Site icon Vistara News

ವಿಸ್ತಾರ TOP 10 NEWS | ಕಾಮನ್ವೆಲ್ತ್‌ನಿಂದ ರಾವತ್‌ ಅಕ್ರಮ ವೆಲ್ತ್‌ ವಿಚಾರಣೆವರೆಗಿನ ಪ್ರಮುಖ ಸುದ್ದಿಗಳಿವು

Vistara TOP 10 news 31072022

ಬೆಂಗಳೂರು: ಪಂದ್ಯಾವಳಿಯಿಂದ ಪಂದ್ಯಾವಳಿಗೆ ಭಾರತೀಯ ಕ್ರೀಡಾಪಟುಗಳು ಉತ್ತಮ ಪ್ರದರ್ಶನ ನೀಡುತ್ತಿದ್ದು, ಈಗಾಗಲೆ ಪದಕಗಳ ಸಂಖ್ಯೆ ಐದಕ್ಕೆ ಏರಿದೆ. ಕರ್ನಾಟಕದಲ್ಲಿ ಮೂರು ಕಡೆ ಸೇರಿದಂತೆ ದೇಶದ ಹದಿಮೂರು ಸ್ಥಳಗಳಲ್ಲಿ ರಾಷ್ಟ್ರೀಯ ತನಿಖಾ ದಳ ದಾಳಿ ನಡೆಸಿದೆ. ಶಿವಸೇನೆ ನಾಯಕ ಸಂಜಯ ರಾವತ್‌ ಅವರನ್ನು ಮನೆಯಲ್ಲೆ ಇ.ಡಿ ಅಧಿಕಾರಿಗಳು ವಶಕ್ಕೆ ಪಡೆದಿದ್ದಾರೆ ಎನ್ನುವುದು ಸೇರಿದಂತೆ ದಿನದ ಪ್ರಮುಖ ಸುದ್ದಿಗಳ ಗುಚ್ಛ ವಿಸ್ತಾರ TOP 10 NEWS.

1. CWG- 2022 | ಕಾಮನ್ವೆಲ್ತ್‌ ಗೇಮ್ಸ್‌ನಲ್ಲಿ ಭಾರತಕ್ಕೆ ಮತ್ತೊಂದು ಚಿನ್ನ, ವೇಟ್‌ಲಿಫ್ಟರ್‌ ಜೆರಿಮಿಗೆ ಸ್ವರ್ಣ
ಕಾಮನ್ವೆಲ್ತ್‌ ಗೇಮ್ಸ್‌ನಲ್ಲಿ ಭಾರತದ ಅಥ್ಲೀಟ್‌ಗಳ ನಿಯೋಗದ ಪದಕದ ಬೇಟೆ ಮುಂದುವರಿದೆ. ಶನಿವಾರ ಒಂದು ಬಂಗಾರ ಸೇರಿ ನಾಲ್ಕು ಪದಕಗಳನ್ನು ಗೆದ್ದಿದ್ದ ಭಾರತದ ಪದಕದ ಖಾತೆಗೆ ಭಾನುವಾರ ಇನ್ನೊಂದು ಪದಕ ಜಮೆಯಾಗಿದೆ. ಇಂದೂ ಬಂದಿರುವುದು ಸ್ವರ್ಣ ಪದಕ. ಪದಕ ತಂದು ಕೊಟ್ಟವರೂ ವೇಟ್‌ಲಿಫ್ಟರ್‌. ಪುರುಷರ ೬೭ ಕೆ.ಜಿ ವಿಭಾಗದಲ್ಲಿ ಭಾರತದ ಯುವ ಪ್ರತಿಭೆ ಜೆರೆಮಿ ಲಾಲ್‌ರಿನುಂಗಾ ಬಂಗಾರದ ಪದಕ ಗೆದ್ದಿದ್ದಾರೆ. ಜೆರೆಮಿ ಅವರ ಬಂಗಾರದ ಪದಕದೊಂದಿಗೆ ಭಾರತದ ಪ್ರಸಕ್ತ ಆವೃತ್ತಿಯ ಭಾರತದ ಪದಕಗಳ ಸಂಖ್ಯೆ ಐದಕ್ಕೆ ಏರಿದೆ. ಇದರಲ್ಲಿ ಎರಡು ಬಂಗಾರದ ಪದಕವಾದರೆ, ಇನ್ನೆರಡು ಬೆಳ್ಳಿ ಹಾಗೂ ಮತ್ತೊಂದು ಕಂಚಿನ ಪದಕವಾಗಿದೆ. (ಸಂಪೂರ್ಣ ಸುದ್ದಿಗಾಗಿ ಇಲ್ಲಿ ಕ್ಲಿಕ್‌ ಮಾಡಿ)

