Site icon Vistara News

ವಿಸ್ತಾರ Explainer | ಭಾರತದ ಜತೆ ಯುದ್ಧಗಳಿಂದ ಪಾಕ್‌ ನಿಜಕ್ಕೂ ಪಾಠ ಕಲಿತಿದೆಯಾ? ಪಾಕ್‌ ಪ್ರಧಾನಿ ಮಾತಿನ ಅರ್ಥವೇನು?

Pakistan violates ceasefire

ನವ ದೆಹಲಿ: ದುಬೈ ಮೂಲದ ಸುದ್ದಿ ವಾಹಿನಿಯೊಂದಕ್ಕೆ ನೀಡಿರುವ ಸಂದರ್ಶನದಲ್ಲಿ ಪಾಕಿಸ್ತಾನ ಪ್ರಧಾನ ಮಂತ್ರಿ ಶೆಹಬಾಜ್‌ ಶರೀಫ್‌ ಅವರು ಭಾರತದ ಜತೆಗಿನ ಸಂಬಂಧದ ಜತೆಗೆ ಅಲವತ್ತುಕೊಂಡಿರುವುದು ಇದೀಗ ದೊಡ್ಡ ಸುದ್ದಿಯಾಗಿದೆ.

ಈ ಹಿಂದಿನ ಪ್ರಧಾನ ಮಂತ್ರಿಗಳು ಆಡದೆ ಇದ್ದ ಮಾತನ್ನು ಅವರು ಆಡಿದ್ದಾರೆ. ಅದೇನೆಂದರೆ, ʼʼಭಾರತದ ಜತೆಗಿನ ಮೂರು ಯುದ್ಧಗಳಿಂದ ಪಾಕಿಸ್ತಾನ ಪಾಠ ಕಲಿತಿದೆ. ಅವು ನಮಗೆ ಯಾತನೆ, ಬಡತನ, ನಿರುದ್ಯೋಗ ಮಾತ್ರ ನೀಡಿವೆʼʼ ಎಂದಿರುವುದು. ಜತೆಗೆ ʼʼಭಾರತದ ಪ್ರಧಾನಿ ಮೋದಿಯವರ ಜತೆಗೆ ಮುಕ್ತ ಮಾತುಕತೆ ನಡೆಸಲು ಸಿದ್ಧʼʼ ಎಂದಿರುವುದು.

ಹಾಗಾದರೆ ಪಾಕಿಸ್ತಾನ ನಿಜಕ್ಕೂ ಭಾರತದ ಜತೆಗೆ ದ್ವೇಷ ಬೇಡ ಎಂಬ ಪಾಠವನ್ನು ಕಲಿತಿದೆಯಾ? ಪಾಕ್‌ ಪ್ರಧಾನಿಯ ಇಂಟರ್‌ವ್ಯೂ ಹಿಂದಿನ ನಿಜವಾದ ಉದ್ದೇಶ ಏನಿರಬಹುದು?

ಈ ಸಂದರ್ಶನದಲ್ಲಿ ಶೆಹಬಾಜ್‌ ಅವರು, ಯುಎಇಯ ಅಧ್ಯಕ್ಷ ಶೇಖ್‌ ಮೊಹಮ್ಮದ್‌ ಬಿನ್‌ ಜಾಯೇದ್‌ ಅವರನ್ನು ಈ ವಿಷಯದಲ್ಲಿ ʼಮಧ್ಯ ಪ್ರವೇಶಿಸುವಂತೆʼ ಕೋರಿದ್ದಾರೆ. ತಗಾದೆ ಇರುವ ವಿಷಯಗಳನ್ನು ಚರ್ಚಿಸಿ ಪರಿಹರಿಸಿಕೊಳ್ಳಲು ಅನುಕೂಲವಾಗುವಂತೆ ಉಭಯ ರಾಷ್ಟ್ರಗಳನ್ನು ಮಾತಿನ ವೇದಿಕೆಗೆ ಕರೆತರಲು ನೆರವಾಗುವಂತೆ ಹೇಳಿದ್ದಾರೆ.

ಇದರ ಜತೆಗೆ, ಕಾಶ್ಮೀರದಲ್ಲಿ ಭಾರತ ಸರ್ಕಾರದಿಂದ ಮಾನವ ಹಕ್ಕುಗಳ ಉಲ್ಲಂಘನೆ ನಡೆಯುತ್ತಿದೆ ಎಂದೂ ಆರೋಪಿಸಿದ್ದಾರೆ.

ಈ ಹಿಂದೆಯೂ ಯುಎಇ ದೇಶವು, ಭಾರತ ಹಾಗೂ ಪಾಕಿಸ್ತಾನದ ನಡುವೆ ಮಧ್ಯಸ್ಥಿಕೆ ವಹಿಸಿಲ್ಲವೆಂದಲ್ಲ. ಉಭಯ ದೇಶಗಳ ಮಾತುಕತೆಗೆ ತಮ್ಮ ದೇಶ ಮಾಡಿದ ನೆರವನ್ನು ಯುಎಇ ವಿದೇಶಾಂಗ ಅಧಿಕಾರಿಯೊಬ್ಬರು 2021ರಲ್ಲಿ ಬಹಿರಂಗಪಡಿಸಿದ್ದರು.

