ನವದೆಹಲಿ: ವಿವಾಹ ಸಮಾರಂಭ ಎಂದರೆ ಅಲ್ಲಿ ಸಂಭ್ರಮ ಮನೆ ಮಾಡಿರುತ್ತದೆ. ಅದರಲ್ಲೂ ಭಾರತದಲ್ಲಂತೂ ಮದುವೆಗೆ ವಿಶೇಷ ಪ್ರಾಶಸ್ತ್ಯ. ಇಲ್ಲಿ ಮದುವೆ ಎನ್ನುವುದು ಸಂಭ್ರಮದ ಜತೆಗೆ ವ್ಯವಹಾರಕ್ಕೂ ಉತ್ತೇಜನ ನೀಡುತ್ತದೆ. ಮುಂದಿನ ತಿಂಗಳು ಭಾರತದಲ್ಲಿ ಸುಮಾರು 38 ಲಕ್ಷ ಮದುವೆ ಸಮಾರಂಭ ನಡೆಯಲಿದ್ದು (Wedding Season), ಆ ಮೂಲಕ ಸರಕು ಮತ್ತು ಸೇವೆಗಳನ್ನು ಒಳಗೊಂಡ ಪ್ರಮುಖ ಚಿಲ್ಲರೆ ವಲಯದಲ್ಲಿ 4.74 ಲಕ್ಷ ಕೋಟಿ ರೂ.ಗಳ ವ್ಯವಹಾರ ನಡೆಯುವ ನಿರೀಕ್ಷೆ ಇದೆ ಎಂದು ಕಾನ್ಫಡರೇಷನ್ ಆಫ್ ಆಲ್ ಇಂಡಿಯಾ ಟ್ರೇಡರ್ಸ್ (Confederation of All India Traders-CAIT) ಹೇಳಿದೆ. ಕಳೆದ ವರ್ಷ ಈ ಅವಧಿಯಲ್ಲಿ ಸುಮಾರು 32 ಲಕ್ಷ ವಿವಾಹಗಳು ನಡೆದು, ಸುಮಾರು 3.75 ಲಕ್ಷ ಕೋಟಿ ರೂ. ವ್ಯವಹಾರ ನಡೆದಿತ್ತು.
ನವೆಂಬರ್ 23, 24, 27, 28 ಮತ್ತು 29 ಜತೆಗೆ ಡಿಸೆಂಬರ್ 3, 4, 7, 8, 9 ಮತ್ತು 15ರಂದು ವಿವಾಹಕ್ಕೆ ಶುಭ ಮುಹೂರ್ತವಿದೆ ಎಂದು ಪರಿಗಣಿಸಲಾಗುತ್ತದೆ. ʼʼಈ ಋತುವಿನಲ್ಲಿ ದೆಹಲಿ ಒಂದರಲ್ಲೇ 4 ಲಕ್ಷಕ್ಕೂ ಹೆಚ್ಚು ವಿವಾಹಗಳು ನಡೆಯುವ ನಿರೀಕ್ಷೆಯಿದ್ದು, ಅಂದಾಜು 1.25 ಲಕ್ಷ ಕೋಟಿ ರೂ. ವ್ಯಾಪಾರ ನಡೆಯಲಿದೆʼʼ ಎಂದು ಸಿಎಐಟಿ ರಾಷ್ಟ್ರೀಯ ಅಧ್ಯಕ್ಷ ಬಿ.ಸಿ.ಭಾರ್ತಿಯಾ ಮತ್ತು ಪ್ರಧಾನ ಕಾರ್ಯದರ್ಶಿ ಪ್ರವೀಣ್ ಖಂಡೇಲ್ವಾಲ್ ವಿವರಿಸಿದ್ದಾರೆ.
ಖರ್ಚೆಷ್ಟು?
ಈ ಋತುವಿನಲ್ಲಿ 3 ಲಕ್ಷ ರೂ.ಗಿಂತ ಹೆಚ್ಚಿನ ವೆಚ್ಚದ ಸುಮಾರು 7 ಲಕ್ಷ ಮದುವೆಗಳು, 6 ಲಕ್ಷ ರೂ. ವೆಚ್ಚದ 8 ಲಕ್ಷ ವಿವಾಹಗಳು, 10 ಲಕ್ಷ ರೂ.ಗಳ 10 ಲಕ್ಷ ವಿವಾಹಗಳು, 15 ಲಕ್ಷ ರೂ.ಗಳ 7 ಲಕ್ಷ ವಿವಾಹಗಳು, 25 ಲಕ್ಷ ರೂ.ಗಳ 5 ಲಕ್ಷ ವಿವಾಹಗಳು, 50 ಲಕ್ಷ ರೂ.ಗಳ 50 ಸಾವಿರ ವಿವಾಹಗಳು ಮತ್ತು 1 ಕೋಟಿ ರೂ.ಗಿಂತ ಹೆಚ್ಚಿನ ವೆಚ್ಚದ 50 ಸಾವಿರ ವಿವಾಹಗಳನ್ನು ಸಿಎಐಟಿ ನಿರೀಕ್ಷಿಸಿದೆ.