2. Terror Accused | ರಾಜ್ಯದಲ್ಲಿ 3 ಕಡೆ, ದೇಶದಲ್ಲಿ 13 ಕಡೆ NIA ದಾಳಿ: ಶಂಕಿತರ ತೀವ್ರ ವಿಚಾರಣೆ, ಬಿಡುಗಡೆ
ಭಯೋತ್ಪಾದಕ ಚಟುವಟಿಕೆ ನಡೆಸಲು ಹಾಗೂ ಉಗ್ರ ಸಂಘಟನೆ ಐಸಿಸ್‌ಗೆ ವಿವಿಧ ರೂಪದಲ್ಲಿ ಸಹಾಯ ಮಾಡುತ್ತಿದ್ದ ಆರೋಪದಲ್ಲಿ ರಾಜ್ಯದಲ್ಲಿ ರಾಷ್ಟ್ರೀಯ ತನಿಖಾ ದಳ (ಎನ್‌ಐಎ) ಏಕಕಾಲದಲ್ಲಿ ರಾಜ್ಯದ ಮೂರು ಕಡೆ ದಾಳಿ ನಡೆಸಿದೆ. ಉತ್ತರ ಕನ್ನಡ ಜಿಲ್ಲೆಯ ಭಟ್ಕಳ, ತುಮಕೂರು ಹಾಗೂ ಬೆಳಗಾವಿಯಲ್ಲಿ NIA ದಾಳಿ ನಡೆಸಲಾಗಿದೆ. ಇದೇ ವೇಳೆ ದೇಶದ ಆರು ರಾಜ್ಯಗಳ ಒಟ್ಟು ಹದಿಮೂರು ಸ್ಥಳಗಳಲ್ಲಿ ತಂಡ ದಾಳಿ ನಡೆಸಿದೆ. ರಾಜ್ಯ ಇಂಟಲಿಜೆನ್ಸ್, ಎನ್ಐಎ ಹಾಗೂ ಕೇಂದ್ರ ತನಿಖಾ ಸಂಸ್ಥೆಗಳ ನೇತೃತ್ವದಲ್ಲಿ ದಾಳಿ ನಡೆಸಲಾಗಿದೆ. ಐಸಿಸ್‌ ಜತೆ ನಂಟು ಹೊಂದಿದ್ದ ಭಟ್ಕಳದ ಅಬ್ದುಲ್‌ ಮುಕ್ತಧೀರ್‌ ಮತ್ತು ಆತನ ಸಹೋದರನನ್ನು ಎನ್‌ಐಎ ವಶಕ್ಕೆ ಪಡೆದು ಗುಪ್ತಸ್ಥಳದಲ್ಲಿ ವಿಚಾರಣೆ ನಡೆಸಿ ಸಂಜೆ ವೇಳೆಗೆ ಬಿಡುಗಡೆ ಮಾಡಿದೆ. ಕೊಲ್ಹಾಪುರದಲ್ಲಿ ಬಂಧಿತ ಇಬ್ಬರ ಕಚೇರಿಗಳನ್ನು ಗ್ರಾಮಸ್ಥರು ಧ್ವಂಸ ಮಾಡಿದ್ದಾರೆ. ದಿನಪೂರ್ತಿ ವಿಚಾರಣೆ ನಡೆಸಿದ ಎನ್‌ಐಎ ಅಧಿಕಾರಿಗಳು ಸಂಜೆ ವೇಳೆಗೆ ಅವರಿಬ್ಬರನ್ನು ಮನೆಗೆ ಕಳಿಸಿದ್ದಾರೆ. (ಸಂಪೂರ್ಣ ಸುದ್ದಿಗಾಗಿ ಇಲ್ಲಿ ಕ್ಲಿಕ್‌ ಮಾಡಿ)

