರಕಾರ ಅಸ್ತಿತ್ವಕ್ಕೆ ಬರುವ ಸಾಧ್ಯತೆ ಇತ್ತು. ಹಾಗಾಗಿ ನಿತೀಶ್‌ ಕುಮಾರ್‌ ಸಿಎಂ ಆಗಿ ಮುಂದುವರಿದರು. ಆದರೆ ತನ್ನ ಇಬ್ಬರು ಹಿರಿಯ ಶಾಸಕರನ್ನು ಉಪ ಮುಖ್ಯಮಂತ್ರಿಗಳನ್ನಾಗಿ ಕೂರಿಸಲು ಬಿಜೆಪಿ ಮರೆಯಲಿಲ್ಲ. ಅಧಿಕಾರದಲ್ಲಿ ಹಿಡಿತ ಸಾಧಿಸುವ ಬಿಜೆಪಿಯ ಈ ಯತ್ನ ಸಹಜವಾಗಿಯೇ ಆರಂಭದಿಂದಲೇ ನಿತೀಶ್‌ಗೆ ಇರಸುಮುರಸು ಉಂಟುಮಾಡಿತು.

ಇದನ್ನೂ ಓದಿ: ಬಿಜೆಪಿಗೆ ಬೈಬೈ ಹೇಳುತ್ತಿರುವ ನಿತೀಶ್‌ ಕುಮಾರ್‌, ಆರ್‌ಜೆಡಿ ಜತೆ ಮೈತ್ರಿ ಸೂಚನೆ

ಅಗ್ನಿಪಥ ದೊಂಬಿ: ಆರಂಭದಿಂದ ಈಗಿನವರೆಗೂ ಅನೇಕ ವಿಚಾರಗಳಲ್ಲಿ ಜೆಡಿಯುವಿಗೂ ಬಿಜೆಪಿಗೂ ತಿಕ್ಕಾಟ ನಡೆಯುತ್ತಲೇ ಬಂದಿದೆ. ಲಿಕ್ಕರ್‌ ಬ್ಯಾನ್‌ ವಿಚಾರ, ಅಗ್ನಿಪಥ ಸ್ಕೀಮ್‌, ಕಾನೂನು ಸುವ್ಯವಸ್ಥೆ ವಿಚಾರ ಇತ್ಯಾದಿಗಳು ಉದಾಹರಣೆ. ಅಗ್ನಿಪಥ ಯೋಜನೆ ಜಾರಿಗೆ ತಂದ ಪರಿಣಾಮ ಬಿಹಾರದಲ್ಲಿ ಕೋಲಾಹಲವೇ ಏರ್ಪಟ್ಟಿತಲ್ಲದೆ, ಸಾರ್ವಜನಿಕ ದೊಂಬಿ ಎದ್ದು ರೈಲ್ವೆ ಇಲಾಖೆಗೆ ಗಂಭೀರ ಹಾನಿಯಾಯಿತು. ಈ ಗಲಭೆಯ ಬಗ್ಗೆ ನಿತೀಶ್‌ ತಮ್ಮ ಮೌನವನ್ನು ಮುರಿದಿರಲಿಲ್ಲ. ಕೇಂದ್ರ ಸರ್ಕಾರದ ಕುರಿತ ಅಸಮಾಧಾನದ ಪರಿಣಾಮವಾಗಿಯೇ ನಿತೀಶ್‌ ಸುಮ್ಮನಿದ್ದರು ಎಂದೂ ಹೇಳಲಾಯಿತು.

ಆರ್‌ಜೆಡಿಗೆ ನಿಕಟ: ಏಪ್ರಿಲ್‌ನಲ್ಲಿ ರಾಜ್ಯ ಬಿಜೆಪಿ ಅಧ್ಯಕ್ಷ ಸಂಜಯ್‌ ಜೈಸ್ವಾಲ್‌ ಅವರು, ಮುಂದಿನ (2025) ವಿಧಾನಸಭೆ ಚುನಾವಣೆಯಲ್ಲಿ ನಿತೀಶ್‌ ಕುಮಾರ್‌ ಅವರನ್ನು ಸಿಎಂ ಅಭ್ಯರ್ಥಿಯಾಗಿ ಬಿಂಬಿಸುವುದನ್ನು ನಾವು ಮರುಪರಿಶೀಲನೆ ಮಾಡುತ್ತೇವೆ ಎಂದು ಹೇಳಿ ಸರಪಟಾಕಿಗೆ ಬೆಂಕಿ ಹಚ್ಚಿದರು. ಆರ್‌ಜೆಡಿ ನಾಯಕಿ ರಾಬ್ರಿ ದೇವಿ ಅವರು ಏರ್ಪಡಿಸಿದ ಇಫ್ತಾರ್‌ ಕೂಟಕ್ಕೆ ನಿತೀಶ್‌ ಹಾಜರಾದುದು ಬೇರೊಂದು ಬಗೆಯ ಸಂಕೇತವನ್ನು ರವಾನಿಸಿತು. ಲಾಲು ಪ್ರಸಾದ್‌ ಯಾದವ್‌ ಪದೇ ಪದೆ ಇಡಿ ದಾಳಿಗೆ ಒಳಗಾದಾಗಲೂ ನಿತೀಶ್‌ ಪಡೆ ಅವರನ್ನು ಯಾವುದೇ ರೀತಿಯಲ್ಲಿ ಟೀಕಿಸಲಿಲ್ಲ.

