Site icon Vistara News

Walmart: ವಾಲ್‌ಮಾರ್ಟ್‌ನಲ್ಲಿ ಮೇಡ್‌ ಇನ್‌ ಇಂಡಿಯಾ ಸೈಕಲ್‌ ಲಾಂಚ್‌!

hero

hero

ನ್ಯೂಯಾರ್ಕ್‌: ಅಮೆರಿಕದ ವಾಲ್‌ಮಾರ್ಟ್‌ (Walmart) ಮೇಡ್ ಇನ್ ಇಂಡಿಯಾ ಸೈಕಲ್‌ಗಳನ್ನು ಬಿಡುಗಡೆ ಮಾಡಿರುವುದಕ್ಕೆ ಅಮೆರಿಕದಲ್ಲಿನ ಭಾರತದ ರಾಯಭಾರಿ (India’s ambassador) ತರಣ್ಜಿತ್ ಸಿಂಗ್ ಸಂಧು (Taranjit Singh Sandhu) ಮೆಚ್ಚುಗೆ ವ್ಯಕ್ತಪಡಿಸಿದ್ದಾರೆ. ಸಾಮಾಜಿಕ ಜಾಲತಾಣ ಎಕ್ಸ್‌ನಲ್ಲಿ ನೀಲಿ ಬಣ್ಣದ ಸೈಕಲ್‌ ಫೋಟೋವನ್ನು ಹಂಚಿಕೊಂಡ ಸಂಧು, ʼಮೇಕ್ ಇನ್ ಇಂಡಿಯಾ, ಮೇಕ್ ಫಾರ್ ದಿ ವರ್ಲ್ಡ್! ಹೀರೋ ಸೈಕಲ್‌ ಲುಧಿಯಾನಾದಲ್ಲಿ ತಯಾರಿಸಿದ ಸೈಕಲ್‌ ಅನ್ನು ವಾಲ್‌ಮಾರ್ಟ್‌ನಲ್ಲಿ ಬಿಡುಗಡೆಗೊಳಿಸಲು ಸಂತೋಷವಾಗುತ್ತಿದೆʼ ಎಂದು ಬರೆದುಕೊಂಡಿದ್ದಾರೆ.

ಕ್ರಿಸ್‌ಮಸ್‌ ರಜಾದಿನಗಳಿಗೆ ಮುಂಚಿತವಾಗಿ ಮೊದಲ ಮೇಡ್ ಇನ್ ಇಂಡಿಯಾ ಸೈಕಲ್‌ಗಳು ಅಮೆರಿಕ ಮಾರುಕಟ್ಟೆಯ ಆಯ್ದ ಮಳಿಗೆಗಳನ್ನು ತಲುಪಲಿವೆ ಎಂದು ವಾಲ್‌ಮಾರ್ಟ್‌ ಮಂಗಳವಾರ ಪ್ರಕಟಿಸಿದೆ. 2027ರ ವೇಳೆಗೆ ಭಾರತದಿಂದ ವಾರ್ಷಿಕವಾಗಿ 10 ಶತಕೋಟಿ ಡಾಲರ್‌ ಮೌಲ್ಯದ ಸರಕುಗಳನ್ನು ಆಮದು ಮಾಡಿಕೊಳ್ಳಲು ವಾಲ್‌ಮಾರ್ಟ್‌ ಯೋಜನೆ ರೂಪಿಸಿದೆ. ಅದರ ಭಾಗವಾಗಿ ಈ ಕ್ರಮ ಕೈಗೊಳ್ಳಲಾಗಿದೆ.

ಭಾರತದ ಖ್ಯಾತ ಸೈಕಲ್‌ ತಯಾರಕ ಕಂಪನಿ ಹೀರೋ ಇಕೋಟೆಕ್ ವಾಲ್‌ಮಾರ್ಟ್‌ಗಾಗಿ ವಿಶೇಷವಾಗಿ ಕ್ರೂಸರ್ ಶೈಲಿಯ ಸೈಕಲ್‌ ವಿನ್ಯಾಸಗೊಳಿಸಿದೆ. ಇದು ವಯಸ್ಕ ಪುರುಷರ ಮತ್ತು ಮಹಿಳೆಯರ ಆವೃತ್ತಿಗಳಲ್ಲಿ ಲಭ್ಯ. ವಾಲ್‌ಮಾರ್ಟ್‌ನ ಎಕ್ಸಿಕ್ಯುಟಿವ್‌ ವೈಸ್‌ ಪ್ರೆಸಿಡೆಂಟ್‌ ಆಂಡ್ರಿಯಾ ಆಲ್ಬ್ರೈಟ್ ಮಾತನಾಡಿ, “ವಾಲ್‌ಮಾರ್ಟ್‌ನ ಗ್ರಾಹಕರ ಬೇಡಿಕೆಗಳನ್ನು ಪೂರೈಸಲು ಭಾರತ ಉತ್ತಮ ಸಹಕಾರ ನೀಡುತ್ತಿದೆ. ಹೀರೋ ಇಕೋಟೆಕ್‌ನೊಂದಿಗಿನ ಪಾಲುದಾರಿಕೆಯ ಬಗ್ಗೆ ಉತ್ಸುಕರಾಗಿದ್ದೇವೆʼʼ ಎಂದು ಸಂತಸ ವ್ಯಕ್ತಪಡಿಸಿದ್ದಾರೆ. ವಾಲ್‌ಮಾರ್ಟ್‌ ಈಗಾಗಲೇ ಭಾರತದಿಂದ ವಿವಿಧ ಉತ್ಪನ್ನಗಳನ್ನು ರಫ್ತು ಮಾಡಿಕೊಳ್ಳುತ್ತಿದೆ.