3. ಫಾಜಿಲ್ ಹತ್ಯೆಗೆ ಬಳಸಿದ್ದ ಇಯಾನ್‌ ಕಾರು ಪತ್ತೆ: ಸ್ಥಳಕ್ಕೆ ದೌಡಾಯಿಸಿದ ಪೊಲೀಸರು
ಸುರತ್ಕಲ್‌ನಲ್ಲಿ ನಡೆದ ಫಾಜಿಲ್ ಹತ್ಯೆಗೆ ಸಂಬಂಧಿಸಿದ ಮಹತ್ವದ ಸಾಕ್ಷಿಯೊಂದು ಕಾರ್ಕಳ ತಾಲೂಕು ಇನ್ನಾದಲ್ಲಿ ಪತ್ತೆಯಾಗಿದೆ. ಫಾಜಿಲ್ ಹತ್ಯೆಗೆ ಬಳಸಿದ್ದ ಬಿಳಿ ಬಣ್ಣದ ಇಯಾನ್ ಕಾರು ಪಡುಬಿದ್ರೆಯ ಇನ್ನಾ ಗ್ರಾಮದ ನಿರ್ಜನ ಪ್ರದೇಶದಲ್ಲಿ ಪತ್ತೆಯಾಗಿದೆ. ನಿರ್ಜನ ಪ್ರದೇಶದಲ್ಲಿದ್ದ ಕಾರಿನ ಬಗ್ಗೆ ಭಾನುವಾರ ಮುಂಜಾನೆ ಸ್ಥಳೀಯರು ಉಡುಪಿ ಜಿಲ್ಲಾ ಪೊಲೀಸರಿಗೆ ಮಾಹಿತಿ ನೀಡಿದ್ದಾರೆ. ಸ್ಥಳಕ್ಕೆ ಪೊಲೀಸರು ತೆರಳಿದ್ದಾರೆ. ಸಿಸಿಟಿವಿ ದೃಶ್ಯದ ಆಧಾರದಲ್ಲಿ, ಹತ್ಯೆ ಸಂಬಂಧ ಆರೋಪಿಗಳು ಬಳಿಸಿದ್ದು ಇದೇ ಕಾರು ಎಂದು ತಿಳಿದು ಬಂದಿದೆ. (ಸಂಪೂರ್ಣ ಸುದ್ದಿಗಾಗಿ ಇಲ್ಲಿ ಕ್ಲಿಕ್‌ ಮಾಡಿ)

4. Modi Mann ki Baat | ಆಗಸ್ಟ್‌ 2ರಿಂದ 15ರವರೆಗೆ ತಿರಂಗಾ ನಿಮ್ಮ ಪ್ರೊಫೈಲ್‌ ಪಿಕ್ಚರ್‌ ಆಗಿರಲಿ
ಆಜಾದಿ ಕಾ ಅಮೃತ್‌ ಮಹೋತ್ಸವ ಒಂದು ಸಾಮೂಹಿಕ ಅಭಿಯಾನವಾಗಿ ಮಾರ್ಪಡುತ್ತಿದೆ. ಇದನ್ನು ಇನ್ನಷ್ಟು ಅದ್ಧೂರಿಗೊಳಿಸುವ, ಎಲ್ಲರನ್ನೂ ಒಳಗೊಳಿಸುವ ಉದ್ದೇಶದಿಂದ ಆಗಸ್ಟ್‌ ೨ರಿಂದ ೧೫ರವರೆಗೆ ನಾವೆಲ್ಲರೂ ನಮ್ಮ ಸಾಮಾಜಿಕ ಜಾಲತಾಣದ ಪ್ರೊಫೈಲ್‌ ಪಿಕ್ಚರ್‌ ಆಗಿ ರಾಷ್ಟ್ರಧ್ವಜವನ್ನು ಬಳಸೋಣ ಎಂದು ಜನರಿಗೆ ಮನವಿ ಮಾಡಿಕೊಂಡಿದ್ದಾರೆ ಪ್ರಧಾನಿ ನರೇಂದ್ರ ಮೋದಿ. ಆಕಾಶವಾಣಿಯಲ್ಲಿ ಪ್ರಸಾರವಾಗುವ ಮಾಸಿಕ ಮನ್‌ ಕಿ ಬಾತ್‌ನಲ್ಲಿ ಈ ಮನವಿ ಮಾಡಿರುವ ಅವರು, ಆಗಸ್ಟ್‌ ೧೩ರಿಂದ ೧೫ರವರೆಗೆ ನಡೆಯುವ ಹರ್‌ ಘರ್‌ ತಿರಂಗಾ ಆಂದೋಲನವನ್ನು ಕೂಡಾ ಯಶಸ್ವಿಗೊಳಿಸುವಂತೆ ದೇಶವಾಸಿಗಳ ಮುಂದೆ ಮನವಿ ಮಾಡಿದ್ದಾರೆ. (ಸಂಪೂರ್ಣ ಸುದ್ದಿಗಾಗಿ ಇಲ್ಲಿ ಕ್ಲಿಕ್‌ ಮಾಡಿ)
ಮಧುವಿನಿಂದಲೇ ಬದುಕು ಕಟ್ಟುವ ಮಧುಕೇಶ್ವರ್‌ ಹೆಗಡೆ: ಮೋದಿ ಹೇಳಿದ ಈ ಸಾಹಸಿ ʻಜೇನುʼಗಾರ ಯಾರು?
ಮೋದಿ ʻಮನ್‌ʼ ಗೆದ್ದ ಕರ್ನಾಟಕದ ಅಮೃತ ಭಾರತಿಗೆ ಕನ್ನಡದಾರತಿ: ಏನಿದರ ವಿಶೇಷ?

