Site icon Vistara News

ವಿಸ್ತಾರ Explainer | ಚೀನಾದ ಬೇಹುಗಾರಿಕೆ ನೌಕೆ ಲಂಕೆಗೆ ಬರುತ್ತಿರುವುದೇಕೆ?

spy china

ʼʼಸದ್ಯ ನಮ್ಮ ಬಂದರಿನತ್ತ ನಿಮ್ಮ ನೌಕೆ ತರಬೇಡಿʼʼ ಎಂದು ಶ್ರೀಲಂಕಾ ವಿದೇಶಾಂಗ ಇಲಾಖೆಯು ಚೀನಾಗೆ ಸೂಚನೆ ನೀಡಿದೆ. ಈ ನೌಕೆ ಅಂತಿಂಥದ್ದಲ್ಲ. ಶ್ರೀಲಂಕೆಯಲ್ಲಿ ಕೋಟ್ಯಂತರ ಡಾಲರ್‌ ವೆಚ್ಚದಲ್ಲಿ ಚೀನಾವೇ ನಿರ್ಮಿಸಿಕೊಡುತ್ತಿರುವ ಹಂಬನ್‌ಟೋಟ ಬಂದರಿನಲ್ಲಿ ಶಾಶ್ವತ ಲಂಗರು ಹಾಕಲು ಬರುತ್ತಿರುವ ನೌಕೆ ಅದು. ಈ ನೌಕೆಯಲ್ಲಿ ಅಗಾಧ ಆಧುನಿಕ ಬೇಹುಗಾರಿಕೆ ಸಾಮಗ್ರಿಗಳಿವೆ. ಅಲ್ಲಿ ಕುಳಿತ ಚೀನೀಯನಿಗೆ ಭಾರತದ ರಕ್ಷಣೆ ದೃಷ್ಟಿಯಿಂದ ಸೂಕ್ಷ್ಮವೆನಿಸಿದ ಜಾಗಗಳೆಲ್ಲಾ ಅಂಗೈ ಗೆರೆಗಳಷ್ಟೇ ಸೂಕ್ಷ್ಮವಾಗಿ ಗೊತ್ತಾಗಲಿವೆ!

ಎಲ್ಲ ಸರಿ ಇದ್ದಿದ್ದರೆ, ಚೀನಾದ ನೌಕೆ ಬಂದು ಅಲ್ಲಿ ಲಂಗರು ಹಾಕುವುದಕ್ಕೆ ಶ್ರೀಲಂಕೆಯನ್ನು ಆಳುವವರಿಗೆ ಯಾವ ಆಕ್ಷೇಪವೂ ಇರುತ್ತಿರಲಿಲ್ಲ ಎನ್ನಿ. ಆದರೆ ಲಂಕೆ ಈಗ ಅಕ್ಷರಶಃ ದಿವಾಳಿ. ಎರಡು ಹೊತ್ತು ಊಟ ಹುಟ್ಟಬೇಕಿದ್ದರೆ ನಾಲ್ಕಾರು ದೇಶಗಳ ಮುಂದೆ ಕೈ ಚಾಚಬೇಕು. ಆದರೆ ವಿದೇಶಿ ವಿನಿಮಯ ಸಂಗ್ರಹವೂ ಮುಗಿದುಹೋಗಿರುವುದರಿಂದ, ನೆರವಾಗುವವರೂ ಯಾರೂ ಇಲ್ಲ. ಭಾರತ ಮಾತ್ರವೇ ಸದ್ಯ, ನಮ್ಮದೇ ಉಪಖಂಡಕ್ಕೆ ಸೇರಿದ ಬಡ ರಾಷ್ಟ್ರ ಎಂಬ ಕನಿಕರದಿಂದ, ಸಾಧ್ಯವಾದಷ್ಟು ಸಹಾಯ ಮಾಡಿದೆ. ಮತ್ತು, ಭಾರತ ಮಾಡಿದಷ್ಟು ಹಣಸಹಾಯವನ್ನು ಇನ್ಯಾವ ದೇಶವೂ ಮಾಡಿಲ್ಲ. ಚೀನಾ ಕೂಡ ಮಾಡಿಲ್ಲ.