ಸ್ಪೀಕರ್‌ ಕುರಿತು ಅಸಮಾಧಾನ: ಬಿಹಾರ ವಿಧಾನಸಭೆಯ ಸ್ಪೀಕರ್‌ ಆಗಿರುವವರು ಬಿಜೆಪಿಯ ವಿಜಯ್‌ ಕುಮಾರ್‌ ಸಿನ್ಹಾ. ಅನೇಕ ಸಲ ಸಿನ್ಹಾ ಅವರ ಮೇಲೆ ನಿತೀಶ್‌ ಸಿಟ್ಟಾದದ್ದುಂಟು. ಹಲವು ಬಾರಿ ಸರ್ಕಾರದ ಕಾರ್ಯವೈಖರಿಯನ್ನು ಸಿನ್ಹಾ ಟೀಕಿಸಿದ್ದಾರೆ. ಇದು ನಿತೀಶ್‌ ಅವರಿಗೆ ಮುಜುಗರ ತಂದಿದೆ. ಸಿನ್ಹಾ ಅವರನ್ನು ಸ್ಪೀಕರ್‌ ಹುದ್ದೆಯಿಂದ ತೆಗೆಯಬೇಕು ಎಂದು ಅವರು ಒತ್ತಡ ಹಾಕಿದ್ದಾರೆ.

ಆರ್‌ಸಿಪಿ ಸಿಂಗ್‌ ಫ್ಯಾಕ್ಟರ್:‌ 2019ರಲ್ಲಿ ಜೆಡಿಯುವಿಗೆ ಕೇವಲ ಒಂದೇ ಒಂದು ಕೇಂದ್ರ ಸಂಪುಟ ಸ್ಥಾನ ನೀಡಿದ್ದು ನಿತೀಶ್‌ ಅವರನ್ನು ಕೆರಳಿಸಿತ್ತು. ನಂತರ, ನಾವು ಕೇಂದ್ರ ಸರ್ಕಾರದ ಭಾಗವಾಗುವುದಿಲ್ಲ ಎಂದು ನಿತೀಶ್‌ ಪಾರ್ಟಿ ಹೇಳುತ್ತಲೇ ಬಂದಿದೆ. ಆದರೆ ಕಳೆದ ವರ್ಷ ಜೆಡಿಯು ಮುಖಂಡ ಆರ್‌ಸಿಪಿ ಸಿಂಗ್‌ ಅವರನ್ನು ಕೇಂದ್ರ ಸಚಿವರನ್ನಾಗಿ ಮಾಡಲಾಯಿತು. ಇದು ನಿತೀಶ್‌ಗೆ ಇಷ್ಟವಿರಲಿಲ್ಲ. ಅವರ ಒಪ್ಪಿಗೆಯನ್ನೂ ಪಡೆದಿರಲಿಲ್ಲ. ಹೀಗಾಗಿ ಆರ್‌ಸಿಪಿ ಸಿಂಗ್‌ ಅವರನ್ನು ಇನ್ನೊಂದು ಅವಧಿಗೆ ರಾಜ್ಯಸಭೆಗೆ ಜೆಡಿಯು ಮುಂದುವರಿಸಲಿಲ್ಲ. ಅವರು ತಮ್ಮ ಸಚಿವ ಸ್ಥಾನ ಕಳೆದುಕೊಳ್ಳಬೇಕಾಯಿತು. ಆರ್‌ಸಿಪಿ ಸಿಂಗ್‌ ಅವರನ್ನು ಇಟ್ಟುಕೊಂಡು ಜೆಡಿಯು ಪಕ್ಷವನ್ನು ಒಡೆಯಲು ಬಿಜೆಪಿ ಸಂಚು ನಡೆಸಿದೆ ಎಂಬ ಊಹೆ ನಿತೀಶ್‌ ಬಣದಲ್ಲಿ ಇದೆ.