5. JDS Convention | ದೇವೇಗೌಡರ ತ್ಯಾಗ ನೆನೆದು ಕಣ್ಣೀರಿಟ್ಟ ಎಚ್‌ಡಿಕೆ, ರೇವಣ್ಣ
ನಾಗಮಂಗಲದ ಜೆಡಿಎಸ್‌ ಸಮಾವೇಶದಲ್ಲಿ(JDS Convention) ಎಚ್‌.ಡಿ.ಕುಮಾರಸ್ವಾಮಿ ಹಾಗೂ ಎಚ್.ಡಿ.ರೇವಣ್ಣ ಕಣ್ಣೀರು ಹಾಕಿದ್ದಾರೆ. ಅನಾರೋಗ್ಯದ ಹಿನ್ನೆಲೆಯಲ್ಲಿ ಎಚ್‌.ಡಿ.ದೇವೇಗೌಡ ಅವರು ಕಾರ್ಯಕ್ರಮಕ್ಕೆ ಆಗಮಿಸಲು ಸಾಧ್ಯವಾಗದೆ ಮನೆಯಿಂದಲೇ ಟಿವಿಯಲ್ಲಿ ಸಮಾರಂಭ ವೀಕ್ಷಣೆ ಮಾಡುತ್ತಿದ್ದುದ್ದನ್ನು ಸ್ಮರಿಸಿಕೊಂಡ ಎಚ್‌.ಡಿ. ಕುಮಾರಸ್ವಾಮಿ, ಅವರು ಮಾಡಿದ ತ್ಯಾಗವನ್ನು ನೆನೆದು ಭಾವುಕರಾದರು. ಈ ವೇಳೆ ಅವರನ್ನು ಕಂಡು ರೇವಣ್ಣ, ವೇದಿಕೆಯಲ್ಲಿದ್ದ ಜೆಡಿಎಸ್‌ ರಾಜ್ಯ ಅಧ್ಯಕ್ಷ ಸಿ.ಎಂ. ಇಬ್ರಾಹಿಂ ಕೂಡ ಕಣ್ಣೀರು ಹಾಕಿದರು. (ಸಂಪೂರ್ಣ ಸುದ್ದಿಗಾಗಿ ಇಲ್ಲಿ ಕ್ಲಿಕ್‌ ಮಾಡಿ)
JDS Convention | ಹಾಸನ, ಮಂಡ್ಯ ದೇವೇಗೌಡರ ಎರಡು ಕಣ್ಣುಗಳು: ರೇವಣ್ಣ ವ್ಯಾಖ್ಯಾನ
JDS Convention | ಬಡವರಿಗಾಗಿ ಮುಂದಿನ 3 ತಿಂಗಳು ನಿರಂತರ ಹೋರಾಟ: ಮಾಜಿ ಸಿಎಂ ಎಚ್‌.ಡಿ. ಕುಮಾರಸ್ವಾಮಿ