ಆದರೂ ಶ್ರೀಲಂಕೆ ಈ ಕ್ಷಣದವರೆಗೂ, ಚೀನಾದ ಬೇಹು ನೌಕೆ ಭಾರತದ ಮೇಲೆ ಕಣ್ಣಿಡಲೇ ಬರುತ್ತಿದೆ ಎಂದು ಗೊತ್ತಿದ್ದರೂ ಸುಮ್ಮಗೆ ಇತ್ತು!

ಚೀನಾದಿಂದ ಹೊರಟಿರುವ ಚೀನಾದ ಯುವಾನ್‌ ವಾಂಗ್‌ 5 ಎಂಬ ಬೃಹತ್‌ ನೌಕೆ ಆಗಸ್ಟ್‌ 11ರಂದು ಶ್ರೀಲಂಕೆಯ ಹಂಬನ್‌ಟೋಟ ಬಂದರು ತಲುಪಿ ಅಲ್ಲಿ ಠಿಕಾಣಿ ಹಾಕಬೇಕಿತ್ತು. ಆದರೆ ʼʼಉಭಯ ಸರ್ಕಾರಗಳ ನಡುವೆ ಮುಂದಿನ ಮಾತುಕತೆ ನಡೆಯುವವರೆಗೆ ಇದನ್ನು ಮುಂದಕ್ಕೆ ಹಾಕಿʼʼ ಎಂದು ಲಂಕೆ ಚೀನಾಗೆ ಸೂಚನೆ ನೀಡಿದೆ. ನಿಸ್ಸಂಶಯವಾಗಿ ಇದು ಬೇಹು ನೌಕೆ. ಮೇಲ್ನೋಟಕ್ಕೆ ಇದು ಆ.11ರಂದು ಹಂಬನ್‌ಟೋಟ ತಲುಪಿ ಅಲ್ಲಿ ಇಂಧನ ತುಂಬಿಸಿಕೊಂಡು ಆ.17ರಂದು ಹೊರಡಬೇಕು. ಹಾಗೆಂದು ಚೀನಾ ಹೇಳಿದೆ. ಆದರೆ ಲಂಕೆಯ ಪ್ರಸ್ತುತ ನಿರಾಕರಣೆಯಲ್ಲಿ ಇದಕ್ಕಿಂತಲೂ ಹೆಚ್ಚಿನದು ಇರುವಂತಿದೆ.

Yuan Wang 5 ಅನ್ನು 2007ರಲ್ಲಿ ನಿರ್ಮಿಸಲಾಗಿದೆ. ಸಂಶೋಧನೆ, ಸಮೀಕ್ಷೆಗಾಗಿ ಇದು ಮೀಸಲು ಎಂದು ಹೇಳಲಾಗಿದೆ. ಜುಲೈ 13ರಂದು ಚೀನಾದಿಂದ ಹೊರಟಿರುವ ಈ ನೌಕೆ ಸದ್ಯ ತೈವಾನ್‌ನ ಸಮೀಪದಲ್ಲಿ ತೇಲಾಡುತ್ತಿದೆ. ಅಮೆರಿಕದ ಸಂಸದೆ ನ್ಯಾನ್ಸಿ ಪೆಲೋಸಿ ಭೇಟಿಗೆ ವಿರೋಧ ಧಾಖಲಿಸಲು ಚೀನಾ ಕೈಗೊಂಡಿರುವ ಆಕ್ರಮಣಕಾರಿ ಕ್ರಮಗಳಲ್ಲಿ ಇದೂ ಒಂದು. ಸದ್ಯ ಅದು ಶ್ರೀಲಂಕೆಯ ಬಂದರಿಗೆ ಬರಲು ಅನುಮತಿ ಕೋರಿದ್ದು, ಅದಕ್ಕೆ ಲಂಕೆ ಅನುಮತಿ ನಿರಾಕರಿಸಿದೆ. ಚೀನಾ ಕೂಡ ಬಿಟ್ಟಿಲ್ಲ- ಈ ನೌಕೆಯ ಲಂಗರಿಗೆ ಅನುಮತಿ ನಿರಾಕರಿಸುವುದು ಉಭಯ ದೇಶಗಳ ನಡುವಿನ ಸಂಬಂಧಕ್ಕೆ ತೊಡಕಾಗಬಹುದು ಎಂದು ಎಚ್ಚರಿಸಿದೆ.

