Site icon Vistara News

ವಿಸ್ತಾರ TOP 10 NEWS | ಬರ್ಮಿಂಗ್ಹಮ್‌ ಯಶಸ್ಸಿನಿಂದ ನಿತೀಶ್‌ ಮುನಿಸಿನವರೆಗೆ ಪ್ರಮುಖ ಸುದ್ದಿಗಳಿವು

Vistara TOP 10 08082022

ಬೆಂಗಳೂರು: ಕಾಮನ್ವೆಲ್ತ್‌ ಗೇಮ್ಸ್‌ನಲ್ಲಿ ಭಾರತೀಯ ಕ್ರೀಡಾಪಟುಗಳ ಉತ್ತಮ ಪ್ರದರ್ಶನದ ಮೂಲಕ ಕ್ರೀಡಾಕೂಟಕ್ಕೆ ತೆರೆಬಿದ್ದಿದೆ. ಪ್ರಸಿದ್ಧ ಕ್ರೀಡಾಪಟುಗಳಷ್ಟೆ ಅಲ್ಲದೆ ಅನೇಕರು ಪದಕ ಸಾಧನೆ ತೋರಿ ಅಚ್ಚರಿ ಮೂಡಿಸಿದ್ದಾರೆ. ಬೆಂಗಳೂರಿನ ಚಾಮರಾಜಪೇಟೆ ಮೈದಾನದ ವಿವಾದ ಮುಗಿಯಿತು ಎನ್ನುವುದರೊಳಗೇ ಮತ್ತೊಂದು ವಿವಾದ ತೆರೆದುಕೊಳ್ಳುತ್ತಿದೆ. ಬಿಹಾರ ಸಿಎಂ ನಿತೀಶ್‌ ಕುಮಾರ್‌ ಅವರು ಬಿಜೆಪಿಯೊಂದಿಗಿನ ಸಖ್ಯವನ್ನು ತೊರೆದುಕೊಳ್ಳುವ ಮುನ್ಸೂಚನೆ ನೀಡಿದ್ದಾರೆ ಎನ್ನುವುದು ಸೇರಿ ದಿನದ ಪ್ರಮುಖ ಸುದ್ದಿಗಳ ಗುಚ್ಛ ವಿಸ್ತಾರ TOP 10 NEWS.

1. ಬರ್ಮಿಂಗ್ಹಮ್‌ ಕಾಮನ್ವೆಲ್ತ್‌ ಗೇಮ್ಸ್‌ -2022: 61 ಪದಕಗಳೊಂದಿಗೆ ಕ್ರೀಡಾಕೂಟ ಮುಗಿಸಿದ ಭಾರತದ ಸ್ಪರ್ಧಿಗಳು
ಬರ್ಮಿಂಗ್ಹಮ್‌ ಕಾಮನ್ವೆಲ್ತ್‌ ಗೇಮ್ಸ್‌ -2022 ಸೋಮವಾರ ಸಮಾಪ್ತಿಯಾಗಿದ್ದು, ಭಾರತದ ಅಥ್ಲೀಟ್‌ಗಳು ಒಟ್ಟಾರೆ 61 ಪದಕಗಳನ್ನು ಗೆದ್ದಿದ್ದಾರೆ. ಈ ಸಾಧನೆಯೊಂದಿಗೆ ಭಾರತ ಅಂಕ ಪಟ್ಟಿಯಲ್ಲಿ ನಾಲ್ಕನೇ ಸ್ಥಾನ ಪಡೆದುಕೊಂಡಿತು. ಇದರಲ್ಲಿ 22 ಬಂಗಾರದ ಪದಕಗಳು, 16 ರಜತ ಪದಕಗಳು ಹಾಗೂ 23 ಕಂಚಿನ ಪದಕಗಳಿವೆ. ಕೊನೇ ದಿನದ ಸ್ಪರ್ಧೆಯಲ್ಲಿ ಭಾರತದ ಪರ ಮಹಿಳಾ ಷಟ್ಲರ್‌ ಪಿ.ವಿ ಸಿಂಧೂ, ಪುರುಷರ ಸಿಂಗಲ್ಸ್‌ನಲ್ಲಿ ಲಕ್ಷ್ಯ ಸೇನ್‌, ಪುರುಷರ ಡಬಲ್ಸ್‌ ಜೋಡಿ ಸಾತ್ವಿಕ್‌ ಸಾಯಿರಾಜ್‌ ರಾಂಕಿರೆಡ್ಡಿ ಮತ್ತು ಚಿರಾಗ್‌ ಶೆಟ್ಟಿ, ಪುರುಷರ ಟೇಬಲ್‌ ಟೆನಿಸ್‌ನಲ್ಲಿ ಶರತ್‌ ಕಮಾಲ್‌ ಬಂಗಾರದ ಪದಕಗಳನ್ನು ಗೆದ್ದುಕೊಂಡಿದ್ದಾರೆ. ಪುರುಷರ ಹಾಕಿ ತಂಡ ಬೆಳ್ಳಿ ಗೆದ್ದಿದ್ದರೆ, ಟೇಬಲ್‌ ಟೆನಿಸ್‌ ಸಿಂಗಲ್ಸ್‌ನಲ್ಲಿ ಸತಿಯನ್‌ ಗುಣಶೇಖರನ್‌ ಕಂಚಿನ ಪದಕದ ಹಾರಕ್ಕೆ ಕೊರಳೊಡ್ಡಿದ್ದಾರೆ. ಒಟ್ಟಾರೆಯಾಗಿ ಅಂತಿಮ ದಿನ 4 ಚಿನ್ನ, ಒಂದು ಬೆಳ್ಳಿ ಹಾಗೂ ಒಂದು ಕಂಚಿನ ಪದಕಗಳು ಭಾರತದ ಖಾತೆ ಸೇರಿವೆ. ಸಂಪೂರ್ಣ ಸುದ್ದಿಗೆ ಇಲ್ಲಿ ಕ್ಲಿಕ್‌ ಮಾಡಿ.
CWG- 2022 | ಟೇಬಲ್‌ ಟೆನಿಸ್‌ನಲ್ಲಿ ಶರತ್‌ ಬಂಗಾರದ ಕಮಾಲ್‌

2. ಈದ್ಗಾ ಮೈದಾನದಲ್ಲೇ ಗಣೇಶೋತ್ಸವ: ಶಾಸಕ ಜಮೀರ್‌ ಖಾನ್‌ಗೆ ಸವಾಲು ಹಾಕಿದ ಮುತಾಲಿಕ್
ಬೆಂಗಳೂರಿನ ಚಾಮರಾಜಪೇಟೆಯ ವಿವಾದಿತ ಈದ್ಗಾ ಮೈದಾನ ಕಂದಾಯ ಇಲಾಖೆಗೆ ಸೇರಿದ್ದು ಎಂದು ಬಿಬಿಎಂಪಿ ಪ್ರಕಟಿಸಿದ ಬೆನ್ನಿಗೇ ಬೇರೆ ಬೇರೆ ಬೆಳವಣಿಗೆಗಳು ನಡೆಯುತ್ತಿವೆ. ಇದನ್ನು ನಾಗರಿಕ ವೇದಿಕೆ ಸೇರಿದಂತೆ ಹಿಂದೂ ಸಂಘಟನೆಗಳು ತಮ್ಮ ವಿಜಯ ಎಂದು ಹೇಳಿಕೊಂಡಿದ್ದರೆ, ವಕ್ಫ್‌ ಬೋರ್ಡ್‌ ಇದರ ವಿರುದ್ಧ ಕೋರ್ಟ್‌ ಮೆಟ್ಟಿಲು ಹತ್ತುವುದಾಗಿ ಪ್ರಕಟಿಸಿದೆ. ಇದರ ನಡುವೆಯೇ ಈ ಮೈದಾನದಲ್ಲಿ ಹಬ್ಬ ಆಚರಿಸುವ ವಿವಾದ ತಲೆ ಎತ್ತಿದೆ. ʻನಾವು ಅದೇ ಮೈದಾನದಲ್ಲಿ ಗಣೇಶೋತ್ಸವ ಆಚರಿಸುತ್ತೇವೆ. ತಾಕತ್ತಿದ್ದರೆ ತಡೆಯಿರಿʼ ಎಂದು ಶ್ರೀರಾಮಸೇನೆಯ ಪ್ರಮೋದ್‌ ಮುತಾಲಿಕ್‌ ಸವಾಲು ಹಾಕಿದ್ದಾರೆ. ಸಂಪೂರ್ಣ ಸುದ್ದಿಗೆ ಇಲ್ಲಿ ಕ್ಲಿಕ್‌ ಮಾಡಿ.
BBMPಯಿಂದ ಕಂದಾಯ ಇಲಾಖೆಗೆ ಜಾರಿದ ಚಾಮರಾಜಪೇಟೆ ಮೈದಾನ: DC ಅನುಮತಿ ಬೇಕು