6. ಇ.ಡಿ ಪಂಜರದಲ್ಲಿ ಶಿವಸೇನಾ ಸಂಸದ ಸಂಜಯ್‌ ರಾವತ್‌, ಮನೆಯಲ್ಲೇ ವಶಕ್ಕೆ ಪಡೆದ ಅಧಿಕಾರಿಗಳು
ಬಹುಕೋಟಿ ಭೂ ಹಗರಣಕ್ಕೆ ಸಂಬಂಧಿಸಿ ಜಾರಿ ನಿರ್ದೇಶನಾಲಯದ ಅಧಿಕಾರಿಗಳು ಶಿವಸೇನೆಯ ಸಂಸದ ಸಂಜಯ್‌ ರಾವತ್‌ ಅವರನ್ನು ವಶಕ್ಕೆ ಪಡೆದಿದ್ದಾರೆ. ಭಾನುವಾರ ಬೆಳಗ್ಗೆ ಮುಂಬಯಿಯಲ್ಲಿರುವ ಮನೆಗೇ ನೇರವಾಗಿ ಲಗ್ಗೆ ಇಟ್ಟ ಅಧಿಕಾರಿಗಳು ಮಧ್ಯಾಹ್ನದವರೆಗೂ ದಾಖಲೆಗಳನ್ನು ಜಾಲಾಡಿದ್ದಾರೆ. ಅಂತಿಮವಾಗಿ ಸಂಜೆಯ ಹೊತ್ತಿಗೆ ಅವರನ್ನು ವಶಕ್ಕೆ ಪಡೆದಿದ್ದಾರೆ ಎಂದು ಮೂಲಗಳು ತಿಳಿಸಿವೆ. (ಸಂಪೂರ್ಣ ಸುದ್ದಿಗಾಗಿ ಇಲ್ಲಿ ಕ್ಲಿಕ್‌ ಮಾಡಿ)

7. ಜಾರ್ಖಂಡ್‌ ಶಾಸಕರು ಗಿಫ್ಟ್‌ ತಗೊಳ್ಳಿಕ್ಕೆ ಹೋಗ್ತಿದ್ರಂತೆ! ಅರೆಸ್ಟ್‌ ಆದ ಮೂವರೂ ಕಾಂಗ್ರೆಸ್‌ನಿಂದ ಸಸ್ಪೆಂಡ್!
ಪಶ್ಚಿಮ ಬಂಗಾಳದ ಹೌರಾದಲ್ಲಿ ಹಣ ಸಾಗಾಟ ಮಾಡುವ ವೇಳೆ ಸಿಕ್ಕಿಬಿದ್ದ ಜಾರ್ಖಂಡ್‌ನ ಮೂವರು ಕಾಂಗ್ರೆಸ್‌ ಶಾಸಕರನ್ನು ಪಕ್ಷದಿಂದ ಅಮಾನತುಗೊಳಿಸಲಾಗಿದೆ. ಅಂದ ಹಾಗೆ ಅವರ ಕೈಯಲ್ಲಿದ್ದ ಒಟ್ಟು ಹಣ ೫೦ ಲಕ್ಷ ರೂ. ಎಂದು ಈಗ ಲೆಕ್ಕ ಹಾಕಲಾಗಿದೆ. ಅವರೇ ಹೇಳಿರುವ ಪ್ರಕಾರ, ಅವರು ಇಷ್ಟು ದುಡ್ಡು ಹಿಡಿದುಕೊಂಡು ಗಿಫ್ಟ್‌ ತಗೊಳ್ಳಿಕೆ ಹೋಗ್ತಿದ್ರಂತೆ! ಜಮ್ತಾರಾದ ಶಾಸಕ ಇರ್ಫಾನ್‌ ಅನ್ಸಾರಿ, ರಾಂಚಿ ಜಿಲ್ಲೆಯ ಖಜ್ರಿಯ ಜನಪ್ರತಿನಿಧಿ ರಾಜೇಶ್‌ ಕಶ್ಯಪ್‌ ಮತ್ತು ಶಿಮ್‌ದೇಗಾ ಜಿಲ್ಲೆಯ ಕೊಲೆಬಿರಾ ವಿಧಾನಸಭಾ ಕ್ಷೇತ್ರದ ಪ್ರತಿನಿಧಿ ನಮನ್‌ ಬಿಕ್ಸಲ್‌ ಕೊಂಗಾರಿ ಅವರು ಸಾಗುತ್ತಿದ್ದ ಎಸ್‌ಯುವಿಯನ್ನು ಪಂಚ್ಲಾ ಪೊಲೀಸ್‌ ಠಾಣೆಯ ರಾಣಿಹಟಿ ಎಂಬಲ್ಲಿ ರಾಷ್ಟ್ರೀಯ ಹೆದ್ದಾರಿ-೧೬ರಲ್ಲಿ ಶನಿವಾರ ರಾತ್ರಿ ತಡೆಯಲಾಗಿತ್ತು. (ಸಂಪೂರ್ಣ ಸುದ್ದಿಗಾಗಿ ಇಲ್ಲಿ ಕ್ಲಿಕ್‌ ಮಾಡಿ)

