ಮೈಯೋಸಿಟಿಸ್ (Myositis) ಕಾಯಿಲೆಯಿಂದ ಬಳಲುತ್ತಿರುವ ನಟಿ ಸಮಂತಾ (Samantha) ಅವರು ತಮಗೆ ಇರುವ ಕಾಯಿಲೆ ಬಗ್ಗೆ ನೋವನ್ನು ಹಂಚಿಕೊಂಡಿದ್ದಾರೆ. ಈ ಕಾಯಿಲೆ ವಿರುದ್ಧ ಹೋರಾಡುತ್ತಿರುವುದಾಗಿ ಬರೆದುಕೊಂಡಿದ್ದಾರೆ. ಶೀಘ್ರದಲ್ಲಿಯೇ ಗುಣಮುಖರಾಗುವ ವಿಶ್ವಾಸವನ್ನೂ ಅವರು ವ್ಯಕ್ತಪಡಿಸಿದ್ದಾರೆ. ಈ ಕುರಿತು ಭಾವನಾತ್ಮಕವಾಗಿ ಬರೆದುಕೊಂಡಿರುವ ಸಮಂತಾ, ಇನ್‌ಸ್ಟಾಗ್ರಾಮ್‌ನಲ್ಲಿ ಪೋಸ್ಟ್ ಮಾಡಿದ್ದಾರೆ. ಹಾಗಿದ್ದರೆ, ಈ ಮೈಯೋಸಿಟಿಸ್ ಬಗ್ಗೆ ತಿಳಿದುಕೊಳ್ಳೋಣ ಬನ್ನಿ.
ಏನಿದು ಮೈಯೋಸಿಟಿಸ್?
ಇದೊಂದು ವಿರಳ ಕಾಯಿಲೆ. ಸ್ನಾಯುಗಳು ದುರ್ಬಲವಾಗುವುದನ್ನೇ ಮೈಯೋಸಿಟಿಸಿ ಎಂದು ಹೇಳುತ್ತಾರೆ. ಬಳಲಿಕೆ, ಮಾಂಸಖಂಡಗಳಲ್ಲಿ ನೋವು ಇವು ಪ್ರಮುಖವಾಗಿರುವ ಈ ಕಾಯಿಲೆಯ ಲಕ್ಷಣಗಳು. ಕಾಲ ಕಳೆದಂತೆ ಈ ಕಾಯಿಲೆ ವಿಪರೀತವಾಗುವ ಸಾಧ್ಯತೆಗಳು ಹೆಚ್ಚು. ಇನ್ನೂ ಕ್ಲಿಯರ್ ಆಗಿ ಹೇಳಬೇಕೆಂದರೆ, ಇದು ನಮ್ಮ ರೋಗ ನಿರೋಧಕ ವ್ಯವಸ್ಥೆಯ ಸಮಸ್ಯೆಯಾಗಿದೆ.
ಮೈಯೋಸಿಟಿಸ್ ಪ್ರಕಾರಗಳು
ಪಾಲಿಮೈಯೋಸಿಟಿಸ್, ಡರ್ಮಟೊಮಿಯೊಸಿಟಿಸ್ ಮತ್ತು ಇನ್‌ಕ್ಲುಷನ್ ಬಾಡಿ ಮೈಯೋಸಿಟಿಸ್(ಐಬಿಎಂ). ಪಾಲಿಮೈಯೋಸಿಟಿಸ್ ಭುಜ, ಸೊಂಟ, ತೊಡೆ ಸ್ನಾಯುಗಳು ದುರ್ಬಲವಾಗುತ್ತವೆ. ಡರ್ಮಟೊಮಿಯೊಸಿಟಿಸ್‌ನಲ್ಲಿ ದೇಹದ ನಾನಾ ಸ್ನಾಯಗಳ ದುರ್ಬಲವಾಗುವುದರ ಜತೆಗೆ ದದ್ದುಗಳು ಕಾಣಸಿಕೊಳ್ಳುತ್ತವೆ. ಮಹಿಳೆ ಮತ್ತು ಮಕ್ಕಳಲ್ಲಿ ಇದು ಸಾಮಾನ್ಯವಾಗಿರುತ್ತದೆ.
ಲಕ್ಷಣಗಳೇನು?
- ಯಾವಾಗಲೂ ದಣಿವು ಆಗಿರುವ ಭಾವ. ಸ್ನಾಯುಗಳಲ್ಲಿ ನೋವು
- ಕುಳಿತುಕೊಳ್ಳಲು ಇಲ್ಲವೇ ನಿಂತುಕೊಳ್ಳಲು ತುಂಬ ಕಷ್ಟಪಡುವುದು ಅಥವಾ ಕೆಳಗೆ ಬೀಳುವುದು
- ಯಾವಾಗಲೂ ಅಸಂತೋಷ, ಖನ್ನತೆಯ ಭಾವ ಇರುತ್ತದೆ.
ಚಿಕಿತ್ಸೆ ಏನು?
ಮೈಯೋಸಿಟಿಸ್ ಕಾಯಿಲೆಯಿಂದ ಗುಣಮುಖವಾಗಲು ವ್ಯಾಯಾಮ ಪ್ರಮುಖ ಪಾತ್ರವಹಿಸುತ್ತದೆ. ಎಲ್ಲ ಪ್ರಕಾರದ ಮೈಯೋಸಿಟಿಸ್‌ಗಳಿಗೆ ಇದೇ ರಾಮಬಾಣ. ನಿಮ್ಮ ಸ್ನಾಯುಗಳನ್ನು ಶಕ್ತಯುತ ಮಾಡಲು ವ್ಯಾಯಾಮ ಮಾಡುವುದೇ ಪ್ರಮುಖ ಪರಿಹಾರವಾಗಿದೆ.
ಒಂದೊಮ್ಮೆ ನಿಮಗೆ ಇನ್‌ಕ್ಲುಷನ್ ಬಾಡಿ ಮೈಯೋಸಿಟಿಸ್(ಐಬಿಎಂ) ಇದ್ದರೆ ಪಿಜಿಯೋಥೆರಪಿ ಪಡೆದುಕೊಳ್ಳಬೇಕಾಗುತ್ತದೆ ಐಬಿಎಂ ಅನ್ನು ನೀವು ಬೇರೆ ಇನ್ನಾವುದೇ ಔಷಧಗಳಿಂದ ಗುಣಪಡಿಸಲು ಸಾಧ್ಯವಿಲ್ಲ.
ಮೈಯೋಸಿಟಿಸ್ ಗಂಭೀರಣ ಗುಣಲಕ್ಷಣಗಳಿದ್ದರೆ, ವ್ಯಾಯಾಮ ಮಾಡುವಾಗ ಪರಿಣತರ ಸಲಹೆಯನ್ನು ಪಡೆಯುವುದು ಒಳ್ಳೆಯದು. ಈ ಹಂತದಲ್ಲಿ ತಜ್ಞರು ವ್ಯಾಯಾಮಕ್ಕೆ ಆದ್ಯತೆ ನೀಡುವುದಿಲ್ಲ. ಇಷ್ಟಾಗಿಯೂ ಮೈಯೋಸಿಟಿಸ್ ಗುಣಮುಖವಾಗಲು ವ್ಯಾಯಾಮ ಅತ್ಯಗತ್ಯ ಎಂಬುದನ್ನು ಮರೆಯಬಾರದು.