3. Bihar politics | ಬಿಜೆಪಿಗೆ ಬೈಬೈ ಹೇಳುತ್ತಿರುವ ನಿತೀಶ್‌ ಕುಮಾರ್‌, ಆರ್‌ಜೆಡಿ ಜತೆ ಮೈತ್ರಿ ಸೂಚನೆ
ಬಿಹಾರ ಮುಖ್ಯಮಂತ್ರಿ ನಿತೀಶ್‌ ಕುಮಾರ್‌ ಮತ್ತು ಬಿಜೆಪಿ ದಾಂಪತ್ಯದಲ್ಲಿ ಒಡಕು ಉಂಟಾಗಿದೆ. ಜೆಡಿಯುನಲ್ಲಿ ನಡೆಯುತ್ತಿರುವ ನೂತನ ಬೆಳವಣಿಗೆಗಳು ಎನ್‌ಡಿಎಯಿಂದ ನಿತೀಶ್‌ ಪ್ರತ್ಯೇಕವಾಗುವ ಸಾಧ್ಯತೆಯತ್ತ ಬೆಟ್ಟು ಮಾಡುತ್ತಿವೆ. ಭಾನುವಾರ ಪ್ರಧಾನ ಮಂತ್ರಿ ನರೇಂದ್ರ ಮೋದಿ ಅವರ ನೇತೃತ್ವದಲ್ಲಿ ನಡೆದ ನೀತಿ ಆಯೋಗದ ಸಭೆಯಲ್ಲಿ ಬಿಹಾರ ಸಿಎಂ, ಜೆಡಿಯು ಮುಖ್ಯಸ್ಥ ನಿತೀಶ್‌ ಕುಮಾರ್‌ ಅವರು ಭಾಗವಹಿಸಿರಲಿಲ್ಲ. ಇದಾದ ಕೂಡಲೇ, ಮಂಗಳವಾರ ಪಕ್ಷದ ತುರ್ತು ಸಭೆಯನ್ನು ನಿತೀಶ್‌ ಅವರು ಕರೆದಿದ್ದಾರೆ. ಸಂಪೂರ್ಣ ಸುದ್ದಿಗೆ ಇಲ್ಲಿ ಕ್ಲಿಕ್‌ ಮಾಡಿ.
ವಿಸ್ತಾರ Explainer | ಬಿಜೆಪಿ ಜತೆಗೆ ನಿತೀಶ್‌ ಕುಮಾರ್‌ ಮುನಿಸಿಗೆ ಕಾರಣಗಳೇನು? ಮುಂದೇನು ಗೇಮ್‌ ಪ್ಲ್ಯಾನ್‌?

4. Cow Slaughter | ಚಿಕ್ಕಮಗಳೂರಲ್ಲಿ ಗೋಹತ್ಯೆ ಮಾಡಿದರೆ ಕರೆಂಟ್‌ ಕಟ್‌, ಆಸ್ತಿ ದಾಖಲೆ ವಶ
ಚಿಕ್ಕಮಗಳೂರು ನಗರಸಭೆ ಹಾಗೂ ಪೊಲೀಸರು ಗೋಮಾಂಸ ಅಡ್ಡೆಗಳ ಮೇಲೆ ನಿರಂತರ ದಾಳಿ ನಡೆಸುತ್ತಿದ್ದು, ಗೋಹತ್ಯೆ (Cow Slaughter ) ಮಾಡಿದವರ ಮನೆ, ಆಸ್ತಿ ದಾಖಲೆ ರದ್ದು ಮಾಡಿರುವುದರ ಜತೆಗೆ ವಿದ್ಯುತ್‌ ಸಂಪರ್ಕವನ್ನೂ ಕಡಿತಗೊಳಿಸಲಾಗಿದೆ. ನಗರದ ತಮಿಳು ಕಾಲನಿಯಲ್ಲಿ ಯಶ್ ಪಾಲ್ ಎಂಬುವರಿಗೆ ಸೇರಿದ ಮನೆಯೊಂದರ ಮೇಲೆ ದಾಳಿ ನಡೆಸಿದ ನಗರಸಭೆ ಅಧಿಕಾರಿಗಳು, ಗೋಮಾಂಸ ಸ್ಟೋರೇಜ್‌ ಬಾಕ್ಸ್‌ ಸೇರಿದಂತೆ ಹಲವು ವಸ್ತುಗಳನ್ನು ವಶಕ್ಕೆ ಪಡೆದುಕೊಂಡರು. ಸಂಪೂರ್ಣ ಸುದ್ದಿಗೆ ಇಲ್ಲಿ ಕ್ಲಿಕ್‌ ಮಾಡಿ.