ಪಾಕ್‌ ಪ್ರಧಾನಿಯ ಹೇಳಿಕೆ ಬಂದಿರುವ ಸಮಯವೂ ಮಹತ್ವದ್ದು. ಪಾಕಿಸ್ತಾನ ಈಗ ದಾರುಣ ಬಿಕ್ಕಟ್ಟಿನಲ್ಲಿದೆ. ಸಕಾಲಿಕ ಅಂತಾರಾಷ್ಟ್ರೀಯ ಸಹಕಾರ ದೊರೆಯದೇ ಹೋದರೆ ಅದು ಸದ್ಯದಲ್ಲೇ ಇನ್ನೊಂದು ಶ್ರೀಲಂಕಾ ಆಗುವ ದಿನಗಳು ದೂರವಿಲ್ಲ. ತನಗೆ ಸಹಾಯ ಮಾಡುವಂತೆ ದುಬೈಯನ್ನೂ ಪಾಕ್‌ ಕೋರಿದೆ. ಆ ದೇಶ ಪಾಕಿಸ್ತಾನಕ್ಕೆ 300 ಕೋಟಿ ಡಾಲರ್‌ ಸಹಾಯ ಮಾಡಲು ಒಪ್ಪಿದೆ. ಅದರಲ್ಲಿ 200 ಕೋಟಿ ಡಾಲರ್‌ ಸಾಲ ಮನ್ನಾ.

ಆದರೆ ಭಾರತಕ್ಕೆ ಅವರು ಮಾಡಿರುವ ಮನವಿಯಲ್ಲಿ ಯಾಚನೆಯ ಜತೆಗೆ ಶರತ್ತು ಕೂಡ ಬೆರೆತಿದೆ. ಅದರಲ್ಲಿ ಅವರು ʼಮುಕ್ತ ಮಾತುಕತೆʼಯ ಜತೆಗೆ ʼಮೂಲ ಸಮಸ್ಯೆʼಗಳನ್ನು ಬಗೆಹರಿಸಿಕೊಳ್ಳುವ ಮಾತಾಡಿದ್ದಾರೆ. ʼಕಾಶ್ಮೀರದ ಮಾನವ ಹಕ್ಕುಗಳ ಉಲ್ಲಂಘನೆʼಯ ವಿಚಾರ ಎತ್ತಿದ್ದಾರೆ. ಕಾಶ್ಮೀರದಲ್ಲಿ ಆರ್ಟಿಕಲ್‌ 370 ರದ್ದುಪಡಿಸಿರುವ ಕ್ರಮವನ್ನು ಹಿಂದೆಗೆದುಕೊಳ್ಳಬೇಕು, ರಾಜ್ಯ ಸ್ಥಾನ ಮರಳಿ ಕೊಡಬೇಕು ಎಂಬುದು ಅವರ ಇಂಗಿತ ಇದ್ದಂತಿದೆ.

ಭಾರತದ ಜತೆಗೆ ಶಾಂತಿಯ ಇಂಗಿತವನ್ನು ಶೆಹಬಾಜ್‌ ಹಾಗೂ ಅವರ ಸಹೋದರ, ಹಿಂದಿನ ಪ್ರಧಾನಿ ನವಾಜ್‌ ಶರೀಫ್‌ ಕೂಡ ಹಿಂದೆ ವ್ಯಕ್ತಪಡಿಸಿದ್ದು ಉಂಟು. ಹೊಸದೇನೆಂದರೆ, ʼʼಯುದ್ಧಗಳಿಂದ ಕಲಿತ ಪಾಠʼʼದ ವಿಚಾರ.

2021ರಲ್ಲಿ ಪಾಕಿಸ್ತಾನ ಮಿಲಿಟರಿ ಮಾಜಿ ಮುಖ್ಯಸ್ಥ ಜ.ಕಮರ್‌ ಜಾವೇದ್‌ ಬಾಜ್ವಾ ಮಾತನಾಡಿ ಭಾರತದ ಜತೆಗಿನ ವ್ಯಾಪಾರ ವ್ಯವಹಾರ ಮರಳಿ ಊರ್ಜಿತವಾಗಬೇಕಾದ ಅಗತ್ಯ ಒತ್ತಿ ಹೇಳಿದ್ದರು. ʼಜಿಯೋಸ್ಟ್ರಾಟಜಿʼಯ ಬದಲು ʼಜಿಯೋಎಕಾನಮಿಕ್ಸ್‌ʼ ಬೇಕು ಎಂದಿದ್ದರು. ಆದರೆ, ಅವರ ನಂತರದ ಸೇನಾ ಮುಖ್ಯಸ್ಥ ಜ.ಮುನೀರ್‌ ಅವರು, ʼʼಪಾಕಿಸ್ತಾನಿ ಪಡೆಗಳು ತಮ್ಮ ದೇಶದ ಒಂದೊಂದು ಇಂಚನ್ನೂ ಕಾಪಾಡಿಕೊಳ್ಳಲಿವೆʼʼ ಎಂದು ಗಡಿಯಲ್ಲಿ ನಿಂತು ಹೇಳಿದ್ದರು.