ಲಂಕೆ ಯಾಕೆ ಈಗ ಚೀನಾದ ನೌಕೆಗೆ ಅವಕಾಶ ನಿರಾಕರಿಸುತ್ತಿದೆ? ಇದಕ್ಕೆ ಕಾರಣ ಭಾರತದ ಒತ್ತಡ ಹಾಗೂ ಹಂಗು. ದಿವಾಳಿ ಎದ್ದು ಹೋಗಿರುವ ಲಂಕೆಗೆ ಈಗ ಭಾರತವೇ ಅನಿವಾರ್ಯ ಬಂಧು. ಚೀನಾ ಕೂಡ ಸಾಕಷ್ಟು ಸಾಲ ನೀಡಿ, ಇನ್ನು ನನ್ನಿಂದಾಗದು ಎಂದು ಕೈಯೆತ್ತಿಬಿಟ್ಟಿದೆ. ಚೀನಾದ ಬೇಹು ನೌಕೆ ಇಲ್ಲಿ ಬರಲಿದೆ ಎಂಬುದು ತಿಳಿದಾಗ ಭಾರತದ ವಿದೇಶಾಂಗ ಇಲಾಖೆಯು ಶ್ರೀಲಂಕೆಯ ಮೇಲೆ ಒತ್ತಡ ತಂದಿದೆ. ಈ ಬೇಹು ನೌಕೆ ಸಮುದ್ರದ ತಳವನ್ನು ಕೂಡ ಜಾಲಾಡಲಿದ್ದು, ಭಾರತದ ಸಬ್‌ಮರೀನ್‌ಗಳ ಕಾರ್ಯಾಚರಣೆಯ ಸಂಪೂರ್ಣ ವಿವರ ಅದಕ್ಕೆ ಗೊತ್ತಾಗಲಿದೆ.

ಹಂಬನ್‌ಟೋಟ ಬಂದರಿನ ಪ್ರಾಮುಖ್ಯ

ಹಂಬನ್‌ಟೋಟ ಬಂದರನ್ನು ಮೊದಲು ಮಗಂಪುರ ಮಹಿಂದ ರಾಜಪಕ್ಸೆ ಬಂದರು ಎಂದು ಕರೆಯಲಾಗುತ್ತಿತ್ತು, ಇದು ಪದಚ್ಯುತ ಅಧ್ಯಕ್ಷ ಮಹಿಂದ ರಾಜಪಕ್ಸೆ ಅವರ ಮೂಲನಿವಾಸ. ಬಂದರಿನ ನಿರ್ಮಾಣಕ್ಕೆ ಚೀನಾ $1.3 ಶತಕೋಟಿ ಸಾಲ ನೀಡಿತ್ತು. ಆದರೆ ಅದು ವಾಣಿಜ್ಯಕವಾಗಿ ಲಾಭಕರವಲ್ಲ ಎಂಬುದು ನಂತರ ಗೊತ್ತಾಯಿತು. ಸಾಲವನ್ನು ಕಟ್ಟಲು ಲಂಕೆಗೆ ಸಾಧ್ಯವಾಗಲಿಲ್ಲ. ಇದಾದ ಬಳಿಕ 2017ರಲ್ಲಿ, ಬಂದರಿನಲ್ಲಿನ ವಾಣಿಜ್ಯ ಚಟುವಟಿಕೆಗಳನ್ನು 99 ವರ್ಷಗಳ ಗುತ್ತಿಗೆಗೆ ಚೀನಾದ ಸರ್ಕಾರಿ ಸ್ವಾಮ್ಯದ ಸಂಸ್ಥೆಗೆ ಲಂಕೆ ಹಸ್ತಾಂತರಿಸಿತು. ಆ ಬಳಿಕ ಅಲ್ಲಿ ಚೀನಾದ ಉಪಸ್ಥಿತಿ, ವಿಶೇಷವಾಗಿ ಅದರ ತಾಂತ್ರಿಕ ಸೌಲಭ್ಯಗಳು ಹೆಚ್ಚಿದವು. ಪರಮಾಣು ಇಂಧನ ಮತ್ತು ರಕ್ಷಣೆಗೆ ಸಂಬಂಧಿಸಿದ ವಿಚಾರಗಳನ್ನು ಒಳಗೊಂಡಂತೆ ಭಾರತದ ಹಿತಾಸಕ್ತಿಗಳಿಗೆ ಇದು ಬೆದರಿಕೆಯಾಗಿದೆ. 2014ರಲ್ಲೂ ಹೀಗೇ ಆಗಿತ್ತು. ಪರಮಾಣು-ಚಾಲಿತ ಜಲಾಂತರ್ಗಾಮಿ ಚಾಂಗ್‌ಜೆಂಗ್ 2 ಅನ್ನು ತನ್ನ ಬಂದರಿನಲ್ಲಿ ತಂಗಲು ಲಂಕೆ ಅನುಮತಿಸಿದಾಗಲೂ ಭಾರತ ವಿರೋಧಿಸಿತ್ತು. ಪ್ರಸ್ತುತ ವಾಣಿಜ್ಯದ ಹೆಸರಿನಲ್ಲಿ ಬಳಸಿಕೊಳ್ಳುತ್ತಿರುವ ಈ ಬಂದರನ್ನು ಮುಂದೆ ನೌಕಾ ನೆಲೆಯಾಗಿ ಪರಿವರ್ತಿಸುವುದು ಚೀನಾದ ಗುರಿ. ಯಾಕೆಂದರೆ ಈ ಪ್ರದೇಶದಲ್ಲಿ (ಏಷ್ಯಾ- ಪೆಸಿಫಿಕ್)‌ ಕ್ವಾಡ್‌ ಸಂಘಟನೆ (ಅಮೆರಿಕ, ಆಸ್ಟ್ರೇಲಿಯ, ಭಾರತ, ಜಪಾನ್)‌ ಯ ಪ್ರಾಬಲ್ಯ ಹೆಚ್ಚುತ್ತಿರುವುದು ಅದಕ್ಕೆ ಕಳವಳ ಮೂಡಿಸಿದೆ.