5. ಸಿದ್ದರಾಮೋತ್ಸವಕ್ಕೆ ರಾಹುಲ್‌ ಬಂದಿದ್ರು; ಆಗಸ್ಟ್‌ 15ಕ್ಕೆ ಪ್ರಿಯಾಂಕಾ ಗಾಂಧಿ ಬರ್ತಾರ?
ಮಾಜಿ ಸಿಎಂ ಸಿದ್ದರಾಮಯ್ಯ ಅವರ 75ನೇ ವರ್ಷದ ಸಂದರ್ಭದಲ್ಲಿ ಕಾಂಗ್ರೆಸ್‌ ನಾಯಕ ರಾಹುಲ್‌ ಗಾಂಧಿ ಅವರ ಉಪಸ್ಥಿತಿಯನ್ನು ಸಿದ್ದರಾಮಯ್ಯ ಖಾತ್ರಿಪಡಿಸಿಕೊಂಡಿದ್ದರು. ಇದೀಗ ಪಕ್ಷದಲ್ಲಿ ವ್ಯಕ್ತಿ ಪೂಜೆ ಇಲ್ಲ ಎನ್ನುತ್ತ ಸಂಘಟನಾತ್ಮಕವಾಗಿ ಕೆಪಿಸಿಸಿ ಅಧ್ಯಕ್ಷ ಡಿ.ಕೆ. ಶಿವಕುಮಾರ್‌ ಆಯೋಜಿಸಿರುವ ಫ್ರೀಡಂ ವಾಕ್‌ ಸಮಾರೋಪಕ್ಕೆ ಪ್ರಿಯಾಂಕಾ ಗಾಂಧಿ ವಾದ್ರಾ ಅವರಿಗೆ ಆಹ್ವಾನ ನೀಡಲಾಗಿದೆ. ಪ್ರಿಯಾಂಕಾ ಸಹ ಇದಕ್ಕೆ ಧನಾತ್ಮಕವಾಗಿ ಸ್ಪಂದನೆ ಮಾಡಿದ್ದಾರೆ. ಸಂಪೂರ್ಣ ಸುದ್ದಿಗೆ ಇಲ್ಲಿ ಕ್ಲಿಕ್‌ ಮಾಡಿ.