ವಾಲ್‌ಮಾರ್ಟ್‌ ವೃದ್ಧಿ

ವಾಲ್‌ಮಾರ್ಟ್‌ 2019ರಲ್ಲಿ ʼವಾಲ್‌ಮಾರ್ಟ್‌ ವೃದ್ಧಿʼ ಎನ್ನುವ ಯೋಜನೆಯನ್ನು ಆರಂಭಿಸಿತ್ತು. ಅದರಂತೆ ಸುಮಾರು 50,000 ಅತೀ ಸಣ್ಣ, ಸಣ್ಣ ಮತ್ತು ಮಧ್ಯಮ ಉದ್ಯಮಗಳನ್ನು ಸಬಲೀಕರಣಗೊಳಿಸುವ ಮೂಲಕ ಮೇಕ್ ಇನ್ ಇಂಡಿಯಾಕ್ಕೆ ಕೊಡುಗೆ ನೀಡುವ ಗುರಿಯನ್ನು ಹೊಂದಿದೆ ಎಂದು ಕಂಪನಿ ತಿಳಿಸಿದೆ.

ಹೀರೋ ಇಕೋಟೆಕ್ ಕಂಪನಿಯು ಭಾರತದಲ್ಲಿ ಮೊಬಿಲಿಟಿ ಉತ್ಪನ್ನಗಳ ಪ್ರಮುಖ ತಯಾರಕರಲ್ಲಿ ಒಂದಾಗಿದ್ದು, 80ಕ್ಕೂ ಹೆಚ್ಚು ದೇಶಗಳಿಗೆ ಸೈಕಲ್‌ ರಫ್ತು ಮಾಡುತ್ತದೆ. ಆ ಮೂಲಕ ಭಾರತದ ಅತಿದೊಡ್ಡ ಸೈಕಲ್‌ ರಫ್ತುದಾರ ಎಂಬ ಹೆಗ್ಗಳಿಕೆಯನ್ನು ಹೊಂದಿದೆ.

ಭಾರತದತ್ತ ಒಲವು

ಪ್ರಪಂಚದ ಅತಿ ದೊಡ್ಡ ಚಿಲ್ಲರೆ ವ್ಯಾಪಾರಿ ವಾಲ್‌ಮಾರ್ಟ್‌ ಈ ವರ್ಷದ ಜನವರಿ ಮತ್ತು ಆಗಸ್ಟ್ ನಡುವೆ ಭಾರತದಿಂದ ಅಧಿಕ ಪ್ರಮಾಣದಲ್ಲಿ ಉತ್ಪನ್ನಗಳನ್ನು ಆಮದು ಮಾಡಿಕೊಂಡಿದೆ. ಆ ಮೂಲಕ ಚೀನಾದ ಮೇಲಿನ ತನ್ನ ಅವಲಂಬನೆಯನ್ನು ಕಡಿಮೆ ಮಾಡಲು ಮುಂದಾಗಿದೆ. ಚೀನಾದ ಮೇಲೆ ಅವಲಂಬನೆಯು 2018ರಲ್ಲಿ ಶೇ. 80 ಇದ್ದರೆ ಈ ವರ್ಷ ಶೇ. 60 ಕುಸಿದಿದೆ ಎಂದು ಅಂಕಿಅಂಶಗಳು ತಿಳಿಸಿವೆ. ಆದಾಗ್ಯೂ ಚೀನಾ ಸರಕುಗಳನ್ನು ಪೂರೈಸುವ ವಾಲ್‌ಮಾರ್ಟ್‌ನ ಅತಿದೊಡ್ಡ ದೇಶವಾಗಿ ಇನ್ನೂ ಉಳಿದುಕೊಂಡಿದೆ. 2018ರಲ್ಲಿ ವಾಲ್‌ಮಾರ್ಟ್ ಭಾರತೀಯ ಇ-ಕಾಮರ್ಸ್ ಸಂಸ್ಥೆ ಫ್ಲಿಪ್‌ಕಾರ್ಟ್‌ನಲ್ಲಿ 77% ಪಾಲನ್ನು ಸ್ವಾಧೀನಪಡಿಸಿಕೊಂಡಿತ್ತು. ಬಳಿಕ ಇಲ್ಲಿ ವಾಲ್‌ಮಾರ್ಟ್ ಬೆಳವಣಿಗೆಯನ್ನು ಹೆಚ್ಚಿಸಿಕೊಂಡಿದೆ.

ಇದನ್ನೂ ಓದಿ: IPO: ಈ ವಾರ 5 ಕಂಪನಿಗಳ ಐಪಿಒ ಬಿಡುಗಡೆ; ಷೇರು ಬೆಲೆ ಚೆಕ್ ಮಾಡ್ಕೊಳ್ಳಿ

Exit mobile version