ಇದನ್ನೂ ಓದಿ: ವಿಸ್ತಾರ Explainer | ಜವಾಹಿರಿಯನ್ನು ಕತ್ತರಿಸಿ ಹಾಕಿದ ಆ ಹೆಲ್‌ಫೈರ್‌ ಕ್ಷಿಪಣಿ ಸಾಮರ್ಥ್ಯ ಅನೂಹ್ಯ!

ಈ ಬೇಹುನೌಕೆಯಲ್ಲೇನಿದೆ?

Yuan Wang 5 ನೌಕೆಯನ್ನು ಸಂಶೋಧನೆ ನೌಕೆ ಎಂದು ಚೀನಾ ಕರೆದುಕೊಂಡಿದೆ. ಆದರೆ ಇದು ನೇರವಾಗಿ ಪೀಪಲ್ಸ್‌ ಲಿಬರೇಶನ್‌ ಆರ್ಮಿಯ ವ್ಯೂಹಾತ್ಮಕ ವಿಂಗ್‌ನ ಅಡಿಯಲ್ಲೇ ಇದ್ದು, ಮೂರನೇ ಅತ್ಯಾಧುನಿಕ ತಲೆಮಾರಿನ ನೌಕೆ. ಇದರ ಸಾಧ್ಯತೆ, ಶಕ್ತಿಗಳು ಹಲವು. ಸುಮಾರು 750 ಕಿಮೀ ವ್ಯಾಪ್ತಿಯ ಮೇಲೆ ಸುಲಭವಾಗಿ ಕಣ್ಣಿಡಬಲ್ಲುದು. 25 ಸಾವಿರ ಟನ್‌ ತೂಕದ ಈ ಹಡಗಿನಲ್ಲಿ 400 ಸಿಬ್ಬಂದಿಗಳಿದ್ದಾರೆ. ನಾಲ್ಕು ಹೈ ಪವರ್‌ ಪ್ಯಾರಾಬೋಲಿಕ್‌ ಟ್ರ್ಯಾಕಿಂಗ್‌ ಆಂಟೆನ್ನಾಗಳನ್ನು ಹೊಂದಿರುವ ಈ ನೌಕೆಯು ಭಾರತ ಉಪಖಂಡದ ಮೇಲಿರುವ ತನ್ನ ಸ್ಯಾಟ್‌ಲೈಟ್‌ಗಳಿಂದ ಭಾರತದ ದಕ್ಷಿಣದಲ್ಲಿರುವ ಅನೇಕ ವ್ಯೂಹಾತ್ಮಕ ಪ್ರಾಮುಖ್ಯದ ಸ್ಥಳಗಳ ಮೇಲೆ ಕಣ್ಣಿಡಬಲ್ಲುದು. ವಿಶಾಖಪಟ್ಟಣದ ಸಬ್‌ಮರೀನ್‌ ನೆಲೆ, ಶ್ರೀಹರಿಕೋಟದ ರಾಕೆಟ್‌ ಉಡಾವಣೆ ಕೇಂದ್ರ, ಕಲ್ಪಾಕಂ, ಕೂಡಂಕುಳಂ, ಒಡಿಶಾದ ಚಂಡೀಪುರ ಡಿಆರ್‌ಡಿಒ ಪ್ರಯೋಗ ಕೇಂದ್ರ, ಕೈಗಾ ಮುಂತಾದ ಪರಮಾಣು ವಿದ್ಯುತ್‌ ನೆಲೆಗಳು ಕೂಡ ಈ ನೌಕೆಯ ಸ್ಯಾಟ್‌ಲೈಟ್‌ ವೀಕ್ಷಣೆಯ ವಲಯದಲ್ಲಿ ಬರಲಿವೆ. ಚೀನಾದ ಮುಖ್ಯ ನೆಲದಿಂದ ಉಡಾಯಿಸಿಬಿಟ್ಟ ಖಂಡಾಂತರ ಬ್ಯಾಲಿಸ್ಟಿಕ್‌ ಕ್ಷಿಪಣಿಗಳ ಸ್ಯಾಟ್‌ಲೈಟ್‌ ಟ್ರ್ಯಾಕಿಂಗ್‌ ನಡೆಸಬಲ್ಲದು. ಭಾರತದ ಪೂರ್ವ- ಪಶ್ಚಿಮ- ದಕ್ಷಿಣ ಕರಾವಳಿಯಲ್ಲಿ ಓಡಾಡುವ ವ್ಯೂಹಾತ್ಮಕ ಪ್ರಾಮುಖ್ಯದ ನೌಕೆಗಳ ಮೇಲೆ ಕಣ್ಣಿಡುತ್ತದೆ. ಮಾತ್ರವಲ್ಲ ಭಾರತದ ಸಬ್‌ಮರೀನ್‌ಗಳನ್ನೂ ಟ್ರ್ಯಾಕ್‌ ಮಾಡಬಲ್ಲದು. ಒಟ್ಟಿನಲ್ಲಿ ಇದು ಮನೆ ಬಾಗಿಲಲ್ಲೇ ಕಳ್ಳನನ್ನು ಕೂರಿಸಿದಂತೆ.