6. ಅಲುಗಾಡಿದ್ದು ಕಟೀಲ್‌ ಕಾರಲ್ಲ, BJP ರಾಜ್ಯಾಧ್ಯಕ್ಷರ ಸೀಟು: ಸಮಸ್ಯೆ ಪರಿಹಾರಕ್ಕೆ 3 ಆಯ್ಕೆಗಳು
ಶಿಸ್ತಿನ ಪಕ್ಷ ಎಂದೇ ಕರೆಸಿಕೊಳ್ಳುವ ಬಿಜೆಪಿಯಲ್ಲಿ ಕಾರ್ಯಕರ್ತರ ಸಹನೆಯ ಕಟ್ಟೆ ಒಡೆದು, ಸ್ವತಃ BJP ರಾಜ್ಯಾಧ್ಯಕ್ಷರ ಕಾರನ್ನೇ ಜುಲೈ 27ರಂದು ಅಲುಗಾಡಿಸಿ ಆಕ್ರೋಶ ಹೊರಹಾಕಿದರು. ಅಂದು ಕೆಲ ನಿಮಿಷ ನಡೆದ ಈ ಅಲುಗಾಟ ಅಂದಿಗೇ ಮುಕ್ತಾಯವಾಗಬಹುದು ಎಂದುಕೊಂಡಿದ್ದ ಬಿಜೆಪಿ ನಾಯಕರು, ಇದರ ಆಳ ಅಗಲ ನೋಡಿ ಬೆಚ್ಚಿಬಿದ್ದಿದ್ದಾರೆ. ಅಸಲಿಗೆ ಅಲುಗಾಡಿದ್ದು ನಳಿನ್‌ಕುಮಾರ್‌ ಕಟೀಲ್‌ ಕಾರಲ್ಲ, ರಾಜ್ಯ ಬಿಜೆಪಿಯ ಸಂಘಟನೆ ಎಂಬುದು ಅರಿವಿಗೆ ಬಂದಿದೆ. ಈ ಸಮಸ್ಯೆ ಪರಿಹರಿಸಲು ಬಿಜೆಪಿ ವರಿಷ್ಠರು ಮೂರು ಆಯ್ಕೆಗಳನ್ನು ಪರಿಗಣಿಸುತ್ತಿದ್ದಾರೆ. ಈ ಕುರಿತು ಸಂಪೂರ್ಣ ವರದಿಗಾಗಿ ಇಲ್ಲಿ ಕ್ಲಿಕ್‌ ಮಾಡಿ.

7. Covid Fear | ಕರ್ನಾಟಕ ಸೇರಿದಂತೆ 7 ರಾಜ್ಯಗಳಿಗೆ ಕೇಂದ್ರದಿಂದ ಕೋವಿಡ್‌ ಅಲರ್ಟ್‌!
ಕೋವಿಡ್‌ ಸೋಂಕಿನ (Covid Fear) ತೀವ್ರತೆ ಹೆಚ್ಚಾಗುತ್ತಿದ್ದು, ಕರ್ನಾಟಕ ಸೇರಿದಂತೆ 7 ರಾಜ್ಯಗಳಿಗೆ ಮೈಮರೆಯದಂತೆ ಕೇಂದ್ರ ಸರ್ಕಾರ ಎಚ್ಚರಿಕೆ ನೀಡಿದೆ. 7 ರಾಜ್ಯಗಳಿಗೆ ಪತ್ರ ಬರೆದಿರುವ ಕೇಂದ್ರ ಆರೋಗ್ಯ ಕಾರ್ಯದರ್ಶಿ ರಾಜೇಶ್ ಭೂಷಣ್‌, ಸಾಲು ಸಾಲು ಹಬ್ಬಗಳು ಶುರುವಾಗುವುದರಿಂದ ಜನರು ಗುಂಪು ಸೇರುವುದನ್ನು ತಪ್ಪಿಸುವಂತೆ ಪತ್ರದಲ್ಲಿ ಉಲ್ಲೇಖ ಮಾಡಲಾಗಿದೆ. ಕರ್ನಾಟಕ, ತಮಿಳುನಾಡು, ಕೇರಳ, ಒಡಿಶಾ, ಮಹಾರಾಷ್ಟ್ರ, ದೆಹಲಿ ಹಾಗೂ ತೆಲಂಗಾಣ ರಾಜ್ಯಗಳಿಗೆ ಕೇಂದ್ರ ಸರ್ಕಾರ ಎಚ್ಚರಿಕೆ ನೀಡಿದೆ. ಹೀಗಾಗಿ ರಾಜ್ಯದ ಆರೋಗ್ಯ ಇಲಾಖೆ ಪ್ರಧಾನ ಕಾರ್ಯದರ್ಶಿ ಟಿ.ಕೆ.ಅನಿಲ್ ಕುಮಾರ್‌ ಅವರು ಆರೋಗ್ಯಾಧಿಕಾರಿಗಳಿಗೆ ಮುಂಜಾಗ್ರತಾ ಕ್ರಮಕೈಗೊಳ್ಳುವಂತೆ ಸೂಚಿಸಿದ್ದಾರೆ. ಸಂಪೂರ್ಣ ಸುದ್ದಿಗೆ ಇಲ್ಲಿ ಕ್ಲಿಕ್‌ ಮಾಡಿ.