ಸಂಪುಟ ವಿಸ್ತರಣೆ: ಇತ್ತೀಚೆಗೆ ರಾಜ್ಯ ಸಚಿವ ಸಂಪುಟವನ್ನು ನಿತೀಶ್‌ ಕುಮಾರ್‌ ವಿಸ್ತರಿಸಿದರು. ಈ ಸಂದರ್ಭದಲ್ಲಿ ತನ್ನ ಪಕ್ಷದ ಎಂಟು ಮಂದಿಯನ್ನು ಸೇರಿಸಿಕೊಂಡರು. ಒಂದು ಸ್ಥಾನವನ್ನು ಮಾತ್ರ ಬಿಜೆಪಿಗೆ ಮೀಸಲಾಗಿಟ್ಟರು. ಸರ್ಕಾರದಲ್ಲಿ ಹೆಚ್ಚಿನ ಜೆಡಿಯು ಸಚಿವರು ಇರಬೇಕು ಎಂಬುದು ನಿತೀಶ ಇಚ್ಛೆ. ಆದರೆ ಅಮಿತ್‌ ಶಾ ಅವರು ಬಿಜೆಪಿ ಹಿಡಿತ ಕಳೆದುಕೊಳ್ಳಲು ಸಿದ್ಧರಿಲ್ಲ.

ಇದನ್ನೂ ಓದಿ: NITI Aayog Meet | ಪ್ರಧಾನಿ ಮೋದಿ ಅಧ್ಯಕ್ಷತೆಯಲ್ಲಿ ಸಭೆ; ನಿತೀಶ್​ ಕುಮಾರ್​, ಬೊಮ್ಮಾಯಿ ಗೈರು

ಜಂಟಿ ಚುನಾವಣೆ: ಬಿಹಾರದಲ್ಲಿ ವಿಧಾನಸಭೆ ಹಾಗೂ ಲೋಕಸಭೆ ಚುನಾವಣೆಯನ್ನು ಜತೆಯಾಗಿ ನಡೆಸಬೇಕು ಎಂಬುದು ಬಿಜೆಪಿಯ ಇರಾದೆ. ಆದರೆ ಇದು ಜೆಡಿಯುಗೆ ಇಷ್ಟವಿಲ್ಲ. ಲೋಕಸಭೆಯ ರಾಷ್ಟ್ರೀಯ ಅಭಿಮತದ ಅಲೆಯಲ್ಲಿ ಜೆಡಿಯು ಕಳೆಗುಂದಬಹುದು ಎಂಬುದು ಅದರ ಆತಂಕ.

ರಾಜ್ಯದಲ್ಲಿ ಬಿಜೆಪಿ ಹಿಡಿತ: ಮುಖ್ಯವಾಗಿ, ಜೆಡಿಯು ರಾಜ್ಯದಲ್ಲಿ ನಿಧಾನವಾಗಿ ಶಿಥಿಲವಾಗುತ್ತಿರುವುದು ಹಾಗೂ ಬಿಜೆಪಿ ಭದ್ರ ನೆಲೆ ಪಡೆಯುತ್ತಿರುವುದು ನಿತೀಶ್‌ ಅವರಿಗೆ ಸ್ಪಷ್ಟವಾಗಿ ಗೋಚರವಾಗಿದೆ. ಇದನ್ನು ಹೀಗೇ ಬೆಳೆಯಗೊಟ್ಟರೆ ನಿಸ್ಸಂಶಯವಾಗಿ ರಾಜ್ಯದಲ್ಲಿ ಜೆಡಿಯು- ಆರ್‌ಜೆಡಿಗಳ ಸಮಾಧಿ ಕಟ್ಟಿ ಅದರ ಮೇಲೆ ಆಲದ ಮರದಂತೆ ಬೆಳೆದುಬಿಡಲಿದೆ ಎಂಬ ಆತಂಕ ಅವರಲ್ಲಿ ಮೂಡಿದೆ. ಇದೆಲ್ಲದರ ಪರಿಣಾಮವೇ ಸದ್ಯದ ಚಲನೆ.

ನಿತೀಶ್‌ ಮುಂದಿನ ದಾರಿ ಏನು?