8. CWG- 2022 | ಪಾಕಿಸ್ತಾನ ವಿರುದ್ಧ ಭಾರತೀಯ ವನಿತೆಯರಿಗೆ 8 ವಿಕೆಟ್‌ ಭರ್ಜರಿ ಜಯ
ಸಂಘಟಿತ ಬೌಲಿಂಗ್‌ ದಾಳಿ ಹಾಗೂ ಪ್ರಭಾವಿ ಬ್ಯಾಟಿಂಗ್‌ ಪ್ರದರ್ಶನ ನೀಡಿದ ಭಾರತ ವನಿತೆಯರ ಕ್ರಿಕೆಟ್‌ ತಂಡದ ಕಾಮನ್ವೆಲ್ತ್‌ ಗೇಮ್ಸ್‌ನ (CWG- 2022) ಮಹಿಳೆಯರ ಟಿ೨೦ ಕ್ರಿಕೆಟ್‌ನ ತನ್ನ ಎರಡನೇ ಪಂದ್ಯದಲ್ಲಿ ಸಾಂಪ್ರದಾಯಿಕ ಎದುರಾಳಿ ಪಾಕಿಸ್ತಾನ ವಿರುದ್ಧ ೮ ವಿಕೆಟ್‌ಗಳ ಭರ್ಜರಿ ಜಯ ದಾಖಲಿಸಿದೆ. ಇದರೊಂದಿಗೆ ಮೊದಲ ಪಂದ್ಯದಲ್ಲಿ ಆಸ್ಟ್ರೇಲಿಯಾ ವಿರುದ್ಧದ ಅನಿರೀಕ್ಷಿತ ಸೋಲಿನ ನಿರಾಸೆ ಮರೆಯಿತು. (ಸಂಪೂರ್ಣ ಸುದ್ದಿಗಾಗಿ ಇಲ್ಲಿ ಕ್ಲಿಕ್‌ ಮಾಡಿ)

9. Monkeypox fear | ಬೆಂಗಳೂರಿಗೆ ಬಂದಿದ್ದ ಆಫ್ರಿಕಾ ಮೂಲದ ವ್ಯಕ್ತಿಯಲ್ಲಿ ಮಂಕಿಪಾಕ್ಸ್‌ ಇಲ್ಲ
ಆಫ್ರಿಕಾದ ಇಥಿಯೋಪಿಯಾ ಮೂಲದ ವ್ಯಕ್ತಿಗೆ ಮಂಕಿಪಾಕ್ಸ್‌ ನೆಗಟಿವ್‌ ವರದಿ (Monkeypox fear) ಬಂದಿದೆ. ಈತ ಬೆಂಗಳೂರಿಗೆ ಬಂದಿದ್ದಾಗ ವಿಮಾನ ನಿಲ್ದಾಣದಲ್ಲಿ ಮಂಕಿಪಾಕ್ಸ್ ಲಕ್ಷಣಗಳು ಕಂಡು ಬಂದಿತ್ತು. ಈ ಹಿನ್ನೆಲೆಯಲ್ಲಿ ಅವರನ್ನು ಪರೀಕ್ಷೆಗೊಳಪಡಿಸಲಾಗಿತ್ತು. ಈಗ ಅವರ ಪರೀಕ್ಷಾ ವರದಿಯಲ್ಲಿ ಮಂಕಿಪಾಕ್ಸ್ ನೆಗಟೀವ್ ಎಂದು ಧೃಢಪಟ್ಟಿದ್ದು, ಚಿಕನ್ ಪಾಕ್ಸ್ ಇರುವುದು ಪತ್ತೆಯಾಗಿದೆ. ಈ ಕುರಿತು ಆರೋಗ್ಯ ಸಚಿವ ಡಾ. ಸುಧಾಕರ್‌ ಟ್ವೀಟ್‌ ಮಾಡಿದ್ದಾರೆ. ಈ ನಡುವೆ, ಕೇರಳದ ತ್ರಿಶೂರ್‌ನಲ್ಲಿ ಮಂಕಿ ಪಾಕ್ಸ್‌ಗೆ ಯುವಕನೊಬ್ಬ ಬಲಿಯಾಗಿದ್ದಾನೆ. ಇದು ಈ ಸೋಂಕಿಗೆ ದೇಶದಲ್ಲಿನ ಮೊದಲ ಬಲಿಯಾಗಿದೆ. (ಸಂಪೂರ್ಣ ಸುದ್ದಿಗಾಗಿ ಇಲ್ಲಿ ಕ್ಲಿಕ್‌ ಮಾಡಿ)