8. Bulldozer attack| ಮಹಿಳೆಯನ್ನು ನಿಂದಿಸಿದ ಬಿಜೆಪಿ ನಾಯಕನ ಮನೆಯನ್ನೇ ಪುಡಿಗಟ್ಟಿದ ಯೋಗಿ ಸರ್ಕಾರ
ಸಮಾಜ ವಿರೋಧಿ ಕೃತ್ಯಗಳಲ್ಲಿ ತೊಡಗಿದವರ ಮನೆಯನ್ನು ಧ್ವಂಸಗೊಳಿಸುವ ಬುಲ್ಡೋಜರ್‌ ಕಾರ್ಯಾಚರಣೆಗೆ ಹೆಸರಾದ ಉತ್ತರ ಪ್ರದೇಶದ ಯೋಗಿ ಆದಿತ್ಯನಾಥ್‌ ಸರ್ಕಾರ ಇದೀಗ ಬಿಜೆಪಿ ನಾಯಕರು ತಪ್ಪು ಮಾಡಿದರೂ ಬಿಡುವುದಿಲ್ಲ ಎಂಬ ಖಡಕ್‌ ಸಂದೇಶವನ್ನು ನೀಡಿದೆ. ನೋಯ್ಡಾದ ಸೆಕ್ಟರ್‌ ೯೩ಯಲ್ಲಿರುವ ಗ್ರ್ಯಾಂಡ್‌ ಓಮ್ಯಾಕ್ಸ್‌ ಸೊಸೈಟಿಯಲ್ಲಿ ಶ್ರೀಕಾಂತ್‌ ತ್ಯಾಗಿ ಎಂಬ ಬಿಜೆಪಿ ನಾಯಕ ಮಹಿಳೆಯೊಬ್ಬರನ್ನು ನಿಂದಿಸಿದ್ದು, ಇದರ ವಿರುದ್ಧ ಪ್ರಕರಣ ದಾಖಲಾಗಿದೆ. ಈ ಬಗ್ಗೆ ಮಹಿಳೆ ಪೊಲೀಸರಿಗೆ, ಡಿಜಿಪಿಗೆ ದೂರು ನೀಡಿದ್ದರು. ಸಂಪೂರ್ಣ ಸುದ್ದಿಗೆ ಇಲ್ಲಿ ಕ್ಲಿಕ್‌ ಮಾಡಿ.

9. ಗ್ರಾಹಕರ ಆರ್ಡರ್‌ ರಿಟರ್ನ್‌ ಕಡಿಮೆಗೊಳಿಸಲು ಇ-ಕಾಮರ್ಸ್‌ ಕಂಪನಿಗಳ ಸರ್ಕಸ್
ನೀವು ಅಮೆಜಾನ್‌, ಫ್ಲಿಪ್‌ಕಾರ್ಟ್‌ ಅಥವಾ ಇತರ ಇ-ಕಾಮರ್ಸ್‌ ಕಂಪನಿಯಿಂದ ಬಟ್ಟೆ ಬರೆ, ಟಿ.ವಿ, ರೆಫ್ರಿಜರೇಟರ್‌, ಟಿ.ವಿ ಇತ್ಯಾದಿ ದಿನ ಬಳಕೆಯ ವಸ್ತುಗಳನ್ನು ಖರೀದಿಸಬಹುದು. ಜತೆಗೆ ಸರಿ ಹೊಂದುತ್ತಿಲ್ಲ ಎಂದು ಉತ್ಪನ್ನವನ್ನು ಹಿಂತಿರುಗಿಸಿರಬಹುದು. ಆರ್ಡರ್‌ ಅನ್ನು ರದ್ದುಪಡಿಸಿರಬಹುದು. ಆದರೆ ಇದರಿಂದ ಇ-ಕಾಮರ್ಸ್‌ ವಲಯದ ಕಂಪನಿಗಳು ನಷ್ಟ ಅನುಭವಿಸುತ್ತವೆ. ಹೀಗಾಗಿ ಗ್ರಾಹಕರಿಂದ ಆರ್ಡರ್‌ಗಳ ರಿಟರ್ನ್‌ ಪ್ರಮಾಣವನ್ನು ಗಣನೀಯ ಕಡಿತಗೊಳಿಸಲು ಕಸರತ್ತು ನಡೆಸುತ್ತಿವೆ. ಈ ಮೂಲಕ ಲೈಫ್‌ಸ್ಟೈಲ್‌ ಉತ್ಪನ್ನಗಳ ಮಾರಾಟದಲ್ಲಿ ಉಂಟಾಗುತ್ತಿರುವ ನಷ್ಟವನ್ನು ಕಡಿಮೆ ಮಾಡಲು ಮುಂದಾಗಿವೆ. ಮುಖ್ಯವಾಗಿ ಕ್ಯಾಶ್‌ ಆನ್‌ ಡೆಲಿವರಿ ಪದ್ಧತಿಯನ್ನು ಮೊಟಕುಗೊಳಿಸುತ್ತಿವೆ. ಸಂಪೂರ್ಣ ಸುದ್ದಿಗೆ ಇಲ್ಲಿ ಕ್ಲಿಕ್‌ ಮಾಡಿ.

