Site icon Vistara News

West Bengal Violence: ಪಶ್ಚಿಮ ಬಂಗಾಳದಲ್ಲಿ ಭಾರೀ ಹಿಂಸಾಚಾರ; ಪೊಲೀಸರಿಂದ ಲಾಠಿಚಾರ್ಜ್‌

West Bengal Violence

ಪಶ್ಚಿಮ ಬಂಗಾಳ: ಲೋಕಸಭೆ ಚುನಾವಣೆ (Lok Sabha Election 2024)ಯ ಆರನೇ ಹಂತದ ಮತದಾನಕ್ಕೂ ಮುನ್ನವೇ ಪಶ್ಚಿಮ ಬಂಗಾಳದಲ್ಲಿ ಹಿಂಸಾಚಾರ(West Bengal Violence) ನಡೆದಿದೆ. ನಂದಿಗ್ರಾಮ ಜಿಲ್ಲೆಯಲ್ಲಿ ನಿನ್ನೆ ಸಂಜೆ ಬಿಜೆಪಿ ಕಾರ್ಯಕರ್ತೆಯೊಬ್ಬರ ಹತ್ಯೆ ನಡೆದಿದ್ದು, ಇದರಲ್ಲಿ ಟಿಎಂಸಿ(TMC) ಮುಖಂಡರದ್ದೇ ಕೈವಾಡ ಇದೆ ಎಂದು ಆರೋಪಿಸಿ ಬಿಜೆಪಿ(BJP) ಪ್ರತಿಭಟನೆ ನಡೆಸಿದೆ. ಪ್ರತಿಭಟನೆ ಹಿಂಸೆಗೆ ತಿರುಗಿದ್ದು, ಪರಿಸ್ಥಿತಿ ನಿಯಂತ್ರಣ ತರಲು ಪೊಲೀಸರು ಲಾಠಿಚಾರ್ಜ್‌ ಮಾಡಿದ್ದಾರೆ.

ಗುರುವಾರ ರಾತ್ರಿ ಬಿಜೆಪಿ ಕಾರ್ಯಕರ್ತರ ಮೇಲೆ ಟಿಎಂಸಿ ಗೂಂಡಾಗಳು ದಾಳಿ ನಡೆಸಿದ್ದು, ದಾಳಿಯಲ್ಲಿ ರೋತಿಬಾಲಾ ಅರಿ ಎಂಬ ಮಹಿಳೆಯ ಮೃತಪಟ್ಟಿದ್ದಾಳೆ. ಉಳಿದ ಏಳು ಜನರು ಗಂಭೀರವಾಗಿ ಗಾಯಗೊಂಡಿದ್ದು, ಅವರನ್ನು ಆಸ್ಪತ್ರೆಗೆ ದಾಖಲಿಸಲಾಗಿದೆ ಎಂದು ಬಿಜೆಪಿ ಆರೋಪಿಸಿದೆ. ಈ ಘಟನೆ ಖಂಡಿಸಿ ಬಿಜೆಪಿ ನಂದಿಗ್ರಾಮದಲ್ಲಿ 12ಗಂಟೆಗಳ ಕಾಲ ಬಂದ್‌ಗೆ ಕರೆಕೊಟ್ಟು ಪ್ರತಿಭಟನೆ ನಡೆಸಿದೆ. ಈ ವೇಳೆ ಪ್ರತಿಭಟನೆ ಹಿಂಸಾಚಾರಕ್ಕೆ ತಿರುಗಿದ್ದು, ಉದ್ರಿಕ್ತರ ಗುಂಪು ರಸ್ತೆ ತಡೆದು ಟಯರ್‌ಗೆ ಬೆಂಕಿ ಹಚ್ಚಿ ಆಕ್ರೋಶ ಹೊರ ಹಾಕಿದ್ದಾರೆ. ಇನ್ನು ಜಿಲ್ಲೆಯ ಸೋನಾಚೂರ ಪ್ರದೇಶದಲ್ಲಿ ಹಿಂಸಾಚಾರದ ತೀವ್ರತೆ ಹೆಚ್ಚಾಗುತ್ತಿದ್ದಂತೆ ಪೊಲೀಸರು ಲಾಠಿಚಾರ್ಜ್‌ ಮಾಡಿದ್ದಾರೆ. ಇನ್ನು ಮುನ್ನೆಚ್ಚರಿಕಾ ಕ್ರಮವಾಗಿ ಈ ಪ್ರದೇಶದಲ್ಲಿ ಸಿಆರ್‌ಪಿಎಫ್‌ ಪೊಲೀಸರನ್ನು ನಿಯೋಜಿಸಲಾಗಿದೆ.