ಒಟ್ಟು ವ್ಯವಹಾರಗಳ ಪೈಕಿ ಶೇ. 10ರಷ್ಟು ಅಂದರೆ ಸುಮಾರು 40,000 ಕೋಟಿ ರೂ.ಗಳಷ್ಟು ಜವುಳಿ ಕ್ಷೇತ್ರವೊಂದರಲ್ಲೇ ನಡೆಯಲಿದೆ. ಆಭರಣ (ಶೇ. 15), ಎಲೆಕ್ಟ್ರಾನಿಕ್ಸ್, ಎಲೆಕ್ಟ್ರಿಕಲ್ಸ್ ಮತ್ತು ಗ್ರಾಹಕ ಬಾಳಿಕೆ ಬರುವ ವಸ್ತು (ಶೇ. 5), ಒಣ ಹಣ್ಣುಗಳು, ಹಣ್ಣುಗಳು, ಸಿಹಿತಿಂಡಿಗಳು (ಶೇ. 5), ಆಹಾರ ಧಾನ್ಯ, ದಿನಸಿ ಮತ್ತು ತರಕಾರಿಗಳು (ಶೇ. 5), ಉಡುಗೊರೆ ವಸ್ತುಗಳು (ಶೇ. 4) ವ್ಯವಹಾರ ನಡೆಯಲಿದೆ. ದೊಡ್ಡ ನಗರಗಳ ಜತೆಗೆ 3 ಮತ್ತು 4ನೇ ಹಂತಗಳ ನಗರಗಳಲ್ಲಿಯೂ ಉತ್ತಮ ವ್ಯವಹಾರ ಕುದುರಲಿದೆ. ಪಾರ್ಟಿ ವೇರ್ ಜತೆಗೆ ಎಲ್ಲ ರೀತಿಯ ಉಡುಪುಗಳಿಗೂ ಮದುವೆ ಸೀಸನ್‌ನಲ್ಲಿ ಬೇಡಿಕೆ ಹೆಚ್ಚಲಿದೆ.
ಇದನ್ನೂ ಓದಿ: Made in India: ನಾಲ್ಕು ಅಪರೂಪದ ಕಾಯಿಲೆಗಳಿಗೆ ಸ್ವದೇಶಿ ಔಷಧ ಆವಿಷ್ಕಾರ; 100 ಪಟ್ಟು ಇಳಿಯಲಿದೆ ಚಿಕಿತ್ಸೆ ವೆಚ್ಚ!
ಸೇವೆಗಳ ಪೈಕಿ ಔತಣಕೂಟ ಸಭಾಂಗಣಗಳು, ಹೋಟೆಲ್‌ಗಳು ಮತ್ತು ಇತರ ಕಲ್ಯಾಣ ಸ್ಥಳಗಳಿಗೆ ಶೇ. 5, ಈವೆಂಟ್ ಮ್ಯಾನೇಜ್‌ಮೆಂಟ್‌ಗೆ ಶೇ. 5, ಟೆಂಟ್ ಅಲಂಕಾರಕ್ಕೆ ಶೇ. 12, ಅಡುಗೆ ಸೇವೆಗಳಿಗೆ ಶೇ. 10, ಹೂವಿನ ಅಲಂಕಾರಕ್ಕೆ ಶೇ. 4, ಪ್ರಯಾಣ ಮತ್ತು ಕ್ಯಾಬ್ ಸೇವೆಗಳಿಗೆ ಶೇ. 3, ಫೋಟೊ ಮತ್ತು ವಿಡಿಯೋ ಶೂಟ್‌ಗಳಿಗೆ ಶೇ. 2ರಷ್ಟು ವ್ಯವಹಾರ ಹಂಚಿಕೆಯಾಗಲಿದೆ. ಆರ್ಕೆಸ್ಟ್ರಾ ಮತ್ತು ಬ್ಯಾಂಡ್ ಸೇವೆಗಳಿಗೆ ಶೇ. 3, ದೀಪಗಳು ಮತ್ತು ಧ್ವನಿಗೆ ಶೇ. 3 ಮತ್ತು ಇತರ ಸೇವೆಗಳಿಗೆ ಉಳಿದ ಶೇ. 3ರಷ್ಟು ಖರ್ಚಾಗಲಿದೆ ಎಂದು ಅಂದಾಜಿಸಲಾಗಿದೆ. ಮುಂದಿನ ವರ್ಷದ ಜನವರಿ 14ರಿಂದ ಪ್ರಾರಂಭವಾಗುವ ಮತ್ತೊಂದು ವಿವಾಹ ಋತುವಿನಲ್ಲಿ ಮತ್ತೆ ವ್ಯವಹಾರ ವೃದ್ಧಿಸಲಿದೆ.