ಭಾರತದ ಹಂಗು ಲಂಕೆಗಿದೆ

ಭಾರತ ಈ ವರ್ಷ ಶ್ರೀಲಂಕಾಕ್ಕೆ ನೆರವಾದ ಪ್ರಮುಖ ವಿದೇಶಿ ಸಹಾಯ ಮೂಲ. ನಗದು ಮತ್ತು ವಸ್ತು ಎರಡೂ ರೂಪದಲ್ಲಿ. ಶ್ರೀಲಂಕಾದ ಆರ್ಥಿಕ ಸುಳಿಯಿಂದ ಹೊರಬರಲು ಸಹಾಯ ಮಾಡುವಲ್ಲಿ ಭಾರತ ಇತರರಿಗಿಂತ ಮುಂದಿದೆ. ಈ ವರ್ಷದ ಮೊದಲ ನಾಲ್ಕು ತಿಂಗಳಲ್ಲಿ ಶ್ರೀಲಂಕಾ ಸ್ವೀಕರಿಸಿದ ವಿದೇಶಿ ನೆರವಿನ ಪ್ರಮಾಣ $ 968.8 ದಶಲಕ್ಷ, ಅದರಲ್ಲಿ ಭಾರತದ ಪಾಲು ಶ್ರೀಲಂಕಾದ ಹಣಕಾಸು ಸಚಿವಾಲಯದ ಪ್ರಕಾರವೇ $ 376.9 ದಶಲಕ್ಷ (₹ 3016 ಕೋಟಿ) ಇದು ಸುಮಾರು 39%. ಮತ್ತೊಂದೆಡೆ ಚೀನಾ ನೀಡಿದ್ದು ಕೇವಲ $67.9 ದಶಲಕ್ಷ ಅಥವಾ ಸಾಲದ ಕೇವಲ 7%. ಭಾರತ ನೀಡಿದ ಹಣಕಾಸು ನೆರವು ಕೂಡ ಏಷ್ಯನ್ ಡೆವಲಪ್‌ಮೆಂಟ್ ಬ್ಯಾಂಕ್ (ಎಡಿಬಿ) ಗಿಂತಲೂ ಹೆಚ್ಚು. ಶ್ರೀಲಂಕೆಗೆ ಅಗತ್ಯ ಬಿದ್ದಾಗಲೆಲ್ಲ ಭಾರತ ಹಣಕಾಸು, ಸಾಲದ ನೆರವು ನೀಡುತ್ತ ಬಂದಿದೆ. ಬಡ್ಡಿಯಲ್ಲಿ ವಿನಾಯಿತಿ ನೀಡಿದೆ. ಬಡ್ಡಿಯೇ ಇಲ್ಲದೆಯೂ ಕೊಟ್ಟಿದೆ. ಈ ವರ್ಷ ಭಾರತದಿಂದ ಅಗತ್ಯ ಆಮದು, ಪೆಟ್ರೋಲ್‌ ಆಮದುಗಳಿಗಾಗಿ ನೂರು ಕೋಟಿ ಡಾಲರ್‌ (₹ 800 ಕೋಟಿ) ಪಡೆದಿದೆ. ಭಾರತವೊಂದೇ ಶ್ರೀಲಂಕೆಯ ಈ ದುಃಸ್ಥಿತಿಯ ಸನ್ನಿವೇಶದಲ್ಲೂ ನೆರವಿಗೆ ನಿಂತಿರುವ ದೇಶ ಎಂದು ಅಲ್ಲಿನ ಇಂಧನ, ವಿದ್ಯುತ್‌ ಸಚಿವ ಕಾಂಚನ ವಿಜೆಸೇಕರ ಅವರು ಕೃತಜ್ಞತೆಯಿಂದ ಸ್ಮರಿಸಿದ್ದಾರೆ. ಹೀಗಾಗಿ, ಭಾರತದ ಹಿತಾಸಕ್ತಿಗೆ ಕನ್ನ ಕೊರೆಯುವ ಚೀನಾದ ಸಂಚಿಗೆ ಕೊನೆಯ ಕ್ಷಣದಲ್ಲಾದರೂ ಶ್ರೀಲಂಕಾ ʼನೋʼ ಎಂದಿರುವುದು ಆಶಾದಾಯಕ.

ಇದನ್ನೂ ಓದಿ: ವಿಸ್ತಾರ Explainer | ತೈವಾನ್‌ ದ್ವೀಪದೇಶದಲ್ಲಿ ಚೀನಾ- ಅಮೆರಿಕ ತಿಕ್ಕಾಟದ ಹಕೀಕತ್ತು

ಭಾರತವೂ ಸಿದ್ಧವಾಗಿದೆ

ಚೀನಾದ ಬೇಹು ನೌಕೆಯ ಚಲನವಲನಗಳ ಮೇಲೆ ಭಾರತವೂ ಕಣ್ಣಿಟ್ಟಿದೆ. ನಮ್ಮ ರೇಡಾರ್‌ಗಳೂ ಸಾಕಷ್ಟು ಬಲವಾಗಿದ್ದು, ನೌಕೆಯನ್ನು ಗಮನಿಸುತ್ತಿವೆ. ಇನ್‌ಸ್ಯಾಟ್‌ ಉಪಗ್ರಹಗಳ ಮೂಲಕ ಇದರ ಮಾಹಿತಿಯನ್ನು ಪಡೆಯುತ್ತಿದೆ. ಸೂಕ್ತ ಸಮಯದಲ್ಲಿ ಶ್ರೀಲಂಕಾ ಸರಕಾರದಿಂದ ಸ್ಪಂದನ ಪಡೆಯುವಲ್ಲಿ ನಮ್ಮ ಸರ್ಕಾರ ಸಫಲವಾಗಿರುವುದು, ನಮ್ಮ ದೇಶ ಅಲರ್ಟ್‌ ಆಗಿದೆ ಎಂಬುದನ್ನು ಸೂಚಿಸುತ್ತದೆ.

Exit mobile version