ಬಿಜೆಪಿ ಆರೋಪ ಏನು?

ಚುನಾವಣೆ ಸಂದರ್ಭದಲ್ಲಿ ಮಹಿಳಾ ಕಾರ್ಯಕರ್ತರು ಸೇರದಂತೆ ಅನೇಕ ಬಿಜೆಪಿಗರು ಸೋನಾಚೂರ ಪ್ರದೇಶದಲ್ಲಿ ಸಮಾಜದ್ರೋಹಿ ಚಟುವಟಿಕೆ ವಿರುದ್ಧ ನಿಗಾ ವಹಿಸುವ ನಿಟ್ಟಿನಲ್ಲಿ ಗಸ್ತು ತಿರುಗುತ್ತಿದ್ದರು. ಈ ಸಂದರ್ಭದಲ್ಲಿ ಮೋಟರ್‌ ಬೈಕ್‌ನಲ್ಲಿ ಬಂದ ಕೆಲವು ಟಿಎಂಸಿ ದುಷ್ಕರ್ಮಿಗಳು ಮಾರಕಾಸ್ತ್ರಗಳಿಂದ ಹಲ್ಲೆ ನಡೆಸಿದ್ದಾರೆ. ಘಟನೆಯಲ್ಲಿ ಗಂಭೀರವಾಗಿ ಗಾಯಗೊಂಡಿದ್ದ ರೋತಿಬಾಲಾ ಎಂಬ ಕಾರ್ಯಕರ್ತೆ ಸ್ಥಳದಲ್ಲೇ ಕೊನೆಯುಸಿರೆಳೆದಿದ್ದು, ಆಕೆಯ ಮಗ ಸೇರಿದಂತೆ ಅನೇಕರಿಗೆ ಗಂಭೀರ ಗಾಯಗಳಾಗಿವೆ ಎಂದು ಬಿಜೆಪಿ ಆರೋಪಿಸಿದೆ.

ಘಟನೆ ಬಗ್ಗೆ ಬಿಜೆಪಿ ಐಟಿ ಸೆಲ್‌ ಮುಖ್ಯಸ್ಥ ಅಮಿತ್‌ ಮಾಳವಿಯಾ ಪ್ರತಿಕ್ರಿಯಿಸಿದ್ದು, ಕಳೆದ ವಾರ ಹಲ್ದೀಯಾದಲ್ಲಿ ನಡೆದ ಚುನಾವಣಾ ಪ್ರಚಾರ ರ್ಯಾಲಿಯಲ್ಲಿ ಮಮತಾ ಬ್ಯಾನರ್ಜಿ ನಂದಿಗ್ರಾಮದಲ್ಲಿ ತಮ್ಮ ಸೋಲಿಗೆ ಪ್ರತಿಕಾರ ತೀರಿಸಿಕೊಳ್ಳುವುದಾಗಿ ಘೋಷಣೆ ಹೊರಡಿಸಿದ್ದರು. ಇದೀಗ ಅದನ್ನು ಮಾಡಿ ತೋರಿಸಿದ್ದಾರೆ ಎಂದು ಎಕ್ಸ್‌ ಮೂಲಕ ಕಿಡಿ ಕಾರಿದ್ದಾರೆ. ಇನ್ನು ಘಟನೆ ಬಗ್ಗೆ ಚುನಾವಣಾ ಆಯೋಗ ವರದಿ ಕೇಳಿದೆ

ಇದನ್ನೂ ಓದಿ:Bangladesh MP Missing Case: ನಿಗೂಢವಾಗಿ ಕಣ್ಮರೆ ಆಗಿದ್ದ ಬಾಂಗ್ಲಾದೇಶ ಸಂಸದನ ಬರ್ಬರ ಕೊಲೆ

Exit mobile version