10. ಸಿದ್ದರಾಮಯ್ಯಗೆ ಸಿಎಂ ಸ್ಥಾನ ಬಿಟ್ಟು ಕೊಟ್ಟಿದ್ದು ಡಿ.ಕೆ.ಶಿವಕುಮಾರ್‌: ನಂಜಾವಧೂತ ಸ್ವಾಮೀಜಿ
ಕಾಂಗ್ರೆಸ್‌ನಲ್ಲಿ ಮುಖ್ಯಮಂತ್ರಿ ಕುರ್ಚಿಗಾಗಿ ನಡೆಯುತ್ತಿರುವ ಸಮರ ಹೊಸತೇನಲ್ಲ. ಈ ಮಧ್ಯೆ ಸಿದ್ದರಾಮಯ್ಯ ಅವರಿಗೆ ಮುಖ್ಯಮಂತ್ರಿ ಸ್ಥಾನ ಬಿಟ್ಟು ಕೊಟ್ಟಿದ್ದು ಡಿ.ಕೆ.ಶಿವಕುಮಾರ್‌ ಎಂದು ನಂಜಾವಧೂತ ಸ್ವಾಮೀಜಿ ಹೇಳಿಕೆ ನೀಡಿದ್ದಾರೆ. ಬಿಡದಿಯ ಹೆಜ್ಜಾಲದಲ್ಲಿ ನಡೆದ ಕೆಂಪೇಗೌಡ ಪುತ್ಥಳಿ ಅನಾವರಣ ಕಾರ್ಯಕ್ರಮದಲ್ಲಿ ಮಾತನಾಡಿರುವ ಅವರು “ಒಕ್ಕಲಿಗ ನಾಯಕರು ಅವಕಾಶವಾದಿಗಳಲ್ಲ, ಬದಲಿಗೆ ಸ್ವಾಭಿಮಾನಿಗಳುʼʼ ಎಂದಿದ್ದಾರೆ. ಎಚ್‌.ಸಿ.ಬಾಲಕೃಷ್ಣ ಬದ್ಧತೆ ಇಟ್ಟುಕೊಂಡು ಕೆಲಸ ಮಾಡುವಂತಹ ರಾಜಕಾರಣಿ. ಎಂಎಲ್‌ಎ ಆಗಿದ್ದಾಗಲೇ ಅವರೇನಾದರೂ ಬಿಜೆಪಿ ಪಕ್ಷದಲ್ಲಿ ಉಳಿದಿದ್ದರೆ ಇವತ್ತಿಗೆ ಮುಖ್ಯಮಂತ್ರಿ ಅಭ್ಯರ್ಥಿಯಾಗಿ ಇರುತ್ತಿದ್ದರು ಎಂದಿದ್ದಾರೆ. (ಸಂಪೂರ್ಣ ಸುದ್ದಿಗಾಗಿ ಇಲ್ಲಿ ಕ್ಲಿಕ್‌ ಮಾಡಿ)

Exit mobile version