ಇದನ್ನೂ ಓದಿ | Shehbaz Sharif | ಮೋದಿ ಜತೆಗೆ ಮುಕ್ತ ಮಾತುಕತೆಗೆ ಸಿದ್ಧ, ಯುದ್ಧ ಮಾತ್ರ ಬೇಡವೇ ಬೇಡ ಎಂದ ಪಾಕ್‌ ಪ್ರಧಾನಿ

ಪಾಕ್‌ ಪ್ರಧಾನಿ ಸಂದರ್ಶನದ ಬಳಿಕ, ಅವರ ಕಚೇರಿ ಗಡಿಬಿಡಿಯ ಹೇಳಿಕೆಯೊಂದನ್ನು ನೀಡಿತು. ಅದರಲ್ಲಿ ʼʼಕಾಶ್ಮೀರದಲ್ಲಿ ಭಾರತ ಸರ್ಕಾರ ತೆಗೆದುಕೊಂಡಿರುವ ಕಾನೂನುಬಾಹಿರ ಕ್ರಮದ ವಿಚಾರದಲ್ಲಿ ನಾವು ಯಾವುದೇ ರಾಜಿಗೆ ಮುಂದಾಗುವುದಿಲ್ಲʼʼ ಎಂದು ಅದರಲ್ಲಿ ಹೇಳಿತು. ಅಂದರೆ, ಪಾಕ್‌ ಪ್ರಧಾನಿಯ ಸಂದರ್ಶನ ಅಲ್ಲಿನ ಮಿಲಿಟರಿಗೆ ಅಷ್ಟೇನೂ ಇಷ್ಟವಾದಂತಿಲ್ಲ. ʼʼಯುದ್ಧಗಳಿಂದ ಕಲಿತ ಪಾಠʼʼ ಹೇಳಿಕೆಯ ಬಗ್ಗೆ ಖಂಡಿತವಾಗಿಯೂ ಅದಕ್ಕೆ ಅಸಮಾಧಾನವಾಗಿದೆ.

ಕಾಶ್ಮೀರದಲ್ಲಿ ಆರ್ಟಿಕಲ್‌ 370ನ್ನು ಖಂಡಿತಾ ಭಾರತ ಮತ್ತೆ ತರಲಾರದು ಎಂದು ಪಾಕ್‌ಗೆ ಗೊತ್ತಿದೆ. ಹಾಗೆಯೇ ಸೌದಿ ಅರೇಬಿಯಾ, ಯುಎಇ ಮುಂತಾದ ಅರಬ್‌ ದೇಶಗಳು ಭಾರತದ ಜತೆಗೆ ಸೌಹಾರ್ದ ಸಂಬಂಧ ಹೊಂದಿವೆ ಎಂಬುದೂ ಅದಕ್ಕೆ ಗೊತ್ತಿದೆ. ಹೀಗಾಗಿ ಮರಳಿ ವ್ಯಾಪಾರ ವ್ಯವಹಾರಗಳನ್ನು ಮೊದಲಿನ ಸ್ಥಿತಿಗೆ ತಂದುಕೊಳ್ಳುವುದು ಅದಕ್ಕೆ ಅಗತ್ಯವಾಗಿದೆ.

ಈ ನಿಟ್ಟಿನಲ್ಲಿ ಮಾಜಿ ಪ್ರಧಾನಿ ಇಮ್ರಾನ್‌ ಖಾನ್-‌ ಮಾಜಿ ಮಿಲಿಟರಿ ಮುಖಂಡ ಬಾಜ್ವಾ ಜೋಡಿ ವಿಫಲವಾಗಿದೆ. ಇದೀಗ ಶೆಹಬಾಜ್‌ ಶರೀಫ್‌ ಮತ್ತು ಮಿಲಿಟರಿ ಹೇಗೆ ವರ್ತಿಸಲಿದೆ ಎಂಬುದನ್ನು ಕಾದು ನೋಡಬೇಕಿದೆ. ಈ ಹಿಂದೆಯೂ, ಭಯೋತ್ಪಾದನೆಯನ್ನು ಬೆಂಬಲಿಸುವುದರಿಂದ ಪಾಕಿಸ್ತಾನಕ್ಕೆ ಆದ ನಷ್ಟದ ಬಗ್ಗೆ ಹಲವಾರು ಮಂದಿ ಒತ್ತಿ ಹೇಳಿದ್ದರು. ಆದರೆ ಇದರಿಂದ ಐಎಸ್‌ಐ, ಅಲ್ಲಿನ ಮಿಲಿಟರಿ ಏನೇನೂ ಪಾಠ ಕಲಿತಿಲ್ಲ.

ಇದನ್ನೂ ಓದಿ | Shehbaz Sharif | ಪಾಕಿಸ್ತಾನ ಪಾಠ ಕಲಿತಿದೆ, ನಮಗೆ ಭಾರತದ ಜತೆ ಯುದ್ಧ ಬೇಡ: ಪಾಕ್‌ ಪಿಎಂ

Exit mobile version