ಈಗಿನಿಂದಲೇ ತಯಾರಿ ಮಾಡಿಕೊಂಡರೆ ಮುಂದಿನ ವಿಧಾನಸಭೆ ಚುನಾವಣೆ ವೇಳೆಗೆ ಬಿಜೆಪಿಯನ್ನು ಮಣಿಸಬಹುದು ಎಂಬುದು ನಿತೀಶ್‌ ಲೆಕ್ಕಾಚಾರ. ಹಾಗಾಗಿಯೇ ಅವರು ತುಸು ವೇಗವಾಗಿಯೇ, ಮಹಾಘಟಬಂಧನದತ್ತ ಜಾರುತ್ತಿದ್ದಾರೆ. ಸೋನಿಯಾ ಗಾಂಧಿ ಅವರನ್ನೂ ಭೇಟಿ ಮಾಡಲು ಸಮಯ ಕೇಳಿದ್ದಾರೆ. ಮುಂದಿನ ಲೋಕಸಭೆ ಚುನಾವಣೆಯ ವೇಳೆಗೆ ಅವರು ಮಹಾಘಟಬಂಧನ ಸೇರಿಕೊಳ್ಳಬಹುದು. ಆದರೆ ಸದ್ಯ ಅವರ ಗುರಿ ರಾಜ್ಯ ವಿಧಾನಸಭೆ. ಇಲ್ಲಿ ಆರ್‌ಜೆಡಿ ಜತೆ ಸೇರಿಕೊಂಡು ಸರ್ಕಾರ ರಚಿಸುವುದು ಅವರ ಉದ್ದೇಶ.

ಪ್ರಸ್ತುತ ರಾಜ್ಯ ವಿಧಾನಸಭೆಯಲ್ಲಿ ಪಕ್ಷಗಳ ಬಲಾಬಲ ಹೀಗಿದೆ: ರಾಷ್ಟ್ರೀಯ ಜನತಾ ದಳ (ಆರ್‌ಜೆಡಿ) 75, ಬಿಜೆಪಿ 74, ಜೆಡಿಯು 43, ಕಾಂಗ್ರೆಸ್‌ 19, ಸಿಪಿಐಎಂಎಲ್‌ 12, ಎಐಎಂಐಎಂ 5, ಇತರ- 15.

ಪ್ರಸ್ತುತ ಸರ್ಕಾರದಲ್ಲಿ ಬಿಜೆಪಿ 74, ಜೆಡಿಯು 43, ಹಿಂದುಸ್ತಾನ್‌ ಆವಾಜ್‌ ಮೋರ್ಚಾ 4, ಕೆಲವು ಪಕ್ಷೇತರರು ಸೇರಿ ಬಹುಮತಕ್ಕೆ ಅಗತ್ಯವಾದ 122 ಸಂಖ್ಯೆಯನ್ನು ಸಂಪಾದಿಸಿದೆ. ಸದ್ಯ ಬಿಜೆಪಿಯನ್ನು ದೂರವಿಟ್ಟು ಆರ್‌ಜೆಡಿ ಜತೆಗೆ ನಿತೀಶ್‌ ಹೋಗಲು ಸಾಧ್ಯವಿದೆ. ಇವೆರಡರ ಸಂಖ್ಯಾಬಲದ ಜತೆಗೆ ಕಮ್ಯುನಿಸ್ಟರು, ಕೆಲವು ಪಕ್ಷೇತರರು ಸೇರಿದರೆ ಸರ್ಕಾರ ರಚಿಸಲು ಸಂಖ್ಯಾಬಲ ಸಾಕಾಗುತ್ತದೆ. ಸಂಪುಟ ವಿಚಾರದಲ್ಲಿ ನಿತೀಶ್‌ ಆರ್‌ಜೆಡಿ ಜತೆಗೆ ಕೆಲವು ಹೊಂದಾಣಿಕೆಗಳನ್ನು ಮಾಡಿಕೊಳ್ಳಬೇಕಾಗಬಹುದು. ಮುಂದಿನ ಲೋಕಸಭೆ ಚುನಾವಣೆಯನ್ನು ಗಮನದಲ್ಲಿಟ್ಟುಕೊಂಡು, ಕಾಂಗ್ರೆಸ್‌ ಅನ್ನೂ ಸೇರಿಕೊಳ್ಳಲು ನಿತೀಶ್‌ ಆಹ್ವಾನಿಸಬಹುದು.

Exit mobile version