10. Bigg Boss Kannada | ಈ ಬಾರಿ ಬಿಗ್ ಬಾಸ್ ಒಟಿಟಿ ಮಸ್ತಿ ಇಲ್ಲ; ನೋಡಲು ಟೈಮ್ ಇಲ್ಲ ಎಂದ ನೆಟ್ಟಿಗರು!
ಬಿಗ್‌ಬಾಸ್‌ ಕನ್ನಡ ಒಟಿಟಿ ಈಗಾಗಲೇ ಶುರುವಾಗಿದೆ. ಕನ್ನಡದ ಅತಿ ದೊಡ್ಡ ರಿಯಾಲಿಟಿ ಶೋ ಎಂದೇ ಕರೆಯುವ ಬಿಗ್ ಬಾಸ್ (Bigg Boss Kannada) ಒಟಿಟಿಯಲ್ಲಿ ಪ್ರಸಾರವಾಗುತ್ತಿದೆ. ಇನ್ನು ಸ್ಪರ್ಧಿಗಳ ಆಯ್ಕೆ ಕುರಿತು ಸೋಷಿಯಲ್‌ ಮೀಡಿಯಾದಲ್ಲಿ ಭಾರಿ ಚರ್ಚೆಗಳು ಆಗುತ್ತಿವೆ. ಆದರೆ, ಈ ಬಾರಿ ಬಿಗ್ ಬಾಸ್ ವಿಭಿನ್ನವಾಗಿ ಮೂಡಿ ಬರುತ್ತದೆ ಎಂಬ ನಿರೀಕ್ಷೆ ಪ್ರೇಕ್ಷಕರನ್ನು ಹುಸಿ ಮಾಡಿದೆ. ಈ ಬಾರಿ ಬಿಗ್‌ಬಾಸ್‌ ಒಟಿಟಿ ಫ್ಲಾಟ್‌ಫಾರ್ಮ್‌ನಲ್ಲಿ ದಿನದ 24 ಗಂಟೆ ಲೈವ್‌ನಲ್ಲಿ ಪ್ರಸಾರವಾಗುತ್ತಿದೆ. ಮನೆಯಲ್ಲಿ ನಡೆಯುವ ಎಲ್ಲ ಮಾಹಿತಿ ಸಿಗಲಿದೆ. ಇದೇ ಮೊದಲ ಬಾರಿಗೆ ಬಿಗ್ ಬಾಸ್ ಒಟಿಟಿಯಲ್ಲಿ ಪ್ರಸಾರ ಆಗುತ್ತಿದೆ. ಆದರೆ, ಒಟಿಟಿಯಲ್ಲಿ 24 ಗಂಟೆ ಯಾರು ನೋಡುತ್ತಾರೆ ಎಂದು ಜನರು ಕಮೆಂಟ್‌ ಮೂಲಕ ಬೇಸರ ವ್ಯಕ್ತಪಡಿಸುತ್ತಿದ್ದಾರೆ. ಸಂಪೂರ್ಣ ಸುದ್ದಿಗೆ ಇಲ್ಲಿ ಕ್ಲಿಕ್‌ ಮಾಡಿ.

Exit mobile version